ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯಡ್ಕ ವೀರಭದ್ರೇಶ್ವರ ದೇಗುಲ ವಿವಾದ: ಯಥಾಸ್ಥಿತಿಗೆ ಸುಪ್ರೀಂ ಕೋರ್ಟ್‌ ಆದೇಶ 

Last Updated 29 ಮೇ 2020, 11:44 IST
ಅಕ್ಷರ ಗಾತ್ರ

ನವದೆಹಲಿ: ಉಡುಪಿ ಜಿಲ್ಲೆಯ ಹಿರಿಯಡ್ಕದ ಬೊಮ್ಮರಬೆಟ್ಟು ಶ್ರೀ ಮಹತೊಭಾರ ವೀರಭದ್ರೇಶ್ವರ ದೇಗುಲದ ಆಡಳಿತಾಧಿಕಾರಿ ನೇಮಕ ವಿವಾದ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಅಲ್ಲದೆ, ದೇಗುಲದ ಆಡಳಿತ ನಿರ್ವಹಣೆಗೆ ಸಂಬಂಧಿಸಿದ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿಗಳಾದ ಎನ್‌.ವಿ. ರಮಣ, ಆರ್.ಸುಭಾಷ್ ರೆಡ್ಡಿ ಹಾಗೂ ಸೂರ್ಯಕಾಂತ್‌ ಅವರನ್ನೊಳಗೊಂಡ ಪೀಠವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ದೇಗುಲದ ಆಡಳಿತಕ್ಕೆ ಸಂಬಂಧಸಿದ ವಿವಾದದ ಹಿನ್ನೆಲೆಯಲ್ಲಿ ಆಳ್ವಾ ಹಾಗೂ ಹೆಗ್ಡೆ ಕುಟುಂಬಗಳ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಕೂಡಲೇ ವಿವಾದ ಬಗೆಹರಿಸುವಂತೆ ರಾಜ್ಯ ಧಾರ್ಮಿಕ ಪರಿಷತ್‌ಗೆ ಕಳೆದ ಫೆಬ್ರುವರಿ 2ರಂದು ಸೂಚಿಸಿತ್ತು. ಈ ಸೂಚನೆಯ ಮೇರೆಗೆ ಪರಿಷತ್ತು ಸುನೀಲ್‌ ಹೆಗ್ಡೆ ಎಂಬುವವರನ್ನು ದೇವಸ್ಥಾನದ ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು.

ಈ ನೇಮಕದ ಆದೇಶ ಪ್ರಶ್ನಿಸಿ ಆಳ್ವಾ ಕುಟುಂಬದವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್‌, ಪರಿಷತ್‌ ಹೊರಡಿಸಿದ್ದ ನೇಮಕ ಆದೇಶವನ್ನು ವಜಾಗೊಳಿಸಿತ್ತು. ಅಲ್ಲದೆ, ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಅಧಿನಿಯಮ–1997ರ ಅನ್ವಯ ನಿರ್ಧಾರ ಕೈಗೊಳ್ಳುವಂತೆ ಪರಿಷತ್‌ಗೆ ಮತ್ತೆ ಸೂಚಿಸಿತ್ತು.

ಈ ಆದೇಶ ಪ್ರಶ್ನಿಸಿ ಸುನೀಲ್ ಹೆಗ್ಡೆ ಅವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಪೀಠದೆದುರು ವಾದ ಮಂಡಿಸಿದ ವಕೀಲರಾದ ದೇವದತ್ತ ಕಾಮತ್‌ ಹಾಗೂ ನಿಶಾಂತ್‌ ಪಾಟೀಲ, ಕಳೆದ 50 ವರ್ಷಗಳಿಂದ ಹೆಗ್ಡೆ ಕುಟುಂಬವೇ ದೇವಸ್ಥಾನದ ಪೂಜಾ ಕೈಂಕರ್ಯಗಳನ್ನು ನಡೆಸುತ್ತಿದೆ. ಅರ್ಜಿದಾರ ಹಾಗೂ ಅವರ ತಂದೆಯ ನಿರಂತರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಯತ್ನದಿಂದಾಗಿ ದೇವಾಲಯವು ಅಪಾರ ಭಕ್ತಸಮೂಹವನ್ನು ಆಕರ್ಷಿಸಿದೆ ಎಂದು ಹೇಳಿದರು.

ಈ ಅರ್ಜಿ ಇತ್ಯರ್ಥ ಆಗುವವರೆಗೂ ಅರ್ಜಿದಾರರೇ ಆಡಳಿತಾಧಿಕಾರಿಯಾಗಿ ಮುಂದುವರಿಯುವುದು ನ್ಯಾಯಸಮ್ಮತ ಎಂದು ಅವರು ಹೇಳಿದರು.

ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಎಂ.ಗೋವರ್ಧನ ದಾಸ್‌ ಹೆಗ್ಡೆ ಹಾಗೂ ಇತರರಿಗೆ ನೋಟಿಸ್‌ ಜಾರಿ ಮಾಡಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು, ಕೂಡಲೇ ಈ ಸಂಬಂಧ ಹೇಳಿಕೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT