ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ದೆಹಲಿ ಈಗ ಶಾಂತ: ವದಂತಿಗೆ ಕಿವಿಗೊಡದಂತೆ ಪೊಲೀಸರ ಮನವಿ

ದೂರು ನೀಡಲು ವಾಟ್ಸ್‌ಆ್ಯಪ್ ಸಂಖ್ಯೆ ವ್ಯವಸ್ಥೆ
Last Updated 29 ಫೆಬ್ರುವರಿ 2020, 18:30 IST
ಅಕ್ಷರ ಗಾತ್ರ

ನವದೆಹಲಿ: ಕೋಮು ದಳ್ಳುರಿಯಿಂದ ನಲುಗಿದ್ದ ಈಶಾನ್ಯ ದೆಹಲಿಯಲ್ಲಿ ಪರಿಸ್ಥಿತಿ ಶಾಂತಿಯುತವಾಗಿರುವುದು ಶನಿವಾರ ಕಂಡು ಬಂತು. ಹಲ್ಲೆ, ಬೆಂಕಿ ಹಚ್ಚಿದ ಪರಿಣಾಮ ಸುಟ್ಟುಹೋಗಿರುವ ಮನೆ, ಅಂಗಡಿಗಳ ಅವಶೇಷಗಳನ್ನು ತೆರವುಗೊಳಿಸಿ, ಅಲ್ಲಿಯೇ ಹೊಸ ಬದುಕು ಕಟ್ಟಿಕೊಳ್ಳುವ ಧಾವಂತವೂ ಜನರಲ್ಲಿ ಕಂಡು ಬಂತು.

ಜನರಲ್ಲಿ ಮನೆ ಮಾಡಿದ್ದ ಭಯವನ್ನು ದೂರ ಮಾಡುವ ಉದ್ದೇಶದಿಂದ ಭದ್ರತಾ ಪಡೆ ಸಿಬ್ಬಂದಿ ಈಶಾನ್ಯ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಪಥಸಂಚಲನ ನಡೆಸಿದರು. ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಯಾವುದೇ ಕಾರಣಕ್ಕೂ ಭೀತಿಗೊಳಗಾದಂತೆ ಅವರಲ್ಲಿ ವಿಶ್ವಾಸ ತುಂಬುವ ಪ್ರಯತ್ನ ಮುಂದುವರಿಸಿದರು.

ಸಾಮಾಜಿಕ ಜಾಲತಾಣಗಳ ಮೂಲಕ ಹರಡಲಾಗುತ್ತಿರುವ ವದಂತಿಗಳಿಗೆ ಕಿವಿಗೊಡದೇ ಇರುವಂತೆಯೂ ಜನರಲ್ಲಿ ಅವರು ಮನವಿ ಮಾಡಿದರು.

ದ್ವೇಷಪೂರಿತ ಸಂದೇಶ, ಮಾಹಿತಿಯನ್ನು ಪ್ರಸರಣ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡುವ ಸಲುವಾಗಿ ವಾಟ್ಸ್‌ಆ್ಯಪ್‌ ಸಂಖ್ಯೆಯೊಂದನ್ನು ನೀಡಲು ದೆಹಲಿ ಪೊಲೀಸರು ಮುಂದಾಗಿದ್ದಾರೆ.

ಕಾಯುವುದು ತಪ್ಪಿಲ್ಲ: ಇನ್ನೊಂದೆಡೆ, ಹಿಂಸಾಚಾರ ಸಂದರ್ಭದಲ್ಲಿ ಮೃತಪಟ್ಟವರ ಶವಗಳನ್ನು ಪಡೆಯುವ ಸಲುವಾಗಿ ಸಂಬಂಧಪಟ್ಟವರು ಜಿಟಿಬಿ ಆಸ್ಪತ್ರೆಯ ಹೊರಗಡೆ ಕಾಯುತ್ತಿರುವುದು ಕಂಡು ಬಂತು.

ಮಾ.7ರ ವರೆಗೆ ಶಾಲೆ ಬಂದ್‌: ಗಲಭೆ ಹಿನ್ನೆಲೆಯಲ್ಲಿ ಈಶಾನ್ಯ ದೆಹಲಿಯ ಶಾಲೆಗಳನ್ನು ಮಾ. 7ರ ವರೆಗೆ ಮುಚ್ಚಲು ದೆಹಲಿ ಸರ್ಕಾರ ನಿರ್ಧರಿಸಿದೆ. ವಾರ್ಷಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಕಾನ್‌ಸ್ಟೆಬಲ್‌ ಮನೆ ಮರುನಿರ್ಮಾಣಕ್ಕೆ ಬಿಎಸ್‌ಎಫ್‌ ನಿರ್ಧಾರ
ಗಲಭೆ ಸಂಭವಿಸಿದ ಸಂದರ್ಭದಲ್ಲಿ ಈಶಾನ್ಯ ದೆಹಲಿಯ ಖಜೂರಿ ಖಾಸ್‌ನಲ್ಲಿರುವ ಹಲವಾರು ಮನೆಗಳು ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ಆಹುತಿಯಾಗಿವೆ. ಇವುಗಳಲ್ಲಿ, ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಕಾನ್‌ಸ್ಟೆಬಲ್‌ ಮೊಹಮ್ಮದ್‌ ಅನೀಸ್‌ ಅವರ ಮನೆಯೂ ಸೇರಿದ್ದು, ಅವರ ಪಾಲಕರು ಬೀದಿಗೆ ಬಂದಿದ್ದಾರೆ.

ಆದರೆ, ಬಿಎಸ್‌ಎಫ್‌ ಅಧಿಕಾರಿಗಳು, ಅನೀಸ್‌ ಅವರ ಮನೆಯನ್ನು ಮರು ನಿರ್ಮಾಣ ಮಾಡಿ, ಅದನ್ನು ಅವರ ಮದುವೆಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.

29 ವರ್ಷದ ಅನೀಸ್‌ ಈಗ ಪಶ್ಚಿಮ ಬಂಗಾಳದ ಸಿಲಿಗುಡಿ ಬಳಿಯ ರಾಧಾಬರಿಯಲ್ಲಿರುವ ಸೇನಾ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

‘ಮನೆಯನ್ನು ಮರು ನಿರ್ಮಾಣ ಮಾಡಿ ಕೊಡುವ ಜೊತೆಗೆ ಅನೀಸ್‌ ಅವರನ್ನು ಶೀಘ್ರವೇ ದೆಹಲಿಗೆ ವರ್ಗಾಯಿಸಲಾಗುವುದು. ಇದರಿಂದ ಅನೀಸ್‌ ಹಾಗೂ ಕುಟುಂಬಕ್ಕೆ ಅವರ ಮದುವೆ ತಯಾರಿಗೆ ಅನುಕೂಲವಾಗಲಿದೆ’ ಎಂದು ಬಿಎಸ್‌ಎಫ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಅನೀಸ್‌ ಪಾಲಕರನ್ನು ಭೇಟಿಯಾಗಿ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಲಾಗಿದೆ. ಬಿಎಸ್‌ಎಫ್‌ ಕಲ್ಯಾಣ ನಿಧಿಯಿಂದ ಆತನ ಕುಟುಂಬಕ್ಕೆ ₹ 10 ಲಕ್ಷ ನೆರವು ನೀಡಲು ನಿರ್ಧರಿಸಲಾಗಿದೆ’ ಎಂದು ಬಿಎಸ್‌ಎಫ್‌ನ ಡಿಐಜಿ ಪುಷ್ಪೇಂದ್ರ ರಾಥೋಡ್‌ ಶನಿವಾರ ಹೇಳಿದ್ದಾರೆ.

ಜಂತರ್‌ಮಂತರ್‌ನಲ್ಲಿ ಶಾಂತಿ ಮೆರವಣಿಗೆ
ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಕೋಮು ಗಲಭೆಯನ್ನು ಖಂಡಿಸಿ ಇಲ್ಲಿನ ಜಂತರ್ ಮಂತರ್‌ನಲ್ಲಿ ಶನಿವಾರ ಶಾಂತಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ದೆಹಲಿ ಶಾಂತಿ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಪಥಸಂಚಲನದಲ್ಲಿ ರಾಷ್ಟ್ರಧ್ವಜದೊಂದಿಗೆ ಪಾಲ್ಗೊಂಡಿದ್ದ ನೂರಾರು ಜನರು ‘ಜೈ ಶ್ರೀರಾಮ್‌’, ‘ಭಾರತ್ ಮಾತಾಕಿ ಜೈ’ ಎಂಬ ಘೋಷಣೆಗಳನ್ನು ಕೂಗಿದರು. ಬಿಜೆಪಿ ಮುಖಂಡ ಕಪಿಲ್‌ ಮಿಶ್ರಾ ಸಹ ಪಾಲ್ಗೊಂಡಿದ್ದರು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಕೆಲವರು, ‘ದೇಶ ದ್ರೋಹಿಗಳಿಗೆ ಗುಂಡಿಕ್ಕಿ’ಎಂಬುದಾಗಿ ಘೋಷಣೆಗಳನ್ನು ಕೂಗಿದರು.

ಗಾಯದ ಮೇಲೆ ಉಪ್ಪು ಸವರುವ ಕೆಲಸ: ನಕ್ವಿ
‘ಕೋಮು ಗಲಭೆಯಿಂದ ಸಂತ್ರಸ್ತರಾದವರ ಗಾಯದ ಮೇಲೆ ಕೆಲವು ರಾಜಕೀಯ ಪಕ್ಷಗಳು ಹಾಗೂ ಪ್ರಚೋದನೆಯೇ ವೃತ್ತಿಯನ್ನಾಗಿಸಿಕೊಂಡವರು ಉಪ್ಪು ಸವರುವ ಕಾರ್ಯ ಮಾಡುತ್ತಿದ್ದಾರೆ’ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್‌ ನಕ್ವಿ ಶನಿವಾರ ಟೀಕಿಸಿದ್ದಾರೆ.

ಮುಖ್ತಾರ್‌ ಅಬ್ಬಾಸ್‌ ನಕ್ವಿ

‘ಪ್ರಚೋದನೆ ಮಾಡುವವರು ಹಾಗೂ ತಪ್ಪಿತಸ್ಥರಿಗೆ ಜೈಲು ತಪ್ಪದು. ನಗರದಲ್ಲಿ ಶಾಂತಿ ಮತ್ತು ಸೌಹಾರ್ದ ನೆಲೆಸುವುದು ಹಾಗೂ ಈ ನಿಟ್ಟಿನಲ್ಲಿ ಶ್ರಮಿಸುವುದು ನಮ್ಮ ಬದ್ಧತೆಯಾಗಬೇಕು’ ಎಂದರು.

‘ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿ’ ಎಂದೂ ನಕ್ವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT