ಭಾನುವಾರ, ಸೆಪ್ಟೆಂಬರ್ 27, 2020
24 °C

ಆಂಧ್ರ ಪ್ರದೇಶ | ‘ಪ್ರಜಾ ವೇದಿಕೆ’ ಕಟ್ಟಡ ನೆಲಸಮ, ನಾಯ್ಡುಗೆ ಜಗನ್‌ ಗುದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮರಾವತಿ: ತೆಲುಗುದೇಶಂ ಪಾರ್ಟಿ (ಟಿಡಿಪಿ) ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಅವರು, ಪಕ್ಷದ ಚಟುವಟಿಕೆಗಳಿಗಾಗಿ ತಮ್ಮ ಅಧಿಕಾರಾವಧಿಯಲ್ಲಿ ನಿರ್ಮಿಸಿದ್ದ ‘ಪ್ರಜಾ ವೇದಿಕೆ’ ಕಟ್ಟಡವನ್ನು ನೆಲಸಮ ಮಾಡಲಾಗುತ್ತಿದೆ.

ನೂತನ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ರಚನೆ ಬಳಿಕ ನಾಯ್ಡು ವಿರುದ್ಧ ಕೈಗೊಂಡ ಮೊದಲ ಕ್ರಮ ಇದಾಗಿದೆ. ಮಂಗಳವಾರ ರಾತ್ರಿ ಕಟ್ಟಡವನ್ನು ನೆಲಸಮ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಆಂಧ್ರಪ್ರದೇಶದ ‘ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ವು (ಸಿಆರ್‌ಡಿಎ) ಕಟ್ಟಡವವನ್ನು ವಶಕ್ಕೆ ಪಡೆದು ಕೆಡವುತ್ತಿದೆ.
‘ಎನ್‌. ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರವು ಕಟ್ಟಡ ನಿರ್ಮಾಣದ ನಿಯಮಗಳನ್ನು ಉಲ್ಲಂಘಿಸಿ ಉಂದವಳ್ಳಿಯಲ್ಲಿ ನಿರ್ಮಿಸಿದ್ದ ‘ಪ್ರಜಾ ವೇದಿಕ’ ಕಟ್ಟಡವನ್ನು ನೆಲಸಮಗೊಳಿಸಬೇಕು’ ಎಂದು ಸಿಎಂ ವೈ.ಎಸ್. ಜಗನ್‌ಮೋಹನ್‌ ರೆಡ್ಡಿ ಸೋಮವಾರವಷ್ಟೇ ಆದೇಶಿಸಿದ್ದರು.

‘ಉದ್ದೇಶಪೂರ್ವಕವಾಗಿ ನಾನು ಇದೇ ಕಟ್ಟಡದಲ್ಲಿ ಜಿಲ್ಲಾಧಿಕಾರಿಗಳ ಸಭೆ ಕರೆದಿದ್ದೇನೆ. ಕಟ್ಟಡ ನಿರ್ಮಾಣದ ನಿಯಮಗಳನ್ನು ಉಲ್ಲಂಘಿಸಿ ಹಿಂದಿನ ಸರ್ಕಾರವು ನದಿಪಾತ್ರದಲ್ಲಿ ಹೇಗೆ ನಿರ್ಮಾಣ ಚಟುವಟಿಕೆಯನ್ನು ಕೈಗೊಂಡಿತ್ತು ಎಂಬುದನ್ನು ನಿಮಗೆ ತೋರಿಸುವುದು ನನ್ನ ಉದ್ದೇಶ’ ಎಂದು ಮುಖ್ಯಮಂತ್ರಿ ಹೇಳಿದ್ದರು.

‘ಕಟ್ಟಡದ ಅಡಿಪಾಯ ಜಲಮಟ್ಟಕ್ಕಿಂತ ಕೆಳಗಿದೆ ಎಂಬ ಕಾರಣಕ್ಕೆ ಅಧಿಕಾರಿಯೊಬ್ಬರು ನಿರ್ಮಾಣ ಕಾರ್ಯಕ್ಕೆ ಅನುಮತಿ ನಿರಾಕರಿಸಿದ್ದರು. ಆದರೆ, ನಾಯ್ಡು ನೇತೃತ್ವದ ಸರ್ಕಾರ ಈ ಆಕ್ಷೇಪವನ್ನು ಕಡೆಗಣಿಸಿತ್ತು. ಬರುವ ದಿನಗಳಲ್ಲಿ ನೆಲಸಮಗೊಳ್ಳಲಿರುವ ಮೊದಲ ಅಕ್ರಮ ಕಟ್ಟಡ ‘ಪ್ರಜಾ ವೇದಿಕೆ’ ಆಗಬೇಕು ಎಂಬುದು ನನ್ನ ಇಚ್ಛೆ’ ಎಂದಿದ್ದರು.

ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಅವರ ತೆಲುಗುದೇಶಂ ಪಕ್ಷಕ್ಕೆ ಸೇರಿದ ಎಲ್ಲ ವಸ್ತುಗಳನ್ನು ಪ್ರಜಾ ವೇದಿಕ ಕಟ್ಟಡದಿಂದ ತೆರವುಗೊಳಿಸುವ ಕಾರ್ಯಕ್ಕೆ ಸರ್ಕಾರ ಶನಿವಾರವಷ್ಟೇ ಚಾಲನೆ ನೀಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು