ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರು, ಅರೆಸೇನಾ ಪಡೆಗಳು ಸೇನಾ ಸಮವಸ್ತ್ರ ತೊಡಬಾರದು: ಸೇನೆಯಿಂದ ಪತ್ರ

Last Updated 28 ಫೆಬ್ರುವರಿ 2020, 2:30 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಪರ, ವಿರೋಧದ ಮೂಸೆಯಾಗಿರುವ ಈಶಾನ್ಯ ದೆಹಲಿಯ ಜಫರಾಬಾದ್‌ನಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರು ಮತ್ತು ಅರೆಸೇನಾ ಪಡೆಗಳ ಫೊಟೊ, ವಿಡಿಯೊಗಳು ಸಾಮಾಜಿಕ ತಾಣದಲ್ಲಿ ಹಾರಿದಾಡುತ್ತಿರುವ ಮಧ್ಯೆಯೇ ಭಾರತೀಯ ಸೇನೆಯು ರಕ್ಷಣಾ ಇಲಾಖೆಗೆ ಪತ್ರ ಬರೆದಿದೆ.

‘ಪೊಲೀಸರು ಮತ್ತು ಅರೆಸೇನಾ ಪಡೆಗಳು ಯುದ್ಧ ಉಡುಗೆಗಳನ್ನು ತೊಡದಿರಲು ಮಾರ್ಗಸೂಚಿ ಸಿದ್ಧಪಡಿಸಬೇಕು’ಎಂದು ಕೋರಿದೆ. ಈ ಹಿಂದೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಆಪ್ತಸಿಬ್ಬಂದಿಯ ಸಮವಸ್ತ್ರ ಬದಲು ಮಾಡಿದಾಗಲೂ ಸೇನೆ ಆಕ್ಷೇಪವ್ಯಕ್ತಪಡಿಸಿತ್ತು.

‘ಪೊಲೀಸರು ಮತ್ತು ಅರೆಸೇನಾ ಪಡೆಗಳು ಯುದ್ಧ ಉಡುಗೆಗಳನ್ನು ಧರಿಸಿದರೆ, ಸೇನೆ ಮತ್ತು ಪೊಲೀಸರ ನಡುವಿನ ವ್ಯತ್ಯಾಸವೇ ಗೊತ್ತಾಗದೇ ಜನರು ತಪ್ಪಾಗಿ ಭಾವಿಸಿಕೊಳ್ಳುವ ಸಾಧ್ಯತೆಗಳಿವೆ. ಇದು ಸೇನೆಯ ಚಾರಿತ್ರ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೆ, ರಾಷ್ಟ್ರೀಯ ಹಿತಾಸಕ್ತಿಗೆ ದಕ್ಕೆಯಾಗುತ್ತದೆ’ ಎಂದು ಅದು ಅಭಿಪ್ರಾಯಪಟ್ಟಿದೆ.

’ಕಾನೂನು ಸುವ್ಯವಸ್ಥೆ ಪಾಲನೆಮತ್ತು ಉಗ್ರರ ನಿಯಂತ್ರಣ ಅಥವಾ ಪ್ರಭಾವದಲ್ಲಿರುವ ಪ್ರದೇಶಗಳಲ್ಲಿ ಕಾರ್ಯಾಚರಣೆಗೆ ಇಳಿಯುವ ಪೊಲೀಸರು ಮತ್ತು ಅರೆಸೇನಾ ಪಡೆಗಳು ಸೇನೆಯ ಯುದ್ಧ ಉಡುಗೆಗಳನ್ನು ತೊಡಬಾರದು. ಈ ಕಾರ್ಯಾಚರಣೆಗಳಿಗಾಗಿ ಯುದ್ಧ ಉಡುಗೆಗಳನ್ನು ತೊಡುವ ಅಗತ್ಯವಿಲ್ಲ. ಅರಣ್ಯ ಪ್ರದೇಶಗಳ ಕಾರ್ಯಾಚರಣೆಯಲ್ಲಿ ಮಾತ್ರ ಯುದ್ಧ ಉಡುಗೆಗಳನ್ನುಬಳಸಬೇಕು ಎಂದು ಸೇನೆ ಸ್ಪಷ್ಟವಾಗಿ ತಿಳಿಸಿದೆ’ ಎಂದು ಸೇನಾ ಮೂಲಗಳು ತಿಳಿಸಿವೆ.

‘ದೇಶದ ಆಂತರಿಕ ಭದ್ರತೆ, ಪ್ರತಿಷ್ಠಿತರ ಬೆಂಗಾವಲು, ಪೊಲೀಸ್‌ ಕಾರ್ಯಾಚರಣೆಗೆ ಪೊಲೀಸರು ಮತ್ತು ಅರೆಸೇನಾ ಪಡೆಗಳು ಯುದ್ಧ ಉಡುಗೆ ತೊಡುತ್ತಿರುವುದರಿಂದ ಸೇನೆಯೇ ಈ ಕಾರ್ಯಗಳನ್ನು ಸ್ವತಃ ನಿರ್ವಹಿಸುತ್ತಿದೆ ಎಂಬ ಭಾವನೆ ಮೂಡುವ ಸಾಧ್ಯತೆಗಳಿವೆ’ ಎಂದು ಅದು ತಿಳಿಸಿದೆ.

ತನ್ನ ಈ ಅಭಿಪ್ರಾಯವನ್ನು ರಕ್ಷಣಾ ಇಲಾಖೆಯು ಗೃಹ ಇಲಾಖೆಗೂ ತಿಳಸಬೇಕು ಎಂದೂ ಸೇನೆ ಮನವಿ ಮಾಡಿದೆ.

ಪೊಲೀಸರು ಮತ್ತು ಅರೆಸೇನಾ ಪಡೆಗಳು ಗುಂಡುನಿರೋಧಕ ಕವಚಗಳನ್ನು ಧರಿಸಿದರೂ ಅದೂ ಕೂಡ ಖಾಕಿ ಬಣ್ಣದ್ದಾಗಿರಬೇಕು ಎಂದು ಸೇನೆ ಒತ್ತಾಯಿಸಿದೆ. ಜೊತೆಗೆ ಯುದ್ಧ ಉಡುಗೆ ಮಾರುಕಟ್ಟೆಯಲ್ಲಿ ಮುಕ್ತವಾಗಿ ಮಾರಾಟವಾಗದಂತೆ ಮಾಡಲೂ ನೀತಿ ರೂಪಿಸಬೇಕು ಎಂದು ಸಲಹೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT