ಗುರುವಾರ , ನವೆಂಬರ್ 21, 2019
21 °C

ವಿಡಿಯೊ | ಆನೆ ನೋಡಿ ರೈಲು ನಿಲ್ಲಿಸಿದ ಚಾಲಕರಿಗೆ ಅಭಿನಂದನೆ ಮಹಾಪೂರ

Published:
Updated:

ಪಶ್ಚಿಮ ಬಂಗಾಳದ ಕಾಡುಗಳಲ್ಲಿ ಆನೆಗಳು ಹಳಿದಾಟುವುದು, ಒಮ್ಮೊಮ್ಮೆ ವೇಗವಾಗಿ ಸಂಚರಿಸುವ ರೈಲುಗಳು ಡಿಕ್ಕಿಹೊಡೆದು ಸಾವನ್ನಪ್ಪುವುದು ಸಾಮಾನ್ಯ ವಿದ್ಯಮಾನ. ಆದರೆ ಈ ಬಾರಿ ಹೀಗಾಗಿಲ್ಲ. ಜಾಗೃತ ರೈಲು ಚಾಲಕರು ಹಳಿಯ ಮೇಲಿದ್ದ ಆನೆಯನ್ನು ಗುರುತಿಸಿ, ರೈಲು ನಿಲ್ಲಿಸುವ ಮೂಲಕ ಅದು ಸುರಕ್ಷಿತವಾಗಿ ಹಳಿ ದಾಟಲು ಅನುವು ಮಾಡಿಕೊಟ್ಟಿದ್ದಾರೆ.

ಆನೆಯ ಜೀವದ ಬಗ್ಗೆ ಚಾಲಕರು ತೋರಿಸಿರುವ ಕಾಳಜಿಯನ್ನು ಸಾಮಾಜಿಕ ಮಾಧ್ಯಮಗಳು ಕೊಂಡಾಡಿವೆ. ರೈಲು ಸಿಬ್ಬಂದಿಗೆ ಬಹುಮಾನ ನೀಡಿ ಗೌರವಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಅಲಿಪುರ್‌ ದೌರ್–ನ್ಯೂ ಜಲ್ಪೈಗುರಿ ಪ್ಯಾಸೆಂಜರ್‌ ರೈಲು ಓಡಿಸುತ್ತಿದ್ದ ಚಾಲಕರಾದ ಉತ್ತಮ್ ಬರುವ ಮತ್ತು ಡಿ.ಡಿ.ಕುಮಾರ್ ಹಳಿಯ ಮೇಲೆ ಆನೆ ನಿಂತಿದ್ದನ್ನು ಗಮನಿಸಿದರು. ಆನೆಯು ಸುರಕ್ಷಿತ ಸ್ಥಳಕ್ಕೆ ತೆರಳುವವರೆಗೆ ಕಾಯೋಣವೆಂದು ರೈಲು ನಿಲ್ಲಿಸಿದರು. ನಾಗ್ರಾಕೋಟ ಮತ್ತು ಚಾಲ್ಸಾ ಜಂಕ್ಷನ್‌ ಮಾರ್ಗಮಧ್ಯೆ ಈ ಘಟನೆ ನಡೆದಿದೆ.

ನಾರ್ತ್‌ ಈಸ್ಟ್‌ ಫ್ರಂಡಿಯರ್‌ ರೈಲ್ವೇಸ್‌ನ ಆಲಿಪುರ್‌ ದೌರ್‌ ವಿಭಾಗ ಟ್ವಿಟರ್‌ ಅಕೌಂಟ್‌ನಲ್ಲಿ ಘಟನೆಯ ವಿಡಿಯೊ ತುಣುಕನ್ನು ಶೇರ್ ಮಾಡಲಾಗಿದೆ. ಇದೇ ರೀತಿ ಸೆ.23ರಂದೂ ಇಬ್ಬರು ಚಾಲಕರು ರೈಲು ನಿಲ್ಲಿಸಿದ್ದ ವಿಚಾರವನ್ನು ರೈಲ್ವೆ ಇಲಾಖೆ ಟ್ವೀಟರ್‌ನಲ್ಲಿ ಹಂಚಿಕೊಂಡಿತ್ತು.

ಪ್ರಾಣಿಗಳನ್ನು ಅವುಗಳ ಆವಾಸಸ್ಥಾನದಲ್ಲಿ ಸುರಕ್ಷಿತವಾಗಿ ಉಳಿಸಲು ಕಾಳಜಿ ವಹಿಸಿದ ರೈಲು ಚಾಲಕರನ್ನು ಹಲವರು ಅಭಿನಂದಿಸಿದ್ದಾರೆ. ‘ಈ ಚಾಲಕರಿಗೆ ಸೂಕ್ತ ಬಹುಮಾನ ಘೋಷಿಸಬೇಕು. ಇತರರಿಗೂ ಅದು ಪ್ರೋತ್ಸಾಹ ನೀಡುವಂತೆ ಇರಬೇಕು’ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಕಾಡಿನ ಮಧ್ಯೆ ಹಾದು ಹೋಗುವ ರೈಲುಗಳಿಗೆ ವೇಗಮಿತಿ ಇರಬೇಕು ಎಂದು ಹಲವರು ಹೇಳಿದ್ದಾರೆ.

ಇನ್ನಷ್ಟು... 

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕಾಡಾನೆ ಸಾವು
ರೈಲಿಗೆ ಸಿಲುಕಿ 46 ಆನೆಗಳ ಸಾವು

ಪ್ರತಿಕ್ರಿಯಿಸಿ (+)