ಭಾನುವಾರ, ಏಪ್ರಿಲ್ 5, 2020
19 °C

ಎಎಪಿ ಗೆಲುವಿಗೆ ಮೆಚ್ಚುಗೆ: ಕಾಂಗ್ರೆಸ್‌ನಲ್ಲಿ ತಳಮಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿಯ ಭಾರಿ ಗೆಲುವಿನ ಶ್ಲಾಘನೆ ಕಾಂಗ್ರೆಸ್‌ ಪಕ್ಷದಲ್ಲಿ ತಳಮಳ ಸೃಷ್ಟಿಸಿದೆ. ಕಾಂಗ್ರೆಸ್‌ ಮುಖಂಡ ಮಿಲಿಂದ್ ದೇವ್ರಾ ಅವರು, ದೆಹಲಿ ಫಲಿತಾಂಶದ ಬಳಿಕ ಕೇಜ್ರಿವಾಲ್‌ ಅವರನ್ನು ಹೊಗಳಿದ್ದರು. ಇದು ಇನ್ನೊಬ್ಬ ಮುಖಂಡ ಅಜಯ ಮಾಕನ್‌ ಅಸಮಾಧಾನಕ್ಕೆ ಕಾರಣವಾಗಿದೆ. ಮೊದಲು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಳಿಕ ಅರೆಸತ್ಯಗಳನ್ನು ಪ್ರತಿಪಾದಿಸಿ ಎಂದು ದೇವ್ರಾಗೆ ಮಾಕನ್‌ ಸಲಹೆ ನೀಡಿದ್ದಾರೆ.

‘ಸಹೋದರ, ನಿಮಗೆ ಕಾಂಗ್ರೆಸ್‌ ತೊರೆಯುವ ಬಯಕೆ ಇದೆಯೇ, ಹಾಗಿದ್ದರೆ ಪಕ್ಷ ಬಿಟ್ಟುಬಿಡಿ’ ಎಂದು ಮಾಕನ್‌ ಹೇಳಿದ್ದಾರೆ. 

ದೆಹಲಿ ಸರ್ಕಾರವು ಆರ್ಥಿಕ ವಿಚಾರದಲ್ಲಿ ಅತ್ಯಂತ ಬುದ್ಧಿವಂತಿಕೆಯ ನಡೆ ಇರಿಸಿದೆ ಎಂದು ದೇವ್ರಾ ಹೇಳಿದ್ದರು. ಕಳೆದ ಐದು ವರ್ಷಗಳಲ್ಲಿ ಮಿಗತೆ ಬಜೆಟ್‌ ಮಂಡಿಸುತ್ತಿರುವ ಎಎಪಿ ಸರ್ಕಾರಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ದೇವ್ರಾಗೆ ತಿರುಗೇಟು ನೀಡಿರುವ ಮಾಕನ್‌, ದೆಹಲಿಯಲ್ಲಿ 15 ವರ್ಷ ಕಾಂಗ್ರೆಸ್‌ ಸರ್ಕಾರ ಇದ್ದಾಗಿನ ಸಾಧನೆಯನ್ನು ಬಿಚ್ಚಿಟ್ಟಿದ್ದಾರೆ. ವಿದ್ಯುತ್‌ ಕ್ಷೇತ್ರದ ಖಾಸಗೀಕರಣ, ಸಾರ್ವಜನಿಕ ಸಾರಿಗೆಯನ್ನು ಸಿಎನ್‌ಜಿಗೆ ಬದಲಾಯಿಸು ವಂತಹ ದೂರಗಾಮಿ ನಿರ್ಧಾರಗಳನ್ನು ಕಾಂಗ್ರೆಸ್‌ ಸರ್ಕಾರ ಕೈಗೊಂಡಿತ್ತು ಎಂದೂ ಅವರು ನೆನಪಿಸಿದ್ದಾರೆ. 

ಮಾಕನ್‌ಗೆ ದೇವ್ರಾ ಪ್ರತ್ಯುತ್ತರವನ್ನೂ ನೀಡಿ ದ್ದಾರೆ. ‘ಸಹೋದರ, ಶೀಲಾ ದೀಕ್ಷಿತ್‌ ಅವರ ಅಸಾಮಾನ್ಯ ಸಾಧನೆಯನ್ನು ನಾನು ನಿರ್ಲಕ್ಷಿಸಿಲ್ಲ. ಹಾಗೆ ಮಾಡುವುದು ನಿಮ್ಮದೇ ವೈಶಿಷ್ಟ್ಯ. ಎಎಪಿ ಜತೆಗೆ ಮೈತ್ರಿಯ ವಕಾಲತ್ತಿನ ಬದಲಿಗೆ ಶೀಲಾ ಅವರ ಸಾಧನೆಗಳನ್ನು ಜನರಿಗೆ ತಿಳಿಸಿದ್ದರೆ ಇಂದು ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿ ಇರುತ್ತಿತ್ತು’ ಎಂದಿದ್ದಾರೆ.

**
ಹೆಚ್ಚು ಜನರಿಗೆ ಗೊತ್ತಿಲ್ಲದ ಮತ್ತು ಸ್ವಾಗತಾರ್ಹವಾದ ವಿಚಾರವೊಂದನ್ನು ಹಂಚಿಕೊಳ್ಳುತ್ತಿದ್ದೇನೆ– ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರವು ಐದು ವರ್ಷಗಳಲ್ಲಿ ತನ್ನ ವರಮಾನವನ್ನು ದುಪ್ಪಟ್ಟಾಗಿಸಿ ₹60 ಸಾವಿರ ಕೋಟಿಗೆ ಏರಿಸಿದೆ. ಅದಲ್ಲದೆ, ಐದೂ ವರ್ಷಗಳಲ್ಲಿ ಮಿಗತೆ ಬಜೆಟ್‌ ಮಂಡಿಸಲಾಗಿದೆ. ಚಿಂತಿಸಬೇಕಾದ ವಿಚಾರ: ದೆಹಲಿಯು ಈಗ ಆರ್ಥಿಕ ನಿರ್ವಹಣೆಯಲ್ಲಿ ಅತ್ಯಂತ ಬುದ್ಧಿವಂತಿಕೆ ತೋರಿರುವ ಭಾರತದ ರಾಜ್ಯವಾಗಿದೆ.
-ಮಿಲಿಂದ್‌ ದೇವ್ರಾ

**
1997–98ರಲ್ಲಿ ವರಮಾನ ₹4,073 ಕೋಟಿ ಇತ್ತು; 2013–14ರಲ್ಲಿ ಅದು ₹37,459 ಕೋಟಿಗೆ ಏರಿಕೆಯಾಗಿತ್ತು. ಕಾಂಗ್ರೆಸ್‌ ಆಳ್ವಿಕೆಯ ಕಾಲದಲ್ಲಿ ದೆಹಲಿಯ ಒಟ್ಟಾರೆ ವಾರ್ಷಿಕ ಆರ್ಥಿಕ ಪ್ರಗತಿಯ ಪ್ರಮಾಣ ಶೇ 14.87ರಷ್ಟಿತ್ತು. 2015–16ರಲ್ಲಿ ಬಜೆಟ್‌ ವರಮಾನವು ₹41,129 ಕೋಟಿ ಇದ್ದರೆ 2019–20ರಲ್ಲಿ ಅದು ₹60 ಸಾವಿರ ಕೋಟಿಗೆ ಏರಿದೆ. ಎಎಪಿ ಸರ್ಕಾರದ ಅವಧಿಯಲ್ಲಿ ಪ್ರಗತಿಯ ಪ್ರಮಾಣ ಶೇ 9.90 ಮಾತ್ರ
-ಅಜಯ ಮಾಕನ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು