ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ: ಸಂಪೂರ್ಣ ವಿವರ

ಅತಂತ್ರ ಸ್ಥಿತಿ
Last Updated 24 ಅಕ್ಟೋಬರ್ 2019, 11:52 IST
ಅಕ್ಷರ ಗಾತ್ರ

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟ ನಿಚ್ಚಳ ಬಹುಮತದತ್ತ ದಾಪುಗಾಲಿಡುತ್ತಿವೆ. ಅದರೆ ಹರಿಯಾಣದಲ್ಲಿ ಯಾವುದೇ ಪಕ್ಷ ಅಧಿಕಾರ ಪಡೆಯಲು ಬೇಕಾಗುವಷ್ಟು ಬಹುಮತ ಪಡೆಯುವುದು ಅನುಮಾನ ಎನ್ನುವ ಪರಿಸ್ಥಿತಿ ರೂಪುಗೊಳ್ಳುತ್ತಿದೆ. ಒಂದು ವೇಳೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಜೆಜೆಪಿ ಕಿಂಗ್‌ ಮೇಕರ್ ಆಗಿ ಹೊರಹೊಮ್ಮಲಿದೆ. ಯಾವುದೇ ಪಕ್ಷಸರಳ ಬಹುಮತ ಪಡೆಯಲು46 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ.

ಕುಸ್ತಿಪಟು ಯೋಗೇಶ್ವರ್‌ ದತ್‌ಗೆ ಸೋಲು

ಬರೋಡಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಸ್ತಿಪಟು ಯೋಗೇಶ್ವರ್‌ ದತ್‌ ಅವರು ಕಾಂಗ್ರೆಸ್‌ನ ಶ್ರೀ ಕೃಷ್ಣನ್‌ ಹೂಡಾ ಎದುರು 4,840 ಮತಗಳಿಂದ ಸೋಲು ಕಂಡಿದ್ದಾರೆ.

ಸರ್ಕಾರ ರಚನೆಗೆ ಪೂರ್ಣ ಪ್ರಯತ್ನ: ಖರ್ಗೆ

ಹರಿಯಾಣದಲ್ಲಿಕಾಂಗ್ರೆಸ್‌ ಉತ್ತಮ ಸಂಖ್ಯಾ ಬಲವನ್ನು ಹೊಂದಿದೆ. ಇಲ್ಲಿ ಬಿಜೆಪಿಯೇತರ ಸರ್ಕಾರ ರಚನೆಗೆ ನಾವು ಸಂಪೂರ್ಣ ಪ್ರಯತ್ನ ನಡೆಸುವುದಾಗಿ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

58,312 ಮತಗಳ ಅಂತರದಿಂದ ಮಾಜಿ ಸಿಎಂ ಗೆಲುವು

ಹರಿಯಾಣದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಹಿರಿಯ ಮುಖಂಡ ಭೂಪಿಂದರ್ ಸಿಂಗ್‌ ಹೂಡಾ ಗಾಡಿ ಸಾಂಪಲೊ ಕಿಲೋಯ್‌ ಕ್ಷೇತ್ರದಿಂದ ಗೆಲುವು ಪಡೆದಿದ್ದಾರೆ. ಬಿಜೆಪಿಯ ಸತೀಶ್‌ ನಾಂದಲ್‌ ವಿರುದ್ಧ 58,312 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಸ್ವತಂತ್ರ ಅಭ್ಯರ್ಥಿಗಳ ಮೇಲೆ ಬಿಜೆಪಿ ಒತ್ತಡ: ಕಾಂಗ್ರೆಸ್‌ ಆರೋಪ

'ಸ್ವತಂತ್ರ ಅಭ್ಯರ್ಥಿಗಳಲ್ಲಿ ಬಹುತೇಕರು ಕಾಂಗ್ರೆಸ್‌ ಜತೆ ಕೈಗೂಡಿಸಲು ಮುಂದಾಗಿದ್ದಾರೆ. ಆದರೆ, ಬಿಜೆಪಿ ಅವರ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆ. ಸ್ವತಂತ್ರ ಅಭ್ಯರ್ಥಿಗಳಿಗೆ ಒತ್ತಡಗಳಿಲ್ಲದೆ ಬೆಂಬಲಿಸುವ ಪಕ್ಷವನ್ನು ಆಯ್ಕೆ ಮಾಡಲು ಅವಕಾಶವಿರಬೇಕು. ಮಾಧ್ಯಮಗಳ ಬಗ್ಗೆ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತಿದ್ದೇನೆ' ಎಂದು ಕಾಂಗ್ರೆಸ್‌ನ ಡಿ.ಎಸ್‌ ಹೂಡಾ

'ಖಟ್ಟರ್‌ ಸರ್ಕಾರವನ್ನು ಕಿತ್ತೊಗೆಯಲು ಜನರು ಬಯಸಿರುವುದು ಇಲ್ಲಿ ಸ್ಪಷ್ಟವಾಗಿದೆ. ಜೆಜೆಪಿಯ ದುಶ್ಯಂತ್‌ ಚೌಟಾಲಾ, ಸ್ವತಂತ್ರ ಅಭ್ಯರ್ಥಿಗಳು ಹಾಗೂ ಇತರೆ ಪಕ್ಷಗಳ ಅಭ್ಯರ್ಥಿಗಳು ಒಟ್ಟಾಗಿ ಹರಿಯಾಣದಲ್ಲಿ ಮೈತ್ರಿ ರಚಿಸಲು ಕೋರುತ್ತಿದ್ದೇನೆ' ಎಂದಿದ್ದಾರೆ.

ಸೋತ ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ

ಕೈಥಲ್‌ ಕ್ಷೇತ್ರದಕಾಂಗ್ರೆಸ್‌ ಅಭ್ಯರ್ಥಿ ರಣದೀಪ್‌ ಸುರ್ಜೇವಾಲಾ ಸೋಲು ಕಂಡಿದ್ದಾರೆ.

ಬಿಜೆಪಿಯ ಯೋಗೇಶ್ವರ ದತ್‌, ಬಬಿತಾ ಹಿನ್ನಡೆ

ಕುಸ್ತಿಪಟು, ಬರೋಡಾ ಬಿಜೆಪಿ ಅಭ್ಯರ್ಥಿ ಯೋಗೇಶ್ವರ್‌ ದತ್‌ ಹಾಗೂ ದಾದರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಬಿತಾ ಪೋಗಟ್‌ ಹಿನ್ನಡೆ ಪಡೆದಿದ್ದಾರೆ.

ಬಿಜೆಪಿ ಅಧ್ಯಕ್ಷ ರಾಜೀನಾಮೆ

ಹರಿಯಾಣ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಭಾಷ್ ಬರಾಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿದೆ. ಅವರು ಟೋಹಾನಾ ಕ್ಷೇತ್ರದಲ್ಲಿ ಹಿನ್ನಡೆ ಪಡೆದಿದ್ದಾರೆ. ಸಿಎಂ ಮನೋಹರ್ ಖಟ್ಟರ್‌ ಅವರನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ದೆಹಲಿಗೆ ಬರುವಂತೆ ಹೇಳಿದ್ದಾರೆ.

ಟಿಕ್‌ಟಾಕ್‌ ಸ್ಟಾರ್‌ ಸೊನಾಲಿಗೆ ಸೋಲು

ಅದಮ್‌ಪುರ್ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಲದೀಪ್‌ ಬಿಶ್ನೋಯ್‌ ಅವರು ಟಿಕ್‌ಟಾಕ್‌ ಸ್ಟಾರ್‌ ಬಿಜೆಪಿಯ ಸೊನಾಲಿ ಪೋಗಟ್‌ ಅವರ ವಿರುದ್ಧ ಜಯ ಗಳಿಸಿದ್ದಾರೆ.ಬಿಜೆಪಿಯ ಬಹುತೇಕ ಸಚಿವರು ಹಿನ್ನಡೆ ಪಡೆದಿದ್ದಾರೆ.

ಹರಿಯಾಣ: ಕಾಂಗ್ರೆಸ್‌ನ ಮೊದಲ ಗೆಲುವು

ಫೆರೋಜ್ಪುರ್‌ ಝಿರ್ಕಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಮನ್‌ ಖಾನ್‌ ಗೆಲುವು ಪಡೆದಿದ್ದಾರೆ. ಜೆಜೆಪಿ ಪಕ್ಷದೊಂದಿಗೆ ಮಾತುಕತೆ ನಡೆಸಿರುವುದಾಗಿ ಹರಿಯಾಣ ಕಾಂಗ್ರೆಸ್‌ ನಾಯಕಿ ಕುಮಾರಿ ಸೆಲ್ಜಾ ಹೇಳಿದ್ದಾರೆ.

ನಾನು ಈವರೆಗೆ ಯಾವ ಪಕ್ಷದ ಜೊತೆಗೂ ಮಾತನಾಡಿಲ್ಲ: ದುಶ್ಯಂತ್

ಹರಿಯಾಣದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂದು ನಿರ್ಧರಿಸುವ ಕಿಂಗ್‌ಮೇಕರ್‌ ಎಂದೇ ಬಿಂಬಿಸಲಾಗುತ್ತಿರುವ ಜೆಜೆಪಿ ಪಕ್ಷದ ನಾಯಕ ದುಶ್ಯಂತ್ ಚೌಟಾಲಾ ‘ನಾನು ಈವರೆಗೆ ಯಾವುದೇ ರಾಜಕೀಯ ಪಕ್ಷದ ಜೊತೆಗೆ ಚರ್ಚೆ ನಡೆಸಿಲ್ಲ’ ಎಂದು ಹೇಳಿದ್ದಾರೆ. ಬಿಜೆಪಿ ಅಥವಾ ಕಾಂಗ್ರೆಸ್ ನನ್ನೊಂದಿಗೆ ಮಾತನಾಡಿದ್ದಾರೆ ಎನ್ನುವುದು ಸುಳ್ಳು. ‌

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌ ಪಕ್ಷವು ಈಗಾಗಲೇ ದುಶ್ಯಂತ್‌ ಜೊತೆಗೆ ಮಾತನಾಡಿದೆ ಕೆಲ ಸುದ್ದಿ ವಾಹಿನಿಗಳು ವರದಿ ಮಾಡಿದ್ದವು. ಈ ವರದಿಗಳನ್ನು ದುಶ್ಯಂತ್ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ನಾನು ಈವರೆಗೆ ಯಾರೊಂದಿಗೂ ಮಾತನಾಡಿಲ್ಲ, ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಎಲ್ಲ ಕ್ಷೇತ್ರಗಳ ಫಲಿತಾಂಶ ಹೊರಬಂದ ನಂತರ ನಾನು ಒಂದು ನಿರ್ಧಾರ ತೆಗೆದುಕೊಳ್ಳುವೆ’ ಎಂದು ಚೌಟಾಲಾ ಹೇಳಿದ್ದಾರೆ. ನವದೆಹಲಿಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯನ್ನು ಚೌಟಾಲಾ ನಾಳೆ ದೆಹಲಿಯಲ್ಲಿ ಕರೆದಿದ್ದಾರೆ.

ಜೆಜೆಪಿ ಕಿಂಗ್‌ ಮೇಕರ್‌?

ಫಲಿತಾಂಶ ಅತಂತ್ರ ಪರಿಸ್ಥಿತಿಯತ್ತ ಮುಂದುವರಿಯುತ್ತಿದ್ದಂತೆ ಜನನಾಯಕ ಜನತಾ ಪಕ್ಷದ ಅಧ್ಯಕ್ಷ ದುಶ್ಯಂತ್‌ ಚೌಟಾಲಾ ಕಾಂಗ್ರೆಸ್‌ ಜತೆಗೆ ಮಾತುಕತೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ ಮತ್ತು ಜೆಜೆಪಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗುವ ಸಾಧ್ಯತೆ ಹೆಚ್ಚಿದೆ. ದುಶ್ಯಂತ್‌ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡಬಹುದು ಎನ್ನಲಾಗಿದೆ.

'ಹರಿಯಾಣದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್‌ 40 ಸ್ಥಾನ ಗಳಿಸುವುದು ಕಷ್ಟ. ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದರೂ ನಮ್ಮನ್ನು ಆಶ್ರಯಿಸಬೇಕಾದ್ದು ಅನಿವಾರ್ಯ. ಅಧಿಕಾರದ ಕೀಲಿ ನಮ್ಮ ಬಳಿಯೇ ಇರುತ್ತೆ' ಎಂದು ಜೆಜೆಪಿ ನಾಯಕ ದುಶ್ಯಂತ್ ಚೌಟಾಲಾ ಹೇಳಿದ್ದಾರೆ. ಹರಿಯಾಣದ ವಿವಿಧೆಡೆ ಜೆಜೆಪಿಯ 11ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

* 'ಅವರು ನಮ್ಮನ್ನು ಮಕ್ಕಳ ಪಕ್ಷ ಎಂದು ಕರೆದಿದ್ದರು. ನಮ್ಮ ಸಾಮರ್ಥ್ಯವನ್ನು ನಾವು ಸಾಬೀತುಪಡಿಸಿದ್ದೇವೆ' – ದುಶ್ಯಂತ್‌ ಚೌಟಾಲಾ

ಲೋಕಸಭಾ ಚುನಾವಣೆಯ ನೆರಳು

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ಮೇಲೆ ಲೋಕಸಭಾ ಚುನಾವಣೆ ಫಲಿತಾಂಶದ ಪ್ರಭಾವ ಗಾಢವಾಗಿ ಕಾಣಿಸುತ್ತಿದೆ.ಆದರೆ ಹರಿಯಾಣದಲ್ಲಿ ಪರಿಸ್ಥಿತಿ ತುಸು ಭಿನ್ನವಾಗಿದೆ. ಎಲ್ಲ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗುವವರೆಗೆ ಹೀಗೇ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲದಂಥ ಪರಿಸ್ಥಿತಿ ಹರಿಯಾಣದಲ್ಲಿ ನಿರ್ಮಾಣವಾಗಿದೆ.

2014ರ ಫಲಿತಾಂಶಹೀಗಿತ್ತು...

90 ವಿಧಾನಸಭಾ ಕ್ಷೇತ್ರಗಳ ಪೈಕಿ 47 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಸರಳ ಬಹುಮತದ ಮೂಲಕ ಸರ್ಕಾರ ರಚಿಸಿತು. ಕಾಂಗ್ರೆಸ್‌ 15 ಸ್ಥಾನಗಳಿಗೆ ಸೀಮಿತಗೊಂಡಿತ್ತು.

ಹರಿಯಾಣದಲ್ಲಿ ನಾವೇ ಸರ್ಕಾರ ಮಾಡ್ತೀವಿ: ಬಿಜೆಪಿ ವಿಶ್ವಾಸ

‘ಹರಿಯಾಣದಲ್ಲಿ ಬಿಜೆಪಿಯೇ ಸರ್ಕಾರ ರಚಿಸಲಿದೆ. ಕೆಲ ಉಮೇದುವಾರರ ವಿರುದ್ಧ ಆಡಳಿತ ವಿರೋಧಿ ಅಲೆ ಕೆಲಸ ಮಾಡಿರಬಹುದು. ಇದರಿಂದ ನಮ್ಮ ಸಂಖ್ಯೆ ಕಡಿಮೆ ಆಗಿರಬಹುದು’ ಎಂದು ಬಿಜೆಪಿ ಹರಿಯಾಣ ಘಟಕದ ಉಸ್ತುವಾರಿ ಅನಿಲ್ ಜೈನ್ ಫಲಿತಾಂಶವನ್ನು ವಿಶ್ಲೇಷಿಸಿದ್ದಾರೆ.

ಹರಿಯಾಣದ ಫಲಿತಾಂಶ ಒಂದು ಹಂತಕ್ಕೆ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರನ್ನು ಬಿಜೆಪಿ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿತು. ‘ಈಗಾಗಲೇ ದೆಹಲಿ ತಲುಪಿರುವ ಖಟ್ಟರ್, ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ’ ಎಂದು ಫರೀದಾಬಾದ್‌ ಸಂಸದ ಕೃಷ್ಣಪಾಲ್ ಹೇಳಿದ್ದಾರೆ.

‘ಹರಿಯಾಣದ ಜನರು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ. ಖಟ್ಟರ್ ನಾಯಕತ್ವದಲ್ಲಿ ನಾವೇ ಹರಿಯಾಣದಲ್ಲಿ ಸರ್ಕಾರ ರಚಿಸುತ್ತೇವೆ. ಆದರೆ ಕೆಲ ಸಮಯ ಕಾಯಬೇಕಾಗಬಹುದು’ ಎಂದು ಕೃಷ್ಣಪಾಲ್ ತಿಳಿಸಿದ್ದಾರೆ.

ಹರಿಯಾಣ: ಅಂಬಾಲದಲ್ಲಿ ಕಾಂಗ್ರೆಸ್‌ಗೆ ಬಂಡಾಯವೇ ಉರುಳು

ಅಂಬಾಲಾ ನಗರ ಮತ್ತು ಅಂಬಾಲಾ ಕಂಟೋನ್ಮೆಂಟ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪಕ್ಷದ ಒಳಜಗಳವೇ ಈ ಎರಡೂ ಸ್ಥಾನ ಕೈತಪ್ಪಲು ಮುಖ್ಯ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಂಬಾಲಾ ಕಂಟೋನ್ಮೆಂಟ್‌ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ವೇಣು ಸಿಂಗ್ಲಾ ಅವರಿಗೆ ಟಿಕೆಟ್ ಕೊಟ್ಟಿತ್ತು. ಇವರು ಹರಿಯಾಣದ ಮಹಿಳಾ ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ ಆಪ್ತರು.

ಮಾಜಿ ಕಾಂಗ್ರೆಸ್ ಸಚಿವ ಮತ್ತು ಐದು ಬಾರಿ ಶಾಸಕರೂ ಆಗಿದ್ದ ನಿರ್ಮಲ್ ಸಿಂಗ್‌ ಈ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಪಕ್ಷವು ಅವಕಾಶ ನೀಡದ ಹಿನ್ನೆಲೆಯಲ್ಲಿ ತಮ್ಮ ಮಗಳು ಚಿತ್ರ ಸರ್ವಾರಾ ಅವರನ್ನು ಅಂಬಾಲಾ ಕಂಟೋನ್ಮೆಂಟ್‌ನಿಂದ ಕಣಕ್ಕಿಳಿಸಿ, ತಾವು ಅಂಬಾಲಾ ನಗರದಿಂದ ಸ್ವತಂತ್ರವಾಗಿ ಸ್ಪರ್ಧಿಸಿದರು.

ಈ ಎರಡೂ ಕ್ಷೇತ್ರಗಳಲ್ಲಿ ಇವರಿಬ್ಬರೂ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಒಳಜಗಳದಿಂದ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್ ಕಳೆದುಕೊಳ್ಳುವಂತಾಯಿತು.

ಹರಿಯಾಣದಲ್ಲಿ ಕ್ರೀಡಾಳುಗಳ ದರ್ಬಾರ್‌

ಭಾರತದ ಹಾಕಿ ತಂಡದ ಮಾಜಿ ನಾಯಕ, ಪೆಹವಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂದೀಪ್‌ ಸಿಂಗ್‌ ಮುನ್ನಡೆ ಸಾಧಿಸಿದ್ದಾರೆ. 1606 ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಬರೋಡಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಸ್ತಿ ಪಟು ಯೋಗೇಶ್ವರ್‌ ದತ್‌ ಮುನ್ನಡೆ ಸಾಧಿಸಿದ್ದಾರೆ.

ಕುಸ್ತಿಪಟು ಬಬಿತಾ ಪೋಗಟ್‌ ಮುನ್ನಡೆ

ಹರಿಯಾಣದ ಚರಕೀ ದಾದರೀ ಕ್ಷೇತ್ರದ ಬಿಜೆಪಿ ಅಭ್ಯರ್ಥಿಅಂತರರಾಷ್ಟ್ರೀಯ ಕುಸ್ತಿಪಟು ಬಬಿತಾ ಪೋಗಟ್‌ ಮುನ್ನಡೆ ಸಾಧಿಸಿದ್ದಾರೆ.

ಟಿಕ್‌ಟಾಕ್ ಸ್ಟಾರ್ ಸೊನಾಲಿ ಪೊಗಟ್ ಹಿನ್ನಡೆ

ಹರಿಯಾಣದ ಅದಂಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಟಿವಿ ನಟಿ, ಟಿಕ್‌ಟಾಕ್ ಸ್ಟಾರ್ ಸೊನಾಲಿ ಪೊಗಟ್ ಹಿನ್ನಡೆ ಅನುಭವಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಭಜನ್‌ಲಾಲ್ ಅವರ ಮಗ ಕುಲ್‌ದೀಪ್ ಬಿಶ್ನೋಯ್ ಎದುರು ಸೊನಾಲಿ ಅವರನ್ನು ಬಿಜೆಪಿ ನಿಲ್ಲಿಸಿತ್ತು.

* ಕಾಂಗ್ರೆಸ್‌ ಬಹುಮತ ಪಡೆಯಲಿದೆ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ವಿಶ್ವಾಸ ವ್ಯಕ್ತಪಡಿಸಿದರು.

* ಕೈಥಲ್‌ ಕ್ಷೇತ್ರದಕಾಂಗ್ರೆಸ್‌ ಅಭ್ಯರ್ಥಿ ರಣದೀಪ್‌ ಸುರ್ಜೇವಾಲಾ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಹರಿಯಾಣ ವಿಧಾನಸಭೆ ಚುನಾವಣೆ ಬಗ್ಗೆ ತಿಳಿಯಬೇಕಾದ 5 ಪ್ರಮುಖ ಅಂಶಗಳು ಇಲ್ಲಿವೆ;

1) ಹರಿಯಾಣದ ಒಟ್ಟು ಮತದಾರರ ಸಂಖ್ಯೆ 1.82 ಕೋಟಿ. ಈ ಪೈಕಿ 97 ಲಕ್ಷ ಪುರುಷರು ಮತ್ತು 85 ಲಕ್ಷ ಮಹಿಳೆಯರು.

2) ಹರಿಯಾಣದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 17 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲು.

3) ಹರಿಯಾಣದ ಭೌಗೋಳಿಕ ವ್ಯಾಪ್ತಿ 44,212 ಚದರ ಕಿ.ಮೀ. ಈ ಬಾರಿ ರಾಜ್ಯದಲ್ಲಿ ಒಟ್ಟು 19,578 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

4) ಹರಿಯಾಣದಲ್ಲಿ ಈ ಬಾರಿ ಶೇ 68.47 ಪ್ರಮಾಣದ ಮತದಾನ ದಾಖಲಾಯಿತು. ಕಳೆದ ಬಾರಿಯ ಚುನಾವಣೆಯಲ್ಲಿ ಶೇ 76.54ರ ಪ್ರಮಾಣದಲ್ಲಿ ಮತದಾನವಾಗಿತ್ತು.

5) ಹರಿಯಾಣದಲ್ಲಿ ರಾಹುಲ್ ಗಾಂಧಿ ನಡೆಸಿದ ಪ್ರಚಾರ ಸಭೆಗಳಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಶಾಸಕಾಂಗ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ವೇದಿಕೆ ಹಂಚಿಕೊಳ್ಳಲಿಲ್ಲ. ಇದು ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT