ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಳೆ ಮಳೆ: ಸತ್ತವರ ಸಂಖ್ಯೆ 169ಕ್ಕೆ ಏರಿಕೆ

Last Updated 11 ಆಗಸ್ಟ್ 2019, 20:21 IST
ಅಕ್ಷರ ಗಾತ್ರ

ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ 169ಮಂದಿ ಬಲಿಯಾಗಿದ್ದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಹಾನಿಯಾಗಿದೆ.

ಪ್ರವಾಹದಿಂದಾಗಿ ಅನೇಕ ರಸ್ತೆಗಳು, ಸೇತುವೆಗಳು ಕೊಚ್ಚಿಹೋಗಿದ್ದರಿಂದ ನೆರೆಪೀಡಿತ ಕೆಲವು ಪ್ರದೇಶಗಳಿಗೆ ಸಂಪರ್ಕವೇ ಇಲ್ಲದಂತಾಗಿದೆ. ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.

ದಕ್ಷಿಣ ಭಾರತದಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯಗಳು ನೆರೆಯಿಂದ ಭಾರಿ ಹಾನಿ ಅನುಭವಿಸಿವೆ. ಕಳೆದ ವರ್ಷ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಕೇರಳದಲ್ಲಿ ಈ ವರ್ಷವೂ ಅಂಥದ್ದೇ ಸ್ಥಿತಿ ನಿರ್ಮಾಣವಾಗಿದೆ. ‘ರಾಜ್ಯದ 14 ಜಿಲ್ಲೆಗಳೂ ಮಳೆಯಿಂದ ತತ್ತರಿಸಿದ್ದು, ಈವರೆಗೆ 70 ಮಂದಿ ಸಾವನ್ನಪ್ಪಿದ್ದಾರೆ. 1.65 ಲಕ್ಷ ಜನರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕೆಲವೆಡೆ ಗುಡ್ಡ ಕುಸಿದು ಮನೆಗಳು 8–10 ಅಡಿ ಆಳದಲ್ಲಿ ಹುದುಗಿಹೋಗಿವೆ. ರಸ್ತೆಗಳಿಗೆ ಹಾನಿಯಾಗಿರುವುದರಿಂದ ಪರಿಹಾರ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಇನ್ನೂ ಒಂದೆರಡು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಇನ್ನಷ್ಟು ಚಿಂತೆಗೆ ಕಾರಣವಾಗಿದೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಕನಿಷ್ಠ 27 ಮಂದಿ ಬಲಿಯಾಗಿದ್ದಾರೆ. ಅನೇಕ ಪ್ರಮುಖ ಪಟ್ಟಣಗಳು ಕಳೆದ ಹಲವು ದಿನಗಳಿಂದ ನೀರಿನಲ್ಲಿ ಮುಳುಗಿವೆ. ‘ಈಗ ಪರಿಸ್ಥಿತಿ ಸುಧಾರಿಸುತ್ತಿದೆ’ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನೆರೆಪೀಡಿತ
ಪ್ರದೇಶಗಳಿಗೆ ರೈಲು ಹಾಗೂ ಬಸ್‌ ಸೇವೆಗಳು ಪೂರ್ಣಪ್ರಮಾಣದಲ್ಲಿ ಸಹಜಸ್ಥಿತಿಗೆ ಬರಲು ಇನ್ನೂ ಒಂದೆರಡು ವಾರಗಳು ಬೇಕಾಗಬಹುದು ಎಂದಿದ್ದಾರೆ.

ಅತ್ತ ಗುಜರಾತ್‌ನಲ್ಲೂ ಮಳೆಯ ಆರ್ಭಟ ಜೋರಾಗಿದ್ದು, ಕನಿಷ್ಠ 19 ಮಂದಿ ಸತ್ತಿದ್ದಾರೆ.

ಎಲ್ಲಾ ರಾಜ್ಯಗಳಲ್ಲೂ ಸ್ಥಳೀಯ ತುರ್ತು ಸೇವಾ ಸಿಬ್ಬಂದಿಯಲ್ಲದೆ ಸೇನೆ ಹಾಗೂ ನೌಕಾಪಡೆಯ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿಕೂಲ ಹವಾಮಾನ ಮತ್ತು ರಸ್ತೆಗಳು ಕೊಚ್ಚಿ ಹೋಗಿರುವುದು ಪರಿಹಾರ ಕಾರ್ಯ ಕೈಗೊಳ್ಳಲು ಅಡ್ಡಿಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT