ಗುರುವಾರ , ಮಾರ್ಚ್ 4, 2021
23 °C

Explainer| ದೇಶದ್ರೋಹದ ಹೆಸರಲ್ಲಿ ಮಾತಿಗೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಸರ್ಕಾರದ ವಿರುದ್ಧ ಅತೃಪ್ತಿ ವ್ಯಕ್ತಪಡಿಸುವವರ ಮೇಲೆ ‘ದೇಶದ್ರೋಹ’ದ ಪ್ರಕರಣ ದಾಖಲಿಸುವ (124ಎ ಸೆಕ್ಷನ್‌ ಅಡಿ) ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರೇ ಮುಖ್ಯವಾಗಿ ಇದರ ಗುರಿಯಾಗುತ್ತಿದ್ದಾರೆ. ಇಂತಹ ಬೆಳವಣಿಗೆಗಳು ಇತ್ತೀಚೆಗೆ ಹೆಚ್ಚುತ್ತಿವೆ. ಮೈಸೂರಿನಲ್ಲಿ ‘ಸ್ವತಂತ್ರ ಕಾಶ್ಮೀರ’ ಫಲಕ ಪ್ರದರ್ಶನ, ಸಿಎಎ ಪ್ರಶ್ನಿಸಿ ಕವಿಯೊಬ್ಬರು ಬರೆದಿದ್ದ ಕವನ ಹಾಗೂ ಬೀದರ್‌ನ ಶಾಲೆಯೊಂದರಲ್ಲಿ ಪ್ರದರ್ಶನವಾದ ನಾಟಕದಲ್ಲಿ ಸಿಎಎಯನ್ನು ಟೀಕಿಸಿದ ಆರೋಪದಲ್ಲಿ 124ಎ ಸೆಕ್ಷನ್‌ನಲ್ಲಿ ಪ್ರಕರಣ ದಾಖಲಾಗಿರುವುದು ಇತ್ತೀಚಿನ ಕೆಲವು ನಿದರ್ಶನಗಳು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲೂ 124ಎ ಸೆಕ್ಷನ್‌ನ ಬಾಣ ಹೂಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ಸೆಕ್ಷನ್‌ ಅಡಿ ದಾಖಲಾಗುವ ಪ್ರಕರಣಗಳು ಹೆಚ್ಚಾಗಿವೆ ಎಂದು ರಾಷ್ಟ್ರೀಯ ಅಪರಾಧ ಬ್ಯೂರೊ ವರದಿಯ ಅಂಕಿ–ಅಂಶಗಳು ಹೇಳುತ್ತಿವೆ

 

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊವು ಪ್ರತಿ ವರ್ಷ ಅಪರಾಧ ಪ್ರಕರಣಗಳ ಪಟ್ಟಿ ಮಾಡುತ್ತಿದೆ. ಈ ವರದಿಯಲ್ಲಿ 124ಎ ಅಡಿ ದಾಖಲಾದ ಪ್ರಕರಣಗಳ ವಿವರಗಳೂ ಇರುತ್ತವೆ. 2014ಕ್ಕೂ ಹಿಂದಿನ ವಾರ್ಷಿಕ ವರದಿಗಳಲ್ಲಿ ಇಂತಹ ಪ್ರಕರಣಗಳನ್ನು ಪಟ್ಟಿ ಮಾಡಿಲ್ಲ. 2014ರ ನಂತರದ ವಾರ್ಷಿಕ ವರದಿಗಳಲ್ಲಿ ಈ ಮಾಹಿತಿ ಇದೆ. 2019ರ ‘ಭಾರತದಲ್ಲಿ ಅಪರಾಧ’ ವರದಿ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಹೀಗಾಗಿ 2014–18ರ ನಡುವಣ ಮಾಹಿತಿ ಮಾತ್ರ ಲಭ್ಯವಿದೆ.

ಕವಿತೆ, ನಾಟಕ: ಮೊಕದ್ದಮೆಯ ಅಸ್ತ್ರ

ರಾಜ್ಯದಲ್ಲೂ 124ಎ ಸೆಕ್ಷನ್‌ ಇತ್ತೀಚೆಗೆ ಸದ್ದು ಮಾಡುತ್ತಿದೆ. ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ನಾಟಕದಲ್ಲಿ ಸಿಎಎಯನ್ನು ಟೀಕಿಸಲಾಗಿದೆ ಎಂಬ ಆರೋಪದಲ್ಲಿ ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಹಾಗೂ ವಿದ್ಯಾರ್ಥಿನಿಯ ತಾಯಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ಶಾಲಾ ವಾರ್ಷಿಕೋತ್ಸವದ ನಾಟಕದಲ್ಲಿ ಪಾತ್ರವಹಿಸಿದ್ದ, 6ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ತಾಯಿ ಅಂಜುಮುನ್ನೀಸಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಡಳಿತ ಮಂಡಳಿ ಪದಾಧಿಕಾರಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ. 

ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಇತ್ತೀಚೆಗೆ ನಡೆದ ಸಿಎಎ ವಿರೋಧಿ ಪ್ರತಿಭಟನೆ ವೇಳೆ ‘ಸ್ವತಂತ್ರ ಕಾಶ್ಮೀರ’ ಫಲಕ ಪ್ರದರ್ಶಿಸಿದ ಆರೋಪದ ಮೇಲೆ ಬಿ. ನಳಿನಿ ಎಂಬುವರ ಮೇಲೆ ಇದೇ ಅಸ್ತ್ರ ಪ್ರಯೋಗಿಸಲಾಗಿದೆ. ನಳಿನಿ ಹಾಗೂ ಪ್ರತಿಭಟನೆಯ ಆಯೋಜಕರ ವಿರುದ್ಧ ಮೊಕದ್ದಮೆ ಹೂಡಲಾಗಿದ್ದು, ನ್ಯಾಯಾಲಯ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ.

ಕಳೆದ ತಿಂಗಳು ಆನೆಗೊಂದಿ ಉತ್ಸವದಲ್ಲಿ ಕವಿ ಸಿರಾಜ್ ಬಿಸರಳ್ಳಿ ಅವರು ಸಿಎಎ ಕುರಿತು ಬರೆದಿದ್ದ ಕವನ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಸಿಎಎಗೆ ಪ್ರಧಾನಿ ಯಾವಾಗ ದಾಖಲೆಗಳನ್ನು ಒದಗಿಸುತ್ತಾರೆ ಎಂದು ಕವಿ ಪ್ರಶ್ನಿಸಿದ್ದರು. ಸರ್ಕಾರಿ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡು ದೇಶವಿರೋಧಿ ಕವನ ರಚಿಸಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಈ ಸೆಕ್ಷನ್‌ ಬ್ರಿಟಿಷ್‌ ಆಳ್ವಿಕೆಯ ಬಳುವಳಿ

1837ರಲ್ಲಿ ಬ್ರಿಟಿಷ್ ಅಧಿಕಾರಿ ಥಾಮಸ್ ಮೆಕಾಲೆ ರಚಿಸಿದ ಕರಡು ದಂಡ ಸಂಹಿತೆಯಲ್ಲಿ 124ಎ ಸೆಕ್ಷನ್‌ ಮೊದಲಿಗೆ ಪ್ರಸ್ತಾಪವಾಯಿತು. ಆದರೆ, 1860ರಲ್ಲಿ ಜಾರಿಗೆ ಬಂದ ಭಾರತೀಯ ದಂಡ ಸಂಹಿತೆಯಿಂದ (ಐಪಿಸಿ) ಇದನ್ನು ಹೊರಗಿಡ ಲಾಗಿತ್ತು. ಹೆಚ್ಚುತ್ತಿದ್ದ ವಹಾಬಿ ಚಳಿವಳಿಯನ್ನು ಹತ್ತಿಕ್ಕಲು 10 ವರ್ಷಗಳ ಬಳಿಕ (1870) ಐ‍ಪಿಸಿಗೆ ಸೇರ್ಪಡೆ ಮಾಡಲಾಯಿತು. ಆ ಸಂದರ್ಭದಲ್ಲಿ ‘ಅತೃಪ್ತಿ’ಯ ವಿರುದ್ಧ ಇದನ್ನು ಬಳಕೆ ಮಾಡಲು ಉದ್ದೇಶಿಸಲಾಗಿತ್ತು. 

ಮೊದಲ ಪ್ರಕರಣ: 1891ರಲ್ಲಿ 124ಎ ಸೆಕ್ಷನ್‌ನಡಿ ಮೊದಲ ಪ್ರಕರಣ ದಾಖಲಾಯಿತು. ಮದುವೆಯ ಕನಿಷ್ಠ ವಯಸ್ಸು ನಿಗದಿಪಡಿಸುವ ಮಸೂದೆಯನ್ನು ಟೀಕಿಸಿ ಲೇಖನ ಬರೆದಿದ್ದ ‘ಬಂಗೊಬಸಿ’ ಪತ್ರಿಕೆಯ ಸಂಪಾದಕ ಜೋಗೇಂದ್ರ ಚಂದ್ರ ಬೋಸ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸಂಪಾದಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಕ್ಷಮಾಪತ್ರ ಸಲ್ಲಿಸಿದ ಬಳಿಕ ಅವರ ವಿರುದ್ಧದ ಪ್ರಕರಣವನ್ನು ಕೈಬಿಡಲಾಯಿತು. 

ತಿಲಕ್ ಹಾಗೂ ದೇಶದ್ರೋಹ: 1897ರಲ್ಲಿ ಬಾಲ ಗಂಗಾಧರ ತಿಲಕ್ ಅವರು ಮಾಡಿದ್ದ ಭಾಷಣದ ವಿರುದ್ಧ ಈ ಕಾಯ್ದೆಯಡಿ ವಿಚಾರಣೆ ನಡೆಯಿತು. ನ್ಯಾಯಾಧೀಶ ಜೇಮ್ಸ್ ಸ್ಟ್ರಾಚೆ ಅವರು 124ಎ ಸೆಕ್ಷನ್‌ನ ಅರ್ಥ ವ್ಯಾಪ್ತಿಯನ್ನು ವಿಸ್ತರಿಸಿದರು. ‘ಅತೃಪ್ತಿಯ ಭಾವನೆ’ ಎಂಬುದು ದ್ವೇಷ, ಹಗೆತನ, ತಿರಸ್ಕಾರ, ನಿಂದನೆ ಮತ್ತು ಸರ್ಕಾರದ ವಿರುದ್ಧದ ಯಾವುದೇ ರೀತಿಯ ಕೆಟ್ಟ ಸ್ವರೂಪದ ನಡವಳಿಕೆಯನ್ನು ಪ್ರತಿನಿಧಿಸುತ್ತದೆ’ ಎಂದು ಸ್ಟ್ರಾಚೆ ವ್ಯಾಖ್ಯಾನಿಸಿದರು.

ಸ್ಟ್ರಾಚೆ ಅವರ ವ್ಯಾಖ್ಯಾನವನ್ನು ಆಧಾರವಾಗಿಟ್ಟುಕೊಂಡು ರಾಷ್ಟ್ರೀಯವಾದಿ ನಾಯಕರ ವಿರುದ್ಧ ಸರ್ಕಾರವು ಪದೇ ಪದೇ ಈ ಕಾಯ್ದೆಯನ್ನು ಬಳಸಿತು. ತಿಲಕ್ ವಿರುದ್ಧ ಮತ್ತೊಮ್ಮೆ ಇದೇ ಅಸ್ತ್ರ ಬಳಕೆಯಾಯಿತು. ತಮ್ಮ ‘ಕೇಸರಿ’ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಬರಹದಿಂದ ಅವರು ಆರು ವರ್ಷ ಜೈಲಿನಲ್ಲಿ ಕಳೆಯುವಂತಾಯಿತು.

ಗಾಂಧೀಜಿ ವಿರುದ್ಧವೂ ಪ್ರಕರಣ: 1922ರಲ್ಲಿ ‘ಯಂಗ್ ಇಂಡಿಯಾ’ ವಾರ ಪತ್ರಿಕೆಯಲ್ಲಿ ಗಾಂಧೀಜಿ ಅವರು ಬರೆದ ಲೇಖನಗಳಿಂದ ಅವರು ಕೋರ್ಟ್ ಮೆಟ್ಟಿಲು ಹತ್ತಬೇಕಾಯಿತು. ದೇಶದ್ರೋಹ ಕಾನೂನನ್ನು ಗಾಂಧೀಜಿ ಅವರು ನ್ಯಾಯಾಲಯದಲ್ಲಿ ಪ್ರಬಲವಾಗಿ ವಿರೋಧಿಸಿದರು. ‘124ಎ ಕಾಯ್ದೆಯಡಿ ನನ್ನ ವಿರುದ್ಧ ಆರೋಪ ಹೊರಿಸಿರುವುದು ಖುಷಿಯೇ. ನಾಗರಿಕರ ಸ್ವಾತಂತ್ರ್ಯ ಹತ್ತಿಕ್ಕುವ ಉದ್ದೇಶದಿಂದಲೇ ಐಪಿಸಿ ವಿನ್ಯಾಸ ಮಾಡಲಾಗಿದೆ’ ಎಂದು ಆರೋಪಿಸಿದ್ದರು.

ದೇಶದ್ರೋಹ ವಿಚಾರವು ಸಂವಿಧಾನ ರಚನಾ ಸಭೆಯಲ್ಲಿ ಹಲವು ಬಾರಿ ಬಿಸಿಬಿಸಿ ಚರ್ಚೆಯ ವಸ್ತುವಾಗಿತ್ತು. ‘ಸ್ವಾತಂತ್ರ್ಯದ ಹಕ್ಕು’ಗಳ ಸ್ವರೂಪದ ಬಗ್ಗೆ ವಲಭಬಾಯಿ ಪಟೇಲ್ ಅವರು ಚರ್ಚಿಸಿದ್ದರು. ಸಿಪಿಎಂ ಮುಖಂಡ ಸೋಮನಾಥ ಲಾಹಿರಿ ಅವರು ‘ದೇಶದ್ರೋಹ’ ಪದ ಬಳಕೆಯನ್ನೇ ವಿರೋಧಿಸಿದ್ದರು. 1951ರಲ್ಲಿ ಮೊದಲ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ ವೇಳೆ ಸಂಸತ್ತಿನಲ್ಲಿ ಮಾತನಾಡಿದ್ದ ಪ್ರಧಾನಿ ಜವಾಹರಲಾಲ್ ನೆಹರೂ ಅವರು, ‘ಆಕ್ಷೇಪಾರ್ಹ ಸೆಕ್ಷನ್‌ ಸರಿಯಿಲ್ಲ’ ಎಂದಿದ್ದರು. 1962ರಲ್ಲಿ ಕೇದಾರನಾಥ ವರ್ಸಸ್ ಬಿಹಾರ ರಾಜ್ಯ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು 124ಎ ಸೆಕ್ಷನ್‌ನ ವ್ಯಾಪ್ತಿಯನ್ನು ವ್ಯಾಖ್ಯಾನಿಸಿತು. ರಾಮ್‌ನಂದನ್ ಮತ್ತು ಉತ್ತರ ಪ್ರದೇಶ ಸರ್ಕಾರ ಪ್ರಕರಣದಲ್ಲಿ 124ಎ ಸೆಕ್ಷನ್‌ನ ಸಿಂಧುತ್ವವನ್ನು ಅಲಹಾಬಾದ್ ಹೈಕೋರ್ಟ್ ಪ್ರಶ್ನಿಸಿತ್ತು. ಕೇದರಾನಾಥ ಪ್ರಕರಣದ ತೀರ್ಪನ್ನು 2015ರಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ವ್ಯಕ್ತಿಯೊಬ್ಬನ ಮಾತು ಅಥವಾ, ನಿರ್ಧಾರವು ಹಿಂಸಾಚಾರಕ್ಕೆ ಅಥವಾ ಸರ್ಕಾರವನ್ನು ಕಿತ್ತೊಗೆಯಲು ಪ್ರೇರೇಪಿಸುವಂತಿದ್ದರೆ ಮಾತ್ರ 124ಎ ಸೆಕ್ಷನ್‌ ಅನ್ವಯವಾಗುತ್ತದೆ ಎಂದು ತೀರ್ಪು ಸ್ಪಷ್ಟಪಡಿಸಿತ್ತು.

ಪ್ರಧಾನಿಯನ್ನು ಟೀಕಿಸುವುದು ದೇಶದ್ರೋಹವಲ್ಲ: ದೆಹಲಿ ಹೈಕೋರ್ಟ್

‘ದೇಶದ ಪ್ರಧಾನಿಗೆ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸುವುದು, ಪ್ರಧಾನಿ ಮತ್ತು ಸರ್ಕಾರದ ಕಾರ್ಯಗಳಿಗೆ ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಐಪಿಸಿ ಸೆಕ್ಷನ್ 124ಎ ಅಡಿ ದೇಶದ್ರೋಹ ಎಂದು ಪರಿಗಣಿಸಬಾರದು. ಸರ್ಕಾರದ ನಾಯಕನ ಮಾತು ಮತ್ತು ಕ್ರಿಯೆಗಳ ಆಧಾರದಲ್ಲಿ, ಅವರು ಯಾವುದೋ ಒಂದು ಸಮುದಾಯದ ವಿರುದ್ಧ ಇದ್ದಾರೆ ಎಂಬ ತೀರ್ಮಾನಕ್ಕೆ ಬರುವುದು ಸಹ ದೇಶದ್ರೋಹ ಆಗಲಾರದು’ ಎಂದು ಜಾವೇದ್‌ ಹಬೀಬ್ ಮತ್ತು ದೆಹಲಿ ಸರ್ಕಾರದ ನಡುವಣ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಹೇಳಿತ್ತು.

‘ಟೀಕೆ ಎಂಬುದು ಪ್ರಜಾಪ್ರಭುತ್ವದ ಹೆಗ್ಗುರುತು. ಒಂದು ಸರ್ಕಾರವನ್ನು ಉರುಳಿಸಿ ಮತ್ತೊಂದು ಸರ್ಕಾರವನ್ನು ಅಧಿಕಾರಕ್ಕೆ ತರುವ ವ್ಯವಸ್ಥೆಯಾದ ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಟೀಕಿಸುವ ಹಕ್ಕು ನಾಗರಿಕರಿಗೆ ಇದೆ. ನಮ್ಮ ದೇಶದಲ್ಲಿ ರಾಜಕೀಯ ಪಕ್ಷಗಳನ್ನು ಅವುಗಳ ನಾಯಕರಿಂದಲೇ ಗುರುತಿಸಲಾಗುತ್ತದೆ. ಇನ್ನು ಕೆಲವು ಪಕ್ಷಗಳಂತೂ ಒಬ್ಬನೇ ನಾಯಕನ ವೈಯಕ್ತಿಕ ರಾಜಕೀಯ ಗುಂಪಿನಂತೆ ಇರುತ್ತವೆ. ಅಂತಹ ಪಕ್ಷವನ್ನು ಟೀಕಿಸುವುದನ್ನು, ಆ ಪಕ್ಷದ ನಾಯಕನ ವಿರುದ್ಧದ ಟೀಕೆ ಎಂದೇ ಪರಿಗಣಿಸಲಾಗುತ್ತದೆ’ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿತ್ತು.

ದೆಹಲಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಲೇಖನ ಪ್ರಕಟಿಸಿದ್ದ ‘ಹಝೋಮ್’ ವಾರಪತ್ರಿಕೆಯ ಸಂಪಾದಕ ಜಾವೇದ್‌ ಹಬೀಬ್ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ದೆಹಲಿ ಹೈಕೋರ್ಟ್‌ ವಜಾ ಮಾಡಿತ್ತು.

ಘೋಷಣೆ ಕೂಗುವುದು ದೇಶದ್ರೋಹವಲ್ಲ: ಸುಪ್ರೀಂ ಕೋರ್ಟ್

‘ಘೋಷಣೆ ಕೂಗುವುದು ದೇಶದ್ರೋಹ ಎನಿಸಿಕೊಳ್ಳುವದಿಲ್ಲ’ ಎಂದು ಕೇದಾರನಾಥ್ ಸಿಂಗ್ ಮತ್ತು ಬಿಹಾರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ‘ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ಉದ್ದೇಶದಿಂದ ಎಸಗಲಾಗುವ ಕೃತ್ಯಗಳು, ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ನಡೆಸಲಾಗುವ ಅಕ್ರಮ ಕ್ರಿಯೆಗಳು ಮತ್ತು ಹಿಂಸಾತ್ಮಕ ಕ್ರಾಂತಿಯನ್ನು ಮಾತ್ರ ಈ ಸೆಕ್ಷನ್ ಅಡಿ ದೇಶದ್ರೋಹ ಎಂದು ಪರಿಗಣಿಸಬ ಹುದು’ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಹೇಳಿತ್ತು.

1962ರಲ್ಲಿ ಬಂದಿದ್ದ ಈ ತೀರ್ಪನ್ನು ದೇಶದ್ರೋಹ (ಐಪಿಸಿ ಸೆಕ್ಷನ್ 124ಎ) ಪ್ರಕರಣ ದಾಖಲಿಸುವಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ ಎಂದೇ ಪರಿಗಣಿಸಲಾಗುತ್ತದೆ.

ದೆಹಲಿಯ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನಾಗಿದ್ದ ಕನ್ಹಯಾ ಕುಮಾರ್ ವಿರುದ್ಧ 2016ರಲ್ಲಿ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ಇತ್ಯರ್ಥಪಡಿಸುವಲ್ಲಿ ಸುಪ್ರೀಂ ಕೋರ್ಟ್‌, ಕೇದಾರನಾಥ್ ಸಿಂಗ್ ಪ್ರಕರಣದ ತೀರ್ಪನ್ನು ಉಲ್ಲೇಖಿಸಿತ್ತು. ‘ದೇಶದ ಎಲ್ಲಾ ನ್ಯಾಯಾಲಯಗಳು ಈ ತೀರ್ಪನ್ನು ಅನುಸರಿಸಬೇಕು. ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸುವ ಮುನ್ನ, ಈ ತೀರ್ಪಿನ ಮಾರ್ಗಸೂಚಿಗಳನ್ನು ಅನುಸರಿಸಬೇಕು’ ಎಂದು ಹೇಳಿತ್ತು.

‘ದೇಶದ್ರೋಹಿ’ ಮತ್ತು ‘ದೇಶವಿರೋಧಿ’ ಎಂಬ ಪದಗಳನ್ನು ಬಹಳ ಸಡಿಲವಾಗಿ ಬಳಸಲಾಗುತ್ತಿದೆ ಎಂದು ಪ್ರಕರಣ ಒಂದರ ವಿಚಾರಣೆ ವೇಳೆ ಸುಪ್ರಿಂ ಕೋರ್ಟ್‌ ಪೀಠವು ಇದೇ ಜನವರಿಯಲ್ಲಿ ಹೇಳಿತ್ತು.

ಶಿಫಾರಸು

‘ಪ್ರಜಾಪ್ರಭುತ್ವದಲ್ಲಿ ಒಂದೇ ದೇಶಭಕ್ತಿಗೀತೆಯನ್ನು ಹಾಡುವುದು ದೇಶಪ್ರೇಮ ಆಗಬಾರದು. ದೇಶದ ಬಗೆಗೆ ಜನರು ಹೊಂದಿರುವ ಪ್ರೇಮವನ್ನು ವ್ಯಕ್ತಪಡಿಸಲು, ತಮಗೆ ಬೇಕಾದ ಹಾದಿಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಅವರಿಗೆ ಇರಬೇಕು. ಸರ್ಕಾರದ ನೀತಿಯನ್ನು ಟೀಕಿಸುವುದು ಮತ್ತು ರಚನಾತ್ಮಕ ಸಲಹೆ ನೀಡುವುದೂ ದೇಶಪ್ರೇಮವಾಗುತ್ತದೆ. ಈ ಸ್ವರೂಪದ ಅಭಿವ್ಯಕ್ತಿಗಳು ಕೆಲವರಿಗೆ ತೀರಾ ಒರಟು ಎನಿಸಬಹುದು. ಹಾಗೆಂದ ಮಾತ್ರಕ್ಕೆ ಇಂತಹ ಟೀಕೆ ಮಾಡುವವರನ್ನು ದೇಶದ್ರೋಹಿಗಳು ಎನ್ನಲಾಗದು. ಸರ್ಕಾರದ ನೀತಿಗಳ ವಿರುದ್ಧ, ದೇಶದ ಪರಿಸ್ಥಿತಿ ವಿರುದ್ಧ ದನಿ ಎತ್ತುವುದು ದೇಶದ್ರೋಹ ಆಗಲಾರದು. ‘ಈ ದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ’ ಎಂಬಂತಹ ಘೋಷಣೆಗಳಿಂದ ದೇಶಕ್ಕೆ ಧಕ್ಕೆಯಾಗುವುದಿಲ್ಲ. ಇದನ್ನು ದೇಶದ್ರೋಹ ಎಂದು ಪರಿಗಣಿಸಬೇಕಿಲ್ಲ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಉದ್ದೇಶದ ಕೃತ್ಯಗಳು, ಸರ್ಕಾರವನ್ನು ಕಿತ್ತೊಗೆಯುವ ಉದ್ದೇಶದ ಹಿಂಸಾ ಕ್ರಾಂತಿ ಮತ್ತು ಅಕ್ರಮ ಕ್ರಿಯೆಗಳ ವಿರುದ್ಧ ಮಾತ್ರ ಸೆಕ್ಷನ್ 124ಎ ಹೇರಬೇಕು’ ಎಂದು ಕಾನೂನು ಆಯೋಗವು ತನ್ನ ವರದಿಯಲ್ಲಿ ಹೇಳಿದೆ.

ಸಮಾಲೋಚನಾ ವರದಿ

ಐಪಿಸಿ ಸೆಕ್ಷನ್ 124ಎ ಅಗತ್ಯವೇ ಎಂಬ ಬಗ್ಗೆ ಸಮಾಲೋಚನಾ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರವು ಕಾನೂನು ಆಯೋಗಕ್ಕೆ 2017ರಲ್ಲಿ ಸೂಚಿಸಿತ್ತು. 2018ರ ಆಗಸ್ಟ್‌ನಲ್ಲಿ ಆಯೋಗವು ವರದಿ ಸಲ್ಲಿಸಿತ್ತು.

ವಸಾಹತುಶಾಹಿ ಕಾಲದ ಈ ಕಾನೂನನ್ನು ಈಗಲೂ ಜಾರಿಯಲ್ಲಿ ಇಟ್ಟುಕೊಳ್ಳವುದು ಸರಿಯಲ್ಲ ಎಂದು ಹಲವು ರಾಜ್ಯ ಸರ್ಕಾರಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದವು. ಆದರೆ, ದೇಶದ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಇಂತಹ ಕಾನೂನಿನ ಅವಶ್ಯಕತೆ ಇದೆ ಎಂದೂ ರಾಜ್ಯ ಸರ್ಕಾರಗಳು ಹೇಳಿದ್ದವು. ಭದ್ರತೆ ಮತ್ತು ತನಿಖಾ ಸಂಸ್ಥೆಗಳೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದವು.

ಆದರೆ, ಈ ಕಾನೂನನ್ನು ಉಳಿಸಿಕೊಳ್ಳುವ ಕುರಿತಂತೆ ಆಯೋಗವು ತನ್ನ ವರದಿಯಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿತ್ತು:

1. ಭಾರತದಲ್ಲಿ ತಾವು ಜಾರಿಗೆ ತಂದಿದ್ದ ಈ ಕಾನೂನನ್ನು, ಈಗ ಬ್ರಿಟಿಷರೇ ರದ್ದುಪಡಿಸಿದ್ದಾರೆ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ಈ ಕಾನೂನನ್ನು ಉಳಿಸಿಕೊಳ್ಳುವ ಅಗತ್ಯವೇನಿದೆ?

2. ಸಾಮಾಜಿಕ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳಲು ಬೇರೆ ಕಾನೂನುಗಳು ಇವೆ. ಧರ್ಮ–ಜಾತಿ–ಜನಾಂಗಗಳ ನಡುವೆ ದ್ವೇಷ ಹುಟ್ಟುಹಾಕುವುದನ್ನು ಐಪಿಸಿ ಸೆಕ್ಷನ್ 153ಎ ನಿರ್ಬಂಧಿಸುತ್ತದೆ. ಐಪಿಸಿ ಸೆಕ್ಷನ್ 124ಎ ಸಹ ಇದೇ ಕೆಲಸ ಮಾಡುತ್ತದೆ. ಹೀಗಿದ್ದಾಗ 124ಎ ಅವಶ್ಯಕತೆ ಏನಿದೆ?

3. ಈ ಸೆಕ್ಷನ್ ಅನ್ನು ಉಳಿಸಿಕೊಳ್ಳುವ ಅವಶ್ಯಕತೆ ಇದ್ದರೆ, ಈ ಸೆಕ್ಷನ್‌ನಲ್ಲಿ ಇರುವ ‘ದೇಶದ್ರೋಹ’ ಎಂಬ ಪದವನ್ನು ಬದಲಿಸಬೇಕು. ಬ್ರಿಟಿಷರ ಕಾಲದಲ್ಲಿ ನಿಗದಿ ಮಾಡಿದ್ದ ಶಿಕ್ಷೆಯ ಪ್ರಮಾಣವನ್ನೂ ಬದಲಿಸಬೇಕಲ್ಲವೇ?

4. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು 123ಎ ಮಧ್ಯೆ ಸ್ಪಷ್ಟ ಗೆರೆ ಇರಬೇಕಲ್ಲವೇ?

5. ಐಪಿಸಿ ಸೆಕ್ಷನ್‌ 124ಎ ದುರುಪಯೋಗ ಆಗದಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ ಅಲ್ಲವೇ?

ಇತ್ತೀಚಿನ ಕೆಲವು ದೇಶದ್ರೋಹ ಪ್ರಕರಣ

* ಮಹಾರಾಷ್ಟ್ರದಲ್ಲಿ ಎಲ್‌ಜಿಬಿಟಿಕ್ಯೂ ರ‍್ಯಾಲಿಯಲ್ಲಿ ರಾಷ್ಟ್ರವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್‌ನ (ಟಿಐಎಸ್‌ಎಸ್‌) ವಿದ್ಯಾರ್ಥಿನಿ ಊರ್ಮಿಳಾ ಚುಡವಾಲಾ ವಿರುದ್ಧ ಪ್ರಕರಣ

* ಕಳೆದ ತಿಂಗಳು ಜಾರ್ಖಂಡ್‌ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ ಸುಮಾರು 3 ಸಾವಿರ ಜನರ ವಿರುದ್ಧ ಮೊಕದ್ದಮೆ

* ಸಿಎಎ ಪ್ರತಿಭಟನೆ ವೇಳೆ ‘ಸ್ವತಂತ್ರ ಕಾಶ್ಮೀರ’ ಭಿತ್ತಪತ್ರ ಪ್ರದರ್ಶಿಸಿದ ಮಹಾರಾಷ್ಟ್ರದ ವ್ಯಕ್ತಿಯೊಬ್ಬರ ವಿರುದ್ಧ ದೇಶದ್ರೋಹ ಪ್ರಕರಣ

* ಸಿಎಎ ಹಾಗೂ ಅಸ್ಸಾಂನಲ್ಲಿ ಉಂಟಾದ ಹಿಂಸಾಚಾರ ಖಂಡಿಸಿ ಭಾಷಣ ಮಾಡಿದ್ದ ಜೆಎನ್‌ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ಅವರ ವಿರುದ್ಧ 5 ರಾಜ್ಯಗಳಲ್ಲಿ ದೇಶದ್ರೋಹ ಪ್ರಕರಣ

* ದೇಶವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾಗಿದ್ದ ಕನ್ಹಯ್ಯಾ ಕುಮಾರ್ ವಿರುದ್ಧ ಕಾಯ್ದೆ ಬಳಕೆ

* ಗುಜರಾತ್‌ನ ಪಾಟೀದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಹಾಗೂ ಅವರ ಐವರು ಬೆಂಬಲಿಗರ ಮೇಲೆ ದೇಶದ್ರೋಹ ಎಸಗಿದ ಆರೋಪದ ಮೇಲೆ ಚಾರ್ಜ್‌ಶೀಟ್

*ಕಾನ್ಪುರ ಮೂಲದ ಕಲಾವಿದ ಅಸೀಮ್ ತ್ರಿವೇದಿ ಅವರು ಆಕ್ಷೇಪಾರ್ಹ ವ್ಯಂಗ್ಯಚಿತ್ರ ರಚಿಸಿದ್ದಾರೆ ಎಂಬ ಆರೋಪದ ಮೇಲೆ ಮೊಕದ್ದಮೆ

*ನಕ್ಸಲರನ್ನು ಬೆಂಬಲಿಸಿದ ಆರೋಪದ ಮೇಲೆ ವೈದ್ಯ ಬಿನಾಯಕ್ ಸೇನ್ ವಿರುದ್ಧ ಛತ್ತೀಸ್‌ಗಡ ಸರ್ಕಾರದ ದಾವೆ. ಆದರೆ ಸರ್ಕಾರಕ್ಕೆ ಆರೋಪ ಸಾಬೀತಪಡಿಸಲು ಸಾಧ್ಯವಾಗಲಿಲ್ಲ

*ವಿಚಾರ ಸಂಕಿರಣವೊಂದರಲ್ಲಿ ಭಾರತ ವಿರೋಧಿ ಮಾತುಗಳನ್ನು ಆಡಿದ್ದ ಆರೋಪದ ಮೇಲೆ ಲೇಖಕಿ ಅರುಂಧತಿ ರಾಯ್, ಹುರಿಯತ್ ಮುಖಂಡ ಸಯ್ಯದ್ ಗಿಲಾನಿ ಹಾಗೂ ಇತರರ ಮೇಲೆ ದೆಹಲಿ ಪೊಲೀಸರಿಂದ ಪ್ರಕರಣ

*ಭಜರಂಗದಳ ಸದಸ್ಯರಿಗೆ ತ್ರಿಶೂಲ ವಿತರಣೆ ಮೇಲೆ ವಿಧಿಸಿದ್ದ ನಿರ್ಬಂಧ ಉಲ್ಲಂಘಿಸಿದ ಆರೋಪದ ಮೇಲೆ ವಿಎಚ್‌ಪಿ ನಾಯಕರಾಗಿದ್ದ ಪ್ರವೀಣ್ ತೊಗಾಡಿಯಾ ವಿರುದ್ಧ 2003ರಲ್ಲಿ ರಾಜಸ್ಥಾನ ಸರ್ಕಾರದಿಂದ ಪ್ರಕರಣ

*2012ರಲ್ಲಿ ತಮಿಳುನಾಡಿನಲ್ಲಿ ಕೂಡಂಕುಳಂ ಅಣುಸ್ಥಾವರ ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಸಾವಿರಾರು ಜನರ ವಿರುದ್ಧ ಸಾಮೂಹಿಕವಾಗಿ ದೇಶದ್ರೋಹ ಪ್ರಕರಣ

*ಅಮೃತಸರದ ಸ್ವರ್ಣಮಂದಿರ ಸಂಕೀರ್ಣದಲ್ಲಿ ಅಪರೇಷನ್ ಬ್ಲೂಸ್ಟಾರ್ 21ನೇ ವರ್ಷಾಚರಣೆ ವೇಳೆ ಖಲಿಸ್ತಾನ್ ಪರ ಘೋಷಣೆ ಕೂಗಿದ ಶಿರೋಮಣಿ ಅಕಾಲಿದಳ ಮುಖಂಡ ಸಿಮರನ್‌ಜಿತ್ ಸಿಂಗ್ ಮನ್ ವಿರುದ್ಧ ದೇಶದ್ರೋಹ ಪ್ರಕರಣ

*ದ್ವೇಷ ಭಾಷಣ ಆರೋಪದ ಮೇಳೆ ಅಕ್ಬರುದ್ದೀನ್ ಓವೈಸಿ ವಿರುದ್ಧ 2012ರಲ್ಲಿ ದೇಶದ್ರೋಹದ ಆರೋಪ ಹೊರಿಸಲಾಗಿತ್ತು 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು