ಗುರುವಾರ , ಆಗಸ್ಟ್ 22, 2019
27 °C

ಗೋವಾ: 149 ವರ್ಷ ಹಳೆಯ ಕಾನೂನಿಗೆ ತಿದ್ದುಪಡಿ

Published:
Updated:

ಪಣಜಿ: ಪೋರ್ಚುಗೀಸರು 1870ರಲ್ಲಿ ಜಾರಿಗೆ ತಂದಿದ್ದ ಸಮಾನ ನಾಗರಿಕ ಸಂಹಿತೆ (ಯುಸಿಸಿ)ಗೆ ತಿದ್ದುಪಡಿ ತರಲು ಬಿಜೆಪಿ ನೇತೃತ್ವದ ಗೋವಾ ಸರ್ಕಾರ ಮುಂದಾಗಿದೆ.

ಇದರಿಂದಾಗಿ ಗೋವಾ ನಿವಾಸಿಗಳಲ್ಲದವರಿಗೂ ರಾಜ್ಯದಲ್ಲಿ ತಮ್ಮ ವಿವಾಹ ನೋಂದಣಿ ಮಾಡಿಸಲು ಅವಕಾಶ ದೊರೆಯಲಿದೆ. ಮಂಗಳವಾರ ವಿಧಾನಸಭೆಯಲ್ಲಿ ಸರ್ಕಾರ ಈ ವಿಷಯ ಪ್ರಸ್ತಾಪಿಸಿದೆ.

‘ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಲ್ಲಿ ಇರುವುದರಿಂದ ಹಲವರು ಇಲ್ಲಿ ವಿವಾಹ ನೋಂದಣಿ ಮಾಡಿಸಿಕೊಳ್ಳಲು ಇಚ್ಛಿಸುತ್ತಾರೆ. ಆದ್ದರಿಂದ ಸಂಹಿತೆಗೆ ತಿದ್ದುಪಡಿ ತರಲಾಗುವುದು’ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ತಿಳಿಸಿದ್ದಾರೆ. ‘ವಿವಾಹ ನೋಂದಣಿ ಘೋಷಿಸಲು ಹಾಗೂ ದೃಢಪಡಿಸಲು 15 ದಿನಗಳ ಅಂತರದಲ್ಲಿ ಎರಡು ಬಾರಿ ಸಹಿ ಮಾಡಬೇಕಾಗುತ್ತದೆ. ಆದರೆ ಸಾಗರೋತ್ತರ ಭಾರತೀಯ ನಾಗರಿಕರು (ಒಸಿಐ) ಕಾರ್ಡ್ ಹೊಂದಿರುವ ಗೋವಾದ ಹಲವು ಜನರು ಅಲ್ಪಾವಧಿ ರಜೆ ಮೇಲೆ ಗೋವಾಗೆ ಭೇಟಿ ನೀಡುತ್ತಾರೆ. ಹಾಗಾಗಿ ಈ ವೇಳೆ, ಅವರಿಗೆ ತಮ್ಮ ವಿವಾಹ ನೋಂದಣಿ ಮಾಡಿಸಲು ಸಾಧ್ಯವಾಗುವುದಿಲ್ಲ’ ಎಂದು ಬಿಜೆಪಿ ಶಾಸಕ ಆ್ಯಂಟನಿಯೊ ಫರ್ನಾಂಡಿಸ್ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವರು, 15 ದಿನಗಳ ಕಡ್ಡಾಯ ಅಂತರವನ್ನು ರದ್ದುಪಡಿಸಲು ಸಂಹಿತೆಗೆ ತಿದ್ದುಪಡಿ ತರಲಾಗುವುದು ಎಂದರು.

 

Post Comments (+)