‘ಹಿಂದೂ ಉಗ್ರ’ ಪದ ಸೃಷ್ಟಿಸಿದ್ದು ಕಾಂಗ್ರೆಸ್ ಎಂಬ ಪ್ರಧಾನಿ ಮೋದಿ ಆರೋಪ ನಿಜವೇ?

ಶನಿವಾರ, ಏಪ್ರಿಲ್ 20, 2019
29 °C
ನ್ಯಾಯಾಲಯದ ದಾಖಲೆಗಳು ಹೇಳುವುದೇನು?

‘ಹಿಂದೂ ಉಗ್ರ’ ಪದ ಸೃಷ್ಟಿಸಿದ್ದು ಕಾಂಗ್ರೆಸ್ ಎಂಬ ಪ್ರಧಾನಿ ಮೋದಿ ಆರೋಪ ನಿಜವೇ?

Published:
Updated:

ಬೆಂಗಳೂರು: ಮಹಾರಾಷ್ಟ್ರದ ವಾರ್ಧಾದಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ‘ಹಿಂದೂ ಭಯೋತ್ಪಾದನೆ’ ಎಂಬುದೇ ಇಲ್ಲ ಎಂದು ಪ್ರತಿಪಾದಿಸಿದ್ದರು. ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ಸೇರಿದಂತೆ ಮೂವರನ್ನು ಈಚೆಗೆ ಹರಿಯಾಣದ ಪಂಚಕುಲಾದ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದ್ದನ್ನು ಉಲ್ಲೇಖಿಸಿ ಅವರು ಮಾತನಾಡಿದ್ದರು. ಜತೆಗೆ, ‘ಹಿಂದೂ ಭಯೋತ್ಪಾದನೆ’ ಪದವನ್ನು ಮೊದಲು ಬಳಸಿದ್ದೇ ಕಾಂಗ್ರೆಸ್ ಎಂದು ದೂರಿದ್ದರು.

ಆದರೆ, ‘ಹಿಂದೂ ಭಯೋತ್ಪಾದನೆ’ಗೆ ಸಂಬಂಧಿಸಿ ನ್ಯಾಯಾಲಯದ ದಾಖಲೆಗಳು ಬೇರೆಯದೇ ವಿಷಯಗಳ ಬಗ್ಗೆ ಬೆಳಕುಚೆಲ್ಲಿವೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಹಿಂದೂಗಳಿಗೆ ಕಾಂಗ್ರೆಸ್‌ನಿಂದ ಅವಮಾನ: ಮೋದಿ ಆರೋಪ

ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಸಮರ್ಪಕ ಸಾಕ್ಷ್ಯ ಒದಗಿಸದಿರುವುದು ತೀವ್ರ ನೋವು ಮತ್ತು ದುಃಖ ಉಂಟುಮಾಡಿದೆ ಎಂದು ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸ್ಫೋಟ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆ ಮಾಡುವ ವೇಳೆ ನ್ಯಾಯಾಲಯ ಹೇಳಿತ್ತು ಎಂದು ವರದಿ ಉಲ್ಲೇಖಿಸಿದೆ.

2007ರ ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 2017ರ ಮಾರ್ಚ್ 8ರಂದು ಜೈಪುರದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯ ಆರ್‌ಎಸ್‌ಎಸ್‌ನ ಮೂವರು ಮಾಜಿ ಪ್ರಚಾರಕರಾದ ಸುನಿಲ್ ಜೋಶಿ, ದೇವೇಂದ್ರ ಗುಪ್ತಾ ಮತ್ತು ಭವೇಶ್ ಪಟೇಲ್‌ ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು. ಈ ಪೈಕಿ ಗುಪ್ತಾ ಹಾಗೂ ಪಟೇಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಸುನಿಲ್ ಜೋಶಿ ಅದಾಗಲೇ ಮೃತಪಟ್ಟಿದ್ದರು.

ಸ್ಫೋಟಕ್ಕೆ ಸಂಚು ಹೂಡಲು ಬಳಸಲಾದ ಸಿಮ್‌ ಕಾರ್ಡ್‌ಗಳನ್ನು ದೇವೇಂದ್ರ ಗುಪ್ತಾ ತಂದಿದ್ದಾಗಿ ಎನ್ಐಎ ನ್ಯಾಯಾಲಯದಲ್ಲಿ ತಿಳಿಸಿತ್ತು. ಜೋಶಿ ಮತ್ತು ಗುಪ್ತಾ ಸಂಚು ಹೂಡಿದ್ದ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದರೆ ಪಟೇಲ್ ಬಾಂಬ್ ಇಟ್ಟ ಪ್ರಕ‌ರಣದಲ್ಲಿ ತಪ್ಪಿತಸ್ಥರಾಗಿದ್ದರು.

2007ರ ಅಕ್ಟೋಬರ್ 11ರಂದು ಅಜ್ಮೇರ್ ದರ್ಗಾದಲ್ಲಿ ಸ್ಫೋಟ ಸಂಭವಿಸಿತ್ತು.

ಪ್ರಕರಣದಲ್ಲಿ ಅಸೀಮಾನಂದ ಮತ್ತು ಇತರ ಆರು ಮಂದಿಯನ್ನು ಸಂಶಯದ ಲಾಭದ ಆಧಾರದಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿತ್ತು. 

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅನ್ವಯ ಕೆಲವು ಹಿಂದೂ ಸಂಘಟನೆಗಳ ವಿರುದ್ಧ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಚಾರ್ಜ್‌ಶೀಟ್ ಸಲ್ಲಿಸಿತ್ತು. ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಸಾಗಣೆ ಆರೋಪಿಗಳನ್ನು ಬಂಧಿಸಿತ್ತು.

ಆರೋಪಿಗಳನ್ನು ‘ಭಯೋತ್ಪಾದಕರ ಗ್ಯಾಂಗ್‌’ ಎಂದು ಬಣ್ಣಿಸಿದ್ದಲ್ಲದೆ; ‘ಆರೋಪಿಗಳು ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಮತ್ತು ಇವುಗಳನ್ನೇ ಹೋಲುವ ಇತರ ಸಂಘಟನೆಗಳ ಸದಸ್ಯರು. ಸನಾತನ ಸಂಸ್ಥೆ ಪ್ರಕಟಿಸುತ್ತಿರುವ ಮರಾಠಿ ಪುಸ್ತಕ ‘ಕ್ಷಾತ್ರ ಧರ್ಮ ಸಾಧನ’ದಲ್ಲಿ ಉಲ್ಲೇಖಿಸಿರುವಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡುವುದನ್ನು ನಿರೂಪಿಸಿದ್ದಾರೆ’ ಎಂದು ಎಟಿಎಸ್ ಉಲ್ಲೇಖಿಸಿತ್ತು.

ಇದನ್ನೂ ಓದಿ: ಸನಾತನ ಸಂಸ್ಥೆ ನಿಷೇಧ ಪ್ರಸ್ತಾವ​

ಆರೋಪಿಗಳು ದೇಶದ ಏಕತೆ, ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಕೃತ್ಯಗಳನ್ನೆಸಗಲು ಸಮಾನ ಮನಸ್ಕ ಯುವಕರನ್ನು ಪ್ರಚೋದಿಸಿದ್ದರು ಎಂದೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಈ ‘ಭಯೋತ್ಪಾದಕರ ಗ್ಯಾಂಗ್‌’ 2017ರ ಡಿಸೆಂಬರ್‌ನಲ್ಲಿ ಪುಣೆಯಲ್ಲಿ ಆಯೋಜಿಸಲಾಗಿದ್ದ ಪಾಶ್ಚಾತ್ಯ ಸಂಗೀತ ಕಾರ್ಯಕ್ರಮದ ಮೇಲೂ ದಾಳಿ ನಡೆಸಲು ಸಂಚು ಹೂಡಿತ್ತು. ದಾಳಿಗೆ ಕಚ್ಚಾ ಬಾಂಬ್, ಪೆಟ್ರೋಲ್ ಬಾಂಬ್‌ಗಳನ್ನು ಬಳಸಲು ಸಂಚು ಹೂಡಲಾಗಿತ್ತು. ದಾಳಿ ನಡೆಸುವ ಮೂಲಕ ಪಾಶ್ಚಾತ್ಯ ಸಂಸ್ಕೃತಿಯ ಅನುಯಾಯಿಗಳಲ್ಲಿ ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ಭೀತಿ ಹುಟ್ಟಿಸುವುದು ಇವರ ಉದ್ದೇಶವಾಗಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ: ‘ಸನಾತನ’ ಸಂಪಾದಕನಿಂದ ಹಂತಕರಿಗೆ ಹಣ!

ತನಿಖೆಯ ಆಧಾರದಲ್ಲಿ ಸನಾತನ ಸಂಸ್ಥೆಯನ್ನು ನಿಷೇಧಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಎಟಿಎಸ್ ಶಿಫಾರಸು ಮಾಡಿತ್ತು. ಇಂತಹದ್ದೇ ಶಿಫಾರಸನ್ನು 2011ರಲ್ಲಿಯೂ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ, ಅಂದಿನ ಯುಪಿಎ ಸರ್ಕಾರ ಸನಾತನ ಸಂಸ್ಥೆ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸಿದೆ.

ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸ್ಫೋಟ ಪ್ರಕರಣದ ತನಿಖೆಯನ್ನು ಸರಿಯಾಗಿ ನಿರ್ವಹಿಸದಿರುವುದಕ್ಕೆ ಹರಿಯಾಣದ ಪಂಚಕುಲಾದ ವಿಶೇಷ ನ್ಯಾಯಾಲಯ ಎನ್‌ಐಎಯನ್ನು ತರಾಟೆಗೆ ತೆಗೆದುಕೊಂಡಿತ್ತು. ರೈಲು ನಿಲ್ದಾಣದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಹಾಜರುಪಡಿಸದಿರುವುದು, ಬಾಂಬ್ ಇಟ್ಟಿದ್ದ ಸ್ಯೂಟ್‌ಕೇಸ್‌ ಸಿದ್ಧಪಡಿಸಿದ್ದ ದರ್ಜಿ ಆರೋಪ ಮಾಡಿದ್ದ ವ್ಯಕ್ತಿಗಳ ಗುರುತುಪತ್ತೆ ಪರೇಡ್ ನಡೆಸಿದಿರುವುದು ಸೇರಿ ತನಿಖೆಯ ಹಲವು ಆಯಾಮಗಳ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಸಂಜೋತಾ ರೈಲು ಸ್ಫೋಟ ಪ್ರಕರಣ: ಸ್ವಾಮಿ ಅಸೀಮಾನಂದ ಖುಲಾಸೆ​

ಟ್ವಿಟರ್‌ನಲ್ಲಿ ಟ್ರೋಲ್ ಆದ ಮೋದಿ

‘ಹಿಂದೂ ಭಯೋತ್ಪಾದನೆ’ಗೆ ಸಂಬಂಧಿಸಿದ ಹೇಳಿಕೆಯಿಂದಾಗಿ ಮೋದಿ ಅವರು ಟ್ವಿಟರ್‌ನಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ‘ಹಿಂದೂಗಳು ಭಯೋತ್ಪಾದನೆಯಲ್ಲಿ ತೊಡಗಿದ ಒಂದು ಘಟನೆ ಇತಿಹಾಸದಲ್ಲಿದೆಯೇ’ ಎಂದು ಮೋದಿ ಪ್ರಶ್ನಿಸಿದ್ದರು. ಇದಕ್ಕೆ ಟೆಲಿಗ್ರಾಫ್ ಪತ್ರಿಕೆ ಮಹಾತ್ಮ ಗಾಂಧಿಯವರನ್ನು ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ್ದು ಸೇರಿದಂತೆ ಹಲವು ಘಟನೆಗಳನ್ನು ನಿರೂಪಿಸಿತ್ತು.

ಟೆಲಿಗ್ರಾಫ್ ವರದಿಯ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅನೇಕರು ಮೋದಿಯವರನ್ನು ಲೇವಡಿ ಮಾಡಿದ್ದಾರೆ.

‘ಭಯೋತ್ಪಾದನೆಗೆ ಧರ್ಮವಿಲ್ಲ. ಆದರೆ ಸ್ವತಂತ್ರ ಭಾರತದ ಭೀಕರ ಭಯೋತ್ಪಾದಕ ಘಟನೆಗಳನ್ನು ಮರೆಯಬೇಡಿ ಪ್ರಧಾನಿಯವರೇ. ಹಿಂದೂಗಳು ಭಯೋತ್ಪಾದನೆಯಲ್ಲಿ ತೊಡಗಿದ ಒಂದು ಘಟನೆ ಇತಿಹಾಸದಲ್ಲಿದೆಯೇ ಎಂಬ ಪ್ರಧಾನಿಯವರ ಪ್ರಶ್ನೆಗೆ ಟೆಲಿಗ್ರಾಫ್ ಪತ್ರಿಕೆ ನಾಥೂರಾಮ್ ಗೋಡ್ಸೆಯನ್ನು ನೆನಪಿಸಿದೆ’ ಎಂದು ಚುರುಮುರಿ ಎಂಬ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಇದೇ ರೀತಿ ಇನ್ನೂ ಅನೇಕರು ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 24

  Happy
 • 1

  Amused
 • 1

  Sad
 • 0

  Frustrated
 • 13

  Angry

Comments:

0 comments

Write the first review for this !