ಶುಕ್ರವಾರ, ಏಪ್ರಿಲ್ 3, 2020
19 °C
ವುಹಾನ್‌ನ ರೋಗಿಗಳ ಮೇಲೆ ನಡೆಸಿದ ಅಧ್ಯಯನ: ಸೋಂಕು ಉಸಿರಾಟ ಸಮಸ್ಯೆಗಷ್ಟೇ ಸೀಮಿತವಲ್ಲ

ಕೋವಿಡ್‌19: ಜೀರ್ಣಾಂಗ ಸಮಸ್ಯೆಗೂ ಕಾರಣ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಕೊರೊನಾ ವೈರಸ್‌ನಿಂದಾಗಿ ಬರುವ ಕೋವಿಡ್‌–19 ಪಿಡುಗಿನ ಲಕ್ಷಣಗಳ ಬಗ್ಗೆ ಬಹಳ ಸ್ಪಷ್ಟತೆ ಇಲ್ಲದಿರುವುದಿ ಕೂಡ ಸಮಸ್ಯೆ ತೀವ್ರಗೊಳ್ಳಲು ಕಾರಣ. ಈ ಪಿಡುಗು ವ್ಯಕ್ತಿಯ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂಬು ಅಂಶ ಈಗ ತಿಳಿದು ಬಂದಿದೆ. ಭೇದಿಯಂತಹ ಲಕ್ಷಣಗಳು ರೋಗಿಯಲ್ಲಿ ಕಾಣಿಸಿಕೊಳ್ಳುತ್ತವೆ. ಸೋಂಕಿನಿಂದಾಗಿ ಎಲ್ಲ ರೋಗಿಗಳಲ್ಲಿಯೂ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬೇಕು ಎಂದಿಲ್ಲ. ಹಾಗಾಗಿ, ರೋಗ ಪತ್ತೆಗೆ ಈ ಅಂಶವು ನೆರವಾಗಬಹುದು ಎಂದು ಅಧ್ಯಯನವು ಹೇಳಿದೆ.

ದಿ ಅಮೆರಿಕನ್‌ ಜರ್ನಲ್‌ ಆಫ್‌ ಗ್ಯಾಸ್ಟ್ರೊಎಂಟರಾಲಜಿ ನಿಯತಕಾಲಿಕದಲ್ಲಿ ಸಂಶೋಧನಾ ಪ್ರಬಂಧ ಪ್ರಕಟವಾಗಿದೆ. ಅಧ್ಯಯನಕ್ಕೆ ಒಳಗಾದ ಕೋವಿಡ್‌ಪೀಡಿತ ರೋಗಿಗಳಲ್ಲಿ ಸುಮಾರು ಅರ್ಧದಷ್ಟು ಜನರು ಜೀರ್ಣ ವ್ಯವಸ್ಥೆಯ ಸಮಸ್ಯೆ ಎದುರಿಸಿದ್ದಾಗಿ ಹೇಳಿದ್ದಾರೆ. ಭೇದಿ ಮತ್ತು ಬಾಯಿ ರುಚಿ ಕಳೆದುಕೊಂಡಿರುವುದು ಅವರ ಮುಖ್ಯ ಸಮಸ್ಯೆಗಳಾಗಿದ್ದವು ಎಂದು ಅಧ್ಯಯನ ವರದಿ ತಿಳಿಸಿದೆ. 

ಈ ಅಧ್ಯಯನ ನಡೆಸಿದ ಸಂಶೋಧಕರು ಕೋವಿಡ್‌–19ಕ್ಕೆ ಸಂಬಂಧಿಸಿದ ವುಹಾನ್‌ ವೈದ್ಯಕೀಯ ಚಿಕಿತ್ಸೆ ಪರಿಣತರ ಗುಂಪಿನಲ್ಲಿಯೂ ಇದ್ದರು. ಉಸಿರಾಟದ ತೊಂದರೆಗೆ ಒಳಗಾದ ರೋಗಿಗಳಿಗಿಂತ ಜೀರ್ಣಾಂಗದ ಸಮಸ್ಯೆ ಇದ್ದ ರೋಗಿಗಳಲ್ಲಿ ಲಕ್ಷಣಗಳನ್ನು ನಿಧಾನವಾಗಿ ಗುರುತಿಸಲಾಗಿದೆ. ಇವರನ್ನು ಆಸ್ಪತ್ರೆಗೆ ಸೇರಿಸುವಲ್ಲಿಯೂ ವಿಳಂಬವಾಗಿದೆ ಎಂಬ ಅಂಶವನ್ನು ಅಧ್ಯಯನವು ಗುರುತಿಸಿದೆ. 

ಹುಬೆ ಪ್ರಾಂತ್ಯದ ಮೂರು ಆಸ್ಪತ್ರೆಗಳಿಗೆ ದಾಖಲಾದ ಕೋವಿಡ್‌–19 ರೋಗಿಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಅವರಲ್ಲಿದ್ದ ರೋಗ ಲಕ್ಷಣಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಜೀರ್ಣ ಸಮಸ್ಯೆ ಇದ್ದವರು ಮತ್ತು ಇಲ್ಲದವರು ಎಂದು ವರ್ಗೀಕರಿಸಿ ಅಧ್ಯಯನ ನಡೆಸಲಾಗಿದೆ. 

ರೋಗಿಯಲ್ಲಿ ಪಿಡುಗಿನ ಇತಿಹಾಸ, ಅವರು ಇದ್ದ ಪ್ರದೇಶದ ಮಾಹಿತಿ, ರೋಗ ಲಕ್ಷಣಗಳು, ಪ್ರಯೋಗಾಲಯದ ವರದಿ, ಚಿಕಿತ್ಸೆ ಮಾಹಿತಿ ಮತ್ತು ಫಲಿತಾಂಶವನ್ನು ವಿಶ್ಲೇಷಿಸಲಾಗಿದೆ. ಅವರ ಆರೋಗ್ಯದ ಮೇಲೆ ಮಾ. 5ರವರೆಗೆ ನಿಗಾ ಇರಿಸಿ ವರದಿ ಸಿದ್ಧಪಡಿಸಲಾಗಿದೆ. 

ಹೆಚ್ಚು ಅಪಾಯ ಹೊಂದಿರುವ ರೋಗಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಜೀರ್ಣಾಂಗದ ಸಮಸ್ಯೆ ಕಂಡು ಬಂದಾಗಲೇ ಎಚ್ಚರ ವಹಿಸಬೇಕು. ಅವರು ಗಂಭೀರ ಸ್ಥಿತಿಗೆ ಹೋಗಿಲ್ಲ ಎಂದು ಭಾವಿಸಬಾರದು. ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವವರೆಗೆ ಕಾಯಬಾರದು ಎಂದು ಈ ಅಧ್ಯಯನ ನಡೆಸಿದ ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ಈ ಎಲ್ಲವನ್ನು ದೃಢಪಡಿಸಿಕೊಳ್ಳಲು ಇನ್ನೂ ಹೆಚ್ಚಿನ ಮಾದರಿಗಳನ್ನು ಇಟ್ಟುಕೊಂಡು ಅಧ್ಯಯನ ನಡೆಸಬೇಕಾಗಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು