ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಸ್‌–ಗಾಂಧೀಜಿ ಬಾಂಧವ್ಯ: 'ಒಡಕಲ್ಲ, ಇಬ್ಬರ ನಡುವೆ ಇದ್ದದ್ದು ಪ್ರೀತಿ'

ಇತಿಹಾಸಕಾರ ಸುಗತ ಬೋಸ್ ಅವಲೋಕನ
Last Updated 17 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಅಹಮದಾಬಾದ್: ‘ರಾಷ್ಟ್ರಪಿತ ಮಹಾತ್ಮಗಾಂಧಿ ಮತ್ತು ಸುಭಾಷ್‌ಚಂದ್ರ ಬೋಸ್ ನಡುವಣ ಭಿನ್ನಾಭಿ ಪ್ರಾಯಗಳನ್ನು ಭಾರತೀಯರು ಮುಖ್ಯವಾಗಿ ಪಶ್ಚಿಮ ಬಂಗಾಳದ ಜನರು ಹೆಚ್ಚು ಉತ್ಪ್ರೇಕ್ಷೆಯಿಂದ ಬಿಂಬಿಸಿದ್ದರು’ ಎಂದು ಬೋಸ್ ಅವರ ಸಂಬಂಧಿ, ಇತಿಹಾಸಕಾರ ಸುಗತ ಬೋಸ್ ಅಭಿಪ್ರಾಯಪಟ್ಟರು.

‘1939ರಲ್ಲಿ ಇಬ್ಬರ ನಡುವೆ ಮೂಡಿದ್ದ ಒಡಕು ತಾತ್ಕಾಲಿಕ. ಅವರ ಒಟ್ಟು ಸಂಬಂಧವನ್ನು ಗಮನಿಸಿದರೆ ಪರಸ್ಪರರ ನಡುವೆ ಪ್ರೀತಿ, ಬಾಂಧವ್ಯ, ಗೌರವ ಕಾಣಬಹುದಾಗಿದೆ’ ಎಂದು ಪ್ರತಿಪಾದಿಸಿದರು.

ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಸುಗತ ಅವರು ಮಹಾತ್ಮಗಾಂಧಿ ಅವರು ಸ್ಥಾಪಿಸಿದ ಸಾಬರಮತಿ ಆಶ್ರಮದಲ್ಲಿ ಶುಕ್ರವಾರ ಉಪನ್ಯಾಸ ನೀಡಿದರು. ‘ಸಾಬರಮತಿ ಆಶ್ರಮದ ರಕ್ಷಣೆ ಮತ್ತು ಸ್ಮಾರಕ ಟ್ರಸ್ಟ್‌’ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

‘ಬೋಸ್ ಮತ್ತು ಗಾಂಧೀಜಿ ಇಬ್ಬರೂ ಧಾರ್ಮಿಕ ಭಿನ್ನಾಭಿಪ್ರಾಯವೂ ಸೇರಿದಂತೆ ಪರಸ್ಪರರ ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತಿದ್ದರು. ಇದನ್ನೂ ಮೀರಿ ದೇಶದ ಏಕತೆಯನ್ನು ಗಮನದಲ್ಲಿ ಇಟ್ಟುಕೊಂಡು ಇಬ್ಬರೂ ದನಿ ಎತ್ತುತ್ತಿದ್ದರು’ ಎಂದು ಅಭಿಪ್ರಾಯಪಟ್ಟರು.

‘1939ರಲ್ಲಿ ಸುಭಾಷ್‌ಚಂದ್ರ ಬೋಸ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷರಾಗಿ, ಗಾಂಧೀಜಿ ಅವರು ಬೆಂಬಲಿಸಿದ್ದ ಪಟ್ಟಾಭಿ ಸೀತಾರಾಮಯ್ಯ ಅವರ ವಿರುದ್ಧ ಜಯಗಳಿಸಿದ್ದರು. ಎರಡು ದಶಕದ ಅವಧಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಗಾಂಧೀಜಿ ಅಧಿಕಾರಕ್ಕೆ ಅದು ಮೊದಲ ಸವಾಲಾಗಿತ್ತು. ಅಂತಿಮ ವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಳಗಿನ ಆಂತರಿಕ ಭಿನ್ನಾಭಿಪ್ರಾಯದ ಕಾರಣಗಳಿಗಾಗಿ ಬೋಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕಾಯಿತು’ ಎಂದು ಸುಗತ ತಮ್ಮ ಭಾಷಣದಲ್ಲಿ ಹೇಳಿದರು.

ಸ್ವಾತಂತ್ರ್ಯ ಹೋರಾಟ ಕುರಿತಂತೆ ಗಾಂಧೀಜಿ ಅವರಿಗೆ ಬೋಸ್ ಬರೆದಿದ್ದ ವಿವಿಧ ಪತ್ರಗಳನ್ನು ಉಲ್ಲೇಖಿಸಿದ ಅವರು, ‘ಗಾಂಧೀಜಿ ಅಸಾಮಾನ್ಯ ಭಾರತೀಯ. ಅವರು ದೊಡ್ಡ ಸಮೂಹವನ್ನು ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಸಜ್ಜುಗೊಳಿಸಿದ್ದರು’ ಎಂದರು.

ಈ ಇಬ್ಬರೂ ನಾಯಕರ ನಡುವೆ ಪರಸ್ಪರ ಗೌರವ ಭಾವನೆ ಇತ್ತು ಎಂಬುದನ್ನು ನಿರೂಪಿಸಲು ಹಲವು ಪ್ರಕರಣಗಳನ್ನು ಉಲ್ಲೇಖಿಸಿದರು. ಲೋಕಸಭೆಯಲ್ಲಿ 2014ರಿಂದ 2019ರವರೆಗೂ ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸುತ್ತಿದ್ದ ಸುಗತ, ‘ದೇಶದಲ್ಲಿ ಜನರು ಈಗ ಆಡಳಿತದ ಅಂಧಾಭಿಮಾನಿಗಳಾಗುತ್ತಿದ್ದಾರೆ. ಗಾಂಧೀಜಿ ಮತ್ತು ಬೋಸ್ ಅವರು ಹೇಳಿದಂತೆ ದೇಶವನ್ನು ಪ್ರೀತಿಸುತ್ತಿಲ್ಲ’ ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT