ಮಂಗಳವಾರ, ಏಪ್ರಿಲ್ 7, 2020
19 °C
ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲಿಸಲು ನಾಲ್ಕು ವಾರ ಕೊಟ್ಟ ಹೈಕೋರ್ಟ್‌

ದೆಹಲಿ ಹಿಂಸಾಚಾರ | ದ್ವೇಷ ಭಾಷಣ: ಸದ್ಯಕ್ಕಿಲ್ಲ ಕೇಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋಮು ಗಲಭೆಗೆ ಕುಮ್ಮಕ್ಕು ನೀಡುವಂತಹ  ಭಾಷಣ ಮಾಡಿದ ಆರೋಪ ಹೊತ್ತಿರುವ ಬಿಜೆಪಿಯ ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಪೊಲೀಸರಿಗೆ ದೆಹಲಿ ಹೈಕೋರ್ಟ್‌ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ಬಿಜೆಪಿ ಮುಖಂಡರಾದ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ಸಂಸದ ಪರ್ವೇಶ್‌ ವರ್ಮಾ ಮತ್ತು ಕಪಿಲ್‌ ಮಿಶ್ರಾ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧದ ಪ್ರತಿಭಟನೆಗಳಿಗೆ ಸಂಬಂಧಿಸಿ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸೂಚಿಸಬೇಕು ಎಂದು ಕೋರಿ ಹರ್ಷ ಮಂದರ್‌ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು. 

ಸನ್ನಿವೇಶವು ಸಂಕೀರ್ಣವಾಗಿರುವುದರಿಂದ ಅರ್ಜಿಗೆ ಪ‍್ರತಿಕ್ರಿಯೆ ನೀಡಲು ಹೆಚ್ಚು ಸಮಯ ಬೇಕು ಎಂದು ಕೇಂದ್ರ ಸರ್ಕಾರ ಕೋರಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್‌. ಪಟೇಲ್‌ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್‌ ಅವರ ಪೀಠವು ಹೇಳಿತು.

ಆದರೆ, ಇದೇ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎಸ್‌. ಮುರಳೀಧರ್‌ ಮತ್ತು ತಲವಂತ್‌ ಸಿಂಗ್‌ ಅವರ ಪೀಠವು, ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಿಸಲು ವಿಫಲರಾಗಿದ್ದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಪೊಲೀಸ್‌ ಆಯುಕ್ತರು ‘ಆತ್ಮಸಾಕ್ಷಿಯ ನಿರ್ಧಾರ’ವನ್ನು ಗುರುವಾರ ಕೈಗೊಳ್ಳಬೇಕು ಎಂದು ಹೇಳಿತ್ತು. ಮುರಳೀಧರ್‌ ಅವರನ್ನು ಬುಧವಾರ ರಾತ್ರಿ ವರ್ಗಾಯಿಸಲಾಗಿದೆ.

ಅರ್ಜಿಯಲ್ಲಿ ಉಲ್ಲೇಖಿಸಲಾಗಿರುವ ‘ದ್ವೇಷ ಭಾಷಣಗಳು’ ಮೂರು ವಾರ ಅಥವಾ ಒಂದು ತಿಂಗಳು ಹಳೆಯವು ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.

 

ಮಧ್ಯರಾತ್ರಿ ವರ್ಗಾವಣೆ ವಿವಾದ

ನ್ಯಾಯಮೂರ್ತಿ ಎಸ್‌.ಮುರಳೀಧರ್‌ ಅವರ ವರ್ಗಾವಣೆ ವಿವಾದಕ್ಕೆ ಕಾರಣವಾಗಿದೆ. ದ್ವೇಷ ಭಾಷಣದ ಆರೋಪ ಹೊತ್ತಿರುವ ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲಿಸದ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಕೆಲವೇ ತಾಸುಗಳಲ್ಲಿ ಈ ವರ್ಗಾವಣೆ ಆದೇಶ ಹೊರಬಿದ್ದಿದೆ.

ಮಧ್ಯರಾತ್ರಿಯ ಆದೇಶವು ‘ನಾಚಿಕೆಗೇಡು’ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದಿದೆ. ಆದರೆ, ಇದು ‘ಮಾಮೂಲಿ’ ವರ್ಗಾವಣೆ. ಅದನ್ನು ಕಾಂಗ್ರೆಸ್‌ ಪಕ್ಷವು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಇದೇ 12ರಂದು ಮಾಡಿದ ಶಿಫಾರಸಿನಂತೆ ಮುರಳೀಧರ್‌ ಅವರ ವರ್ಗಾವಣೆ ಆಗಿದೆ ಎಂದು ಕೇಂದ್ರವು ತಿರುಗೇಟು ನೀಡಿದೆ. ಈ ವರ್ಗಾವಣೆಯು ‘ದುರುದ್ದೇಶಪೂರಿತ’ ಮತ್ತು ‘ಶಿಕ್ಷೆ’ ವಿಧಿಸು
ವಂತಹ ನಡೆ ಎಂದು ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ದುಷ್ಯಂತ್ ದವೆ ಅಭಿಪ್ರಾಯಪಟ್ಟಿದ್ದಾರೆ. 

‘ಮಧ್ಯರಾತ್ರಿ ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಏನೂ ಇಲ್ಲ. ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸಿದ ಪ್ರಾಮಾಣಿಕ ಮತ್ತು ಧೀರ ನ್ಯಾಯಮೂರ್ತಿಯನ್ನು ಶಿಕ್ಷೆಗೆ ಒಳಪಡಿಸುವುದಷ್ಟೇ ಇದರ ಉದ್ದೇಶ’ ಎಂದು ಕ್ಯಾಂಪೇನ್‌ ಫಾರ್‌ ಜುಡಿಷಿಯಲ್‌ ಅಕೌಂಟೆಬಿಲಿಟಿ ಎಂಡ್‌ ರಿಫಾರ್ಮ್ಸ್‌ ಎಂಬ ಎನ್‌ಜಿಒ ಹೇಳಿದೆ.

 

‘ಕೋರ್ಟ್‌ ಮಧ್ಯಪ್ರವೇಶ ಬೇಡ’

ಸಹಜ ಸ್ಥಿತಿ ಸ್ಥಾಪನೆಗೆ ಎಲ್ಲರೂ ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಬಾರದು. ಅದು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಾಪನೆಗೆ ಪೂರಕವಾಗದು. ಎಫ್‌ಐಆರ್‌ ದಾಖಲಿಸುವ ನಿರ್ಧಾರವನ್ನು ಸೂಕ್ತ ಸಮಯದಲ್ಲಿ ಕೈಗೊಳ್ಳಲಾಗುವುದು ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ. ಸೂಕ್ತ ಸಮಯದಲ್ಲಿ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಬುಧವಾರದ ವಿಚಾರಣೆ ವೇಳೆಯಲ್ಲಿಯೂ ಅವರು ಹೇಳಿದ್ದರು.

ಸಾವಿನ ಸಂಖ್ಯೆ 38ಕ್ಕೆ

ದೆಹಲಿ ಗಲಭೆಗೆ ಬಲಿಯಾದವರ ಸಂಖ್ಯೆ ಗುರುವಾರ 38ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಗಲಭೆ ಸಂತ್ರಸ್ತರಾದ 215 ಜನರನ್ನು ನಮ್ಮ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಹಲವು ಮಂದಿ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ. ಈಗ, 51 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರನ್ನು ಬಿಟ್ಟರೆ ಉಳಿದವರ ಸ್ಥಿತಿ ಸ್ಥಿರವಾಗಿದೆ’ ಎಂದು ಜಿಟಿಬಿ ಆಸ್ಪತ್ರೆಯ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ. 

ಅಧಿಕಾರಿ ಹತ್ಯೆ: ಎಎಪಿ ಕೌನ್ವಿಲರ್‌ ವಿರುದ್ಧ ಪ್ರಕರಣ

ಗುಪ್ತಚರ ವಿಭಾಗದ (ಐಬಿ) ಅಧಿಕಾರಿ ಅಂಕಿತ್‌ ಶರ್ಮಾ ಅವರ ಹತ್ಯೆಗೆ ಸಂಬಂಧಿಸಿ ಎಎಪಿಯ ಕೌನ್ಸಿಲರ್‌ ತಾಹಿರ್‌ ಹುಸೇನ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹತ್ಯೆಯ ಹಿಂದೆ ತಾಹಿರ್‌ ಕೈವಾಡ ಇದೆ ಎಂದು ಅಂಕಿತ್‌ ಅವರ ತಂದೆ ರವೀಂದ್ರ ಶರ್ಮಾ ಆರೋಪಿಸಿದ್ದಾರೆ. 

ತಾಹಿರ್‌ ಅವರ ಮಾಲೀಕತ್ವದ ಐದು ಅಂತಸ್ತಿನ ಕಟ್ಟಡದ ತಾರಸಿಯಿಂದ ಕಲ್ಲು ಮತ್ತು ಪೆಟ್ರೋಲ್‌ ಬಾಂಬ್‌ಗಳನ್ನು ಎಸೆಯಲಾಗಿದೆ ಎಂದು ಸ್ಥಳೀಯರೂ ಹೇಳಿದ್ದಾರೆ. ಹಿಂಸಾಚಾರದಲ್ಲಿ ತಾಹಿರ್‌ ಕೈವಾಡ ಇದೆ ಎಂದು ಬಿಜೆಪಿ ಮುಖಂಡ ಕಪಿಲ್‌ ಮಿಶ್ರಾ ಅವರೂ ಆರೋಪಿಸಿದ್ದಾರೆ. ತಾಹಿರ್‌ ವಿರುದ್ಧ ಕೊಲೆ ಮತ್ತು ಗಲಭೆ ಪ್ರಕರಣ ದಾಖಲಿಸಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು