ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನರೇಗಾ ಯೋಜನೆ ವ್ಯಾಪ್ತಿ ವಿಸ್ತರಿಸಿ: ಸರ್ಕಾರಕ್ಕೆ ಕಾಂಗ್ರೆಸ್ ಸಲಹೆ

ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡಿ, ಯೋಜನೆ ಲಾಭ ಒದಗಿಸಲು ಒತ್ತಾಯ
Last Updated 9 ಜೂನ್ 2020, 7:31 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಕಾರಣದಿಂದ ತಮ್ಮ ಊರುಗಳಿಗೆ ಮರಳಿ, ಉದ್ಯೋಗದ ಹುಡುಕಾಟದಲ್ಲಿರುವ ಸುಮಾರು 8 ಕೋಟಿ ಕಾರ್ಮಿಕರ ಕೆಲಸದ ಬೇಡಿಕೆಯನ್ನು ಈಡೇರಿಸಲು ‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ’ಯ (ಮನರೇಗಾ) ವ್ಯಾಪ್ತಿ ವಿಸ್ತರಿಸುವಂತೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಆಗ್ರಹಿಸಿದೆ.

ಮನರೇಗಾ ಯೋಜನೆಯನ್ನು ನಂಬಿಕೊಂಡು ಕುಳಿತಿರುವವರು ಬಿಜೆಪಿ ವಿರೋಧಿಗಳಲ್ಲ ಎಂಬ ದೃಷ್ಟಿಕೋನದಲ್ಲಿ ಕೇಂದ್ರ ಸರ್ಕಾರ ನೋಡಬೇಕು ಎಂದಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಯೋಜನೆಯ ಪ್ರಯೋಜನವನ್ನು ವಲಸೆ ಕಾರ್ಮಿಕರಿಗೂ ಮುಟ್ಟಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಕೋವಿಡ್ ಬಂದೆರಗಿರುವ ಈ ಸಂಕಷ್ಟದ ಸಮಯದಲ್ಲಿ ನರೇಗಾದಂತಹ ಜನಕೇಂದ್ರಿತ ಯೋಜನೆಗಳು ಎಷ್ಟು ಮುಖ್ಯ ಎಂದು ತೋರಿಸಿಕೊಟ್ಟಿವೆ. ಮೋದಿ ನೇತೃತ್ವದ ಸರ್ಕಾರವು ಈ ಯೋಜನೆಗೆ ಹೆಚ್ಚುವರಿಯಾಗಿ ₹40 ಸಾವಿರ ಕೋಟಿ ವಿನಿಯೋಗಿಸಬೇಕು’ ಎಂದು ಸಿಂಗ್ವಿ ಮನವಿ ಮಾಡಿದ್ದಾರೆ.

‘ಮನರೇಗಾ ಕಾಂಗ್ರೆಸ್‌ನ ಮಹತ್ವದ ಯೋಜನೆ. ಇದು ವಿಶ್ವದ ಅತಿದೊಡ್ಡ ಸಮಾಜ ಕಲ್ಯಾಣ ಯೋಜನೆ ಮತ್ತು ಅತ್ಯಂತ ಪರಿಣಾಮಕಾರಿ ಸರ್ಕಾರಿ ಯೋಜನೆ ಎಂದು ಸಾಬೀತಾಗಿದೆ. ಈ ಯೋಜನೆ ಮೂಲಕ ನೀವು ದೇಶಕ್ಕೆ ಎಷ್ಟು ಒಳ್ಳೆಯದನ್ನು ಮಾಡಬಹುದು ಎಂಬುದನ್ನು ಯೋಚಿಸಿ. ನಮ್ಮ ಸಲಹೆಗಳನ್ನು ವಿರೋಧಾತ್ಮಕವಾಗಿ ಪರಿಗಣಿಸಬೇಡಿ’ ಎಂದು ಮೋದಿ ಅವರಿಗೆ ಸಿಂಗ್ವಿ ಸಲಹೆ ನೀಡಿದ್ದಾರೆ.

ಕಳೆದ ಮೇ ತಿಂಗಳಲ್ಲಿ 2.19 ಕೋಟಿ ಕುಟುಂಬಗಳು ಯೋಜನೆಯ ಲಾಭ ಪಡೆದುಕೊಂಡಿವೆ. ಕಳೆದ ಎಂಟು ವರ್ಷಗಳಲ್ಲೇ ಇದು ಅಧಿಕ. ಯೋಜನೆ ಪ್ರಾರಂಭಗೊಂಡ ದಿನದಿಂದ ಈವರೆಗೆ ಸುಮಾರು 12 ಕೋಟಿ ಜನರಿಗೆ ಯೋಜನೆ ಅನುಕೂಲ ಕಲ್ಪಿಸಿದೆ ಎಂದು ಅವರು ಹೇಳಿದ್ದಾರೆ.

ಕೆಲಸದ ಸ್ವರೂಪ ನಿರ್ಧರಿಸುವ ಅಧಿಕಾರವನ್ನು ಗ್ರಾಮಸಭೆಗಳಿಗೆ ನೀಡಬೇಕು. ಸ್ಥಳೀಯ ಚುನಾಯಿತ ಸಂಸ್ಥೆಗಳಿಗೆ ಸ್ಥಳೀಯ ಬೇಡಿಕೆ, ಕಾರ್ಮಿಕರ ಸ್ಥಿತಿ ಮತ್ತು ಅವರ ಅಗತ್ಯಗಳ ಅರಿವು ಇರುತ್ತದೆ ಎಂದಿದ್ದಾರೆ.

ಪತ್ರಿಕೆಯೊಂದಕ್ಕೆ ಲೇಖನ ಬರೆದಿರುವಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು,‘ಇದು ಬಿಜೆಪಿ ವರ್ಸಸ್ ಕಾಂಗ್ರೆಸ್ ಅಲ್ಲ. ಮನರೇಗಾ ಯೋಜನೆಯು ದೇಶದ ಜನರಿಗೆ ಉಪಯುಕ್ತ ಆಗಬೇಕು’ ಎಂದುಉಲ್ಲೇಖಿಸಿದ್ದರು.

‘ಮೋದಿ ಸರ್ಕಾರಕ್ಕೆ ಯೋಜನೆ ಮಹತ್ವವು ನಿಧಾನವಾಗಿ ಅರಿವಾಗುತ್ತಿದೆ. ಇದು ರಾಜಕೀಯ ಮಾಡುವ ಹೊತ್ತಲ್ಲ. ನಿಮ್ಮ ಕೈಯಲ್ಲಿ ದೊಡ್ಡ ಅಸ್ತ್ರವೊಂದಿದೆ. ಅಗತ್ಯದ ಸಮಯದಲ್ಲಿ ಅದನ್ನು ಜನರಿಗೆ ಉಪಯೋಗಕ್ಕಾಗಿ ಬಳಸಿ’ ಎಂದು ಸೋನಿಯಾ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT