ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ಮತ್ತೆ ಮಳೆ, ಸಂಚಾರ ಅಸ್ತವ್ಯಸ್ತ

Last Updated 8 ಜುಲೈ 2019, 20:00 IST
ಅಕ್ಷರ ಗಾತ್ರ

ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಸೋಮವಾರ ಮತ್ತೆ ಭಾರಿ ಮಳೆಯಾಗಿದೆ. ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ. ಹಲವು ಭಾಗಗಳಲ್ಲಿ ಜನರು ನೀರಿನಲ್ಲಿಯೇ ಸಂಚರಿಸಿದರು. ಗೊವಂಡಿ ಹೊರವಲಯದಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿದು ಎಂಟು ಮಂದಿ ಗಾಯಗೊಂಡಿದ್ದಾರೆ. ಮುಂಬೈ ಹೊರವಲಯದಲ್ಲಿ 80ರಿಂದ 120 ಮಿ.ಮೀ. ಮಳೆ ಸುರಿದಿದೆ.

ಸೋಮವಾರ ಬೆಳಿಗ್ಗೆಯೇ ಮಳೆ ಬಂದ ಕಾರಣ ವಿದ್ಯಾರ್ಥಿಗಳು ಮತ್ತು ಕಚೇರಿಗೆ ಹೋಗುವವರು ಕಷ್ಟ ಪಡಬೇಕಾಯಿತು. ಮುಂಬೈ ಮತ್ತು ಸಮೀಪದ ಪಾಲ್ಘಾರ್‌, ಠಾಣೆ ಮತ್ತು ರಾಯಗಡ ಜಿಲ್ಲೆಗಳಲ್ಲಿ ಮಂಗಳವಾರವೂ ಉತ್ತಮ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಜನರು ಸಾಧ್ಯವಾದಷ್ಟು ಮನೆಯಲ್ಲಿಯೇ ಇರುವಂತೆ ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಕೊಡಲಾಗಿದೆ.

ಭಾರಿ ಮಳೆ ಮತ್ತು ದಟ್ಟ ಮೋಡದಿಂದಾಗಿ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ಸೋಮವಾರ ಬೆಳಿಗ್ಗೆ ಸುಮಾರು 20 ನಿಮಿಷ ಸ್ಥಗಿತಗೊಂಡಿತ್ತು. ಬೆಳಿಗ್ಗೆ 9.12ಕ್ಕೆ ಸ್ಥಗಿತವಾದ ಸೇವೆ 9.31ರ ಹೊತ್ತಿಗೆ ಪುನರಾರಂಭವಾಯಿತು. ಪರಿಣಾಮವಾಗಿ ಹಲವು ವಿಮಾನಗಳು ವಿಳಂಬವಾಗಿ ಸಂಚರಿಸಿದವು. ಮೂರು ವಿಮಾನಗಳನ್ನು ಬೇರೆ ನಿಲ್ದಾಣಗಳಿಗೆ ತಿರುಗಿಸಲಾಯಿತು. 8 ವಿಮಾನಗಳ ಸಂಚಾರ ರದ್ದು ಮಾಡಲಾಯಿತು.

ಭಾರಿ ನೀರು ನಿಂತ ಕಾರಣ ಅಂಧೇರಿ ಸಬ್‌ವೇಯನ್ನು ಸೋಮವಾರ ಮುಚ್ಚಲಾಗಿತ್ತು. ಜೋಗೇಶ್ವರಿ–ವಿಕ್ರೋಲಿ ಲಿಂಕ್‌ ರಸ್ತೆ ಮತ್ತು ಸಯನ್‌–ಪನ್‌ವೇಲ್‌ ಹೆದ್ದಾರಿಗಳಲ್ಲಿಯೂ ನೀರು ನಿಂತು ವಾಹನ ಸಂಚಾರ ಸ್ಥಗಿತವಾಗಿತ್ತು. ಇತರ ಹಲವು ರಸ್ತೆಗಳಲ್ಲಿಯೂ ಸಂಚಾರ ಸ್ಥಗಿತವಾಗಿತ್ತು.

ಕಳೆದ ಎರಡು ವಾರಗಳಿಂದ ಮಹಾರಾಷ್ಟ್ರದ ವಿವಿಧೆಡೆ ಮಳೆಯಾಗುತ್ತಿದೆ. ಮಳೆಯಿಂದಾದ ಅನಾಹುತದಿಂದಾಗಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT