ಮಂಗಳವಾರ, ಆಗಸ್ಟ್ 20, 2019
25 °C

ಬಾಲಾಕೋಟ್‍ನಲ್ಲಿ ನಿಜವಾಗಿಯೂ ದಾಳಿ ನಡೆದಿದೆಯೇ?: ಸ್ಯಾಮ್ ಪಿತ್ರೋಡಾ ಪ್ರಶ್ನೆ

Published:
Updated:

ನವದೆಹಲಿ: ಬಾಲಾಕೋಟ್‍ನಲ್ಲಿ ಭಾರತೀಯ ವಾಯುಪಡೆ ದಾಳಿ ನಡೆಸಿತ್ತೇ? ಎಂದು ಕಾಂಗ್ರೆಸ್ ಅಧ್ಯಕ್ಷ  ರಾಹುಲ್ ಗಾಂಧಿಯ ಆಪ್ತ, ಕಾಂಗ್ರೆಸ್‌ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಪ್ರಶ್ನಿಸಿದ್ದಾರೆ.
ಭಾರತೀಯ ವಾಯುಪಡೆ 300 ಉಗ್ರರನ್ನು ಹತ್ಯೆ ಮಾಡಿದೆ ಎಂದಾದರೆ ಸರಿ, ಆದರೆ ಇದನ್ನು ಸಾಬೀತು ಪಡೆಸಲು ದಾಖಲೆಗಳನ್ನು ನೀಡುತ್ತೀರಾ? ಎಂದು ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪಿತ್ರೋಡಾ ಈ ಪ್ರಶ್ನೆ ಕೇಳಿದ್ದಾರೆ.

ಪಾಕಿಸ್ತಾನದ ಖೈಬರ್ ಪಕ್ಟುಕ್ವಾ ಪ್ರದೇಶದಲ್ಲಿದ್ದ ಜೈಷ್-ಎ-ಮೊಹಮ್ಮದ್ ಉಗ್ರ ಶಿಬಿರಗಳ ಮೇಲೆ ನಡೆದ ವಾಯುದಾಳಿ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕೇಳಿದಾಗ ಅಂತರರಾಷ್ಟ್ರೀಯ ಮಾಧ್ಯಮಗಳು ವಾಯುದಾಳಿಯ ಬಗ್ಗೆ ಬೇರೆಯದ್ದೇ ರೀತಿಯ ನಿಲುವು ಹೊಂದಿವೆ.ಆದರೆ ವಾಯುಪಡೆ ನಡೆಸಿದ ದಾಳಿ ಬಗ್ಗೆ ದೇಶದಲ್ಲಿರುವ ಜನರು ಸತ್ಯ ಸಂಗತಿ ಅರಿತಿರಬೇಕು ಎಂದಿದ್ದಾರೆ. 

ನಾನು ನ್ಯೂ ನ್ಯೂಯಾರ್ಕ್ ಟೈಮ್ಸ್ ಮತ್ತು ಇತರ ಮಾಧ್ಯಮಗಳಿಂದ ಈ ಬಗ್ಗೆ ಸ್ವಲ್ಪ ವಿಷಯ ತಿಳಿದುಕೊಂಡಿದ್ದೇನೆ. ಭಾರತೀಯ ವಾಯುಪಡೆ ಅಲ್ಲಿ ನಿಜವಾಗಿಯೂ ದಾಳಿ ನಡೆಸಿತ್ತೇ? ನಿಜವಾಗಿಯೂ 300 ಜನರ ಹತ್ಯೆಯಾಗಿತ್ತೇ?. ಅದರ  ಬಗ್ಗೆ ನನಗೆ ಗೊತ್ತಿಲ್ಲ. ಒಬ್ಬ ಪ್ರಜೆಯಾಗಿ ನನಗೆ ಅದರ ಬಗ್ಗೆ ಮಾಹಿತಿ ಕೊಡಿ. ಈ ರೀತಿ ಕೇಳುವುದು ನನ್ನ ಕರ್ತವ್ಯ. ಹೀಗೆ ಕೇಳಿದ್ದರಿಂದ ನಾನು ಒಬ್ಬ ದೇಶಭಕ್ತ ಅಲ್ಲ ಎಂದು ಆಗುವುದಿಲ್ಲ. ಹೀಗೆ ಕೇಳಿದ್ದರಿಂದ ನಾನು ಆ ಕಡೆಯವನು ಅಥವಾ ಈ ಕಡೆಯವನು ಎಂದಾಗುವುದಿಲ್ಲ.  ನಮಗೆ ಸತ್ಯ ಸಂಗತಿ ತಿಳಿಯಬೇಕಿದೆ. 300 ಜನರ ಹತ್ಯೆಯಾಗಿದೆ ಎಂದು ನೀವು ಹೇಳುತ್ತೀರಿ, ನಾನು ಅದರ ಸತ್ಯಾಸತ್ಯತೆಯನ್ನು ಅರಿಯಬೇಕಿದೆ. ಎಲ್ಲರೂ ಈ ಸಂಗತಿಯನ್ನು ಅರಿಯಬೇಕು. ಜಾಗತಿಕ ಮಾಧ್ಯಮಗಳು ಈ ದಾಳಿಯಲ್ಲಿ ಯಾರೂ ಸತ್ತಿಲ್ಲ ಎಂದು ಹೇಳುತ್ತಿವೆ.ಭಾರತೀಯ ಪ್ರಜೆಯಂತೆಯೇ ನನಗೇನೂ ಗೊತ್ತಿಲ್ಲ ಎಂದಿದ್ದಾರೆ ಪಿತ್ರೋಡಾ.

2019ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಸದಸ್ಯರಾಗಿರುವ ಪಿತ್ರೋಡಾ ಅವರು ಪಕ್ಷದ ಹಿರಿಯ ಸಿದ್ದಾಂತವಾದಿ ಎಂದು ಪರಿಗಣಿಸಲಾಗಿದೆ.

ನಾನೊಬ್ಬ ಗಾಂಧೀವಾದಿ, ನಾನು ಸಹಾನುಭೂತಿ ಮತ್ತು ಗೌರವದಲ್ಲಿ ನಂಬಿಕೆಯುಳ್ಳವನು. ವೈಯಕ್ತಿಕವಾಗಿ ನಾನು ಸಂವಾದ ಇಷ್ಟ ಪಡುತ್ತೇನೆ.ನಾವು ಎಲ್ಲರೊಂದಿಗೂ ಸಂವಾದ ನಡೆಸಬೇಕು, ಪಾಕಿಸ್ತಾನದೊಂದಿಗೆ ಮಾತ್ರ ಯಾಕೆ? ಇಡೀ ಜಗತ್ತಿನೊಂದಿಗೆ ನಾವು ಸಂವಾದ ನಡೆಸಬೇಕು.

ನನಗೆ ಪುಲ್ವಾಮಾ ದಾಳಿ ಬಗ್ಗೆ ಹೆಚ್ಚು ಗೊತ್ತಿಲ್ಲ. ಇಂಥಾ ದಾಳಿಗಳು ನಡೆಯುತ್ತಿರುತ್ತವೆ. ಮುಂಬೈ ತಾಜ್ ಹೋಟೆಲ್ ಮತ್ತು ಒಬೆರಾಯ್ ಹೋಟೆಲ್ ಮೇಲೆಯೂ ದಾಳಿ ನಡೆದಿತ್ತು, ಆಗ ನಾವು ವಾಯುದಾಳಿ ನಡೆಸಿ ಪ್ರತಿಕ್ರಿಯಿಸಬೇಕಿತ್ತು. ಆದರೆ ಅದೊಂದು ಸರಿಯಾದ ನಿಲುವು ಅಲ್ಲ. ನಾವು ಜಗತ್ತಿನೊಂದಿಗೆ ಈ ರೀತಿ ವರ್ತಿಸುವುದು ಸರಿಯಲ್ಲ ಎಂಬುದು ನನ್ನ ಅನಿಸಿಕೆ,. ನವೆಂಬರ್ 26ರಂದು ಮುಂಬೈನಲ್ಲಿ ನಡೆದ  ದಾಳಿಯನ್ನು ಉಲ್ಲೇಖಿಸಿದ ಪಿತ್ರೋಡಾ, ಅಲ್ಲಿ 8 ಮಂದಿ ದಾಳಿ ನಡೆಸಲು ಬಂದಿದ್ದರು, ಹೀಗಿರುವಾಗ ಇಡೀ ದೇಶದ ಮೇಲೆ ನಾವು ದಾಳಿ ಮಾಡುವ ಅಗತ್ಯವಿಲ್ಲ.

ನಾವು ಭಾವುಕರಾಗಬಾರದು, ಅಲ್ಲಿನ ಅಂಕಿ ಅಂಶಗಳು ಪಕ್ಷಾತೀತ ಆಗಿರಬೇಕು, ನೀವು ಇವತ್ತು ಬಂದು ನಾನು 300 ಜನರನ್ನು ಹತ್ಯೆ ಮಾಡಿದ್ದೇನೆ ಎಂದರೆ. ಒಂದು ನಿಮಿಷ ಇರಿ ಎಂದು ನಾನು ಹೇಳುತ್ತೇನೆ. ಜಗತ್ತಿನ ಮಾಧ್ಯಮಗಳು ಈ ದಾಳಿಯಲ್ಲಿ ಯಾರೂ ಸತ್ತಿಲ್ಲ, ಇಷ್ಟೊಂದು ಜನ ಸತ್ತಿಲ್ಲ ಎಂದು ಹೇಳಿದರೆ? ನನಗೇನೂ ಗೊತ್ತಿಲ್ಲ. 

ಈ ಮಾತುಗಳೆಲ್ಲವೂ ನನ್ನ ವೈಯಕ್ತಿಕ ಅಭಿಪ್ರಾಯಗಳಾಗಿವೆ. ನಾನು ಒಬ್ಬ ವ್ಯಕ್ತಿಯಾಗಿ ಮಾತನಾಡುತ್ತಿದ್ದೇನೆ. ನಾನೊಬ್ಬ ವಿಜ್ಞಾನಿಯಾಗಿ ಮಾತನಾಡುತ್ತೇನೆ. ನಾನು ತಾರ್ಕಿಕತೆಯನ್ನು ನಂಬುತ್ತೇನೆ. ನಾನು ವಿವೇಚನೆಯನ್ನು, ಅಂಕಿ ಅಂಶಗಳನ್ನು ನಂಬುತ್ತೇನೆ, ನಾನು ಭಾವುಕತೆಯನ್ನು ನಂಬುವುದಿಲ್ಲ ಎಂದು ಪಿತ್ರೋಡಾ ಹೇಳಿದ್ದಾರೆ.

Post Comments (+)