ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಲ್ಲದ ನಿಯಮದ ಪ್ರಕಾರ ಕ್ರಮ’

ಪ್ರಧಾನಿ ಹೆಲಿಕಾಪ್ಟರ್ ಪರಿಶೀಲಿಸಿದ್ದ ಕರ್ನಾಟಕದ ಅಧಿಕಾರಿ ಅಮಾನತು l ಕಾಂಗ್ರೆಸ್‌ ಆಕ್ರೋಶ
Last Updated 18 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಒಡಿಶಾದ ಸಂಬಲಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಅನ್ನು ಪರಿಶೀಲಿಸಿದ್ದ ಕರ್ನಾಟಕ ಕೇಡರ್‌ನ ಐಎಎಸ್‌ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅವರನ್ನು ಚುನಾವಣಾ ಕರ್ತವ್ಯದಿಂದ ಚುನಾವಣಾ ಆಯೋಗವು ಅಮಾನತು ಮಾಡಿದ ಕ್ರಮವು ಈಗ ವಿವಾದಕ್ಕೆ ಕಾರಣವಾಗಿದೆ.

ಅಸ್ತಿತ್ವದಲ್ಲೇ ಇಲ್ಲದ ನಿಯಮಗಳ ಹೆಸರಿನಲ್ಲಿ ಅಧಿಕಾರಿಯನ್ನು ಚುನಾವಣಾ ಆಯೋಗವು ಅಮಾನತು ಮಾಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಇದೇ 16ರಂದು ಸಂಬಲಪುರಕ್ಕೆ ಬಂದಿಳಿದಿದ್ದ ಮೋದಿ ಅವರ ಹೆಲಿ ಕಾಪ್ಟರ್‌ ಅನ್ನು ಮೊಹ್ಸಿನ್ ಪರಿಶೀಲಿಸಿದ್ದರು. ಇದರ ವಿರುದ್ಧ ಸಂಬಲಪುರ ಜಿಲ್ಲಾಧಿಕಾರಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಅದರನ್ವಯ ಆಯೋಗವು ಮೊಹ್ಸಿನ್ ಅವರನ್ನು ಅಮಾನತು ಮಾಡಿತ್ತು.

‘ಲೋಕಸಭಾ ಚುನಾವಣೆಯ ಸಂಬಂಧ 2014ರ ಏಪ್ರಿಲ್ 10ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿನ ನಿಯಮಗಳನ್ನು ಮೊಹ್ಸಿನ್ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಚುನಾವಣಾ ಆಯೋಗವು ಅಮಾನತು ಆದೇಶದಲ್ಲಿ ವಿವರಿಸಿತ್ತು.

‘ವಿಶೇಷ ರಕ್ಷಣಾ ಪಡೆಯ (ಎಸ್‌ಪಿಜಿ) ಭದ್ರತೆಯಲ್ಲಿ ಇರುವವರನ್ನು ಚುನಾವಣಾ ಸಂಚಾರಿ ತನಿಖಾ ದಳದ ಸಿಬ್ಬಂದಿ ಪರಿಶೀಲಿಸುವಂತಿಲ್ಲ. ಇದನ್ನು ಮೊಹ್ಸಿನ್ ಉಲ್ಲಂಘಿಸಿದ್ದಾರೆ. ಎಸ್‌ಪಿಜಿ ಭದ್ರತೆ ಇರುವ ಪ್ರಧಾನಿಯವರ ಹೆಲಿಕಾಪ್ಟರ್‌ ಅನ್ನು ಮೊಹ್ಸಿನ್ ಪರಿಶೀಲಿಸಿದ್ದಾರೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ’ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಚುನಾವಣಾ ಆಯೋ ಗದಿಂದ ಮಾಹಿತಿ ಪಡೆಯಲು ನಡೆಸಿದ ಯತ್ನ ಸಫಲವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಮೊಹಮ್ಮದ್ ಮೊಹ್ಸಿನ್ ಸಹ ನಿರಾಕರಿಸಿದ್ದಾರೆ.

ಏಪ್ರಿಲ್ 10ರ ಅಧಿಸೂಚನೆ

ಸರ್ಕಾರದ ಒಡೆತನದಲ್ಲಿರುವ ಮತ್ತು ಸರ್ಕಾರ ಬಾಡಿಗೆ ಪಾವತಿಸುವ ವಾಹನಗಳು, ಹೆಲಿಕಾಪ್ಟರ್ ಅಥವಾ ವಿಮಾನವನ್ನು ಚುನಾವಣಾ ಪ್ರಚಾರಕ್ಕೆ ಮತ್ತು ಚುನಾವಣಾ ಪ್ರಚಾರದ ಉದ್ದೇಶದ ಪ್ರಯಾಣಕ್ಕೆ ಬಳಸುವಂತಿಲ್ಲ. ಪ್ರಧಾನಿ ಮತ್ತು ಜೀವಕ್ಕೆ ಆಪತ್ತು ಇರುವ ರಾಜಕೀಯ ನಾಯಕರಿಗೆ ಮಾತ್ರ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ ಎಂದು ಚುನಾವಣಾ ಆಯೋಗವು 2014ರ ಏಪ್ರಿಲ್ 10ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ವಿವರಿಸಿದೆ.

ಎಸ್‌ಪಿಜಿ ಭದ್ರತೆ ಪಡೆದಿರುವ ವ್ಯಕ್ತಿಯು ಸರ್ಕಾರಿ ವಾಹನವನ್ನು ಚುನಾವಣಾ ಪ್ರಚಾರಕ್ಕೆ ಬಳಸುತ್ತಿದ್ದಾರೆ ಎಂಬ ಸಂದೇಹ ಬಂದಲ್ಲಿ, ಅದನ್ನು ಸಂಬಂಧಿತ ಸರ್ಕಾರದ ಗಮನಕ್ಕೆ ತರುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ಅಲ್ಲದೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸುವ ಅಧಿಕಾರವೂ ಆಯೋಗಕ್ಕೆ ಇದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಆದರೆ, ‘ಎಸ್‌ಪಿಜಿ ಭದ್ರತೆ ಇರುವ ವ್ಯಕ್ತಿಗಳ ವಾಹನಗಳನ್ನು ಪರಿಶೀಲಿಸುವಂತಿಲ್ಲ’ ಎಂದು ಆಯೋಗವು ತನ್ನ ಅಧಿಸೂಚನೆಯಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. 1999ರಲ್ಲಿ ಆಯೋಗವು ಹೊರಡಿಸಿರುವ ‘ಸರ್ಕಾರಿ ವಾಹನಗಳ ಬಳಕೆ’ ಮಾರ್ಗಸೂಚಿಯಲ್ಲೂ, ‘ಎಸ್‌ಪಿಜಿ ಭದ್ರತೆ ಇರುವ ವ್ಯಕ್ತಿಗಳ ವಾಹನಗಳನ್ನು ಪರಿಶೀಲಿಸುವಂತಿಲ್ಲ’ ಎಂಬುದರ ಉಲ್ಲೇಖವಿಲ್ಲ.

‘ವಿನಾಯಿತಿ ಎಲ್ಲಿದೆ’

‘ಪ್ರಧಾನಿ ಪ್ರಯಾಣಿಸುವ ಹೆಲಿಕಾಪ್ಟರ್ ಅಥವಾ ವಾಹನಗಳನ್ನು ಚುನಾವಣಾ ತನಿಖಾಧಿಕಾರಿಗಳು ಪರಿಶೀಲಿಸಬಾರದು ಎಂಬ ನಿಯಮ ಎಲ್ಲೂ ಇಲ್ಲ. ಅಸ್ತಿತ್ವದಲ್ಲೇ ಇಲ್ಲದ ನಿಯಮದ ಹೆಸರಿನಲ್ಲಿ ಚುನಾವಣಾ ಆಯೋಗವು ಐಎಎಸ್‌ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಂಡಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಈ ನಿಯಮಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಹೊರಡಿಸಿದ್ದ ಪ್ರಕಟಣೆಗಳನ್ನು ಕಾಂಗ್ರೆಸ್‌ ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

‘ಮೋದಿ ಹೆಲಿಕಾಪ್ಟರ್‌ನಲ್ಲಿ ಸಾಗಿಸುತ್ತಿದ್ದದ್ದು ಏನು? ಭಾರತೀಯರು ಅದನ್ನು ನೋಡಬಾರದು ಎಂದು ಮೋದಿ ಬಯಸಿದ್ದರೇ’ ಎಂದು ಕಾಂಗ್ರೆಸ್‌ ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದೆ.

‘ಕರ್ನಾಟಕದಲ್ಲಿ ಮೋದಿಯವರ ಹೆಲಿಕಾಪ್ಟರ್‌ನಿಂದ ಟ್ರಂಕ್ ಒಂದನ್ನು ತರಾತುರಿಯಲ್ಲಿ ಕಾರೊಂದಕ್ಕೆ ಸಾಗಿಸಲಾಗಿತ್ತು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರನ್ನೂ ನೀಡಲಾಗಿತ್ತು. ಆಯೋಗ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ ಮೋದಿಯವರ ಹೆಲಿಕಾಪ್ಟರ್‌ ಅನ್ನು ಪರಿಶೀಲಿಸಿದ ಅಧಿಕಾರಿಯನ್ನು ಆಯೋಗವು ಅಮಾನತು ಮಾಡಿದೆ. ಇದು ಪಕ್ಷಪಾತವಲ್ಲವೇ’ ಎಂದು ಕಾಂಗ್ರೆಸ್‌ ಮತ್ತೊಂದು ಟ್ವೀಟ್‌ನಲ್ಲಿ ಹರಿಹಾಯ್ದಿದೆ.

ಧರ್ಮೇಂದ್ರ ಪ್ರಧಾನ್‌ ಗಲಾಟೆ

ಭುವನೇಶ್ವರ:ತಾವು ಪ್ರಯಾಣಕ್ಕೆ ಬಳಸಿದ್ದ ಹೆಲಿಕಾಪ್ಟರ್ ಮತ್ತು ಅದರಲ್ಲಿ ಇದ್ದ ಸೂಟ್‌ ಕೇಸ್‌ ಒಂದನ್ನು ಪರಿಶೀಲಿಸಲು ಮುಂದಾಗಿದ್ದ ಚುನಾವಣಾ ಅಧಿಕಾರಿಗಳನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಡೆದಿದ್ದಾರೆ. ಅಧಿಕಾರಿಗಳ ಜತೆ ಅವರು ನಡೆಸಿದ ಮಾತಿನ ಜಟಾಪಟಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಒಡಿಶಾದ ಸಂಬಲಪುರದಲ್ಲಿ ಮಂಗಳವಾರ ಈ ಘಟನೆ ನಡೆದಿದೆ.ಧರ್ಮೇಂದ್ರ ಪ್ರಧಾನ್ ವಿರುದ್ಧ ಒಡಿಶಾದ ಆಡಳಿತಾರೂಢ ಬಿಜೆಡಿ ಆಯೋಗಕ್ಕೆ ದೂರು ನೀಡಿದೆ.

ಸಂಬಲಪುರದಲ್ಲಿ ಮಂಗಳವಾರ ನಡೆಯಲಿದ್ದ ಚುನಾವಣಾ ಪ್ರಚಾರಕ್ಕೆ ಧರ್ಮೇಂದ್ರ ಪ್ರಧಾನ್ ಬಂದಿದ್ದರು. ಅವರಿದ್ದ ಹೆಲಿಕಾಪ್ಟರ್ ಹೆಲಿಪ್ಯಾಡ್‌ನಲ್ಲಿ ಇಳಿಯುತ್ತಿದ್ದಂತೆಯೇ ಚುನಾವಣಾ ಸಂಚಾರಿ ತನಿಖಾ ಪಡೆಯ ಸಿಬ್ಬಂದಿ ಹೆಲಿಕಾಪ್ಟರ್‌ನತ್ತ ನಡೆದರು. ಅಷ್ಟರಲ್ಲಿ ಧರ್ಮೇಂದ್ರ ಪ್ರಧಾನ್ ಹೆಲಿಕಾಪ್ಟರ್‌ನಿಂದ ಕೆಳಗೆ ಇಳಿದಿದ್ದರು. ಅಧಿಕಾರಿಗಳು ಹೆಲಿಕಾಪ್ಟರ್‌ನತ್ತ ತೆರಳದಂತೆ ಧರ್ಮೇಂದ್ರ ಅವರು ತಡೆದರು. ಅಧಿಕಾರಿಗಳು ಮತ್ತು ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ವೇಳೆ ಹೆಲಿಕಾಪ್ಟರ್‌ನಿಂದ ಇಳಿಸಲಾಗಿದ್ದ ಸೂಟ್‌ಕೇಸ್‌ ಒಂದನ್ನು ಪರಿಶೀಲಿ ಸಲು ಅಧಿಕಾರಿಗಳು ಮುಂದಾದರು. ಅದಕ್ಕೂ ಧರ್ಮೇಂದ್ರ ಅವರು ತಡೆ ಒಡ್ಡಿದರು.

***

ಎಸ್‌ಪಿಜಿ ಭದ್ರತೆ ಇರುವ ಕಾಂಗ್ರೆಸ್‌ ನಾಯಕರ ಹೆಲಿಕಾಪ್ಟರ್‌ ಅನ್ನು ಪರಿಶೀಲಿಸಲಾಗಿದೆ. ಆದರೆ ಮೋದಿಗೆ ಏಕೆ ಪರಿಶೀಲನೆಯಿಂದ ವಿನಾಯಿತಿ? ಮೋದಿಗೆ ಒಂದು ನ್ಯಾಯ, ಉಳಿದವರಿಗೆ ಒಂದು ನ್ಯಾಯವೇ?

–ಅಹ್ಮದ್ ಪಟೇಲ್, ಕಾಂಗ್ರೆಸ್ ನಾಯಕ

ಮೋದಿಯ ಹೆಲಿಕಾಪ್ಟರ್‌ ಪರಿಶೀಲಿಸಿದ ಅಧಿಕಾರಿಯ ಅಮಾನತು! ಕಾವಲುಗಾರ (ಮೋದಿ) ತಮ್ಮದೇ ಪ್ರತ್ಯೇಕ ರಕ್ಷಾ ಕವಚದಲ್ಲಿ ಜೀವಿಸುತ್ತಿದ್ದಾರೆಯೇ ಅಥವಾ ಏನನ್ನಾದರೂ ಮರೆಮಾಚಲು ಯತ್ನಿಸುತ್ತಿದ್ದಾರೆಯೇ?

–ಎಎಪಿ ಟ್ವೀಟ್

ಆ ಸೂಟ್‌ಕೇಸ್‌ನಲ್ಲಿ ಏನಿತ್ತು ಎಂಬುದನ್ನು ಧರ್ಮೇಂದ್ರ ಪ್ರಧಾನ್ ಅವರು ಸಾರ್ವಜನಿಕರಿಗೆ ತಿಳಿಸಬೇಕು. ಚುನಾವಣಾ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು

–ಬಿಜೆಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT