ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಎನ್‌ಆರ್‌ಸಿ ಎಂದು ಭಾವಿಸಿ ಆರೋಗ್ಯ ಸಮೀಕ್ಷೆ ಬಹಿಷ್ಕಾರ

Last Updated 2 ಜನವರಿ 2020, 15:29 IST
ಅಕ್ಷರ ಗಾತ್ರ

ಚಾಮರಾಜನಗರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರತಿ ವರ್ಷ ನಡೆಸುವ ಸಮುದಾಯ ಆಧರಿತ ಮೌಲ್ಯಮಾಪನ (ಸಿಬಿಎಸಿ) ಸಮೀಕ್ಷೆಯನ್ನು ರಾಷ್ಟ್ರೀಯ ಪೌರತ್ವ ನೋಂದಣಿ ಸಮೀಕ್ಷೆ (ಎನ್‌ಆರ್‌ಸಿ) ಎಂದುಕೊಂಡು ಬಹಿಷ್ಕರಿಸಿರುವ ಘಟನೆ ನಗರದ ಗಾಳಿಪುರ ಬಡಾವಣೆಯಲ್ಲಿ ಗುರುವಾರ ನಡೆದಿದೆ.

ಗಾಳಿಪುರ ಬಡಾವಣೆಯಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ‘ಸಿಬಿಎಸಿ’ಯು ಸಿಎಎ, ಎನ್‌ಆರ್‌ಸಿ ಅಂದುಕೊಂಡ ಜನರು ಸಮೀಕ್ಷೆ ನಡೆಸಲು ಬಂದಿದ್ದ ಆಶಾ ಕಾರ್ಯಕರ್ತೆಯರ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಮಾಹಿತಿಗಳನ್ನು ತುಂಬಬೇಕಾಗಿದ್ದ ಅರ್ಜಿ ನಮೂನೆಗಳನ್ನು ಹರಿದು ಹಾಕಿ ಆಕ್ರೋಶವನ್ನೂ ವ್ಯಕ್ತಪಡಿಸಿದರು.

ಆರೋಗ್ಯ ಇಲಾಖೆಯು ನಗರ ಪ್ರದೇಶದಲ್ಲಿ ಪ್ರತಿ ವರ್ಷ ಸಮುಧಾಯ ಆಧರಿತ ಮೌಲ್ಯಮಾಪನ ಸಮೀಕ್ಷೆ ನಡೆಸುತ್ತದೆ. ಇದರಲ್ಲಿ ಆಧಾರ್‌ ಸಂಖ್ಯೆ, ಮನೆಯ ವಿಳಾಸ, ಕುಟುಂಬದವರ ವಿವರ, ಆರೋಗ್ಯ ಸಮಸ್ಯೆ ಸೇರಿದಂತೆ ಎಲ್ಲ ವಿವರಗಳನ್ನು ಕಲೆ ಹಾಕಲಾಗುತ್ತದೆ.

ಈ ಸಮೀಕ್ಷೆಗಾಗಿ 15 ಮಂದಿ ಆಶಾಕಾರ್ಯಕರ್ತೆಯರು ಗಾಳಿಪುರ ಬಡಾವಣೆಗೆ ತೆರಳಿದ್ದರು. ಮಾಹಿತಿ ಕೇಳಲು ಆರಂಭಿಸಿದ ತಕ್ಷಣ ಅಲ್ಲಿನ ಕೆಲವು ಯುವಕರು ಕಾರ್ಯಕರ್ತೆಯರನ್ನು ಸುತ್ತುವರಿದು ಪ್ರಶ್ನಿಸಲು ಆರಂಭಿಸಿದರು. ಮಾಹಿತಿ ಕೊಡುವುದಿಲ್ಲ ಎಂದು ಅರ್ಜಿ ನಮೂನೆಗಳನ್ನು ಹರಿದು ಹಾಕಿದರು. ಜನ ಸೇರಲು ಆರಂಭಿಸಿದಾಗ ಅವರು ಇನ್ನಷ್ಟು ಭಯಗೊಂಡರು.

ಸ್ಥಳಕ್ಕೆ ತಹಶೀಲ್ದಾರ್‌ ಮಹೇಶ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎನ್‌.ಸಿ.ರವಿ, ಮುಸ್ಲಿಂ ಮುಖಂಡರು, ಪಕ್ಷಗಳ ನಾಯಕರು ಭೇಟಿ ನೀಡಿ ಸಮೀಕ್ಷೆಯ ಬಗ್ಗೆ ವಿವರಿಸಿ ಗೊಂದಲ ನಿವಾರಿಸಿದರು. ಮುಖಂಡರು ನಂತರ ಪ್ರತ್ಯೇಕವಾಗಿ ಆರೋಗ್ಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಸಮೀಕ್ಷೆಯ ಬಗ್ಗೆ ಸಂಪೂರ್ಣ ವಿವರ ಪಡೆದು ಕೊಂಡರು. ಸಮುದಾಯದವರಲ್ಲಿ ಈ ಬಗ್ಗೆ ತಿಳಿವಳಿಕೆ ಮೂಡಿಸಿ ಸಮೀಕ್ಷೆಗೆ ಸಹಕರಿಸುವ ಭರವಸೆಯನ್ನು ಅವರು ನೀಡಿದರು.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಎಸ್‌ಡಿಪಿಐ ಮುಖಂಡ ಹಾಗೂ ನಗರಸಭಾ ಸದಸ್ಯ ಅಬ್ರಾರ್‌ ಅಹಮದ್‌ ಅವರು, ‘ಸಿಬಿಎಸಿ’ ಎಂದು ಹೇಳಿದ್ದರಿಂದ ಜನರು ಸ್ವಲ್ಪ ಗೊಂದಲಕ್ಕೆ ಒಳಗಾಗಿದ್ದರು. ಇದಕ್ಕೂ ಸಿಎಎ, ಎನ್‌ಆರ್‌ಸಿಗೂ ಸಂಬಂಧ ಇಲ್ಲ. ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಅವರೂ ಸ್ಪಷ್ಟನೆ ನೀಡಿದ್ದಾರೆ. ಈ ಬ‌ಗ್ಗೆ ಮತ್ತೊಮ್ಮೆ ಚರ್ಚಿಸುತ್ತೇವೆ. ಅಧಿಕಾರಿಗಳು ಸಮೀಕ್ಷೆ ಬಗ್ಗೆ ನಮಗೆ ಮೊದಲೇ ತಿಳಿಸಿದ್ದರೆ, ನಾವು ಜಾಗೃತಿ ಮೂಡಿಸುತ್ತಿದ್ದೆವು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT