ಶನಿವಾರ, ಏಪ್ರಿಲ್ 4, 2020
19 °C

ಅನ್ನ ಕಸಿದ ಕೊರೊನಾ

ವಿಜಯಕುಮಾರ್‌ ಎಸ್‌.ಕೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ –19 ಕೆಲವರನ್ನು ನೇರವಾಗಿ ಕಾಡುತ್ತಿದ್ದರೆ, ಹಲವರನ್ನು ಪರೋಕ್ಷವಾಗಿ ಕಾಡುತ್ತಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಪ್ರತಿದಿನ ದುಡಿಯಲೇಬೇಕಿರುವ ಕೂಲಿ ಕಾರ್ಮಿಕರು, ಹಮಾಲರು, ಬೀದಿಬದಿ ವ್ಯಾಪಾರಿಗಳು, ಬೀಡಿ ಕಟ್ಟುವವರು, ಆ್ಯಪ್ ಆಧಾರಿತ ಆಟೋ, ಟ್ಯಾಕ್ಸಿ ಚಾಲಕರು, ತಳ್ಳುವ ಗಾಡಿಗಳ ವ್ಯಾಪಾರಿಗಳಿಗೆ ಜೀವನವೇ ಕಷ್ಟವಾಗಿದೆ.

‘ಕೂಡಿಟ್ಟಿದ್ದ ಪುಡಿಗಾಸು ಈಗ ಕರಗಿ ಹೋಗಿದೆ, ವ್ಯಾಪಾರ ನಡೆಸದ ನಮಗೆ ಸಾಲ ಕೊಡುವವರೂ ಇಲ್ಲವಾಗಿದ್ದಾರೆ. ವಿದೇಶದಿಂದ ಬಂದ ಕೊರೊನಾ ಸೋಂಕು ಸದ್ಯಕ್ಕೆ ಹಣ ಉಳ್ಳವರಿಗೆ ಕಾಣಿಸಿಕೊಂಡಿದ್ದರೆ, ಅದರ ಪರಿಣಾಮ ನಮ್ಮಂಥ ಬಡವರ ಬದುಕು ಕಸಿಕೊಂಡಿದೆ’ ಎಂದು ಕಣ್ಣೀರಿಡುತ್ತಾರೆ ರೇಸ್‌ಕೋರ್ಸ್‌ ರಸ್ತೆ ಬದಿಯಲ್ಲಿ ತಳ್ಳುವ ಗಾಡಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಅನುರಾಧಾ.

ಟಿಪ್ಸ್ ಆಧಾರಿತ ಜೀವನ ಬೀದಿಗೆ ಬಂತು

ಪಬ್, ಕ್ಲಬ್, ಡ್ಯಾನ್ಸ್ ಬಾರ್‌ಗಳನ್ನು ನಗರದಲ್ಲಿ ಬಂದ್ ಮಾಡಲಾಗಿದೆ. ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಜೀವನಕ್ಕೆ ಗ್ರಾಹಕರು ನೀಡುವ ಟಿಪ್ಸ್ ಆಧಾರ.

ಡ್ಯಾನ್ಸ್‌ಬಾರ್‌ಗಳಲ್ಲಿನ ನರ್ತಕಿಯರು, ಅಲ್ಲಿನ ಕಾರ್ಮಿಕರ ಜೀವನ ಈಗ ಅಕ್ಷರಶಃ ಬೀದಿಗೆ ಬಿದ್ದಿದೆ. 

‘ಬೆಂಗಳೂರಿನಲ್ಲಿ ನಾನು ಏನು ಕೆಲಸ ಮಾಡುತ್ತಿದ್ದೇನೆ ಎಂಬುದು ತಂದೆ–ತಾಯಿಗೆ ಗೊತ್ತಿಲ್ಲ. ಹೋಟೆಲ್‌ ಕೆಲಸ ಎಂದಷ್ಟೇ ಹೇಳಿದ್ದೇನೆ. ಡ್ಯಾನ್ಸ್ ಬಾರ್‌ಗಳಲ್ಲಿ ಸ‍ಪ್ಲೆಯರ್ ಕೆಲಸ ಮಾಡುವ ನನಗೆ ಮಾಲೀಕರು ಸಂಬಳ ನೀಡಲ್ಲ, ಗ್ರಾಹಕರು ನೀಡುವ ಟಿಪ್ಸ್ ಮಾತ್ರ ನಮ್ಮ ದುಡಿಮೆ’ ಎಂದು ಮಂಡ್ಯ ಜಿಲ್ಲೆಯ ಹಳ್ಳಿಯೊಂದರ ಕಿರಣ್, ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.

‘ಈ ದುಡಿಮೆ ನಂಬಿ ತಂಗಿ ಮದುವೆಗೆ ಸಾಲ ಮಾಡಿದ್ದೆ. 15 ದಿನಗಳಿಂದ ದುಡಿಮೆ ಇಲ್ಲದೆ ಹೊಟ್ಟೆಗೂ ಇಲ್ಲವಾಗಿದೆ. ಊರಿಗೆ ವಾಪಸ್ ಹೋದರೆ ಸಾಲ ಕೊಟ್ಟವರು ಮನೆ ಬಾಗಿಲಿಗೆ ಬರುತ್ತಾರೆ. ಏನು ಮಾಡಬೇಕೋ ತೋಚುತ್ತಿಲ್ಲ. ಬೇರೆ ಕೆಲಸ ಮಾಡೋಣ ಎಂದರೆ ಎಲ್ಲೂ ಕೆಲಸ ಹುಟ್ಟುತ್ತಿಲ್ಲ’ ಎಂದು ನೊಂದುಕೊಂಡರು.

***

1.32 ಕೋಟಿ

ರಾಜ್ಯದಲ್ಲಿರುವ ಸಂಘಟಿತ ಕಾರ್ಮಿಕರು

1 ಲಕ್ಷ

ಮಿಲ್, ವೇರ್ ಹೌಸ್‌ ಮತ್ತು ಗೋಡೌನ್‌ ಹಮಾಲರು

1.20 ಲಕ್ಷ

ಎಪಿಎಂಸಿ ಮಾರುಕಟ್ಟೆಯಲ್ಲಿನ ಹಮಾಲರು

60,000

ಮಾರುಕಟ್ಟೆಗಳಲ್ಲಿನ ಹಮಾಲರು

5,000

ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿನ ಹಮಾಲರು

4.80 ಲಕ್ಷ

ಬೀದಿ ಬದಿ ವ್ಯಾಪಾರಿಗಳು

60 ಲಕ್ಷ

ಕಟ್ಟಡ ಕಾರ್ಮಿಕರು

10 ಲಕ್ಷ

ವಲಸೆ ಕಾರ್ಮಿಕರು(ಹೊರ ರಾಜ್ಯ)

10 ಲಕ್ಷ

ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ವಲಸೆ ಬಂದ ಕಾರ್ಮಿಕರು

5 ಲಕ್ಷ

ಆಟೋ ಮತ್ತು ಟ್ಯಾಕ್ಸಿ ಚಾಲಕರು

***

ಇಂದು ಸಭೆ

ಅಸಂಘಟಿತ ಕಾರ್ಮಿಕರನ್ನು ಸಂಕಷ್ಟದಿಂದ ಪಾರು ಮಾಡಲು ಏನು ಮಾಡಬಹುದು ಎಂಬುದರ ಕುರಿತು ಚರ್ಚಿಸಲು ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಿಗದಿಯಾಗಿದೆ.

ಕಲ್ಯಾಣ ಸುರಕ್ಷಾ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಕಾರ್ಮಿಕ ಸಂಘಟನೆಗಳು, ಮಾಲೀಕರು, ವಿವಿಧ ಇಲಾಖೆ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇಲ್ಲಿ ಕೈಗೊಂಡ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಿ ಹಣಕಾಸಿನ ನೆರವು ಕೇಳಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಆಧಿಕಾರಿಗಳು ಹೇಳಿದರು.

ಕೇರಳ, ಉತ್ತರ ಪ್ರದೇಶ ಮಾದರಿ

ಕೋವಿಡ್‌ ಭೀತಿಯಿಂದಾಗಿ ವ್ಯಾಪಾರ ವಹಿವಾಟು ಬಂದ್‌ ಮಾಡಿದ್ದರಿಂದ ನಷ್ಟ ಅನುಭವಿಸಿದ ದಿನಗೂಲಿ ನೌಕರರು ಹಾಗೂ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದ ಇತರ ವರ್ಗದ ಜನರಿಗಾಗಿ ಕೇರಳ ಹಾಗೂ ಉತ್ತರಪ್ರದೇಶ ಸರ್ಕಾರಗಳು ಪರಿಹಾರವನ್ನು ಘೋಷಿಸಿವೆ.

ಕೇರಳ

ಕೇರಳ ಸರ್ಕಾರ ₹ 20,000 ಕೋಟಿ ಪರಿಹಾರ ಯೋಜನೆಯನ್ನು ರೂಪಿಸಿದೆ

*ಬಡ ಕುಟುಂಬಗಳಿಗೆ ನೀಡುವ ಪಿಂಚಣಿ ಮುಂತಾದ ಸಾಮಾಜಿಕ ಭದ್ರತಾ ಯೋಜನೆಗಳ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ಸೌಲಭ್ಯ ಪಾವತಿಗಾಗಿ 
₹ 1,500 ಕೋಟಿ

*ಇಂಥ ಪಿಂಚಣಿ ಯೋಜನೆಗಳ ಫಲಾನುಭವಿಗಳಲ್ಲದ, ಬಡ ಕುಟುಂಬಗಳಿಗೆ ಪಿಂಚಣಿಯ ರೂಪದಲ್ಲಿ ನೀಡಲು ₹ 2000 ಕೋಟಿ

*ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರಿಗೆ ನೀಡಲು ₹ 2000 ಕೋಟಿ

*₹ 20ರ ದರದಲ್ಲಿ ಊಟ–ತಿಂಡಿ ವಿತರಿಸುವ 1000 ಹೊಸ ಕೇಂದ್ರಗಳನ್ನು ಆರಂಭಿಸಲು ₹ 500 ಕೋಟಿ

*ಗುತ್ತಿಗೆದಾರರು ಹಾಗೂ ವ್ಯಾಪಾರಿಗಳ ಬಾಕಿ ಬಿಲ್‌ ಪಾವತಿಗಾಗಿ ₹14,000 ಕೋಟಿ

ಉತ್ತರಪ್ರದೇಶ

*ರಾಜ್ಯದ 35 ಲಕ್ಷ ಕಾರ್ಮಿಕರಿಗೆ ತಲಾ ₹ 1000 ಪರಿಹಾರವನ್ನು ನೀಡುವುದಾಗಿ ಉತ್ತರಪ್ರದೇಶ ಸರ್ಕಾರ ಶನಿವಾರ ಘೋಷಿಸಿದೆ

*ನೇರವಾಗಿ ಕಾರ್ಮಿಕರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು

*ಅಂತ್ಯೋದಯ ಯೋಜನೆಯಡಿ ನೋಂದಾಯಿತ 1.65 ಕೋಟಿ ಕಟ್ಟಡ ನಿರ್ಮಾಣ ಹಾಗೂ ದಿನಗೂಲಿ ಕಾರ್ಮಿಕರಿಗೆ ಒಂದು ತಿಂಗಳ ಪಡಿತರ ಉಚಿತ ವಿತರಣೆ

*ನಗರಪ್ರದೇಶದಲ್ಲಿ ವಾಸಿಸುವ, ಪಡಿತರ ಚೀಟಿ ಹೊಂದಿರದ ದಿನಗೂಲಿ ಕಾರ್ಮಿಕರಿಗೂ ಉಚಿತ ಪಡಿತರ

*ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರ ವೇತನ ಕೂಡಲೇ ಬಿಡುಗಡೆ

 

***

ಕೊರೊನಾ ಸೋಂಕಿನ ಕಾರಣದಿಂದ ಬೀದಿಗೆ ಬಿದ್ದಿರುವ ಅಸಂಘಟಿತ ಕಾರ್ಮಿಕರಿಗೆ, ಬಡವರಿಗೆ ಕೇರಳ ಮಾದರಿಯಲ್ಲಿ ಉಚಿತವಾಗಿ ದಿನಸಿ ನೀಡಬೇಕು, ಸಾಲದ ಕಂತು ಕಟ್ಟುವ ಅವಧಿ ಮುಂದೂಡಬೇಕು

–ಕೆ. ಮಹಾಂತೇಶ

***

ಬೀದಿ ಬದಿ ವ್ಯಾಪಾರಿಗಳು ದಿನದ ತುತ್ತಿಗೂ ಪರದಾಡುವ ಸ್ಥಿತಿ ಬಂದಿದೆ. ಸರ್ಕಾರ ತುರ್ತು ಪರಿಹಾರವಾಗಿ ಕನಿಷ್ಠ ತಲಾ ₹10 ಸಾವಿರ ನೆರವನ್ನಾದರೂ ಘೋಷಣೆ ಮಾಡಬೇಕು

–ರಂಗಸ್ವಾಮಿ, ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ

***

ಇವತ್ತು ನಾನು ದುಡಿದರೆ ನನಗೆ ಮತ್ತು ನನ್ನ ಮಕ್ಕಳಿಗೆ ಊಟ. ಕೊರೊನಾ ಸೋಂಕಿಗೆ ಹೆದರಿ ಎಪಿಎಂಸಿ ಬಂದ್ ಮಾಡಿದರೆ ಹೊಟ್ಟೆಗೆ ಏನು ತಿನ್ನಬೇಕು

–ವೀರ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು