ಶನಿವಾರ, ಮೇ 30, 2020
27 °C
ಮನೆಯಿಂದ ಜನರು ಹೊರಬರುವಾಗ ಮಾಸ್ಕ್‌ ಧರಿಸಲು ಕೇಂದ್ರ ಸರ್ಕಾರ ಸಲಹೆ

ಇದು ಸುಲಭ | ಮನೆಯಲ್ಲೇ ಮಾಸ್ಕ್‌ ತಯಾರಿ ಹೇಗೆ?

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಜನರು ಮನೆಯಿಂದ ಹೊರಗೆ ಹೋಗುವಾಗ ಮನೆಯಲ್ಲಿಯೇ ತಯಾರಿಸಿದ ಮುಖಗವಸುಗಳನ್ನು ಧರಿಸಬೇಕು ಎಂದು ಕೇಂದ್ರ ಸರ್ಕಾರ ಶನಿವಾರ ಸಲಹೆ ನೀಡಿದೆ. ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಈ ಸಲಹೆ ನೀಡಲಾಗಿದೆ. ಮುಖ ಮತ್ತು ಬಾಯಿ ಮುಚ್ಚುವಂತಹ ಗವಸುಗಳನ್ನು ಧರಿಸುವುದರಿಂದ ಸಮುದಾಯವನ್ನು ಸೋಂಕಿನಿಂದ ರಕ್ಷಿಸಬಹುದು. ಮನೆಯಲ್ಲಿಯೇ ತಯಾರಿಸಿದ ಮುಖಗವಸುಗಳನ್ನು ಧರಿಸುವುದರಿಂದ ಅನುಕೂಲ ಇದೆ ಎಂಬುದು ಕೆಲವು ದೇಶಗಳ ಅನುಭವದಿಂದ ತಿಳಿದಿದೆ ಎಂದು ಸಲಹೆಯಲ್ಲಿ ಹೇಳಲಾಗಿದೆ. ಮಾಸ್ಕ್‌ ತಯಾರಿಸುವುದು ಹೇಗೆ ಎಂಬುದನ್ನೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವಿವರಿಸಿದೆ. 

ಯಾರಿಗಾಗಿ ಮಾಸ್ಕ್‌?

*ಆರೋಗ್ಯ ಸಮಸ್ಯೆ ಅಥವಾ ಉಸಿರಾಟದ ತೊಂದರೆ ಇಲ್ಲದ ಜನರು ಮನೆಯಲ್ಲಿ ತಯಾರಿಸಿದ ಮಾಸ್ಕ್‌ಗಳನ್ನು ಧರಿಸಬಹುದು 

*ಇಂತಹ ಮಾಸ್ಕ್‌ಗಳು ಆರೋಗ್ಯ ಕಾರ್ಯಕರ್ತರು, ಕೋವಿಡ್‌ ರೋಗಿಗಳು ಮತ್ತು ರೋಗಿಗಳ ಜತೆಗೆ ಸಂಪರ್ಕದಲ್ಲಿ ಇರುವವರ ಬಳಕೆಗೆ ಅಲ್ಲ. ಅಂಥವರು ನಿರ್ದಿಷ್ಟವಾಗಿ ಶಿಫಾರಸು ಮಾಡಿದ ಮಾಸ್ಕ್‌ಗಳನ್ನೇ ಬಳಸಬೇಕು

*ಮನೆಯಲ್ಲಿ ಮಾಸ್ಕ್‌ ತಯಾರಿಸಿಕೊಳ್ಳುವವರು ಕನಿಷ್ಠ ಎರಡು ಮಾಸ್ಕ್‌ಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಒಂದನ್ನು ಒಗೆದು ಹಾಕಿದಾಗ ಇನ್ನೊಂದನ್ನು ಬಳಸಬಹುದು

*ಮಾಸ್ಕ್‌ ತಯಾರಿಸಲು ಮನೆಯಲ್ಲಿ ಇರುವ ಶೇ ನೂರರಷ್ಟು ಹತ್ತಿಯ ಬಟ್ಟೆಗಳನ್ನು ಬಳಸಬೇಕು. ಮಾಸ್ಕ್‌ ತಯಾರಿಸುವ ಮುನ್ನ ಬಟ್ಟೆಯನ್ನು ಕುದಿಯುವ ನೀರಿನಲ್ಲಿ ಐದು ನಿಮಿಷ ಸ್ವಚ್ಛವಾಗಿ ತೊಳೆದು ಸರಿಯಾಗಿ ಒಣಗಿಸಿಕೊಳ್ಳಬೇಕು 

*ಮನೆಯಲ್ಲಿರುವ ಎಲ್ಲರಿಗೂ ಪ್ರತ್ಯೇಕವಾದ ಮಾಸ್ಕ್‌ ತಯಾರಿಸಿಕೊಳ್ಳಬೇಕು. ಯಾವ ಕಾರಣಕ್ಕೂ ಒಬ್ಬರ ಮಾಸ್ಕನ್ನು ಇನ್ನೊಬ್ಬರು ಬಳಸಬಾರದು 

*ಒಂದು ಬಾರಿ ಬಳಸಿದ ಮಾಸ್ಕ್‌ ಅನ್ನು ತೊಳೆಯದೆ ಮತ್ತೊಮ್ಮೆ ಬಳಸಲೇಬೇಡಿ. ಮಾಸ್ಕ್‌ ತೇವವಾದ ತಕ್ಷಣ ಅದನ್ನು ಬದಲಾಯಿಸಿ

*ಮಾಸ್ಕ್‌ ಬಳಸುವ ಮುನ್ನ ಸಾಬೂನು ಹಾಕಿ ಕೈ ತೊಳೆದುಕೊಳ್ಳಬೇಕು

ಮಾಸ್ಕ್‌ ಸಿದ್ಧಪಡಿಸುವುದು ಹೇಗೆ?

1. ಹತ್ತಿಯ ಸ್ವಚ್ಛವಾದ ಬಟ್ಟೆ ತುಂಡನ್ನು ತೆಗೆದುಕೊಳ್ಳಿ (ವಯಸ್ಕರಿಗೆ 9 ಇಂಚು X 7 ಇಂಚು, ಮಕ್ಕಳಿಗೆ 7 x 5 ಇಂಚು) 

2. ಮಾಸ್ಕ್‌ನ ಎಡ ಮತ್ತು ಬಲ ಭಾಗವನ್ನು ಮುಚ್ಚಲು (1.5 X 5 ಇಂಚು) ಎರಡು ತುಂಡು ಬಟ್ಟೆ ಮತ್ತು ಕಟ್ಟುವುದಕ್ಕಾಗಿ 1.5 ಇಂಚು X 40 ಇಂಚಿನ ಎರಡು ತುಂಡು ಬಟ್ಟೆಗಳನ್ನು ತೆಗೆದುಕೊಳ್ಳಿ‌ 

3. ಮಾಸ್ಕ್‌ನ ಬಟ್ಟೆಯಲ್ಲಿ  ಸುಮಾರು 1.5 ಇಂಚು ಬರುವಂತೆ ಮೂರು ಮಡಿಕೆಗಳನ್ನು ಮಾಡಿ ಹೊಲಿಯಿರಿ. ಮಡಿಕೆಯ ತೆರೆದ ಭಾಗವು ಕೆಳಭಾಗಕ್ಕೆ ಇರುವಂತೆ ನೋಡಿಕೊಳ್ಳಿ. 

4. ಈಗ ಮಾಸ್ಕ್‌ನ ಮುಖ್ಯ ಭಾಗದ ಗಾತ್ರವು 9 ಇಂಚು ಉದ್ದ ಮತ್ತು 5 ಇಂಚು ಅಗಲಕ್ಕೆ ಇಳಿಯುತ್ತದೆ. 

5. 1.5 X 5 ಇಂಚು ಬಟ್ಟೆಯ ತುಂಡನ್ನು ಮಡಿಕೆ ಮಾಡಿದ ಬಟ್ಟೆಯ ಎಡ ಮತ್ತು ಬಲಭಾಗಕ್ಕೆ ಹೊಲಿಯಿರಿ. ಆ ಭಾಗಗಳು ಮುಚ್ಚುವಂತೆ ನೋಡಿಕೊಳ್ಳಿ.

6. 1.5 ಇಂಚು X 40 ಇಂಚು ಬಟ್ಟೆಯನ್ನು ಮಡಿಕೆ ಮಾಡಿರುವ ಬಟ್ಟೆಯ ಮೇಲೆ ಮತ್ತು ಕೆಳಭಾಗಕ್ಕೆ ಜೋಡಿಸಿ, ಹೊಲಿಯಿರಿ. ಈ ಭಾಗವನ್ನು ಹೊಲಿಯುವಾಗ ಕೂಡ ಮೂರು ಮಡಿಕೆಗಳಾಗಿ ಮಾಡುವುದನ್ನು ಮರೆಯದಿರಿ. ಇದು ಬಳ್ಳಿಯಂತೆ, ಮಾಸ್ಕನ್ನು ಕಿವಿಯ ಹಿಂಭಾಗಕ್ಕೆ ಕಟ್ಟುವುದಕ್ಕಾಗಿ ಬಳಕೆಯಾಗುತ್ತದೆ. 

7. ಈಗ, ಮನೆಯಲ್ಲಿ ಮಾಡಿದ ಮಾಸ್ಕ್‌ ಸಿದ್ಧ

ಸ್ವಚ್ಛ ಮಾಡುವುದು ಹೇಗೆ?

*ಬಳಕೆಯ ನಂತರ ಮಾಸ್ಕ್‌ ಅನ್ನು ಸಾಬೂನು ಮತ್ತು ಬಿಸಿ ನೀರಿನಲ್ಲಿ ತೊಳೆಯಬೇಕು. ಸೂರ್ಯನ ಬೆಳಕಿನಲ್ಲಿ ಕನಿಷ್ಠ ಐದು ಗಂಟೆ ಒಣಗಿಸಬೇಕು

*ಸೂರ್ಯನ ಬೆಳಕು ಇಲ್ಲ ಎಂದಾದಲ್ಲಿ, ಪ್ರೆಷರ್‌ ಕುಕ್ಕರ್‌ನಲ್ಲಿ ನೀರಿನೊಂದಿಗೆ ಹಾಕಿ ಹತ್ತು ನಿಮಿಷ ಕುದಿಸಬೇಕು. ನೀರಿಗೆ ಉಪ್ಪು ಹಾಕುವುದು ಉತ್ತಮ. ಕುಕ್ಕರ್ ಕೂಡ ಇಲ್ಲದಿದ್ದರೆ, ನೀರಿಗೆ ಹಾಕಿ 15 ನಿಮಿಷ ಕುದಿಸಿದರೂ ಸಾಕು, ಅಥವಾ

*ತೊಳೆದ ಬಳಿಕ ಐದು ನಿಮಿಷ ಬಿಸಿಗೆ ಒಡ್ಡಬೇಕು. ಇದಕ್ಕಾಗಿ ಇಸ್ತ್ರಿ ಪೆಟ್ಟಿಗೆ ಬಳಸಬಹುದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು