ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರುತ್ತಲೇ ಇದೆ ಭೂಮಿಯ ತಾಪಮಾನ

Last Updated 15 ಜೂನ್ 2020, 19:43 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಈ ಶತಮಾನದ ಕೊನೆಯ ಹೊತ್ತಿಗೆ ಭಾರತದಲ್ಲಿ ಸರಾಸರಿ ತಾಪಮಾನ 4.4 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಬಹುದು. ಬಿಸಿಗಾಳಿಯ ತೀವ್ರತೆ ಇನ್ನಷ್ಟು ಹೆಚ್ಚಲಿದೆ; ಇದು ಮೂರರಿಂದ ನಾಲ್ಕು ಪಟ್ಟು ಹೆಚ್ಚಬಹುದು ಎಂದು ಕೇಂದ್ರದ ಭೂ ವಿಜ್ಞಾನ ಸಚಿವಾಲಯ ಸಿದ್ಧಪಡಿಸಿದ ವರದಿ ಹೇಳಿದೆ.

ಸಚಿವಾಲಯದ ಅಧೀನದಲ್ಲಿರುವ ಹವಾಮಾನ ಬದಲಾವಣೆ ಸಂಶೋಧನಾ ಕೇಂದ್ರವು ಈ ವರದಿಯನ್ನು ಸಿದ್ಧಪಡಿಸಿದೆ.

ಭಾರತದಲ್ಲಿ ಹಿಂದಿನಿಂದಲೂ ತಾಪಮಾನ ಏರುತ್ತಲೇ ಇದೆ. 1901ರಿಂದ 2018ರ ಅವಧಿಯಲ್ಲಿ ಉಷ್ಣತೆಯು ಸರಾಸರಿ 0.7 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ. ಹಸಿರು ಮನೆ ಅನಿಲ ಹೊರಸೂಸುವಿಕೆಯು ಈ ಏರಿಕೆಗೆ ಕಾರಣ ಎಂದು ವರದಿಯಲ್ಲಿ ವಿವರಿಸಲಾಗಿದೆ.

1986ರಿಂದ 2015ರವರೆಗಿನ 30 ವರ್ಷಗಳಲ್ಲಿ ಅತಿ ಹೆಚ್ಚು ಬಿಸಿಯಿದ್ದ ದಿನದ ಉಷ್ಣತೆಯು 0.63 ಡಿಗ್ರಿ ಸೆಲ್ಸಿಯಸ್‌ನಷ್ಟು ಮತ್ತು ಅತ್ಯಂತ ಚಳಿಯ ದಿನದ ಉಷ್ಣತೆಯು 5.5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗಿದೆ. ಈ ಶತಮಾನದ ಕೊನೆಯ ಹೊತ್ತಿಗೆ, ಅತಿ ಉಷ್ಣತೆಯ ದಿನದ ಬಿಸಿಯು 4.7 ಡಿಗ್ರಿ ಸೆಲ್ಸಿಯಸ್‌ ಮತ್ತು ಅತ್ಯಂತ ಚಳಿಯ ದಿನದ ತಾಪವು 5.5 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಲಿದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.

ಅತಿ ಹೆಚ್ಚು ಬಿಸಿಯ ಹಗಲು ಮತ್ತು ರಾತ್ರಿಗಳು ಶೇ 55ರಿಂದ ಶೇ 70ರಷ್ಟು ಹೆಚ್ಚಳವಾಗಲಿದೆ.ಬಿಸಿಗಾಳಿಯ ಸರಾಸರಿ ಅವಧಿಯು ಸರಿಸುಮಾರು ದುಪ್ಪಟ್ಟಾಗಬಹುದು. ಉಷ್ಣತೆ ಮತ್ತು ತೇವಾಂಶದಲ್ಲಿ ಹೆಚ್ಚಳವು ಭಾರತದ ಎಲ್ಲೆಡೆಯೂ ಕಾಣಿಸಿಕೊಳ್ಳಲಿದೆ. ಉತ್ತರ ಭಾರತದಲ್ಲಿ ಇದು ಇನ್ನಷ್ಟು ತೀವ್ರವಾಗಿ ಇರಲಿದೆ ಎಂದು ವರದಿಯು ಹೇಳಿದೆ.

ಸಾಗರದಲ್ಲೂ ಬಿಸಿ

ಹಿಂದೂ ಮಹಾಸಾಗರದ ಮೇಲ್ಮೈ ಬಿಸಿಯು 1951–2015ರ ಅವಧಿಯಲ್ಲಿ ಒಂದು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ. ಇದೇ ಅವಧಿಯ ಜಾಗತಿಕ ಸರಾಸರಿಗಿಂತ (0.7 ಡಿಗ್ರಿ ಸೆಲ್ಸಿಯಸ್‌) ಇದು ಹೆಚ್ಚು ಎಂಬುದು ಇನ್ನೊಂದು ಕಳವಳಕಾರಿ ಅಂಶ.

ಸಮುದ್ರದ ಮೇಲ್ಮೈಯ ಬಿಸಿ ಏರಿಕೆಯು ಹಿಂದೂ ಮಹಾಸಾಗರದ ಮೇಲೆ ಪರಿಣಾಮ ಬೀರುತ್ತದೆ. ಸಾಗರದ ಮೇಲ್ಮೈ ತಾಪಮಾನದಲ್ಲಿನ ಏರಿಳಿತವು ಮುಂಗಾರು ಮಳೆಯಯಯ ಪ್ರಮಾಣವನ್ನು ನಿರ್ಧರಿಸುತ್ತದೆ.

ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿ ಸಮುದ್ರ ಮಟ್ಟದಲ್ಲಿ ಏರಿಕೆ ಆಗುತ್ತಿದೆ. 1874–2004ರ ಅವಧಿಯಲ್ಲಿ ಸಮುದ್ರ ಮಟ್ಟದ ಏರಿಕೆಯು ವರ್ಷಕ್ಕೆ 1.06ರಿಂದ 1.75 ಮಿ.ಮೀ.ನಷ್ಟಿದೆ. ಇದು ಜಾಗತಿಕ ಮಟ್ಟದಲ್ಲಿ ಸಮುದ್ರ ಮಟ್ಟ ಏರಿಕೆಗೆ ಸಮನಾಗಿದೆ.

21ನೇ ಶತಮಾನದ ಕೊನೆಯ ಹೊತ್ತಿಗೆ, ಹಿಂದೂ ಮಹಾಸಾಗರದಲ್ಲಿ ಸಮುದ್ರ ಮಟ್ಟ ಏರಿಕೆಯು 300 ಮಿ.ಮೀ.ನಷ್ಟು ಇರಲಿದೆ. 1986–2005ರ ಅವಧಿಯ ಸರಾಸರಿಯನ್ನು ಲೆಕ್ಕ ಹಾಕಿ ಈ ಅಂದಾಜು ಮಾಡಲಾಗಿದೆ.

1951ಕ್ಕೆ ಹೋಲಿಸಿದರೆ 2015ರಲ್ಲಿ ಭಾರತದಲ್ಲಿ ಮುಂಗಾರು ಮಳೆ ಪ್ರಮಾಣವು ಶೇ 6ರಷ್ಟು ಇಳಿಕೆಯಾಗಿದೆ. ಸಿಂಧೂ–ಗಂಗಾ ಬಯಲು ಮತ್ತು ಪಶ್ಚಿಮ ಘಟ್ಟಗಳಲ್ಲಿ ಮಳೆ ಪ್ರಮಾಣವು ಗಣನೀಯವಾಗಿ ಕುಸಿದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

* ಸಮುದ್ರದ ಮೇಲ್ಮೈ ಬಿಸಿ ಹೆಚ್ಚಳ, ಸಮುದ್ರ ಮಟ್ಟ ಹೆಚ್ಚಳವೂ ವರದಿಯಲ್ಲಿ ಪ್ರಸ್ತಾಪ

* ಆರು ದಶಕಗಳಲ್ಲಿ ಮುಂಗಾರು ಮಳೆ ಪ್ರಮಾಣ ಶೇ 6ರಷ್ಟು ಇಳಿಕೆ

* ಇಂದು ವರದಿ ಬಿಡುಗಡೆ ಸಾಧ್ಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT