ಸೋಮವಾರ, ಜೂನ್ 1, 2020
27 °C

ಕೋವಿಡ್‌-19: ದತ್ತಾಂಶ ನಿರ್ವಹಣೆಯಲ್ಲೇ ಗೊಂದಲ

ಮೃದುಲಾ ಚಾರಿ/ನಿತಿನ್ ಸೇಥಿ Updated:

ಅಕ್ಷರ ಗಾತ್ರ : | |

ಮುಂಬೈ: ಲಾಕ್‌ಡೌನ್ ಸಡಿಲಿಸಲು ಮತ್ತು ಕೋವಿಡ್‌ನ ಪ್ರಮಾಣವನ್ನು ನಿರ್ಧರಿಸಲು ಸರ್ಕಾರವು ಮೊರೆ ಹೋಗಿರುವ ಎರಡು ಮಾನದಂಡಗಳು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್ನ) ದತ್ತಾಂಶವನ್ನು ಆಧರಿಸಿವೆ. ಆದರೆ, ಈ ದತ್ತಾಂಶವು ನಿಖರವಾಗಿಲ್ಲ ಎಂಬುದು ಸರ್ಕಾರದ ದಾಖಲೆ ಪತ್ರಗಳ ಪರಿಶೀಲನೆಯಿಂದ ತಿಳಿದು ಬಂದಿದೆ.

ಭಾರತದಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿ 107 ದಿನಗಳ ನಂತರ, ಅಂದರೆ ಮೇ 14ರಂದು 70,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರವು ಘೋಷಿಸಿದೆ. ಐಸಿಎಂಆರ್‌ನ ಏಕೈಕ ದತ್ತಾಂಶವನ್ನು ಆಧರಿಸಿ, ಸರ್ಕಾರ ಈ ಮಾಹಿತಿ ನೀಡಿದೆ. ಆದರೆ, ದತ್ತಾಂಶವು ಪರಿಶೀಲನೆಗೆ ಒಳಪಟ್ಟಿಲ್ಲ, ಒಂದೇ ದತ್ತಾಂಶದಲ್ಲಿ ಒಂದೇ ಹೆಸರು ಹಲವು ಬಾರಿ ನಕಲು ಆಗಿದೆ, ತಪ್ಪು ಹೆಸರುಗಳನ್ನು ಹೊಂದಿದೆ. ‘ಆರ್ಟಿಕಲ್ 14’ ನ್ಯೂಸ್ ಪೋರ್ಟಲ್‌ ನಡೆಸಿದ ಸರ್ಕಾರದ ದಾಖಲೆ ಪತ್ರಗಳ ಪರಿಶೀಲನೆಯಿಂದ ಈ ಅಂಶ ಪತ್ತೆಯಾಗಿದೆ.

ಇದನ್ನೂ ಓದಿ: ಕೋವಿಡ್‌–19 | ಲಾಕ್‌ಡೌನ್ ಸಡಿಲಿಕೆ: ವಿಜ್ಞಾನಿಗಳ ಎಚ್ಚರಿಕೆ ಕಡೆಗಣಿಸಿದ ಸರ್ಕಾರ

ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ) ಸಹ ಕೋವಿಡ್ ಪ್ರಕರಣಗಳ ದತ್ತಾಂಶವನ್ನು ನಿರ್ವಹಣೆ ಮಾಡುತ್ತಿದೆ. ಆದರೆ ಏಪ್ರಿಲ್ 29ರ ದತ್ತಾಂಶವನ್ನು ಪರಿಶೀಲಿಸಿದರೆ, ಐಸಿಎಂಆರ್‌ನ ದತ್ತಾಂಶ ಮತ್ತು ಎನ್‌ಸಿಡಿಸಿಯ ದತ್ತಾಂಶದ ಮಧ್ಯೆ 5,024 ಪ್ರಕರಣಗಳಷ್ಟು ವ್ಯತ್ಯಾಸವಿದೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇವಲ ಐದು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ದತ್ತಾಂಶಗಳು ಮಾತ್ರ ಹೊಂದಾಣಿಕೆ ಆಗುತ್ತಿವೆ. ಉಳಿದ ಕೆಲವು ರಾಜ್ಯಗಳಲ್ಲಿ ಕಡಿಮೆ ಪ್ರಕರಣಗಳು ದಾಖಲಾಗಿದ್ದರೆ, ಬೇರೆ ರಾಜ್ಯಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರಾಜ್ಯ ಸರ್ಕಾರಗಳು ಎನ್‌ಸಿಡಿಸಿಯ ದತ್ತಾಂಶವನ್ನೇ ಬಳಸುತ್ತಿವೆ.

ಈ ಬಗ್ಗೆ ರಾಜ್ಯ ಸರ್ಕಾರಗಳು ಐಸಿಎಂಆರ್‌ಗೆ ಹಲವು ಬಾರಿ ದೂರು ನೀಡಿವೆ. ಹೀಗಾಗಿ ದತ್ತಾಂಶ ಕಲೆಹಾಕುವ ಮತ್ತು ಪರಿಷ್ಕರಿಸುವ ವಿಧಾನವನ್ನು ಐಸಿಎಂಆರ್ ಪದೇ ಪದೇ ಬದಲಿಸಿತು. 60 ದಿನಗಳಲ್ಲಿ 10 ಬಾರಿ ದತ್ತಾಂಶ ಸಂಗ್ರಹ ವಿಧಾನವನ್ನು ಬದಲಿಸಲಾಗಿದೆ. ಆದರೆ, ಈ ದತ್ತಾಂಶವನ್ನು ಮಾತ್ರ ಬಳಸುತ್ತೇವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ದತ್ತಾಂಶವನ್ನು ಆಧರಿಸಿಯೇ ಕೋವಿಡ್‌ಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಏಪ್ರಿಲ್ 29ರಂದು ರಾಜ್ಯ ಸರ್ಕಾರಗಳಿಗೆ ಐಸಿಎಂಆರ್ ಒಂದು ಪವರ್ ಪಾಯಿಂಟ್‌‌ ಪ್ರಸೆಂಟೇಷನ್ ಅನ್ನು ಕಳುಹಿಸಿತ್ತು. 33,014 ಪ್ರಕರಣಗಳ ದಾಖಲೆಗಳನ್ನು ಮೂರು ದಿನಗಳ ಒಳಗೆ ಪರಿಶೀಲಿಸಿ. ಅದರಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ ಎಂದು ತುರ್ತು ಸೂಚನೆ ನೀಡಿತ್ತು.

‘ಕೋವಿಡ್–19 ಇಂಡಿಯಾ ಪೋರ್ಟಲ್‌ನಲ್ಲಿ ದಾಖಲಾಗಿರುವ ರೋಗಿಗಳ ವಿವರ, ಮೊಬೈಲ್ ಸಂಖ್ಯೆ, ವಿಳಾಸ, ಪೋಸ್ಟಲ್ ಇಂಡೆಕ್ಸ್ ಸಂಖ್ಯೆಯನ್ನು ಪರಿಶೀಲಿಸಿ, ಆ ದತ್ತಾಂಶ ಸರಿಯಿದೆಯೇ ಎಂಬುದನ್ನು ನೋಡಿ, ಇಲ್ಲವೇ ಪರಿಷ್ಕರಿಸಿ. ದಾಖಲಾಗದೇ ಇರುವ ಮತ್ತು ಹಲವು ಬಾರಿ ನಮೂದಾಗಿರುವ ಪ್ರಕರಣಗಳ ವಿವರವನ್ನು ಇ–ಮೇಲ್ ಮೂಲಕ ತಿಳಿಸಿ. ಮೇ 2ರ ಸಂಜೆ 6ರ ಒಳಗೆ ಈ ಕೆಲಸ ಆಗಬೇಕು’. ಇದು ಐಸಿಎಂಆರ್, ರಾಜ್ಯ ಸರ್ಕಾರಗಳಿಗೆ ನೀಡಿದ ತುರ್ತು ಸೂಚನೆ.


ದತ್ತಾಂಶ ಮರುಪರಿಶೀಲನೆ ‍ಪತ್ರ

ಕೋವಿಡ್‌ಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ಸಲುವಾಗಿ ಐಸಿಎಂಆರ್ ಫೆಬ್ರುವರಿಯಲ್ಲಿ ಈ ದತ್ತಾಂಶವನ್ನು ಸಿದ್ಧಪಡಿಸಿತ್ತು. ಆದರೆ, ಮೇ 1 ಆದರೂ ಈ ದತ್ತಾಂಶ ವಿಶ್ವಾಸಾರ್ಹವಾಗಿಲ್ಲ. ಆದರೆ, ಇದೇ ದತ್ತಾಂಶದ ಆಧಾರದ ಮೇಲೆ ಕೇಂದ್ರ ಸರ್ಕಾರವು ಲಾಕ್‌ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಿತು. ರಾಜ್ಯ ಸರ್ಕಾರಗಳಿಗೆ ರವಾನೆ ಮಾಡಲಾಗಿರುವ ಪ್ರಸೆಂಟೇಷನ್‌ನಲ್ಲಿ ಈ ಮಾಹಿತಿ ಇದೆ.

ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದೇಶದಾದ್ಯಂತ ದತ್ತಾಂಶ ಸಂಗ್ರಹ ಕ್ರಮಗಳು, ವಿಧಾನಗಳು ಮತ್ತು ಪರಿಷ್ಕರಣೆ ಏಕರೂಪವಾಗಿ ಇರಲಿಲ್ಲ ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ರವಾನೆಯಾಗಿರುವ ಸುತ್ತೋಲೆಗಳು ಮತ್ತು ಆದೇಶ ಪತ್ರಗಳ ಪರಿಶೀಲನೆಯಿಂದ ಪತ್ತೆಯಾಗಿದೆ. ಐಸಿಎಂಆರ್ ಪದೇ ಪದೇ ಈ ಪ್ರಕ್ರಿಯೆಗಳನ್ನು ಬದಲಿಸಿತ್ತು. ದತ್ತಾಂಶ ಪರಿಷ್ಕರಣೆ ಆದೇಶ ನೀಡುವ ಮೂಲಕ ಯುದ್ಧೋಪಾದಿಯಲ್ಲಿ ಕೋವಿಡ್ ವಿರುದ್ಧ ಹೋರಾಡುತ್ತಿದ್ದ ರಾಜ್ಯಗಳ ವೈದ್ಯಕೀಯ ಸಿಬ್ಬಂದಿ, ಆಡಳಿತ ಸಿಬ್ಬಂದಿ ಮತ್ತು ಪ್ರಯೋಗಾಲಯಗಳ ಮೇಲಿನ ಹೊರೆಯನ್ನು ಐಸಿಎಂಆರ್ ಹೆಚ್ಚಿಸಿತು. 

‘ಮಾರ್ಗಸೂಚಿಗಳು ಬರುತ್ತಲೇ ಇದ್ದವು ಮತ್ತು ಬದಲಾಗುತ್ತಲೇ ಇದ್ದವು’ ಎಂದು ತಮಿಳುನಾಡಿನ ಸಾರ್ವಜನಿಕ ಆರೋಗ್ಯ ನಿರ್ದೇಶಕರಾಗಿದ್ದ ಕೆ.ಕೋಲಂದಸ್ವಾಮಿ ತಿಳಿಸಿದ್ದಾರೆ. ಅವರು ಮೇ ತಿಂಗಳಲ್ಲಿ ನಿವೃತ್ತರಾಗಿದ್ದಾರೆ.

‘ಐಸಿಎಂಆರ್‌ನ ದತ್ತಾಂಶದಲ್ಲಿ ನಕಲು ಹೆಸರುಗಳಿವೆ, ಅದರಲ್ಲಿರುವ ದೂರವಾಣಿ ಸಂಖ್ಯೆ ತಪ್ಪಾಗಿವೆ. ವಿಳಾಸಗಳೂ ತಪ್ಪಾಗಿವೆ’ ಎನ್ನುತ್ತಾರೆ ಮತ್ತೊಂದು ರಾಜ್ಯದ ಮತ್ತೊಬ್ಬ ಅಧಿಕಾರಿ. ತಮ್ಮ ರಾಜ್ಯದ ಹೆಸರು ಮತ್ತು ತಮ್ಮ ಹೆಸರನ್ನೂ ಬಹಿರಂಗಪಡಿಸಬಾರದು ಎಂದು ಅವರು ಕೋರಿದ್ದಾರೆ.

‘ಕೆಲವೊಮ್ಮೆ ಸೋಂಕು ತಗುಲಿರುವ ವ್ಯಕ್ತಿ ಒಂದು ಜಿಲ್ಲೆಯಲ್ಲಿ ಇರುತ್ತಾನೆ. ಆತ ಬೇರೆ ಜಿಲ್ಲೆಯಿಂದ ಇಲ್ಲಿಗೆ ಬಂದಿರುತ್ತಾನೆ. ಆದರೆ, ಆತನ ಮೂಲ ವಿಳಾಸ ಇನ್ನೊಂದು ಜಿಲ್ಲೆಯಲ್ಲಿ ಇರುತ್ತದೆ. ಇಂತಹ ವಿವರಗಳನ್ನು ರಾಜ್ಯ ಸರ್ಕಾರದ ಸಂಸ್ಥೆಗಳು ಮಾತ್ರ ಪರಿಶೀಲಿಸಲು ಸಾಧ್ಯ. ಆದರೆ ಈಚಿನವರೆಗೂ ಈ ವಿವರಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರಗಳಿಗೆ ಐಸಿಎಂಆರ್ ಅನುಮತಿ ನೀಡಿರಲಿಲ್ಲ’ ಎನ್ನುತ್ತಾರೆ ಪಶ್ಚಿಮ ಭಾರತದ ರಾಜ್ಯವೊಂದರ ಅಧಿಕಾರಿ. ಅವರೂ ರಾಜ್ಯ ಮತ್ತು ತಮ್ಮ ವಿವರ ಬಹಿರಂಗಪಡಿಸಬೇಡಿ ಎಂದು ಕೋರಿದ್ದಾರೆ. ಕೇಂದ್ರ ಸರ್ಕಾರ ತಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು ಎಂಬ ಭಯ ಅವರದ್ದು. 

ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಆರೋಗ್ಯ ಸಚಿವ ಹರ್ಷವರ್ಧನ್, ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದಾನ್, ಐಸಿಎಂಆರ್ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ್ ಮತ್ತು ಐಸಿಎಂಆರ್‌ನ ಸೋಂಕುರೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ರಮಣ ಗಂಗಾಕೇಡ್ಖರ್ ಅವರಿಗೆ ಇ–ಮೇಲ್ ಮಾಡಲಾಗಿತ್ತು. ಆರೋಗ್ಯ ಸಚಿವಾಲಯವು ಈ ಇ–ಮೇಲ್‌ ಅನ್ನು ಸಚಿವಾಲಯದ ಉಳಿದ ಅಧಿಕಾರಿಗಳಿಗೆ ಮತ್ತು ಐಸಿಎಂಆರ್‌ನ ಉಳಿದ ಅಧಿಕಾರಿಗಳಿಗೆ ಫಾರ್ವರ್ಡ್‌ ಮಾಡಿತು ಅಷ್ಟೆ. ಈ ಬಗ್ಗೆ ಭಾರ್ಗವ್ ಮಾತ್ರ ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ಆರೋಗ್ಯ ಸಚಿವಾಲಯಕ್ಕೆ ಸಂಬಂಧಿಸಿದ ವಿಷಯ, ನಮಗೆ ಸಂಬಂಧಿಸಿದ್ದಲ್ಲ’ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಐಸಿಎಂಆರ್‌ಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಅವರು ಉತ್ತರ ನೀಡಿಲ್ಲ. 

ಎರಡು ದತ್ತಾಂಶಗಳ ಕತೆ

2020ರ ಜನವರಿ ತಿಂಗಳಲ್ಲಿ ಕೋವಿಡ್‌–19 ಪ್ರಕರಣ ಬೆಳಕಿಗೆ ಬಂದ ನಂತರ ಐಸಿಎಂಆರ್‌ ಸಂಸ್ಥೆಯು ರೋಗದ ಮೇಲೆ ನಿಗಾ ಆರಂಭಿಸಿತ್ತು. ಅಲ್ಲಿಯವರೆಗೆ ಕೇಂದ್ರದ ಆರೋಗ್ಯ ಸಚಿವಾಲಯದಡಿ ಬರುವ  ಎನ್‌ಸಿಡಿಸಿಯು ‘ಸಮಗ್ರ ರೋಗ ಕಣ್ಗಾವಲು ಯೋಜನೆ’ಯಡಿ (ಐಡಿಎಸ್‌ಪಿ) ದತ್ತಾಂಶ ಸಂಗ್ರಹಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು.

ಗ್ರಾಮದಿಂದ ರಾಜ್ಯಮಟ್ಟದವರೆಗೆ ಆರೋಗ್ಯ ಕಾರ್ಯಕರ್ತರು ಹಾಗೂ ಅಧಿಕಾರಿಗಳನ್ನು ಹೊಂದಿರುವ ರಾಜ್ಯ ಸರ್ಕಾರಗಳು, ಪಿಡುಗಿನ ಮೇಲೆ ನಿಗಾ ಇರಿಸಲು ಮತ್ತು ಅದಕ್ಕೆ ಪ್ರತಿಕ್ರಿಯೆ ನೀಡಲು ಐಡಿಎಸ್‌ಪಿಯ ದತ್ತಾಂಶಗಳನ್ನು ಅವಲಂಬಿಸುತ್ತವೆ.

ಕೋವಿಡ್‌–19 ಪಿಡುಗು ಆರಂಭವಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರವು ರೋಗವನ್ನು ಕುರಿತ ದತ್ತಾಂಶ ಸಂಗ್ರಹಿಸುವ ಹೊಣೆಯನ್ನು ಐಸಿಎಂಆರ್‌ಗೆ ನೀಡಿತು. ಈ ಸಂಸ್ಥೆಯು ಗೊತ್ತುಪಡಿಸಿದ ಪ್ರಯೋಗಾಲಯಗಳಿಂದ ಮಾಹಿತಿಯನ್ನು ಪಡೆದು, ದತ್ತಾಂಶ ಸಂಗ್ರಹಿಸಲು ಆರಂಭಿಸಿತು.  ಎನ್‌ಸಿಡಿಸಿಯು ರಾಜ್ಯ ಸರ್ಕಾರಗಳ ಸಿಬ್ಬಂದಿಯನ್ನೊಳಗೊಂಡ ತನ್ನದೇ ಆದ ಜಾಲದ ಮೂಲಕ ದತ್ತಾಂಶ ಸಂಗ್ರಹಿಸುವುದನ್ನು ಮುಂದುವರಿಸಿತು. ಸೋಂಕು ಪ್ರಸರಣದ ವಾಸ್ತವ ಮಾಹಿತಿಯನ್ನು ಪಡೆಯಲು ಮತ್ತು ಕ್ಷಿಪ್ರ ನಿರ್ಧಾರಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳು ಎನ್‌ಸಿಡಿಸಿಯ ಅಂಕಿಅಂಶಗಳನ್ನೇ ಆಧಾರವಾಗಿಟ್ಟುಕೊಂಡಿದ್ದವು.

‘ನಾವು ಪ್ರತಿ ಜಿಲ್ಲೆಯಲ್ಲೂ ಐಡಿಎಸ್‌ಪಿ ಜಾಲವನ್ನು ಹೊಂದಿದ್ದೇವೆ. ಜಿಲ್ಲಾ ವಿಚಕ್ಷಣ ಅಧಿಕಾರಿಗಳು ಹಾಗೂ ಸಾಂಕ್ರಾಮಿಕ ರೋಗ ತಜ್ಞರು ಈ ಜಾಲದಲ್ಲಿದ್ದಾರೆ’ ಎಂದು ಪೂರ್ವಭಾಗದ ರಾಜ್ಯವೊಂದರ ಅಧಿಕಾರಿ ಹೇಳಿದರು.

ಐಡಿಎಸ್‌ಪಿ ಜಾಲದಲ್ಲಿ ಸಿಬ್ಬಂದಿ ಕೊರತೆ ಇದೆ ಎಂಬುದನ್ನು ತಜ್ಞರು ಗುರುತಿಸಿದರು. ಆದರೂ, ಇದು ರಾಜ್ಯ ಸರ್ಕಾರಗಳಿಗೆ ಸ್ಪಂದಿಸುತ್ತದೆ, ಅತ್ಯುತ್ತಮವಾದ ದತ್ತಾಂಶ ಸಂಗ್ರಹ ವ್ಯವಸ್ಥೆ ಇದೆ ಮತ್ತು ನೇರವಾಗಿ ಮಾಹಿತಿಯನ್ನು ಸಂಗ್ರಹಿಸುತ್ತದೆ. ‘ಕನಿಷ್ಠ ಏಪ್ರಿಲ್‌ 7ರ ಒಳಗಾಗಿ ಐಡಿಎಸ್‌ಪಿಯಲ್ಲಿ ಖಾಲಿಯಿರುವ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಿ’ ಎಂದು ಐಸಿಎಂಆರ್,‌ ರಾಜ್ಯಗಳಿಗೆ ಮನವಿ ಮಾಡಿತು.

ಐಸಿಎಂಆರ್‌ನ ದತ್ತಾಂಶವು ಲ್ಯಾಬ್‌ಗಳಿಂದ ಬರುವ ಎರಡನೇ ಹಂತದ ಮಾಹಿತಿಯನ್ನು ಅವಲಂಬಿಸಿದ್ದಾಗಿದೆ. ಆದ್ದರಿಂದ ಈ ಎರಡು ದತ್ತಾಂಶಗಳು ಎಂದೂ ತಾಳೆಯಾಗಲಿಲ್ಲ. ಉದಾಹರಣೆಗೆ ಏಪ್ರಿಲ್‌ 29ರ ವೇಳೆಗೆ ತ್ರಿಪುರಾದಲ್ಲಿ ಎನ್‌ಸಿಡಿಸಿಯು ದಾಖಲಿಸಿದ್ದಕ್ಕಿಂತ ಶೇ 88ರಷ್ಟು ಹೆಚ್ಚುವರಿ ಕೋವಿಡ್‌–19 ಪ್ರಕರಣಗಳನ್ನು ಐಸಿಎಂಆರ್‌ ದಾಖಲಿಸಿತ್ತು. ಇತರ ರಾಜ್ಯಗಳಿಗಿಂತ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿದ್ದರೂ ಐಸಿಡಿಸಿಯು ಐಸಿಎಂಆರ್‌ ದಾಖಲಿಸಿದ್ದಕ್ಕಿಂತ 1,678ರಷ್ಟು ಹಾಗೂ ದೆಹಲಿಯಲ್ಲಿ 484ರಷ್ಟು ಕಡಿಮೆ ಪ್ರಕರಣಗಳನ್ನು ದಾಖಲಿಸಿತ್ತು. ದೇಶದಾದ್ಯಂತ ಐದು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಐಸಿಎಂಆರ್‌ ಹಾಗೂ ಎನ್‌ಸಿಡಿಸಿ ದತ್ತಾಂಶಗಳು ತಾಳೆಯಾಗುತ್ತಿದ್ದವು.

‘ಭಿನ್ನಾಭಿಪ್ರಾಯವಲ್ಲ’

ಏಪ್ರಿಲ್‌ ಮಧ್ಯದ ವೇಳೆಗೆ ಎರಡು ಸಂಸ್ಥೆಗಳ ಅಂಕಿಅಂಶಗಳು ತಾಳೆಯಾಗುತ್ತಿಲ್ಲ ಎಂಬುದನ್ನು ಕೆಲವು ಮಾಧ್ಯಮಗಳು ವರದಿ ಮಾಡಿದವು. ‘ರಾಜ್ಯಗಳಿಂದ ಬರುವ ಮಾಹಿತಿಯನ್ನು ದಾಖಲಿಸುವುದರಲ್ಲಿ ವಿಳಂಬ ಆಗುತ್ತಿರುವುದರಿಂದ ಈ ವ್ಯತ್ಯಾಸ ಕಾಣಿಸುತ್ತಿದೆಯೇ ವಿನಾ ಭಿನ್ನಾಭಿಪ್ರಾಯ ಅಲ್ಲ’ ಎಂದು ಕೇಂದ್ರ ಸರ್ಕಾರ ಹೇಳಿತು. ಆದರೆ ‘ಆರ್ಟಿಕಲ್‌14’ಗೆ ಲಭ್ಯವಾದ ದಾಖಲೆಗಳು ಮತ್ತು ಸಂವಹನಗಳನ್ನು ವಿಶ್ಲೇಷಿಸಿದಾಗ ಮೂಲಭೂತವಾದ ಕೆಲವು ನ್ಯೂನತೆಗಳು ಕಂಡುಬಂದಿವೆ.

‘ಏಪ್ರಿಲ್‌ 29ಕ್ಕೂ ಮೊದಲೇ ದತ್ತಾಂಶವನ್ನು ಸರಿಪಡಿಸುವಂತೆ ರಾಜ್ಯಗಳಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು’ ಎಂದು ಐಸಿಎಂಆರ್‌ ಹೇಳಿದೆ. ಆದರೆ, ‘ದತ್ತಾಂಶ ಸರಿಪಡಿಸಬೇಕೆಂಬ ನಮ್ಮ ಬೇಡಿಕೆಗೆ ಐಸಿಎಂಆರ್‌ ಸ್ಪಂದಿಸಿಲ್ಲ’ ಎಂದು ರಾಜ್ಯಗಳ ಅಧಿಕಾರಿಗಳು ದೂರಿದ್ದಾರೆ.

‘ಐಸಿಎಂಆರ್‌ಗೆ ಬರೆದ ಇ–ಮೇಲ್‌ಗಳ ಸರಣಿ ನನ್ನ ಬಳಿ ಇದೆ. ದೆಹಲಿ, ಪಂಜಾಬ್‌ನ ನಿವಾಸಿಗಳನ್ನು ನಮ್ಮ ರಾಜ್ಯದ ಪಟ್ಟಿಗೆ ಸೇರಿಸಿದ್ದನ್ನು ನಾವು ಪತ್ತೆ ಮಾಡಿದ್ದೇವೆ. ಅಂಥವರು ತಮ್ಮ ಹಾಲಿ ವಿಳಾಸದ ಬದಲು ಊರಿನ ವಿಳಾಸವನ್ನು ಅಧಿಕಾರಿಗಳಿಗೆ ನೀಡಿದ್ದರು’ ಎಂದು ರಾಜ್ಯವೊಂದರ ಅಧಿಕಾರಿಯೊಬ್ಬರು ತಿಳಿಸಿದರು.

ನ್ಯೂನತೆ ಹೇಗಾಯಿತು?

‘ಪ್ರಯೋಗಾಲಯದವರು ನೀಡಿದ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಐಸಿಎಂಆರ್‌ನವರು ಖಚಿತಪಡಿಸಿಕೊಳ್ಳಲಿಲ್ಲ. ನಿರ್ಲಕ್ಷ್ಯ ಅಥವಾ ಭಯದ ಕಾರಣದಿಂದ ಕೆಲವೊಮ್ಮೆ ಜನರು ತಮ್ಮ ಪೂರ್ಣ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. ಸಿಬ್ಬಂದಿಯೂ ಕೆಲವೊಮ್ಮೆ ಪೂರ್ಣ ಮಾಹಿತಿಯನ್ನು ದಾಖಲಿಸುವಲ್ಲಿ ವಿಫಲರಾಗುತ್ತಾರೆ.

‘ಕೆಲವು ದಾಖಲೆಗಳಲ್ಲಿ ರೋಗಿಗಳ ವಿಳಾಸ ಎಂಬಲ್ಲಿ ಕ್ಲಿನಿಕ್‌ ಅಥವಾ ಆಸ್ಪತ್ರೆಯ ವಿಳಾಸವನ್ನೇ ತುಂಬಲಾಗಿದೆ. ಒಬ್ಬನೇ ವ್ಯಕ್ತಿಯು ಪುನಃ ಪರೀಕ್ಷೆಗೆ ಬಂದರೆ, ಬೇರೆಯ ವ್ಯಕ್ತಿ ಎಂದು ದಾಖಲಾದದ್ದೂ ಇದೆ. ತನಗೆ ಲಭ್ಯವಾದ ಈ ಮಾಹಿತಿಯನ್ನು ಖಚಿತಪಡಿಸಲು ಐಸಿಎಂಆರ್‌ ಹೋಗಲಿಲ್ಲ. ರಾಜ್ಯ ಸರ್ಕಾರಗಳು ರೋಗಿಗಳ ಸಂಪೂರ್ಣ ಮತ್ತು ನಿಖರ ಮಾಹಿತಿಯನ್ನು ಕಲೆಹಾಕಬಲ್ಲವು. ಏಪ್ರಿಲ್‌ 29ರವರೆಗೂ ಈ ದಾಖಲೆಗಳನ್ನು ಪರಿಶೀಲಿಸಲು ಮತ್ತು ತಿದ್ದುಪಡಿ ಮಾಡಲು ರಾಜ್ಯ ಮತ್ತು ಜಿಲ್ಲೆಗಳಿಗೆ ಅವಕಾಶವನ್ನೇ ನೀಡಲಿಲ್ಲ’ ಎಂದು ಅಧಿಕಾರಿ ಹೇಳಿದರು.

ಕೋವಿಡ್‌–19 ದೃಢಪಟ್ಟವರ ಮಾಹಿತಿ ಸಂಗ್ರಹಿಸುವ ನಮೂನೆಯಲ್ಲಿ ಐಸಿಎಂಆರ್‌ ಸಂಸ್ಥೆಯವರು ಎರಡು ತಿಂಗಳ ಅವಧಿಯಲ್ಲಿ ಕನಿಷ್ಠ 10 ಬಾರಿ ಸಣ್ಣ ಮತ್ತು ದೊಡ್ಡ ಪ್ರಮಾಣದ ಬದಲಾವಣೆಗಳನ್ನು ಮಾಡಿದ್ದಾರೆ ಎಂಬುದು ಪರಿಶೀಲನೆಯಿಂದ ತಿಳಿದುಬಂದಿದೆ.

ಮಾಹಿತಿ ಸಂಗ್ರಹಿಸುವ ಐಸಿಎಂಆರ್‌ನ ಸಾಮರ್ಥ್ಯದ ಮೇಲೆ ಕೇಂದ್ರದ ಕೆಲವು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ‘ತಪಾಸಣೆ’ಯೇ ರೋಗ ನಿರ್ವಹಣೆಯ ಪ್ರಮುಖ ಅಂಶ ಎಂಬ ತಪ್ಪು ಧಾರಣೆಯೊಂದಿಗೆ ಐಸಿಎಂಆರ್‌ ದತ್ತಾಂಶ ಸಂಗ್ರಹವನ್ನು ಆರಂಭಿಸಿತ್ತು. ಐಸಿಎಂಆರ್‌ನಲ್ಲಿರುವವರು  ವಿಜ್ಞಾನಿಗಳು, ಹೆಚ್ಚಾಗಿ ಪ್ರಯೋಗಾಲಯದಲ್ಲೇ ಇರುತ್ತಾರೆ. ಆದರೆ ಎನ್‌ಸಿಡಿಸಿಯ ಅಧಿಕಾರಿಗಳು ಕ್ಷೇತ್ರದಲ್ಲಿದ್ದು ಪಿಡುಗನ್ನು ಎದುರಿಸುತ್ತಾರೆ’ ಎಂದು ಅಧಿಕಾರಿ ಹೆಳಿದರು.

ತಪ್ಪು ದತ್ತಾಂಶದ ಪರಿಣಾಮ

ದತ್ತಾಂಶ ಸಂಗ್ರಹಣೆಯಲ್ಲಿ ಇರುವ ಕೊರತೆಗಳ ಬಗ್ಗೆ ರಾಜ್ಯಗಳು ಒಂದೊಂದಾಗಿ ಆಕ್ಷೇಪ ವ್ಯಕ್ತಪಡಿಸಲಾರಂಭಿಸಿದವು. ಇದಾದ ಬಳಿಕ ಏ.29ರಂದು, ಐದು ದಿನದೊಳಗೆ ಎರಡೂ ದತ್ತಾಂಶಗಳನ್ನು ಸರಿಪಡಿಸುವಂತೆ ರಾಜ್ಯಗಳಿಗೆ ಐಸಿಎಂಆರ್‌ ಸೂಚನೆ ನೀಡಿತು. ಜತೆಗೆ, ‘ರೋಗಿಗಳನ್ನು ಕುರಿತ ಮತ್ತು ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗೆ ಇನ್ನು ಮುಂದೆ ಇದೇ ದತ್ತಾಂಶವನ್ನು ಪರಿಗಣಿಸಲಾಗುವುದು’ ಎಂದೂ ತಿಳಿಸಿತು. ಈ ದತ್ತಾಂಶದ ಆಧಾರದಲ್ಲೇ ಸರ್ಕಾರವು ದೇಶದಲ್ಲಿ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳನ್ನು ಗುರುತಿಸಿ ಲಾಕ್‌ಡೌನ್‌ ಅನ್ನು ವಿಸ್ತರಿಸುವ ನಿರ್ಧಾರವನ್ನು ಕೈಗೊಂಡಿತ್ತು.

ಈ ನಡುವೆಯೇ, ದತ್ತಾಂಶವನ್ನು ಪರಿಷ್ಕರಿಸಲು ತಾನು ಏಪ್ರಿಲ್‌ ಅಂತ್ಯದಲ್ಲಿ ಬಿಡುಗಡೆ ಮಾಡಿದ್ದ ‘ಆರ್‌ಟಿ–ಪಿಸಿಆರ್‌’ ಆ್ಯಪ್‌ಅನ್ನು ಬಳಸುವಂತೆ ರಾಜ್ಯಗಳಿಗೆ ಐಸಿಎಂಆರ್‌ ಸೂಚನೆಯನ್ನೂ ನೀಡಿತು. ಆ್ಯಪ್‌ ಆಧರಿತ ಪರಿಷ್ಕರಣೆಯು ಇನ್ನಷ್ಟು ಗೊಂದಲಗಳನ್ನು ಸೃಷ್ಟಿಸಿತು ಎಂದು ಅಧಿಕಾರಿಗಳು ಹೇಳುತ್ತಾರೆ.

ರಾಜ್ಯದ ಅಧಿಕಾರಿಗಳು, ಪ್ರಯೋಗಾಲಯದ ಸಿಬ್ಬಂದಿ ಹಾಗೂ ವೈದ್ಯರ ನಡುವಿನ ಸಂವಹನವು ಹಲವು ಗೊಂದಲಗಳನ್ನು ಸೃಷ್ಟಿಸಿತು. ‘ಅತ್ಯಂತ ತೊಡಕಿನ ರಕ್ಷಣಾ ಸಾಮಗ್ರಿಗಳನ್ನು ಧರಿಸಿರುವಾಗ ನಾವು ಆ್ಯಪ್‌ ಬಳಸುವುದಾದರೂ ಹೇಗೆ’ ಎಂದು ವೈದ್ಯರು ಪ್ರಶ್ನಿಸಿದ್ದರು. ಅಷ್ಟೇ ಅಲ್ಲ ಆ್ಯಪ್‌ ಅನ್ನು ಬಿಡುಗಡೆ ಮಾಡಿದ ನಂತರ ಒಂದುಬಾರಿ ದತ್ತಾಂಶವನ್ನು ತುಂಬುವ ವಿಧಾನವನ್ನು ಹಿಂದಿನಿಂದಲೇ ಜಾರಿಯಾಗುವಂತೆ ಬದಲಾಯಿಸಲಾಗಿತ್ತು.

ದೇಶದ ಪ್ರಮುಖ ಮೂರು ರಾಜ್ಯಗಳು ಮೇ 10ರವರೆಗೂ ತಮ್ಮ ರಾಜ್ಯದ ದಾಖಲೆಗಳನ್ನು ಪರಿಷ್ಕರಿಸುವಲ್ಲಿ ವಿಫಲವಾಗಿವೆ. ಇತರ ರಾಜ್ಯಗಳು ಸಫಲವಾಗಿವೆಯೇ ಎಂಬುದರ ಬಗ್ಗೆ ಖಚಿತತೆ ಇಲ್ಲ. ‘ದತ್ತಾಂಶ ನಿಖರ ಮತ್ತು ಸಮಗ್ರವಾಗಿರುವುದು ಮುಖ್ಯ. ಆದರೆ ಅರ್ಜಿಗಳನ್ನು ಭರ್ತಿಗೊಳಿಸುವ ಬಗ್ಗೆ ಸಿಬ್ಬಂದಿಗೆ ಬಾರಿಬಾರಿ ತರಬೇತಿ ನೀಡುವುದು ತುಂಬ ಬೇಸರದ ವಿಚಾರ’ ಎಂದು ಅಧಿಕಾರಿಗಳು ಆಕ್ಷೇಪಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು