ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಭೆ: ಕಾಂಗ್ರೆಸ್‌ಗೆ ಸಿ.ಎಂ ಆಕಾಂಕ್ಷಿಗಳ ಚಿಂತೆ!

ವಿಧಾನಸಭೆ ಚುನಾವಣೆ
Last Updated 9 ಡಿಸೆಂಬರ್ 2018, 4:33 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸಗಡ ಚುನಾವಣೆ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಹೊಸ ಸಮಸ್ಯೆ ಎದುರಾಗಿದೆ.

ಒಂದು ವೇಳೆ ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ಹೊಸ ಸಮಸ್ಯೆ ಉದ್ಭವಿಸಲಿದೆ. ಪ್ರತಿ ರಾಜ್ಯದಲ್ಲೂ ಕನಿಷ್ಠ ಮೂವರು ನಾಯಕರು ಮುಖ್ಯಮಂತ್ರಿ ಹುದ್ದೆಯ ಪೈಪೋಟಿಯಲ್ಲಿದ್ದಾರೆ.

ಕೆಲವು ದಿನಗಳಲ್ಲಿ ಲೋಕಸಭೆ ಚುನಾವಣೆ ಎದುರಾಗುವ ಕಾರಣ ಎಚ್ಚರಿಕೆಯಿಂದ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್‌ಗೆ ಸವಾಲಾಗಿದೆ.

ಒಂದು ವೇಳೆ ಒಂಚೂರು ಎಡವಟ್ಟಾದರೂ ಬಂಡಾಯ ಭುಗಿಲೇಳುವ ಭೀತಿ ಪಕ್ಷವನ್ನು ಕಾಡುತ್ತಿದೆ. ಅಲ್ಲದೆ, ಲೋಕಸಭಾ ಚುನಾವಣೆ ಮೇಲೆ ದುಷ್ಪರಿಣಾಮ ಬೀರುವ ಆತಂಕ ಇದೆ.

ರಾಜಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ನಡುವೆ ತೀವ್ರ ಪೈಪೋಟಿ ಇದೆ. ಹಿರಿಯ ನಾಯಕ ಸಿ.ಪಿ. ಜೋಷಿ ಕೂಡ ಸ್ಪರ್ಧೆಯಲ್ಲಿದ್ದಾರೆ.

ಚುನಾವಣೆಗೂ ಮುನ್ನ ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ.ಮುಖ್ಯಮಂತ್ರಿ ಯಾರಾಗಬೇಕು ಎಂಬುವುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ಇಬ್ಬರೂ ಹೇಳಿದ್ದಾರೆ.

ಮಧ್ಯ ಪ್ರದೇಶ ಮುಖ್ಯಮಂತ್ರಿ ಹುದ್ದೆಯ ಮೇಲೆ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ ನಾಥ್‌, ಜೋತಿರಾಧಿತ್ಯ ಸಿಂಧಿಯಾ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌ ಕಣ್ಣಿಟ್ಟಿದ್ದಾರೆ.

ಛತ್ತೀಸಗಡದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಭೂಪೇಶ್‌ ಬಘೇಲಾ ಮತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಟಿ.ಎಸ್‌. ಸಿಂಗ್‌ ದೇವ್‌ ಮುಂಚೂಣಿಯಲ್ಲಿದ್ದಾರೆ. ಹಿಂದುಳಿದ ವರ್ಗಗಳ ನಾಯಕ ಮತ್ತು ಮೋದಿ ಅಲೆಯಲ್ಲಿಯೂ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಕಾಂಗ್ರೆಸ್‌ ಸಂಸದ ತಾಮ್ರಧ್ವಜ ಸಾಹು ಅವರನ್ನು ಕಡೆಗಣಿಸುವಂತಿಲ್ಲ.

ತೆಲಂಗಾಣ: ಕಾಂಗ್ರೆಸ್‌, ಟಿಆರ್‌ಎಸ್‌ಗೆ ಅಧಿಕಾರದ ವಿಶ್ವಾಸ ಹೈದರಾಬಾದ್‌ ವರದಿ: ತೆಲಂಗಾಣದಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಹಾಗೂ ಕಾಂಗ್ರೆಸ್‌ ಮೈತ್ರಿಕೂಟ ನಾಯಕರು ತಾವೇ ಅಧಿಕಾರ ಹಿಡಿಯುವುದಾಗಿ ಹೇಳುತ್ತಿದ್ದಾರೆ.

‘ರಾಜ್ಯದಲ್ಲಿ ಮತ್ತೆ ಟಿಆರ್‌ಎಸ್‌ ಅಧಿಕಾರಕ್ಕೆ ಬರಲಿದೆ. ಮೂರನೇ ಎರಡರಷ್ಟು ಬಹುಮತ ಪಡೆಯಲಿದೆ. ಅನೇಕ ಸಮೀಕ್ಷೆಗಳು ಸಹ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿವೆ. 100 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ’ ಎಂದು ಟಿಆರ್‌ಎಸ್‌ ನಾಯಕ ಹಾಗೂ ಉಸ್ತುವಾರಿ ಸರ್ಕಾರದ ಸಚಿವ ಕೆ.ಟಿ.ರಾಮಾ ರಾವ್‌ ಶನಿವಾರ ವಿಶ್ವಾಸ ವ್ಯಕ್ತಪಡಿಸಿದರು.

ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎನ್‌.ಉತ್ತಮಕುಮಾರ್‌ ರೆಡ್ಡಿ, ತೆಲುಗು ದೇಶಂ ಪಾರ್ಟಿ ಅಧ್ಯಕ್ಷ ಎಲ್‌.ರಮಣ, ಸಿಪಿಐ ನಾಯಕ ಸಿ.ವೆಂಕಟ ರೆಡ್ಡಿ ಅವರು ತಮ್ಮ ಮೈತ್ರಿಕೂಟಕ್ಕೆ ಬಹುಮತ ಸಿಗಲಿದ್ದು, ಅಧಿಕಾರದ ಗದ್ದುಗೆ ಏರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಸಮೀಕ್ಷೆಗಳು ಏನು ಹೇಳಿವೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಮೈತ್ರಿಕೂಟವು 75 ರಿಂದ 80 ಸ್ಥಾನಗಳನ್ನು ಪಡೆಯಲಿದೆ. ನಾವು ಸರ್ಕಾರ ರಚಿಸಲಿದ್ದೇವೆ’ ಎಂದು ಉತ್ತಮಕುಮಾರ್‌ ರೆಡ್ಡಿ
ಹೇಳಿದರು.

‘ವಿದ್ಯುನ್ಮಾನ ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಅವುಗಳನ್ನಿಟ್ಟಿರುವ ಭದ್ರತಾ ಕೊಠಡಿಗಳ ಆವರಣಕ್ಕೆ ಹೋಗಲು ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅವಕಾಶ ನೀಡಬೇಕು. ಕೊಠಡಿಯೊಳಗೆ ಹೋಗಲು ಅಧಿಕಾರಿಗಳಿಗೂ ಅನುಮತಿ ನೀಡಬಾರದು’ ಎಂದು ರೆಡ್ಡಿ ಒತ್ತಾಯಿಸಿದರು.

ಒಡಿಶಾದಲ್ಲಿ ಟಿಡಿಪಿ ಸ್ಪರ್ಧೆ

ಒಡಿಶಾ ರಾಜ್ಯದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ತೆಲುಗು ದೇಶಂ ಪಾರ್ಟಿ (ಟಿಡಿಪಿ) ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

‘ತೆಲುಗು ಭಾಷಿಕರು ಹೆಚ್ಚಿರುವ ರಾಜ್ಯದ ದಕ್ಷಿಣ ಭಾಗದಲ್ಲಿ ಸರ್ಧಿಸುತ್ತೇವೆ. ವಿಧಾನಸಭೆಯ 52 ಹಾಗೂ ಲೋಕಸಭೆಯ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು’ ಎಂದು ಟಿಡಿಪಿಯ ಒಡಿಶಾ ಉಸ್ತುವಾರಿ ರಾಜೇಶ್‌ ಪುತ್ರ ಕೊರಾಪುಟ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕೊರಾಪುಟ್‌, ರಾಯಗಡ, ಮಲಕನ್‌ಗಿರಿ, ಗಜಪತಿ, ಗಂಜಾಂ ಹಾಗೂ ನವರಂಗಪುರ ಜಿಲ್ಲೆಯಲ್ಲಿ ತೆಲುಗು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಟಿಡಿಪಿ ಅಧ್ಯಕ್ಷ ಎನ್‌.ಚಂದ್ರಬಾಬು ನಾಯ್ಡು ಶೀಘ್ರ ಅಭ್ಯರ್ಥಿಗಳ ಹೆಸರು ಪ್ರಕಟಿಸಲಿದ್ದಾರೆ. 52 ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಾಥಮಿಕ ಹಂತದ ಸಮೀಕ್ಷೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಬಿಜು ಜನತಾ ದಳ (ಬಿಜೆಡಿ) ನಾಯಕ ಹಾಗೂ ಸಚಿವ ಎಸ್‌.ಎನ್‌.ಪಾತ್ರೊ ಅವರು, ಟಿಡಿಪಿ ಸ್ಪರ್ಧೆಯಿಂದ ಪರಿಣಾಮ ಆಗುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕ ತಾರಾಪ್ರಸಾದ್ ಬಾಹಿಣಿಪತಿ, ಟಿಡಿಪಿ ಅಭ್ಯರ್ಥಿಗಳು ಬಿಜೆಡಿ ಮತಗಳನ್ನು ಪಡೆಯಲಿದ್ದು, ತಮ್ಮ ಪಕ್ಷಕ್ಕೆ ಲಾಭವಾಗಲಿದೆ ಎಂದರು. ‘ಒಡಿಶಾ ರಾಜಕೀಯದ ಮೇಲೆ ಟಿಡಿಪಿ ಸ್ಪರ್ಧೆಯು ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಬಿಜೆಪಿ ನಾಯಕ ಭೃಗು ಬಕ್ಸಿಪಾತ್ರ ತಿಳಿಸಿದ್ದಾರೆ.

ರಸ್ತೆಯಲ್ಲಿ ಬಿದ್ದ ಮತಯಂತ್ರ!

ಕಿಶನ್‌ಗಂಜ್‌(ರಾಜಸ್ಥಾನ): ರಾಜಸ್ಥಾನದ ಬರಾನ್‌ ಜಿಲ್ಲೆಯ ಕಿಶನ್‌ಗಂಜ್‌ ವಿಧಾನಸಭಾ ಕ್ಷೇತ್ರದಲ್ಲಿ ಮೊಹರು ಮಾಡಿರುವ ಎಲೆಕ್ಟ್ರಾನಿಕ್‌ ಮತಯಂತ್ರಗಳು (ಇವಿಎಂ) ರಸ್ತೆಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

ಈ ಸಂಬಂಧ ಚುನಾವಣಾ ಆಯೋಗ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಇಬ್ಬರು ಮತಗಟ್ಟೆ ಅಧಿಕಾರಿಗಳನ್ನು ಅಮಾನತು ಮಾಡಿದೆ.

ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಸುರಕ್ಷಿತವಾಗಿ ಭದ್ರತಾ ಕೊಠಡಿ ತಲುಪಿಸಲಾಗಿದೆ. ಮತಯಂತ್ರ ಟ್ರಕ್‌ನಿಂದ ಜಾರಿಬಿದ್ದಿರಬಹುದು ಎಂದು ಜಿಲ್ಲಾಧಿಕಾರಿ ಹೇಳಿರುವುದಾಗಿ ವಿವಿಧ ಪತ್ರಿಕೆಗಳು ವರದಿ ಮಾಡಿವೆ.

ಕಾಸಿಗಾಗಿ ಸುದ್ದಿ: ಬಿಜೆಪಿ ದೂರು

ಹೈದರಾಬಾದ್‌ ಮೂಲದ ಇಂಗ್ಲಿಷ್‌ ದೈನಿಕವೊಂದರಲ್ಲಿ ಗುರುವಾರ ಪ್ರಕಟವಾದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಂದರ್ಶನ ‘ಕಾಸಿಗಾಗಿ ಸುದ್ದಿ’ ಎಂದು ಬಿಜೆಪಿ ಆರೋಪಿಸಿದೆ.

ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಮುಖ್ತಾರ್ ಅಬ್ಬಾಸ್‌ ನಕ್ವಿ ನೇತೃತ್ವದ ಬಿಜೆಪಿ ನಿಯೋಗ ಕೇಂದ್ರ ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರು ಸಲ್ಲಿಸಿದೆ.

ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ವಿಧಾನಸಭೆಯ ಚುನಾವಣೆ ಮತದಾನಕ್ಕೂ ಒಂದು ದಿನ ಮೊದಲು ಪತ್ರಿಕೆಯಲ್ಲಿ ಪ್ರಕಟವಾದ ಕಾಸಿಗಾಗಿ ಸುದ್ದಿ ಮೂಲಕ ಮತದಾರರ ಮೇಲೆ ರಾಹುಲ್‌ ಗಾಂಧಿ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ನಕ್ವಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT