ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ರಕ್ಷಣೆಗೆ ಜಾಮಿಯಾ ಪ್ರವೇಶ

ವಿ.ವಿ.ಯೊಳಗೆ ಪ್ರವೇಶ – ಪೊಲೀಸರ ಸಮರ್ಥನೆ l ಪೊಲೀಸರಿಂದ ದೌರ್ಜನ್ಯ –ವಿದ್ಯಾರ್ಥಿಗಳ ಆರೋಪ
Last Updated 18 ಡಿಸೆಂಬರ್ 2019, 19:42 IST
ಅಕ್ಷರ ಗಾತ್ರ

ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆವರಣದೊಳಕ್ಕೆ ಹೋದ ಕ್ರಮವನ್ನು ದೆಹಲಿ ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ನಡೆದ ಬಳಿಕ ಪೊಲೀಸರು ವಿಶ್ವವಿದ್ಯಾಲಯದ ಆವರಣದೊಳಕ್ಕೆ ನುಗ್ಗಿ ಗ್ರಂಥಾ
ಲಯದಲ್ಲಿ ಅಶ್ರುವಾಯು ಶೆಲ್‌ ಸಿಡಿಸಿದ್ದರು ಮತ್ತು ಲಾಠಿ ಪ್ರಹಾರ ನಡೆಸಿದ್ದರು.

ವಿ.ವಿ. ಆವರಣದ ಒಳಗಿನಿಂದಲೇ ಕಲ್ಲು ತೂರಾಟ ನಡೆದಿತ್ತು. ಹಾಗಾಗಿ, ವಿದ್ಯಾರ್ಥಿಗಳ ರಕ್ಷಣೆಗಾಗಿ ವಿ.ವಿ. ಒಳಗೆ ಹೋಗಿರುವುದಾಗಿ ಎಫ್‌ಐಆರ್‌ನಲ್ಲಿ ಪೊಲೀಸರು ಹೇಳಿದ್ದಾರೆ. ಎಫ್‌ಐಆರ್‌ನಲ್ಲಿ ಏಳು ಮಂದಿಯನ್ನು ಹೆಸರಿಸಲಾಗಿದ್ದು ಅವರಲ್ಲಿ ಮೂವರು ಜಾಮಿಯಾ ವಿದ್ಯಾರ್ಥಿಗಳು.

ದುಷ್ಕರ್ಮಿಗಳನ್ನು ವಿ.ವಿ.ಯ ಒಳಗಿನಿಂದ ಹೊರದಬ್ಬುವುದಕ್ಕಾಗಿ ‘ಕನಿಷ್ಠ ಬಲ’ವನ್ನಷ್ಟೇ ಪ್ರಯೋಗಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳು ಇದಕ್ಕೆ ವ್ಯತಿರಿಕ್ತವಾದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಪೊಲೀಸರು ವಿ.ವಿ.ಯೊಳಗೆ ದೌರ್ಜನ್ಯ ನಡೆಸಿದ್ದಾರೆ. ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಲ್ಲದೆ, ಹೆಣ್ಣು ಮಕ್ಕಳೂ ಸೇರಿ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿದ್ದಾರೆ. ಶೌಚಾಲಯಕ್ಕೂ ನುಗ್ಗಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಜಾಮಿಯಾ ವಿ.ವಿ.ಒಳಗೆ ಪೊಲೀಸರು ನಡೆಸಿದ ಕಾರ್ಯಾಚರಣೆಯ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿವೆ. ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತ
ವಾಗಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ರಾಷ್ಟ್ರಪತಿ ಅವರನ್ನು ಮಂಗಳವಾರ ಭೇಟಿಯಾದ ವಿರೋಧ ಪಕ್ಷಗಳ ನಿಯೋಗ ಕೂಡ ಈ ವಿಚಾರ ಪ್ರಸ್ತಾಪಿಸಿತ್ತು.

ಎಫ್‌ಐಆರ್‌ನಲ್ಲಿ ಏನಿದೆ?

*ಎಫ್‌ಐಆರ್‌ನಲ್ಲಿ ಮಾಜಿ ಶಾಸಕ ಆಸಿಫ್‌ ಖಾನ್‌ ಮತ್ತು ಜಾಮಿಯಾ ವಿದ್ಯಾರ್ಥಿ ಸಂಘದ ಮೂವರು ಮುಖಂಡರ ಹೆಸರು ಸೇರಿದೆ

*ಆಸಿಫ್‌ ಖಾನ್‌ ಮತ್ತು ಸ್ಥಳೀಯ ರಾಜಕಾರಣಿ ಆಶು ಖಾನ್‌ ಅವರು ವಿದ್ಯಾರ್ಥಿಗಳನ್ನು ಎತ್ತಿಕಟ್ಟಿದ್ದಾರೆ. ಪ್ರತಿಭಟನೆ ವೇಳೆ ಘೋಷಣೆ ಕೂಗಿದ್ದಾರೆ

*ವಿದ್ಯಾರ್ಥಿ ನಾಯಕ ಚಂದನ್‌ ಕುಮಾರ್‌ ಹೆಸರೂ ಉಲ್ಲೇಖ

*ವಿದ್ಯಾರ್ಥಿ ಮುಖಂಡರಾದ ಆಸಿಫ್‌ ತಂಕಾ ಮತ್ತು ಕಾಸಿಂ ಉಸ್ಮಾನಿ, ಸ್ಥಳೀಯ ರಾಜಕಾರಣಿಗಳಾದ ಮುಸ್ತಫಾ ಮತ್ತು ಹೈದರ್‌ ಎಫ್‌ಐಆರ್‌ನಲ್ಲಿರುವ ಸೇರಿರುವ ಇತರರು

*ಪ್ರತಿಭಟನಕಾರರನ್ನು ನಿಯಂತ್ರಿಸಲು ಕನಿಷ್ಠ 52 ಅಶ್ರುವಾಯು ಶೆಲ್‌ಗಳನ್ನು ಸಿಡಿಸಲಾಗಿದೆ

‘ಜಾಮಿಯಾದಿಂದಲೇ ಕಲ್ಲು ತೂರಾಟ’

ಎಫ್‌ಐಆರ್‌ನಲ್ಲಿ ಹೆಸರಿಸಿದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪ್ರತಿಭಟನೆ ಹಿಂಸೆಗೆ ತಿರುಗಿ, ಕಲ್ಲುತೂರಾಟ ನಡೆಸಲಾಗಿದೆ. ಬಸ್‌ ಮತ್ತು ಇತರ ವಾಹನಗಳಿಗೆ ಹಾನಿ ಮಾಡಲಾಗಿದೆ. ಜಾಮಿಯಾ ಆವರಣದ ಒಳಗಿನಿಂದಲೇ ಕಲ್ಲು ತೂರಾಟ ನಡೆದಿದೆ. ಶಾಂತಿ ಕಾಪಾಡುವಂತೆ ಪ್ರತಿಭಟನಕಾರರಿಗೆ ಪೊಲೀಸರು ಪದೇ ಪದೇ ಮನವಿ ಮಾಡಿದ್ದಾರೆ. ಆದರೆ, ಹಿಂಸೆ ಮುಂದುವರಿದಿದೆ. ಹಾಗಾಗಿ, ಹಿರಿಯ ಅಧಿಕಾರಿಗಳ ಆದೇಶದಂತೆ ಅಶ್ರುವಾಯು ಶೆಲ್‌ ಸಿಡಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ವಿ.ವಿ.ಯೊಳಗೆ ಅಶ್ರುವಾಯು ಶೆಲ್‌ ಸಿಡಿಸಲಾಗಿದೆಯೇ ಎಂಬ ಉಲ್ಲೇಖವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT