ಭಾನುವಾರ, ಮೇ 9, 2021
25 °C

ರಸ್ತೆ ಸಂಚಾರ ಶುರು; ಪರಿಹಾರ ಚುರುಕು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರವಾಹಪೀಡಿತ ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ಗುಜರಾತ್‌ನಲ್ಲಿ ಪರಿಹಾರ ಕಾರ್ಯಾಚರಣೆ ಚುರುಕು ಪಡೆದಿದೆ. ಕೊಲ್ಹಾಪುರ–ಬೆಳಗಾವಿ ಮಾರ್ಗದ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ರಸ್ತೆ ಸಂಚಾರ ಭಾಗಶಃ ಶುರುವಾಗಿದೆ.  ರಾಜ್ಯಗಳಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಸಾವಿನ ಸಂಖ್ಯೆ 192ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಉತ್ತರಾಖಂಡ ಹಾಗೂ ಜಮ್ಮುವಿನಲ್ಲಿ ಸೋಮವಾರ ಮಳೆಯಾಗಿದ್ದು, ಭೂಕುಸಿತದಿಂದ 9 ಜನರು ಮೃತಪಟ್ಟಿದ್ದಾರೆ. 

ಬೆಳಗಾವಿ–ಕೊಲ್ಹಾಪುರ ರಸ್ತೆ ಸಂಚಾರ ಪುನರಾರಂಭ: ಕೊಲ್ಲಾಪುರದಲ್ಲಿ ಭಾರಿ ಮಳೆಯಿಂದ ಕಳೆದ ಆರು ದಿನಗಳಿಂದ ಸ್ಥಗಿತಗೊಂಡಿದ್ದ ಮುಂಬೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಸಂಚಾರ ಸೋಮವಾರದಿಂದ ಭಾಗಶಃ ಆರಂಭವಾಗಿದೆ. 

ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ಹೆದ್ದಾರಿಯಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸುವ ಸಾವಿರಾರು ಲಾರಿಗಳು ಕಳೆದ ಒಂದು ವಾರದಿಂದ ಪ್ರವಾಹದ ಪರಿಣಾಮ ಎದುರಿಸುತ್ತಿವೆ. 

(ಫೋಟೊ: ಕೇರಳದ ಕಣ್ಣೂರು ಜಿಲ್ಲೆಯ ಶ್ರೀಕಂಠಪುರದಲ್ಲಿ ಪ್ರವಾಹ ಇಳಿಮುಖವಾಗಿದ್ದು, ಪಳಯಂಞಾಡಿ ಅಮ್ಮಕೋಟ್ಟಂ ದೇವಿ ದೇವಾಲಯವನ್ನು ಮುಸ್ಲಿಂ ಲೀಗ್ ಸ್ವಯಂಸೇವಕ ಸಂಘ ವೈಟ್ ಗಾರ್ಡ್ ಟೀಂ ಸ್ವಚ್ಛಗೊಳಿಸಿತು. ದೇವಾಲಯದಲ್ಲಿ ದೀಪ ಬೆಳಗಿ ಪೂಜೆ ಆರಂಭಿಸಬೇಕಾದರೆ ಅಲ್ಲಿನ ಮಾಲಿನ್ಯ ಸ್ವಚ್ಛ ಮಾಡಬೇಕಾಗಿತ್ತು ಎಂದು ತಂಡದ ಸದಸ್ಯರು ಹೇಳಿದ್ದಾರೆ)

ಕೊಲ್ಲಾಪುರ ಹಾಗೂ ಬೆಳಗಾವಿ ನಡುವಿನ ರಸ್ತೆಯ ಒಂದು ಬದಿಯ ಮಾರ್ಗವನ್ನು ಸೋಮವಾರ ಬೆಳಿಗ್ಗೆಯಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಕೊಲ್ಲಾಪುರ ಎಸ್‌ಪಿ ಅಭಿನವ್ ದೇಶಮುಖ್ ತಿಳಿಸಿದ್ದಾರೆ. ಅಗತ್ಯ ವಸ್ತುಗಳಾದ ಔಷಧ, ತೈಲ, ಹಾಲು, ಆಹಾರ ಧಾನ್ಯಗಳನ್ನು ಹೊತ್ತ ಭಾರಿ ವಾಹನಗಳಿಗೆ ಆರಂಭದಲ್ಲಿ ಅವಕಾಶ ನೀಡಲಾಗಿತ್ತು. ಹೆದ್ದಾರಿಯ ಕೆಲ ಭಾಗ ಇನ್ನೂ ನೀರಿನಿಂದ ಆವೃತವಾಗಿದೆ. ಪಂಚಗಂಗಾ ನದಿ ಮೇಲೆ ಸಾಗುವ ಹೆದ್ದಾರಿ ಸೇತುವೆ ಬಿರುಕುಬಿಟ್ಟಿದೆ ಎಂಬ ಸುದ್ದಿಯನ್ನು ಎಸ್‌ಪಿ ಅಲ್ಲಗಳೆದಿದ್ದಾರೆ.  

125 ಜನರನ್ನು ರಕ್ಷಿಸಿದ ಐಎಎಫ್: ಗುಜರಾತ್‌ನ ಕಛ್ ಜಿಲ್ಲೆಯಲ್ಲಿ ರಸ್ತೆ ಕೊಚ್ಚಿ ಹೋಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ 125 ಜನರನ್ನು ಭಾರತೀಯ ವಾಯುಪಡೆ (ಐಎಎಫ್‌) ರಕ್ಷಿಸಿದೆ.

ಕಛ್‌ ಜಿಲ್ಲೆಯ ಭುಜ್ ಸಮೀಪದ ಹಾಜಿಪುರ ದರ್ಗಾ ಬಳಿ ಹಲವು ಜನರು ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಸುದ್ದಿ ಭಾನುವಾರ ಸಂಜೆ ಐಎಎಫ್‌ಗೆ ಸಿಕ್ಕಿತ್ತು. ಜಾಮ್‌ನಗರದಿಂದ ಮಿಗ್ 17 ಹೆಲಿಕಾಪ್ಟರನ್ನು ಕಳುಹಿಸಿ ಮೂರು ತಂಡಗಳಲ್ಲಿ ಜನರನ್ನು ರಕ್ಷಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ–ಪಾಕಿಸ್ತಾನ ಗಡಿಯಲ್ಲಿರುವ ಈ ಜಾಗದಲ್ಲಿ 300 ಮಂದಿ ತೊಂದರೆಗೆ ಸಿಲುಕಿದ್ದರು. ಎನ್‌ಡಿಆರ್‌ಎಫ್‌ನವರು 175 ಜನರನ್ನು ರಕ್ಷಿಸಿದರು. 

ಉತ್ತರಾಖಂಡದಲ್ಲಿ ಭೂಕುಸಿತ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಮೂರು ಗ್ರಾಮಗಳಲ್ಲಿ ಭಾರಿ ಮಳೆ ಹಾಗೂ ಭೂಕುಸಿತದಿಂದ ಮಣ್ಣಿನಡಿ ಸಿಲುಕಿ 6 ಮಂದಿ ಮೃತಪಟ್ಟಿದ್ದಾರೆ. ಚುಫ್ಲಾಗಡ ನದಿಯ ಪ್ರವಾಹವು ಎರಡು ಕಟ್ಟಡಗಳನ್ನು ಕೊಚ್ಚಿಕೊಂಡು ಹೋಗಿದೆ. ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ.


ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಪ್ರವಾಹದ ನೀರು ನುಗ್ಗುತ್ತಿರುವ ದೃಶ್ಯ–ಪಿಟಿಐ ಚಿತ್ರ

ಸಹಜ ಸ್ಥಿತಿಗೆ ಮರಳುತ್ತಿರುವ ಕೇರಳ: ಸೋಮವಾರ ಕೇರಳದ ಯಾವ ಭಾಗದಲ್ಲೂ ಭಾರಿ ಮಳೆಯಾದ ವರದಿಯಾಗಿಲ್ಲ. ಹೀಗಾಗಿ ರಾಜ್ಯ ಸಹಜ ಸ್ಥಿತಿಗೆ ಮರಳುತ್ತಿದೆ. ಗುಡ್ಡಕುಸಿತ ಆಗಿದ್ದ ಕವಳಪ್ಪಾರದಲ್ಲಿ ಇನ್ನೂ 50 ಜನ ಸಿಲುಕಿರಬಹುದು ಎಂದು ಸ್ವಯಂಸೇವಕರು ಹೇಳಿದ್ದಾರೆ. ಮತ್ತಷ್ಟು ಮಳೆಯಾಗುವ ಸೂಚನೆಯಿದ್ದು, ರಾಜ್ಯದಲ್ಲಿ ನಿಗಾ ವಹಿಸಲಾಗಿದೆ.

ಸಾವಿನಲ್ಲೂ ಕಂದಮ್ಮನನ್ನು ಬಿಗಿಹಿಡಿದಿದ್ದ ತಾಯಿ: ಕೇರಳದ ಕೊಟ್ಟಕ್ಕುನ್ನ್ ಸಮೀಪ ಗುಡ್ಡ ಕುಸಿದು, ಅವಶೇಷಗಳಡಿ ಇದ್ದ ಮೃತದೇಹ
ಗಳನ್ನು ಹೊರತೆಗೆದ ರಕ್ಷಣಾ ಸಿಬ್ಬಂದಿ ಕಣ್ಣುಗಳಲ್ಲಿ ನೀರಾಡಿದ ಸಮಯವದು. ತಾಯಿಯೊಬ್ಬಳು ತನ್ನ ಕರುಳ ಕುಡಿಯ ಕೈಯನ್ನು ಬಿಗಿಯಾಗಿ ಹಿಡಿದು ಸಾವಿನೊಡನೆ ಹೋರಾಡಿ, ಪ್ರಾಣತೆತ್ತ ದೃಶ್ಯ ಎಲ್ಲರ ಮನಕಲಕುವಂತಿತ್ತು.

ಎರಡು ದಿನಗಳ ಹಿಂದೆ ಗುಡ್ಡಕುಸಿತದಿಂದ ಶರತ್ ಎಂಬುವರ ಮನೆ ಮಣ್ಣಿನಡಿ ಹೂತುಹೋಗಿತ್ತು. ಶರತ್ ಅವರು ಅದೃಷ್ಟವಶಾತ್ ಪಾರಾಗಿದ್ದರು. ಆದರೆ ಅವರ ತಾಯಿ ಸರೋಜಿನಿ, ಪತ್ನಿ ಗೀತು (21) ಹಾಗೂ ಒಂದು ವರ್ಷದ ಮಗು ಧ್ರುವ್ ಮಾತ್ರ ಮಣ್ಣಿನಡಿ ಮಣ್ಣಾದರು. ಮೃತದೇಹಗಳನ್ನು ಹೊರತೆಗೆದಾಗ, ಗೀತು ಅವರು ತನ್ನ ಮಗುವಿನ ಕೈಯನ್ನು ಬಿಡಿಸಿಕೊಳ್ಳಲಾರದಷ್ಟು ಬಿಗಿಯಾಗಿ ಹಿಡಿದುಕೊಂಡಿದ್ದರು. ಸ್ಥಳೀಯರ ನೆರವಿನಿಂದಿಗೆ ಇವರ ಮೃತದೇಹಗಳನ್ನು ಹೊರತೆಗೆಯಲಾಯಿತು.

ಡಿಎಂಕೆಯಿಂದ ₹ 10 ಕೋಟಿ ಪರಿಹಾರ: ಮಳೆ ಅನಾಹುತಕ್ಕೆ ತುತ್ತಾಗಿರುವ ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಪರಿಹಾರ ಕೆಲಸಗಳನ್ನು ನಡೆಸಲು ಅನುಕೂಲವಾಗುವಂತೆ ಡಿಎಂಕೆ ಪಕ್ಷ ತನ್ನ ಸಂಸದರು, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹10 ಕೋಟಿ ಪರಿಹಾರ ನೀಡಿದೆ.

ಬಟ್ಟೆಯ ಬಂಡಲ್‌ಗಳನ್ನೇ ದಾನಮಾಡಿದ ನೌಷಾದ್

ಕೊಚ್ಚಿಯ ಬಟ್ಟೆ ವ್ಯಾಪಾರಿ ನೌಷಾದ್ ಅವರು ಪ್ರವಾಹ ಸಂತ್ರಸ್ತರಿಗೆ ಹೊಸಬಟ್ಟೆಯ 10 ಬಂಡಲ್‌ಗಳನ್ನು ದಾನ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈದ್ ಹಬ್ಬಕ್ಕಾಗಿ ಹೊಸ ಬಟ್ಟೆಗಳನ್ನು ಖರೀದಿಸಿ ತಂದಿದ್ದ ಅವರು, ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದರು. ಆದರೆ ಪರಿಹಾರ ಸಾಮಗ್ರಿ ಸಂಗ್ರಹಿಸುವ ತಂಡ ಬಂದು ಕೇಳಿದಾಗ, ಬೇರೆ ಯೋಚನೆಯನ್ನೇ ಮಾಡದೇ 10 ಚೀಲಗಳಲ್ಲಿ ಹೊಸಬಟ್ಟೆಗಳನ್ನು ತುಂಬಿಸಿ ಕಳುಹಿಸಿದ್ದಾರೆ. 

ತಮ್ಮ ಅಂಗಡಿ ಗೋದಾಮಿನಲ್ಲಿ ನೌಷಾದ್ ಅವರು ಚೀಲಗಳಿಗೆ ಬಟ್ಟೆ ತುಂಬಿಸುತ್ತಿರುವ ವಿಡಿಯೊ ಸಾಕಷ್ಟು ಸದ್ದು ಮಾಡಿದೆ. ಎಲ್ಲವನ್ನೂ ನೀಡಿದರೆ ಹಬ್ಬಕ್ಕೆ ತೊಂದರೆಯಾಗುತ್ತದೆ ಎಂದು ಸ್ವಯಂಸೇವಕರು ಎಚ್ಚರಿಸಿದರೂ, ‘ನಾವು ಈ ಜಗತ್ತಿನಿಂದ ಹೊರಡುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಇದು ಹಬ್ಬ ಮಾಡುವ ವಿಧಾನವೇ? ನನ್ನ ಹಬ್ಬ ಹೀಗಿದೆ ನೋಡಿ. ಸಂತ್ರಸ್ತ ಬಡವರಿಗೆ ಇವುಗಳನ್ನು ತಲುಪಿಸಿ. ಲಾಭದ ಬಗ್ಗೆ ನಾನು ಯೋಚಿಸುವುದಿಲ್ಲ.’ ಎಂದು ನೌಷಾದ್ ಉತ್ತರಿಸಿದರು. ನೌಷಾದ್ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಶ್ವಾನಗಳನ್ನು ಬಿಟ್ಟು ಬಾರದ ದಂಪತಿ

ನೆರೆಹೊರೆಯವರು ಪರಿಹಾರ ಕೇಂದ್ರಗಳಿಗೆ ತೆರಳಿದ್ದರೂ, ನೀರು ತುಂಬಿರುವ ಮನೆ ಬಿಟ್ಟು ಹೋಗಲು ಒಪ್ಪದ ದಂಪತಿ ತಾವು ಸಾಕಿರುವ 40ಕ್ಕೂ ಹೆಚ್ಚು ಶ್ವಾನಗಳ ರಕ್ಷಣೆಗೆ ನಿಂತಿದ್ದಾರೆ. ತ್ರಿಶೂರ್‌ನಿಂದ 20 ಕಿಲೋಮೀಟರ್ ದೂರದ ತಳಿಕುಲಂನಲ್ಲಿ ವಾಸವಿರುವ ಸುನೀತಾ ಹಾಗೂ ಅವರ ಪತಿ ಆಟೊ ಡ್ರೈವರ್ ಶಿಂಟೊ ಅವರು ನಾಲ್ಕು ವರ್ಷಗಳಿಂದ ಶ್ವಾನಗಳನ್ನು ಸಲಹುತ್ತಿದ್ದಾರೆ. ತಮ್ಮ ವೇತನವನ್ನು ಶ್ವಾನಗಳನ್ನು ಸಾಕಲು ಬಳಸುತ್ತಿದ್ದಾರೆ. ‘ಕಳೆದ ವರ್ಷ ಪ್ರವಾಹ ಬಂದಾಗ 25 ನಾಯಿಗಳಿದ್ದವು. ಆಗ ಶ್ವಾನಗೃಹ ಇರಲಿಲ್ಲ. ಎನ್‌ಜಿಒ ಹಾಗೂ ಪ್ರಾಣಿಪ್ರಿಯರು ಸೇರಿ ₹1.5 ಲಕ್ಷ ವೆಚ್ಚದ ಶ್ವಾನಗೃಹ ನಿರ್ಮಿಸಿದ್ದಾರೆ. ಈಗ ತೊಂದರೆಯಿಲ್ಲ’ ಎನ್ನುತ್ತಾರೆ ಸುನೀತಾ.

ಅಂಕಿ–ಅಂಶ

12 ಲಕ್ಷ

ದೇಶದಾದ್ಯಂತ ಮಳೆ, ಪ್ರವಾಹ ಸಂತ್ರಸ್ತರ ಸಂಖ್ಯೆ

80

ಕೇರಳದಲ್ಲಿ ಮೃತಪಟ್ಟವರ ಸಂಖ್ಯೆ 

97

ಕರ್ನಾಟಕ, ಗುಜರಾತ್, ಮಹಾರಾಷ್ಟ್ರದಲ್ಲಿ ಈವರೆಗಿನ ಸಾವಿನ ಸಂಖ್ಯೆ  

60

ಕೇರಳದಲ್ಲಿ ನಾಪತ್ತೆಯಾದವರ ಸಂಖ್ಯೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು