ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬ್ಲಿಗಿ ಭೇಟಿ ಮುಚ್ಚಿಟ್ಟ ವ್ಯಕ್ತಿ: ಇಡೀ ಪ್ರದೇಶಕ್ಕೇ ಈಗ ದಿಗ್ಬಂಧನ

Last Updated 10 ಏಪ್ರಿಲ್ 2020, 14:29 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಸೋಂಕಿನ ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿದ ದಕ್ಷಿಣ ದೆಹಲಿ ಭಾಗದ ನಿಜಾಮುದ್ದೀನ್‌ ಪ್ರದೇಶದಲ್ಲಿರುವ ತಬ್ಲಿಗಿ ಜಮಾತ್‌ಗೆ ಭೇಟಿ ನೀಡಿದ್ದ ವಿಚಾರವನ್ನು ವ್ಯಕ್ತಿಯೊಬ್ಬರು ಮುಚ್ಚಿದ್ದರು. ಹೋಂ ಕ್ವಾರಂಟೈನ್‌ನಲ್ಲಿದ್ದ ಅವರು ವೈದ್ಯರು ಹಾಗೂ ಪೊಲೀಸರಿಗೆಸಂಚಾರದ ವಿಷಯವನ್ನು ತಿಳಿಸಿರಲಿಲ್ಲ. ಈಗ ಆತ ವಾಸವಾಗಿರುವ ಇಡೀ ಪ್ರದೇಶವನ್ನು ದಿಗ್ಬಂಧಿತ ವಲಯವೆಂದು (ಕಂಟೈನ್ಮೆಂಟ್‌ ಝೋನ್‌) ಘೋಷಿಸಲಾಗಿದೆ.

ಆ ವ್ಯಕ್ತಿಯ ಬೇಜವಾಬ್ದಾರಿಯುತ ನಡೆಯಿಂದಾಗಿ ನಜಾಫ್‌ಗಡ ಪ್ರದೇಶವನ್ನು ದಿಗ್ಬಂಧಿತ ವಲಯವೆಂದು ಘೋಷಿಸಲಾಗಿದೆ. ಹಾಗೂ ಆತನಕುಟುಂಬದ ಇಬ್ಬರಿಗೆ ಕೋವಿಡ್‌–19 ದೃಢಪಟ್ಟಿದೆ.

ಐಪಿಸಿ ಸೆಕ್ಷನ್‌ 188 (ಸೂಚನೆಗಳನ್ನು ಪಾಲಿಸದಿರುವುದು) ಹಾಗೂ ಸೆಕ್ಷನ್‌ 269 (ನಿರ್ಲಕ್ಷ್ಯ ವರ್ತನೆಯು ಜೀವಕ್ಕೆ ಹಾನಿಯಾಗಬಲ್ಲ ಸೋಂಕು ಕಾಯಿಲೆಗಳನ್ನು ಹರಡಬಹುದಾಗಿರುವುದು) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರು ತಿಂಗಳ ವರೆಗೂ ಜೈಲು ಶಿಕ್ಷೆ ಅಥವಾ ದಂಡ ಅಥವಾ ತಪ್ಪು ಸಾಬೀತಾದರೆ ಎರಡೂ ವಿಧಿಸಬಹುದಾಗಿದೆ.

ಪೊಲೀಸರು ಪರಿಶೀಲನೆಗಾಗಿ ಆತನ ಮನೆಗೆ ತೆರಳಿದ್ದಾಗ, ಆತ ಮನೆಯಲ್ಲಿ ಇಲ್ಲದ್ದು ತಿಳಿದು ಬಂದಿದೆ. ಮನೆಯಲ್ಲಿ ಪ್ರತ್ಯೇಕವಾಗಿರುವಂತೆ ಸೂಚಿಸಿರುವ 27,000 ಜನರಿಗೆ ಸಂಬಂಧಿಸಿದ ವಿಳಾಸ ಮತ್ತು ಮೊಬೈಲ್‌ ಸಂಖ್ಯೆಗಳನ್ನು ದೆಹಲಿ ಸರ್ಕಾರ ಪೊಲೀಸರಿಗೆ ನೀಡಿದೆ. ಅವರು ಕ್ವಾರಂಟೈನ್‌ ಆಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಅದರಂತೆ ಪೊಲೀಸರು ಪರಿಶೀಲನೆಗೆ ತೆರಳಿದ್ದಾಗ ವ್ಯಕ್ತಿಯೊಬ್ಬ ಸೂಚನೆಗಳನ್ನು ಪಾಲಿಸದೆ ಸಂಚರಿಸುತ್ತಿರುವುದು ತಿಳಿದಿದೆ.

ಆದರೆ, ಆತ ಭೇಟಿಯಾಗಿದ್ದ ವ್ಯಕ್ತಿಗಳು ಹಾಗೂ ಭೇಟಿ ನೀಡಿದ ಸ್ಥಳಗಳ ಕುರಿತು ಯಾವುದೇ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿರಲಿಲ್ಲ.

ನಿಜಾಮುದ್ದೀನ್‌ನ ತಬ್ಲಿಗಿ ಜಮಾತ್‌ಗೆ ಆತ ಭೇಟಿ ನೀಡಿರುವುದು ಮೊಬೈಲ್‌ ಫೋನ್‌ ಕಾಲ್‌ ರೆಕಾರ್ಡ್‌ಗಳು ಹಾಗೂ ಟ್ರ್ಯಾಕಿಂಗ್‌ನಿಂದ ತಿಳಿದು ಬಂದಿದೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ. ಆತ ಹಲವು ವೈದ್ಯಕೀಯ ಮತ್ತು ಪೊಲೀಸ್‌ ಪರಿಶೀಲನೆಗಳಲ್ಲಿ ಸತ್ಯವನ್ನು ತಿಳಿಸಲೇ ಇಲ್ಲ.

'ಸ್ಥಳೀಯರು ಹಾಗೂ ಅವರ ಮನೆಯವರ ಆರೋಗ್ಯವನ್ನು ಆತ ಅಪಾಯಕ್ಕೆ ಸಿಲುಕಿಸಿದ್ದಾನೆ. ಆತನ ಕುಟುಂಬದ ಇಬ್ಬರಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಮುನ್ನೆಚ್ಚರಿಕಾ ಕ್ರಮವಾಗಿ, ಆತ ವಾಸವಿರುವ ಪ್ರದೇಶವನ್ನು ದಿಗ್ಬಂಧಿತ ವಲಯವಾಗಿ ಘೋಷಿಸಲಾಗಿದೆ. ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ವರದಿಯಾಗಿರುವ 720 ಕೋವಿಡ್‌–19 ಪ್ರಕರಣಗಳ ಪೈಕಿ 430 ಪ್ರಕರಣಗಳಿಗೆ ತಬ್ಲಿಗಿ ಜಮಾತ್‌ ಆಯೋಜಿಸಿದ್ದ ಕಾರ್ಯಕ್ರಮದ ನಂಟಿದೆ. ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆಯಾದ ನಂತರದಲ್ಲಿ ತಬ್ಲಿ ಜಮಾತ್‌ ಕೇಂದ್ರದಿಂದ ಸುಮಾರು 2,300 ಜನರನ್ನು ಸ್ಥಳಾಂತರಿಸಲಾಯಿತು.

ಉತ್ತರ ಪ್ರದೇಶದ ಪ್ರೊಫೆಸರ್‌ ಒಬ್ಬರೂ ಸಹ ತಬ್ಲಿಗಿ ಜಮಾತ್ ಭೇಟಿಯ ಕುರಿತು ವಿವರ ಬಹಿರಂಗ ಪಡಿಸದ ಕಾರಣ, ಈಗಾಗಲೇ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT