‘ಚುನಾವಣಾ ಪ್ರಚಾರ: ರಾಜ್ಯಕ್ಕೆ ಪ್ರಿಯಾಂಕಾ’

7
ಪಕ್ಷದಿಂದ ಅಧಿಕೃತ ಆಹ್ವಾನ: ಎಚ್‌.ಕೆ. ಪಾಟೀಲ

‘ಚುನಾವಣಾ ಪ್ರಚಾರ: ರಾಜ್ಯಕ್ಕೆ ಪ್ರಿಯಾಂಕಾ’

Published:
Updated:
Prajavani

ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್‌ನ ಲೋಕಸಭೆ ಚುನಾವಣೆಯ ಪ್ರಚಾರ ಕಾರ್ಯ ಶೀಘ್ರವೇ ಆರಂಭವಾಗಲಿದೆ. ಪ್ರಚಾರಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಆಹ್ವಾನಿಸಲಾಗುವುದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಈ ವಿಷಯ ತಿಳಿಸಿದ ಅವರು, ‘ಚುನಾವಣಾ ಪ್ರಣಾಳಿಕೆ ಮಾದರಿಯಲ್ಲಿ ಬಜೆಟ್‌ ಮಂಡಿಸಿರುವ ಬಿಜೆಪಿಯು, ಇದೇ 10ರಿಂದ ರಾಜ್ಯದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಚಾರ ಆರಂಭಿಸಲಿದೆ. ಆದಷ್ಟು ಶೀಘ್ರವೇ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಪ್ರಚಾರದಲ್ಲಿ ತೊಡಗಲಿದೆ’ ಎಂದರು.

‘ರಫೇಲ್‌ ಯುದ್ಧ ವಿಮಾನಗಳ ಖರೀದಿ ಹಗರಣ, ರಾಮ ಮಂದಿರ ನಿರ್ಮಾಣ ಕುರಿತ ಈಡೇರದ ಭರವಸೆ, ನರೇಂದ್ರ ಮೋದಿ ಅವರ ಸುಳ್ಳು ಆಶ್ವಾಸನೆಗಳು, ಕೃಷಿ ಕ್ಷೇತ್ರದ ಕಡೆಗಣನೆ ಮತ್ತು ಉಲ್ಬಣಗೊಂಡ ನಿರುದ್ಯೋಗ ಸಮಸ್ಯೆಯಂತಹ ವಿಷಯಗಳೇ ಕಾಂಗ್ರೆಸ್‌ ಪ್ರಚಾರದ ಕಾರ್ಯತಂತ್ರಗಳಾಗಲಿವೆ’ ಎಂದು ಅವರು ಸ್ಪಷ್ಟಪಡಿಸಿದರು.

‘ರೈತರ ಸಾಲ ಮನ್ನಾದಂತಹ ರಾಜ್ಯ ಸರ್ಕಾರದ ಘೋಷಣೆಯನ್ನು ‘ಚಾಕೊಲೇಟ್‌’ ಮತ್ತು ‘ಲಾಲಿಪಾಪ್‌’ ಎಂದು ಟೀಕಿಸಿದ್ದ ಪ್ರಧಾನಿ ಮೋದಿ ಹಾಗೂ ಕೇಂದ್ರದ ಸಚಿವರು, ರೈತರಿಗೆ ವಾರ್ಷಿಕ ₹ 6,000 ನೇರ ನಗದು ಯೋಜನೆ ಘೋಷಿಸಿರುವುದು ಚಾಕೊಲೇಟ್‌ನ ಮೇಲಿನ ಹೊದಿಕೆಯಂತಿದೆ’ ಎಂದು ಅವರು ವ್ಯಂಗ್ಯವಾಡಿದರು.

ಚುನಾವಣೆಗೆ ಮೊದಲು ರೈತರ ಖಾತೆಗೆ ₹ 6,000 ಜಮಾ ಮಾಡುವಂತಹ ಬಿಜೆಪಿಯ ಕ್ರಮವು ಆಮಿಷವಲ್ಲದೆ ಬೇರೇನೂ ಅಲ್ಲ. ಚುನಾವಣಾ ಆಯೋಗವು ಇಂತಹ ಘೋಷಣೆಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರಣಾಳಿಕೆಯನ್ನೇ ಬಜೆಟ್‌ನಲ್ಲಿ ಘೋಷಿಸಿರುವ ಬಿಜೆಪಿ, ಬಜೆಟ್‌ ಪ್ರಕ್ರಿಯೆಯನ್ನೇ ದುರುಪಯೋಗ ಮಾಡಿಕೊಂಡಿದೆ. ಉದ್ಯೋಗ ಸೃಷ್ಟಿಗೆ ಒತ್ತು ನೀಡುವುದಾಗಿ ತಿಳಿಸಿದ್ದ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಕಳೆದ 45 ವರ್ಷಗಳಲ್ಲೇ ಅಧಿಕ ಪ್ರಮಾಣದ ನಿರುದ್ಯೋಗ ಸಮಸ್ಯೆ ತಲೆದೋರಿದೆ ಎಂದು ಪಾಟೀಲ ದೂರಿದರು.

ಅವಹೇಳನಕ್ಕೆ ಕಾಂಗ್ರೆಸ್ ಗರಂ

ಸಕ್ರಿಯ ರಾಜಕಾರಣ ಪ್ರವೇಶದ ನಂತರ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಹೆಚ್ಚಾಗಿರುವ ಅಪಪ್ರಚಾರದ ವಿರುದ್ಧ ಅಖಿಲ ಭಾರತ ಕಾಂಗ್ರೆಸ್‌ ಮಹಿಳಾ ಘಟಕ ಪೊಲೀಸರ ಮೊರೆ ಹೋಗಲು ನಿರ್ಧರಿಸಿದೆ.

ಪ್ರಿಯಾಂಕಾ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ನಾಯಕರು ವೈಯಕ್ತಿಕ ಮತ್ತು ನಿಂದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎಂದು ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್‌ ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಿಯಾಂಕಾ ವಿರುದ್ಧ ಬಿಜೆಪಿ ನಾಯಕರು ಆರಂಭಿಸಿರುವ  ಅಭಿಯಾನದ ವಿರುದ್ಧ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಸೋಮವಾರ ಎಫ್‌ಐಆರ್ ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !