ಬುಧವಾರ, ಆಗಸ್ಟ್ 4, 2021
27 °C

ಕೋವಿಡ್–19: ಮೋದಿ, ನೇತನ್ಯಾಹು ಚರ್ಚೆ; ಭಾರತ–ಇಸ್ರೇಲ್ ಸಹಕಾರ ವಿಸ್ತರಣೆಗೆ ಬದ್ಧ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸಂತಸದ ಸಮಯ–ಸಂಗ್ರಹ ಚಿತ್ರ

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಸಿಕೆ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಭಾರತ ಮತ್ತು ಇಸ್ರೇಲ್‌ ನಡುವಿನ ಸಹಕಾರ ವಿಸ್ತರಿಸಿಕೊಳ್ಳುವ ಸಂಬಂಧ ಪ್ರಧಾನಿ ಮೋದಿ ಬುಧವಾರ ಮಾತುಕತೆ ನಡೆಸಿದ್ದಾರೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ಟೆಲಿಫೋನ್‌ನಲ್ಲಿ ಮಾತುಕತೆ ನಡೆಸಿರುವ ಪ್ರಧಾನಿ ಮೋದಿ, ದಾಖಲೆಯ ಐದನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ನೇತನ್ಯಾಹು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

'ಕೋವಿಡ್‌ ನಂತರದ ಜಗತ್ತಿನಲ್ಲಿ ಭಾರತ–ಇಸ್ರೇಲ್‌ ಹೇಗೆ ಜೊತೆಯಾಗಿ ಮುನ್ನಡೆಯಬಹುದೆಂದು ನನ್ನ ಸ್ನೇಹಿತ ಪ್ರಧಾನಿ ನೆತನ್ಯಾಹು ಜೊತೆಗೆ ಅತ್ಯುತ್ತಮ ಮಾತುಕತೆ ನಡೆಯಿತು. ಭಾರತ–ಇಸ್ರೇಲ್‌ ಜೊತೆಗೂಡಿ ನಡೆಸುವ ಕಾರ್ಯಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠಗೊಳ್ಳಲಿವೆ' ಎಂದು ಮೋದಿ ಟ್ವೀಟಿಸಿದ್ದಾರೆ.

ಅಧಿಕೃತ ಪ್ರಕಟಣೆಯ ಪ್ರಕಾರ, ಮುಖಂಡರು ಕೋವಿಡ್‌–19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳು ಸಹಕಾರ ವಿಸ್ತರಿಸಿಕೊಳ್ಳಬಹುದಾದ ಕ್ಷೇತ್ರಗಳ ಕುರಿತು ಚರ್ಚಿಸಿದ್ದಾರೆ. ಲಸಿಕೆ, ಚಿಕಿತ್ಸೆ ಹಾಗೂ ವೈದ್ಯಕೀಯ ಪರೀಕ್ಷೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯೂ ಸೇರಿವೆ.

ಪ್ರಸ್ತುತ ಉಭಯ ರಾಷ್ಟ್ರಗಳ ತಜ್ಞರ ನಡುವೆ ನಡೆಯುತ್ತಿರುವ ವಿನಿಮಯಗಳನ್ನು ಮುಂದುವರಿಸಲು ಸಮ್ಮತಿಸಲಾಗಿದ್ದು, ಅಂತಹ ಒಪ್ಪಂದಗಳಿಂದಾಗಿ ಬರುವ ಫಲಿತಾಂಶ ಮಾನವ ಕುಲದ ಒಳಿತಿಗಾಗಿ ಲಭ್ಯವಾಗುವಂತಿರಬೇಕು ಎನ್ನುವ ಕುರಿತು ಸಹಮತ ವ್ಯಕ್ತಪಡಿಸಿದ್ದಾರೆ.

'ಆರೋಗ್ಯ ತಂತ್ರಜ್ಞಾನ, ಕೃಷಿ ಅನ್ವೇಷಣೆಗಳು, ರಕ್ಷಣಾ ಕ್ಷೇತ್ರದ ಒಪ್ಪಂದ ಹಾಗೂ ಮಾಹಿತಿ ತಂತ್ರಜ್ಞಾನ ಸೇರಿದಂತೆ ಇನ್ನಷ್ಟು ವಲಯಗಳಲ್ಲಿ ಸಹಕಾರ ವಿಸ್ತರಿಸಿಕೊಳ್ಳುವ ಅವಕಾಶ ಇರುವ ಬಗ್ಗೆ ಮಾತುಕತೆ ನಡೆಸಿದ್ದಾರೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಯಲ್ಲಿ ಎದುರಾಗುವ ಅವಕಾಶಗಳು ಹಾಗೂ ಸವಾಲುಗಳ ಕುರಿತು ಉಭಯ ನಾಯಕರು ಆಗಾಗ್ಗೆ ಚರ್ಚಿಸಲು, ಪರಿಶೀಲನೆಗಳನ್ನು ಹಂಚಿಕೊಳ್ಳಲು ಹಾಗೂ ಸಮಾಲೋಚನೆ ನಡೆಸುವುದಕ್ಕೆ ಸಮ್ಮತಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು