ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌, ಬಿಜೆಪಿ ಮುಖಂಡರ ವಾಗ್ಯುದ್ಧ

ದೆಹಲಿ ವಿಧಾನಸಭಾ ಚುನಾವಣೆ: ಮತದಾನ ದಿನದಂದೂ ನಿಲ್ಲದ ಟೀಕೆ
Last Updated 9 ಫೆಬ್ರುವರಿ 2020, 1:33 IST
ಅಕ್ಷರ ಗಾತ್ರ

ನವದೆಹಲಿ: ಆಮ್‌ ಆದ್ಮಿ ಪಾರ್ಟಿ (ಎಎಪಿ) ಹಾಗೂ ಬಿಜೆಪಿ ನಡುವಿನ ನೇರ ಹಣಾಹಣಿಯಿಂದಾಗಿ ದೇಶದ ಗಮನ ಸೆಳೆದಿದ್ದ ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ದಿನವಾದ ಶನಿವಾರವೂ ವಿವಿಧ ಪಕ್ಷಗಳ ಮುಖಂಡರ ನಡುವಿನ ವಾಕ್ಸಮರ ಮುಂದುವರಿದಿತ್ತು.

ಇತ್ತೀಚೆಗೆ ಎಎಪಿ ತೊರೆದಿದ್ದ ಅಲ್ಕಾ ಲಂಬಾ, ಚಾಂದಿನಿ ಚೌಕ್‌ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ತಮ್ಮ ಅದೃಷ್ಟವನ್ನು ಪರೀಕ್ಷೆಗೊಡ್ಡಿದ್ದಾರೆ. ತಮ್ಮ ಕ್ಷೇತ್ರದ ಮತಗಟ್ಟೆಯೊಂದರ ಬಳಿ ಅವರು ಮತ್ತು ಎಎಪಿ ಕಾರ್ಯಕರ್ತರೊಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

‘ಆ ವ್ಯಕ್ತಿ ನನ್ನ ವಿರುದ್ಧ ಕೀಳು ಮಟ್ಟದ ಹಾಗೂ ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ’ ಎಂದು ದೂರಿದ ಲಂಬಾ, ಒಂದು ಹಂತದಲ್ಲಿ ಎಎಪಿ ಕಾರ್ಯಕ
ರ್ತನ ಕೆನ್ನೆಗೆ ಹೊಡೆಯಲು ಮುಂದಾದ ದೃಶ್ಯಗಳು ಜಾಲತಾಣದಲ್ಲಿ ಹರಿದಾಡಿದವು. ನಂತರ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದು, ಪರಿಸ್ಥಿತಿ ತಿಳಿಗೊಳಿಸಿದರು.

ಕೇಜ್ರಿವಾಲ್‌ರಿಂದ ಹನುಮಾನ್‌ ಮಂದಿರ ಅಪವಿತ್ರ: ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ಮನೋಜ್‌ ತಿವಾರಿ ಅವರು ಕೇಜ್ರಿವಾಲ್‌ ವಿರುದ್ಧ ಮಾಡಿದ ಟೀಕೆಯೂ ವಿವಾದಕ್ಕೀಡಾಯಿತು.

‘ಶುಕ್ರವಾರ ನಾನು ಕನಾಟ್‌ ಪ್ಲೇಸ್‌ನಲ್ಲಿರುವ ಹನುಮಾನ್‌ ಮಂದಿರಕ್ಕೆ ತೆರಳಿ ಆಶೀರ್ವಾದ ಪಡೆದೆ. ನೀನು ಒಳ್ಳೆಯ ಕೆಲಸ ಮಾಡುತ್ತಿರುವೆ. ಅದನ್ನು ಮುಂದುವರಿಸಿ, ಜನರ ಸೇವೆ ಮಾಡು, ಫಲಿತಾಂಶ ಏನಾಗುತ್ತದೆ ಎಂಬ ಚಿಂತೆ ಬೇಡ. ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹನುಮಾನ್‌ಜಿ ಆಶೀರ್ವದಿಸಿದರು’ ಎಂದು ಕೇಜ್ರಿವಾಲ್‌ ಹೇಳಿಕೊಂಡಿದ್ದರು.

ಇದೇ ವಿಷಯವಾಗಿ ಕೇಜ್ರಿವಾಲ್‌ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ ತಿವಾರಿ, ‘ತಮ್ಮ ಬೂಟುಗಳನ್ನು ಬಿಚ್ಚಿದ ಕೈಗಳಿಂದಲೇ ಹೂವಿನ ಹಾರ ಹಿಡಿದು ಹೋಗಿದ್ದು ಸರಿಯೇ? ಅಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಗಿದ್ದಿರಾ ಅಥವಾ ದೇವಸ್ಥಾನವನ್ನು ಅಪವಿತ್ರಗೊಳಿಸಲು ಹೋಗಿದ್ದಿರಾ’ ಎಂದು ಪ್ರಶ್ನಿಸಿದ್ದಾರೆ.

‘ನಿಮ್ಮ ಭಕ್ತಿ ನಿಜವಿರದಿದ್ದಾಗ ಈ ರೀತಿ ಘಟನೆಗಳು ನಡೆಯುತ್ತವೆ. ದೇವಸ್ಥಾನವನ್ನು ಶುದ್ಧಗೊಳಿಸುವಂತೆ ನಾನು ಅಲ್ಲಿನ ಅರ್ಚಕರಿಗೆ ಕೇಳಿಕೊಂಡಿದ್ದೇನೆ’ ಎಂದೂ ತಿವಾರಿ ಟ್ವೀಟ್‌ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಟೀಕೆಗೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಜ್ರಿವಾಲ್‌, ‘ಬಿಜೆಪಿಯವರದು ಇದು ಯಾವ ರೀತಿಯ ರಾಜಕಾರಣ’ ಎಂದಿದ್ದಾರೆ. ‘ನಾನು ಟಿ.ವಿ ಚಾನೆಲ್‌ವೊಂದರಲ್ಲಿ ಹನುಮಾನ್‌ ಚಾಲೀಸಾ ಪಠಿಸಿದ ದಿನದಿಂದಲೇ ಬಿಜೆಪಿ ನಾಯಕರು ನನ್ನನ್ನು ಗೇಲಿ ಮಾಡಲು ಆರಂಭಿಸಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.

ಸ್ಮೃತಿ– ಕೇಜ್ರಿವಾಲ್‌ ವಾಕ್ಸಮರ

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹಾಗೂ ಕೇಂದ್ರ ಸಚಿವ ಸ್ಮೃತಿ ಇರಾನಿ ಟ್ವೀಟ್‌ಗಳ ಮೂಲಕವೇ ಆರೋಪ–ಪ್ರತ್ಯಾರೋಪದಲ್ಲಿ ನಿರತರಾಗಿದ್ದು ಕಂಡು ಬಂತು. ‘ಕೇಜ್ರಿವಾಲ್‌ ಸ್ತ್ರೀದ್ವೇಷಿ. ಯಾರಿಗೆ ಮತ ಹಾಕಬೇಕು ಎಂದು ಯೋಚಿಸುವಷ್ಟು ಮಹಿಳೆ ಸಮರ್ಥಳಲ್ಲ ಎಂದು ಭಾವಿಸಿದ್ದೀರ’ ಎಂದು ಸಚಿವೆ ಇರಾನಿ ಕುಟುಕಿದ್ದರು.

ಮತ ಚಲಾಯಿಸಿದ ನಂತರ ಟ್ವೀಟ್‌ ಮಾಡಿ ಬಳಿಕ ಮಾತನಾಡಿದ ಕೇಜ್ರಿವಾಲ್, ‘ಯಾರಿಗೆ ಮತ ಹಾಕಬೇಕು ಎಂಬುದನ್ನು ದೆಹಲಿಯ ಮಹಿಳೆಯರು ನಿರ್ಧರಿಸಿಯಾಗಿದೆ’ ಎಂದು ಹೇಳುವ ಮೂಲಕ ಸಚಿವೆ ಇರಾನಿಗೆ ತಿರುಗೇಟು ನೀಡಿದರು.

‘ಮನೆಯನ್ನು ನಿಭಾಯಿಸುವ ರೀತಿಯಲ್ಲಿಯೇ ದೆಹಲಿ ಮತ್ತು ಈ ದೇಶಕ್ಕೆ ಸಂಬಂಧಿಸಿದ ನಿಮ್ಮ ಜವಾಬ್ದಾರಿಯನ್ನು ಹೊರಲು ಮಹಿಳೆಯರು ಸಿದ್ಧರಾಗಬೇಕು. ನೀವಷ್ಟೇ ಅಲ್ಲದೇ, ನಿಮ್ಮ ಮನೆಯಲ್ಲಿರುವ ಪುರುಷರನ್ನು ಸಹ ಮತಗಟ್ಟೆ ಕರೆದುಕೊಂಡು ಹೋಗಿ. ಮತ ಪಡೆಯಲು ಅರ್ಹ ವ್ಯಕ್ತಿ ಯಾರು ಎಂಬ ಬಗ್ಗೆಯೂ ಅವರ ಜತೆ ಚರ್ಚಿಸಿ’ ಅವರು ಟ್ವೀಟ್‌ ಮಾಡಿದ್ದಾರೆ.

ಚುನಾವಣೆಯ ಪ್ರಮುಖಾಂಶಗಳು

* ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾಡ್ರಾ ಅವರ ಪುತ್ರ ರೈಹಾನ್‌ ವಾಡ್ರಾ ಮೊದಲ ಬಾರಿ ತಮ್ಮ ಹಕ್ಕು ಚಲಾವಣೆ ಮಾಡಿದರು

* ಮುಖ್ಯಮಂತ್ರಿ ಅರವಿಂದ್‌ ಕೇಜ್ರೀವಾಲ್‌ ಪುತ್ರ ಪುಲಕಿತ್‌ರಿಂದ ಸಹ ಮೊದಲ ಬಾರಿ ಮತ ಚಲಾವಣೆ

* ಬಾಲಿವುಡ್‌ ನಟಿ ತಾಪ್ಸಿ ಪನ್ನು ಅವರಿಂದ ಹಕ್ಕು ಚಲಾವಣೆ. ದೆಹಲಿಯಲ್ಲಿ ಮತ ಚಲಾಯಿಸಿದ್ದಕ್ಕೆ ಟ್ವಿಟರ್‌ನಲ್ಲಿ ಟೀಕೆ

* ಗ್ರೇಟರ್‌ ಕೈಲಾಶ್‌ನ ಮತಗಟ್ಟೆಯೊಂದರಲ್ಲಿ ಹಕ್ಕು ಚಲಾಯಿಸಿದ ಕಲಿತಾರಾ ಮಂಡಲ್‌ ಅತಿ ಹಿರಿಯ ಮತದಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಅವರಿಗೆ 110 ವರ್ಷ ವಯಸ್ಸು

* 100 ವರ್ಷ ವಯಸ್ಸು ದಾಟಿದ 130 ಜನ ಮತದಾರರು ದೆಹಲಿಯಲ್ಲಿ ಇದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT