ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ 5, ರಾತ್ರಿ 9ಕ್ಕೆ ಒಂಬತ್ತು ನಿಮಿಷ ದೀಪ ಬೆಳಗಿ: ಪ್ರಧಾನಿ ಮೋದಿ ಕರೆ

ಕೊರೊನಾ ಅಂಧಕಾರ ಓಡಿಸಲು ಏ.5ರಂದು ಒಟ್ಟಿಗೆ ದೀಪ ಬೆಳಗೋಣ: ಪ್ರಧಾನಿ ಕರೆ
Last Updated 3 ಏಪ್ರಿಲ್ 2020, 4:21 IST
ಅಕ್ಷರ ಗಾತ್ರ

ನವದೆಹಲಿ:ದೇಶದ ಜನರಿಗಾಗಿ ಪ್ರಧಾನಿ ನರೇಂದ್ರ ಮೋದಿಶುಕ್ರವಾರ ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. 11 ನಿಮಿಷ 30 ಸೆಕೆಂಡ್‌ಗಳ ವಿಡಿಯೊದಲ್ಲಿ 'ಕೊರೊನಾ ಅಂಧಕಾರ ಓಡಿಸಲು ಎಲ್ಲರೂ ಒಂದೇ ಸಮಯಕ್ಕೆ ದೀಪ ಬೆಳಗೋಣ, ನಾವು ಯಾರೂ ಒಂಟಿಯಲ್ಲ ಎಂದು ಸಾರೋಣ' ಎಂಬ ಸಂದೇಶ ನೀಡಿದ್ದಾರೆ.

ಏಪ್ರಿಲ್‌ 5ರಂದು ಭಾನುವಾರ ರಾತ್ರಿ 9 ಗಂಟೆಗೆ ಎಲ್ಲರೂ ಮನೆಯ ಮಹಡಿಗೆ ಬನ್ನಿ. ಮನೆಯ ಎಲ್ಲ ವಿದ್ಯುತ್‌ ದೀಪಗಳನ್ನು ಆರಿಸಿ, ರಾತ್ರಿ 9ಕ್ಕೆ ಸರಿಯಾಗಿ ಮನೆಯ ಮಹಡಿಯ ಮೇಲೆ ಅಥವಾ ಮನೆಯಿಂದ ಮುಂದೆ ನಿಂತು 9 ನಿಮಿಷಗಳ ವರೆಗೂ ಮೇಣದ ಬತ್ತಿ ಅಥವಾ ದೀಪಬೆಳಗಬೇಕು. ಈ ಮೂಲಕ ಒಂದೇ ಸಮಯಕ್ಕೆ ದೇಶದ ಎಲ್ಲರೂ ಪ್ರಕಾಶವನ್ನು ಬೆಳಗುವ ಮೂಲಕ ಜೊತೆಯಾಗಿ ಕೊರೊನಾ ವೈರಸ್‌ ವಿರುದ್ಧದ ಹೋರಾಟವನ್ನು ಸಾರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ತಿಳಿಸಿದ್ದಾರೆ.

ನಮ್ಮ ಇಚ್ಛೆ ಮತ್ತು ಉತ್ಸಾಹದ ಎದುರು ಯಾವುದೇ ಬಲವೂ ಶಕ್ತಿಶಾಲಿಯಲ್ಲ. ದೀಪಗಳನ್ನು ಬೆಳಗುವಾಗಲೂ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.

'ಮನೆಯಲ್ಲಿ ಒಬ್ಬರೇ ಏನು ಮಾಡಬೇಕು. ವೈರಸ್‌ ವಿರುದ್ಧದ ಯುದ್ಧವನ್ನು ಒಬ್ಬರೇ ಹೇಗೆ ಹೋರಾಡಲು ಸಾಧ್ಯವಾಗುತ್ತದೆ. ನಾವುಮನೆಯೊಳಗೆ ಇದ್ದೇವೆ, ಆದರೆ ನಾವು ಯಾರೂ ಒಂಟಿಯಲ್ಲ. ದೇಶದ ಎಲ್ಲ ಜನರೂ ನಮ್ಮೊಂದಿಗಿದ್ದಾರೆ. ಜನರ ಒಗ್ಗಟ್ಟಿನ ಶಕ್ತಿ ಆಗಾಗ್ಗೆ ವ್ಯಕ್ತವಾಗುತ್ತಲೇ ಇರುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಮನೆಯೊಳಗಿದ್ದೇ ಕೊರೊನಾ ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯತೆಯನ್ನು ತಿಳಿಸಿದ್ದಾರೆ.

'ಏಪ್ರಿಲ್‌ 5ರಂದು ಭಾನುವಾರ, ಕೊರೊನಾ ಸಂಕಟದ ಅಂಧಕಾರವನ್ನು ಓಡಿಸಲು ರಾತ್ರಿ 9 ಗಂಟೆಗೆ ನಿಮ್ಮೆಲ್ಲರಿಂದ 9 ನಿಮಿಷಬೇಕು. ಎಲ್ಲರೂ ವಿದ್ಯುತ್‌ ಬಂದ್ ಮಾಡಿ, ನಿಮ್ಮ ಮನೆಯ ಮಹಡಿಗಳಲ್ಲಿ ನಿಂತು, ಮೇಣದ ಬತ್ತಿ, ದೀಪ, ಟಾರ್ಚ್‌ ಅಥವಾ ಮೊಬೈಲ್‌ ಲೈಟ್‌ ಹಿಡಿದು ಒಂಬತ್ತು ನಿಮಿಷಗಳ ವರೆಗೂ ಬೆಳಗಿ. ಈ ಮೂಲಕ ಒಂದು ಪ್ರಕಾಶವನ್ನು ಬೆಳಗಿ. ಈ ಪ್ರಕಾಶದಿಂದ, ಉಜ್ವಲದಿಂದ ನಮ್ಮ ಮನದಲ್ಲಿ ನಾವು ಒಂಟಿಯಲ್ಲ ಎಂಬ ಸಂಕಲ್ಪ ಮಾಡಿ. ಯಾರೂ ಇಲ್ಲಿ ಒಂಟಿಯಲ್ಲ....130 ಕೋಟಿ ಜನರು ಒಟ್ಟಿಗಿದ್ದೇವೆ. ಆದರೆ, ಇದರಿಂದ ಯಾರಿಗೂ, ಎಲ್ಲಿಯೂ ಯಾವುದೇ ಕಾರಣಕ್ಕೂ ತೊಂದರೆ ಉಂಟಾಗಬಾರದು. ಅದನ್ನು ನೀವೆಲ್ಲರು ಗಮನಿಸಬೇಕು. ಗುಂಪು ಗೂಡಬಾರದು, ನಿಮ್ಮ ಮನೆಗಳಿಂದಲೇ ಆಚರಿಸಿ,..' ಎಂದಿದ್ದಾರೆ.

ಲಾಕ್‌ಡೌನ್‌ ಕರೆಗೆ ಓಗೊಟ್ಟಿರುವ ಎಲ್ಲರಿಗೂ ಧನ್ಯವಾದ ತಿಳಿಸಿದರು. ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ 21 ದಿನಗಳ ಲಾಕ್‌ಡೌನ್‌ ಯಶಸ್ವಿಯಾಗಲು ಶ್ರಮಿಸುತ್ತಿರುವ ಜನರು ಮತ್ತು ಆಡಳಿತಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರು. 'ನೀವು ತೋರಿರುವ ಶಿಸ್ತು ಮತ್ತು ಸೇವಾ ಮನೋಭಾವ ಅಭೂತಪೂರ್ವವಾದುದು. ಜನರು ಮತ್ತು ಆಡಳಿತ ಇದನ್ನು ನಿತ್ಯ ಯಶಸ್ವಿಯಾಗಿ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಮುಂಚೂಣಿಯಲ್ಲಿ ನಿಂತು ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವವರಿಗಾಗ ನೀವೆಲ್ಲರೂ ಮಾರ್ಚ್‌ 22ರಂದು ಧನ್ಯವಾದ ಅರ್ಪಿಸಿದ ರೀತಿ ಇಡೀ ಜಗತ್ತಿಗೆ ಒಂದು ಉದಾಹರಣೆಯಾಗಿ ನಿಂತಿದೆ' ಎಂದು ಹೇಳಿದ್ದಾರೆ.

ಗುರುವಾರ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಪ್ರಧಾನಿ

ಲಾಕ್‌ಡೌನ್‌ ಹಿಂದಕ್ಕೆ ಪಡೆದ ಬಳಿಕ ಜನರು ಹಂತಹಂತವಾಗಿ ಹೊರಗೆ ಬರುವಂತಾಗಬೇಕು. ಅದಕ್ಕಾಗಿ, ಸಮಾನ ಕಾರ್ಯತಂತ್ರವನ್ನು ಸೂಚಿಸುವಂತೆ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಗಳನ್ನು ಗುರುವಾರ ಕೋರಿದ್ದಾರೆ.

ಕೊರೊನಾ ವಿರುದ್ಧದ ಹೋರಾಟದ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಲಾಕ್‌ಡೌನ್‌ ಅನ್ನು ಎಲ್ಲ ರಾಜ್ಯಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಕರೆ ಕೊಟ್ಟರು.

21 ದಿನಗಳ ದಿಗ್ಬಂಧನದಿಂದ ಸ್ವಲ್ಪ ಮಟ್ಟಿನ ಯಶಸ್ಸು ಸಿಕ್ಕಿದೆ. ಮುಂದಿನ ಕೆಲವು ವಾರಗಳಲ್ಲಿ ಸೋಂಕು ಪರೀಕ್ಷೆ, ಗುರುತಿಸುವಿಕೆ ಮತ್ತು ಪ್ರತ್ಯೇಕವಾಗಿ ಇರಿಸುವಿಕೆಯನ್ನು ಹೆಚ್ಚಿಸುವ ಮೂಲಕ ಸೋಂಕು ಹರಡುವಿಕೆ ತಡೆಯಬೇಕು ಎಂದು ಪ್ರಧಾನಿ ಹೇಳಿದರು.

ಕೆಲವು ದೇಶಗಳಲ್ಲಿ ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡಿದೆ ಎಂಬ ಆತಂಕಕಾರಿ ವಿಚಾರವನ್ನು ಅವರು ಪ್ರಸ್ತಾಪಿಸಿದರು. ಪಿಡುಗು
ತಡೆಗೆ ಎಲ್ಲ ರಾಜ್ಯಗಳು ಸಮುದಾಯ ಆಧರಿತ ಕಾರ್ಯತಂತ್ರವನ್ನು ಅನುಸರಿಸಬೇಕು ಎಂದು ಸೂಚಿಸಿದರು.

ದೇಶದ ಹಲವು ಭಾಗಗಳಲ್ಲಿ ಕೊಯ್ಲು ಋತು ಆರಂಭವಾಗಿದೆ. ಹಾಗಾಗಿ, ಕೃಷಿ ಚಟುವಟಿಕೆಗಳಿಗೆ ದಿಗ್ಬಂಧನದಿಂದ ವಿನಾಯಿತಿ ನೀಡಬಹುದು. ಆದರೆ, ಹೊಲದಲ್ಲಿ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಕೈಬಿಡಬಾರದು ಎಂದು ಪ್ರಧಾನಿ ಹೇಳಿದರು.

ಬಿಕ್ಕಟ್ಟಿನಿಂದ ಪಾರಾಗಲು ಆರ್ಥಿಕ ಮತ್ತು ವೈದ್ಯಕೀಯ ಸಂಪನ್ಮೂಲ ನೆರವು ಬೇಕು ಎಂದು ಕೆಲವು ಮುಖ್ಯಮಂತ್ರಿಗಳು ಪ್ರಧಾನಿಯನ್ನು ಕೋರಿದರು.

ಲಾಕ್‌ಡೌನ್‌ ಹೇರಿಕೆಯ ಬಳಿಕ ಮೋದಿ ಅವರು ಮುಖ್ಯಮಂತ್ರಿಗಳ ಜತೆಗೆ ಎರಡನೇ ಬಾರಿ ವಿಡಿಯೊ ಕಾನ್ಫರೆನ್ಸ್‌ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT