ಒಡಿಶಾ: ಸಾವಿನ ಸಂಖ್ಯೆ 29ಕ್ಕೆ ಏರಿಕೆ

ಸೋಮವಾರ, ಮೇ 27, 2019
24 °C

ಒಡಿಶಾ: ಸಾವಿನ ಸಂಖ್ಯೆ 29ಕ್ಕೆ ಏರಿಕೆ

Published:
Updated:
Prajavani

ಭುವನೇಶ್ವರ: ಒಡಿಶಾದ ಕರಾವಳಿ ಪ್ರದೇಶದಲ್ಲಿ ಭಾರಿ ಹಾನಿ ಉಂಟು ಮಾಡಿದ್ದ ಫೋನಿ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ ಭಾನುವಾರ 29ಕ್ಕೇರಿದೆ.

ಪುರಿ ಜಿಲ್ಲೆಯೊಂದರಲ್ಲೇ 21 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುರಿಯಲ್ಲಿರುವ ಐತಿಹಾಸಿಕ ಜಗನ್ನಾಥ ದೇವಸ್ಥಾನಕ್ಕೆ ಅಲ್ಪಪ್ರಮಾಣದಲ್ಲಿ ಹಾನಿ ಉಂಟಾಗಿದೆ. ‘ದೇವಸ್ಥಾನದ ಮುಖ್ಯಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ. ಹಾನಿ ಕುರಿತಂತೆ ಪರಿಶೀಲಿಸುವಂತೆ ಎಎಸ್‌ಐಗೆ ಮನವಿ ಮಡಲಗುವುದು’ ಎಂದು ದೇವಸ್ಥಾನದ ಮುಖ್ಯ ಆಡಳಿತಾಧಿಕಾರಿ ಪಿ.ಕೆ.ಮಹಾಪಾತ್ರ ಹೇಳಿದ್ದಾರೆ.

ಚಂಡಮಾರುತದಿಂದ ಅತಿ ಹೆಚ್ಚು ಹಾನಿ ಸಂಭವಿಸಿರುವ ಪುರಿ ಹಾಗೂ ಖುದ್ರಾ ಜಿಲ್ಲೆಯ ವಿವಿಧ ಪ್ರದೇಶಗಳ ಕುಟುಂಬಗಳಿಗೆ ತಲಾ 50 ಕೆ.ಜಿ. ಅಕ್ಕಿ,  ₹2ಸಾವಿರ ಮತ್ತು ಪಾಲಿಥಿನ್‌ ಶೀಟ್‌ಗಳನ್ನು ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಹೇಳಿದ್ದಾರೆ.

ಮನೆ ಪೂರ್ಣವಾಗಿ ಹಾನಿಗೊಂಡ ಕುಟುಂಬಗಳಿಗೆ ₹95,100 ಪರಿಹಾರ ಘೋಷಿಸಲಾಗಿದೆ. ಪುರಿ ನಗರದಲ್ಲಿ ನೀರಿನ ಸಂಪರ್ಕವನ್ನು ಶೇ70ರಷ್ಟು ಹಾಗೂ ಭುವನೇಶ್ವರದಲ್ಲಿ ಶೇ 40ರಷ್ಟು ಪುನರ್‌ಸ್ಥಾಪಿಸಲಾಗಿದೆ ಎಂದೂ ಮುಖ್ಯಮಂತ್ರಿ ತಿಳಿಸಿದ್ದಾರೆ.

’ವಿದ್ಯುತ್‌ ಅವಘಡಗಳ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಇನ್ನೂ ವಿದ್ಯುತ್‌ ಸಂಪರ್ಕ ಪುನರ್‌ಸ್ಥಾಪಿಸಿಲ್ಲ‘ ಎಂದೂ ಅವರು ಹೇಳಿದ್ದಾರೆ.

ಚಂಡಮಾರುತದ ಪರಿಣಾಮ ವಿದ್ಯುತ್‌ ಸಂಪರ್ಕ ಜಾಲ ಸಂಪೂರ್ಣ ನಾಶವಾಗಿತ್ತು. ರೈಲು ಸಂಚಾರ ಭಾನುವಾರ ಪುನರಾರಂಭಗೊಂಡಿದೆ.

ದೂರವಾಣಿ ಸಂಪರ್ಕ ಪುನರ್‌ಸ್ಥಾಪನೆ: ಸ್ಥಗಿತಗೊಂಡಿದ್ದ ದೂರವಾಣಿ, ಮೊಬೈಲ್‌ ಸಂಪರ್ಕ ಪುನಾರಾರಂಭಿಸಲು ವಿವಿಧ ದೂರ ಸಂಪರ್ಕ ಕಂಪನಿಗಳು ಒಡಿಶಾದಲ್ಲಿ ಸಮರೋಪಾದಿಯ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.

ಭಾರ್ತಿ ಏರ್‌ಟೆಲ್‌, ವಡಾಫೋನ್‌ ಐಡಿಯಾ ಮತ್ತು ರಿಲಯನ್ಸ್ ಜಿಯೋ ಕಂಪನಿಗಳ 930 ಮೊಬೈಲ್‌ ನೆಟ್‌ವರ್ಕ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಹಾನಿ ಸಂಭವಿಸಿಲ್ಲ‘: ‘ಫೋನಿ ಚಂಡಮಾರುತದ ಪರಿಣಾಮ ಕೆಲವು ಗುಡಿಸಲುಗಳಿಗೆ ಹಾನಿಯಾಗಿರುವುದು ಬಿಟ್ಟರೆ ಹೆಚ್ಚಿನ ನಾಶ ಸಂಭವಿಸಿಲ್ಲ‘ ಎಂದು ಪಶ್ವಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಚಂಡಮಾರುತವು ಶನಿವಾರ ಪಶ್ಚಿಮ ಬಂಗಾಳವನ್ನು ಹಾದು ಹೋಗಿ ಬಂಗ್ಲಾದೇಶದಲ್ಲೂ ಹಾನಿಯುಂಟು ಮಾಡಿತ್ತು.

ಪರಿಹಾರ: ಚಂಡಮಾರುತದಿಂದ ಹಾನಿಗೊಂಡಿರುವ ಒಡಿಶಾದ ವಿವಿಧ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಮತ್ತು ಪುನರ್ವಸತಿ ಕಾರ್ಯಕ್ಕಾಗಿ ತಮಿಳುನಾಡು ಮತ್ತು ಉತ್ತರ ಪ್ರದೇಶ ಸರ್ಕಾರಗಳು ತಲಾ ₹10ಕೋಟಿ ಪರಿಹಾರ ಘೋಷಿಸಿವೆ.

ಸಮನ್ವಯದಿಂದ ಅನಾಹುತಕ್ಕೆ ಅಂಕುಶ
ನವದೆಹಲಿ: ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಇತರ ಇಲಾಖೆಗಳೊಂದಿಗೆ ಸಾಧಿಸಿದ ಸಮನ್ವಯ, ದತ್ತಾಂಶಗಳ ಕೂಲಂಕಷ ವಿಶ್ಲೇಷಣೆ ಪರಿಣಾಮ ‘ಫೋನಿ’ ಚಂಡಮಾರುತ ಅಪ್ಪಳಿಸುವ ಕುರಿತು ಸಾಕಷ್ಟು ಮೊದಲೇ ಮಾಹಿತಿ ನೀಡಿತು. ಅಪಾರ ಪ್ರಮಾಣದಲ್ಲಿ ಆಸ್ತಿ–ಪಾಸ್ತಿ ಮತ್ತು ಜೀವ ಹಾನಿ ಆಗುವುದನ್ನು ತಪ್ಪಿಸಿತು.

ಐಎಂಡಿಯ ಹೆಚ್ಚುವರಿ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರು ಚಂಡಮಾರುತ ಸಾಗುವ ಪಥವನ್ನು ಗುರುತಿಸಿ, ಸಂಭಾವ್ಯ ಪರಿಣಾಮವನ್ನು ಊಹಿಸುವಲ್ಲಿ ನಿಷ್ಣಾತರು. ಅವರಿಗೆ ಭೂ ವಿಜ್ಞಾನ ಸಚಿವಾಲಯ (ಎಂಒಇಎಸ್‌), ಚೆನ್ನೈನಲ್ಲಿರುವ ನ್ಯಾಷನಲ್‌ ಇನ್ಟ್‌ಟಿಟ್ಯೂಟ್‌ ಆಫ್‌ ಒಷಿಯನ್ ಟೆಕ್ನಾಲಜಿ ಸಾಕಷ್ಟು ಮಾಹಿತಿ ನೀಡಿದವು.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಅದರ ಪರಿಣಾಮ ತಾಪಮಾನ, ಮಳೆ, ಗಾಳಿಯ ವೇಗದಲ್ಲಿನ ಬದಲಾವಣೆ ಕುರಿತಂತೆ ಉಪಗ್ರಹ ಕಳಿಸಿದ ದತ್ತಾಂಶಗಳನ್ನು ವಿಶ್ಲೇಷಣೆ ಮಾಡಲಾಯಿತು. ಈ ವಿಶ್ಲೇಷಣೆ ಕಾರ್ಯದಲ್ಲಿ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟ್ರಾಪಿಕಲ್‌ ಮೆಟಿಯೊರಾಲಜಿ (ಐಐಟಿಎಂ, ಪುಣೆ), ನ್ಯಾಷನಲ್‌ ಸೆಂಟರ್‌ ಫಾರ್‌ ಮೀಡಿಯಂ ರೇಂಜ್‌ ವೆದರ್ ಫೋರ್‌ಕ್ಯಾಸ್ಟಿಂಗ್‌ (ಎನ್‌ಸಿಎಂಆರ್‌ಡಬ್ಲ್ಯುಎಫ್‌, ನೋಯ್ಡಾ) ನೆರವು ಅಗಾಧ ಎಂದು ಐಎಂಡಿ ಮಹಾನಿರ್ದೇಶಕ ಕೆ.ಜೆ.ರಮೇಶ್ ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !