ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಕ್ಕಾಗಿ ದುಬಾರಿ ಬೆಲೆ ತೆತ್ತ ಸಂತ್ರಸ್ತೆ

ಉನ್ನಾವ್‌ ಅತ್ಯಾಚಾರ ಪ್ರಕರಣ
Last Updated 16 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಲಖನೌ: ಶಾಸಕ ಕುಲದೀಪ್‌ ಸೆಂಗರ್‌ನಿಂದ ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ 30 ತಿಂಗಳ ಬಳಿಕ ನ್ಯಾಯ ಲಭಿಸಿದೆ. ಆದರೆ ಈ ನ್ಯಾಯಕ್ಕಾಗಿ ಆಕೆ ಅತಿ ದುಬಾರಿ ಬೆಲೆಯನ್ನು ತೆತ್ತಿದ್ದಾಳೆ.

ಆಡಳಿತ ಪಕ್ಷದ ಶಾಸಕ, ಜಿಲ್ಲೆಯ ಅತ್ಯಂತ ಪ್ರಭಾವಿ ವ್ಯಕ್ತಿಯ ವಿರುದ್ಧದ ಹೋರಾಟ ನಡೆಸಿದ್ದಕ್ಕೆ ಆಕೆಯ ಇಡೀ ಕುಟುಂಬ ಇನ್ನಿಲ್ಲದ ಹಿಂಸೆಯನ್ನು ಅನುಭವಿಸಿದೆ.

ದೌರ್ಜನ್ಯದ ವಿರುದ್ಧ ದೂರು ನೀಡಲು ಹೋದರೆ, ಪೊಲೀಸರು ದೂರು ದಾಖಲಿಸಲು ಸಿದ್ಧರಿರಲಿಲ್ಲ. ಮುಖ್ಯಮಂತ್ರಿ ಹಾಗೂ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದ ಕಾರಣಕ್ಕಾಗಿ ತಂದೆ ಸೇರಿದಂತೆ ಕುಟುಂಬದ ನಾಲ್ವರನ್ನುಸಂತ್ರಸ್ತೆಯು ಕಳೆದುಕೊಳ್ಳಬೇಕಾಯಿತು.

ತಂದೆಯ ಸಹೋದರನನ್ನು ಶಾಸಕರ ಬೆಂಬಲಿಗರು ಹತ್ಯೆ ಮಾಡಿದರು. ತಂದೆಯು ಜೈಲಿನಲ್ಲಿ ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿ
ದರು, ಕೆಲವೇ ತಿಂಗಳ ಹಿಂದೆ ನಡೆದ ಕಾರು ಅಪಘಾತದಲ್ಲಿ ಇನ್ನಿಬ್ಬರು ಸಾವ
ನ್ನಪ್ಪಿದರು. ಅಷ್ಟೇ ಅಲ್ಲ ಕಾರು ಅಪಘಾತದ ಪ್ರತ್ಯಕ್ಷದರ್ಶಿಯೂ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟರು.

‘ನಾವು ತುಂಬಾ ಕಷ್ಟಗಳನ್ನು ಅನುಭವಿಸಿದ್ದೇವೆ. ನಮ್ಮ ಜೀವನ ಇನ್ನು ಮತ್ತೆ ಹಿಂದಿನಂತಾಗಲು ಸಾಧ್ಯವಿಲ್ಲ. ಸೆಂಗರ್‌ಗೆ ಜೀವಾವಧಿ ಶಿಕ್ಷೆಯಾದರೆ ಮಾತ್ರ, ಸತ್ತಿರುವ ನಮ್ಮ ಬಂಧುಗಳ ಆತ್ಮಕ್ಕೆ ಶಾಂತಿ ಸಿಗಬಹುದು’ ಎಂದು ಸಂತ್ರಸ್ತೆಯ ಸಂಬಂಧಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಹೈಕೋರ್ಟ್‌ಗೆ ಮೇಲ್ಮನವಿ: ‘ಈ ತೀರ್ಪು ಸರಿಯಾಗಿಲ್ಲ. ನಮ್ಮ ಹೋರಾಟ ಇಲ್ಲಿಗೇ ಮುಗಿಯುವುದಿಲ್ಲ. ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ’ ಎಂದು ತೀರ್ಪು ಪ್ರಕಟವಾದ ನಂತರ ಸೆಂಗರ್‌ನ ಸಹೋದರಿ ಹೇಳಿದ್ದಾರೆ. ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಸೆಂಗರ್‌ ಪರ ವಕೀಲರು ಪ್ರತಿಕ್ರಿಯೆ ನೀಡಿದ್ದಾರೆ.

ಸಿಬಿಐ ವಿರುದ್ಧ ನ್ಯಾಯಾಲಯ ಅಸಮಧಾನ

ನವದೆಹಲಿ (ಪಿಟಿಐ): ಉನ್ನಾವ್‌ ಅತ್ಯಾಚಾರ ಪ್ರಕರಣವನ್ನು ಸಿಬಿಐ ನಿರ್ವಹಿಸಿದ ರೀತಿಯನ್ನು ಕೋರ್ಟ್‌ ತೀವ್ರವಾಗಿ ಟೀಕಿಸಿದೆ.

‘ಆರೋಪಪಟ್ಟಿ ದಾಖಲಿಸುವುದನ್ನು ವಿಳಂಬ ಮಾಡುವ ಮೂಲಕ ಈ ಪ್ರಕರಣದ ವಿಚಾರಣೆಯನ್ನು ವಿಳಂಬ ಮಾಡಲು ಆರೋಪಿಗಳಿಗೆ ಸಿಬಿಐ ನೆರವಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯ ದುಃಖ, ಆಕೆ ಅನುಭವಿಸಿದ ಕಿರುಕುಳ ಮುಂತಾದವುಗಳನ್ನು ಗಣನೆಗೆ ತೆಗೆದುಕೊಳ್ಳದೆಯೇ ಅಧಿಕಾರಿಗಳು ತನಿಖೆ ನಡೆಸಿದ್ದಾರೆ’ ಎಂದು ಕೋರ್ಟ್‌ ಹೇಳಿದೆ.

‘ಪೋಕ್ಸೊ ಕಾಯ್ದೆಯ ಪ್ರಕಾರ ಸಂತ್ರಸ್ತೆಯು ನೀಡುವ ಹೇಳಿಕೆಗಳನ್ನು ದಾಖಲಿಸಲು ಮಹಿಳಾ ಅಧಿಕಾರಿಯೊಬ್ಬರು ಇರುವುದು ಕಡ್ಡಾಯ. ಆದರೆ ಅಂಥ ಅಧಿಕಾರಿ ಸಿಬಿಐಯಲ್ಲಿ ಇರಲಿಲ್ಲ. ಅಧಿಕಾರಿಗಳು ಸಂತ್ರಸ್ತೆಯ ಮನೆಗೆ ಹೋಗಿ ಹೇಳಿಕೆ ದಾಖಲಿಸಿಕೊಳ್ಳುವ ಬದಲು, ಆಕೆಯನ್ನೇ ಹಲವು ಬಾರಿ ಕಚೇರಿಗೆ ಕರೆಯಿಸಿದ್ದು ಅಚ್ಚರಿ ಮೂಡಿಸಿದೆ’ ಎಂದು ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ.

ತ್ವರಿತ ನ್ಯಾಯಕ್ಕೆ ಸಮಿತಿ ರಚನೆ

ನವದೆಹಲಿ (ಪಿಟಿಐ): ದೇಶದಾದ್ಯಂತ ಅತ್ಯಾಚಾರ ಪ್ರಕರಣಗಳ ತ್ವರಿತ ವಿಲೇವಾರಿಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನ್ಯಾಯಮೂರ್ತಿಗಳಾದ ಸುಭಾಶ್‌ ರೆಡ್ಡಿ ಮತ್ತು ಎಂ.ಆರ್‌.ಶಾ ಅವರಿರುವ ಸಮಿತಿಯನ್ನು ರಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT