ಸೋಮವಾರ, ಮಾರ್ಚ್ 8, 2021
24 °C

ಮನೆಗೆಲಸದವರಿಗೆ ಅವಕಾಶ; ಸಲೂನ್ ತೆರೆಯಲು ಒಪ್ಪಿಗೆ: ಗೃಹ ಸಚಿವಾಲಯದ ನಿಯಮಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಾದ್ಯಂತ ಅನ್ವಯವಾಗುವಂತೆ ಮನೆಗೆಲಸದವರು ತಮ್ಮ ವೃತ್ತಿ ಮುಂದುವರಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಅವರನ್ನು ಮನೆಗೆಲಸಕ್ಕೆ ಬಳಸಿಕೊಳ್ಳ ಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವ ಅವಕಾಶವನ್ನು ನಿವಾಸಿ ಸಂಘಗಳಿಗೆ (ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್) ನೀಡಲಾಗಿದೆ.

‘ಹೊರಗಿನವರಿಗೆ ಪ್ರವೇಶ ನೀಡುವುದನ್ನು ನಿವಾಸಿ ಸಂಘಗಳಿಗೆ ಬಿಡಲಾಗಿದೆ. ಆದರೆ ಆರೋಗ್ಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವುದಿಲ್ಲ’ ಎಂದು ಗೃಹಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ತಮ್ಮ ಆವರಣದಲ್ಲಿ ಹೊರಗಿನವರಿಗೆ ಅವಕಾಶ ಮಾಡಿಕೊಟ್ಟಾಗ ವೈರಸ್ ಸೋಂಕು ತಗಲುವುದು ಮೊದಲಾದ ಅನಾಹುತಗಳು ಸಂಭವಿಸಿದರೆ, ಅವರ ಪ್ರವೇಶಕ್ಕೆ ಅವಕಾಶ ಮಾಡಿ ಕೊಟ್ಟವರೇ ಹೊಣೆಗಾರರು ಎಂದು ಗೃಹಸಚಿವಾಲಯ ಎಚ್ಚರಿಸಿದೆ. 

ಹೊಸ ನಿಯಮಾವಳಿ ಪ್ರಕಾರ, ಮನೆಗೆಲಸದವರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಲು ಹಾಗೂ ಸಲೂನ್‌ಗಳನ್ನು ತೆಗೆಯಲು ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ. 

39 ದಿನಗಳ ಬಳಿಕ ಸಲೂನ್‌ ಹಾಗೂ ಕ್ಷೌರದ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಹಸಿರು ಹಾಗೂ ಕಿತ್ತಳೆ ವಲಯಗಳಲ್ಲಿ ಮಾತ್ರ ಇದಕ್ಕೆ ಅವಕಾಶವಿದ್ದು, ಕೆಂಪು ವಲಯಗಳಲ್ಲಿ ನಿಷೇಧ ಮುಂದುವರಿಯಲಿದೆ.

ಮದುವೆಗೆ 50 ಜನರಿಗೆ ಅವಕಾಶ
* ಮೇ 4ರಿಂದ ಅನ್ವಯವಾಗುವಂತೆ, ಕಂಟೈನ್‌ಮೆಂಟ್‌ ವಲಯ ಹೊರತುಪಡಿಸಿ ದೇಶದಾದ್ಯಂತ ಎಲ್ಲ ವಲಯಗಳಲ್ಲಿ ಮದುವೆ ಸಮಾರಂಭಗಳಿಗೆ ಅವಕಾಶ ನೀಡಲಾಗಿದೆ; 50ಕ್ಕಿಂತ ಹೆಚ್ಚು ಜನರನ್ನು ಮದುವೆಗೆ ಆಹ್ವಾನಿಸುವಂತಿಲ್ಲ. ಸಾಮಾಜಿಕ ಅಂತರ ಕಡ್ಡಾಯ. ಈ ಮುನ್ನ ಜಿಲ್ಲಾಡಳಿತದ ಅನುಮತಿ ಪಡೆಯಬೇಕಿತ್ತು. 

* ಅಂತ್ಯಸಂಸ್ಕಾರದಲ್ಲಿ ಗರಿಷ್ಠ 20 ಮಂದಿ ಭಾಗಿಯಾಗಬಹುದು.

* ಪುಸ್ತಕ, ಲ್ಯಾಪ್‌ಟಾಪ್ ಸೇರಿದಂತೆ ಅನಿವಾರ್ಯವಲ್ಲದ ವಸ್ತುಗಳನ್ನು ಇ–ಕಾಮರ್ಸ್‌ ಕಂಪನಿಗಳು ಮಾರಾಟ ಮಾಡಲು ಅನುಮತಿ; ಹಸಿರು ಹಾಗೂ ಕಿತ್ತಳೆ ವಲಯದಲ್ಲಿ ಅವಕಾಶ. ಕೆಂಪು ವಲಯದಲ್ಲಿ ಅವಶ್ಯಕ ವಸ್ತುಗಳ ಮಾರಾಟಕ್ಕೆ ಮಾತ್ರ ಅನುಮತಿ; ಕಂಟೈನ್‌ಮೆಂಟ್‌ ವಲಯಗಳಲ್ಲಿ ಇ–ಕಾಮರ್ಸ್ ಕಂಪನಿಗಳು ವಸ್ತುಗಳನ್ನು ಪೂರೈಸುವಂತಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು