ಭಾನುವಾರ, ಜುಲೈ 25, 2021
28 °C
ವೈದ್ಯಕೀಯ, ಭದ್ರತಾ, ಸೇವಾ ವಲಯದ ಸಿಬ್ಬಂದಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲು ಸೂಚನೆ

ಸೋಂಕಿತರ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚಿರುವ ವರ್ಗಗಳ ಸಮೀಕ್ಷೆಗೆ ಸೂಚನೆ

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

ಕೋವಿಡ್–19 ಸೋಂಕಿತರ ಸಂಪರ್ಕಕ್ಕೆ ಬರುವ ಸಾಧ್ಯತೆ ಅಧಿಕವಾಗಿರುವ ವರ್ಗಗಳ ಜನರನ್ನು ಸಮೀಕ್ಷೆಗೆ ಒಳಪಡಿಸಿ ಎಂದು ಎಲ್ಲಾ ರಾಜ್ಯಗಳಿಗೆ ಐಸಿಎಂಆರ್ ಸೂಚನೆ ನೀಡಿದೆ.

ಆರ್‌ಟಿ–ಪಿಸಿಆರ್‌ ತಪಾಸಣೆಗೆ ಎಲ್ಲರನ್ನೂ ಒಳಪಡಿಸಲು ಸಾಧ್ಯವಿಲ್ಲ. ಸೋಂಕು ತಗುಲಿದ 5 ದಿನಗಳ ಒಳಗೆ ಈ ಪರೀಕ್ಷೆ ನಡೆಸಿದರಷ್ಟೇ ಅನುಕೂಲವಿದೆ. ಹೀಗಾಗಿ ಐಜಿಜಿ ಎಲಿಸಾ ಆ್ಯಂಟಿಬಾಡಿ ತಪಾಸಣೆ ನಡೆಸಿದರೆ, ಸೋಂಕು ಹರಡುವಿಕೆಯ ಪ್ರದೇಶವನ್ನು ಪತ್ತೆಮಾಡಬಹುದು. ಸೋಂಕಿತರ ಸಂಪರ್ಕಕ್ಕೆ ಬರುವ ಸಾಧ್ಯತೆ ಅತ್ಯಧಿಕವಾಗಿರುವ ವರ್ಗಗಳನ್ನು ಆದ್ಯತೆ ಮೇರೆಗೆ ಈ ತಪಾಸಣೆಗೆ ಒಳಪಡಿಸಿ. ಹೀಗೆ ತಪಾಸಣೆಗೆ ಒಳಗಾದವರಲ್ಲಿ ಸೋಂಕು ಪತ್ತೆಯಾದರೆ, ಸೋಂಕು ಹರಡುವಿಕೆಯ ವ್ಯಾಪ್ತಿ ತಿಳಿಯುತ್ತದೆ ಎಂದು ಐಸಿಎಂಆರ್ ಹೇಳಿದೆ.

ಐಸಿಎಂಆರ್ ಮತ್ತು ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ ಜಂಟಿಯಾಗಿ  ಐಜಿಜಿ ಎಲಿಸ್ಸಾ ಆ್ಯಂಟಿಬಾಡಿ ತಪಾಸಣಾ ಕಿಟ್‌ ಅಭಿವೃದ್ಧಿಪಡಿಸಿವೆ. ಈ ಕಿಟ್‌ಗಳನ್ನು ತಯಾರಿಸಲು ದೇಶದ ಹಲವು ಕಂಪನಿಗಳಿಗೆ ತಂತ್ರಜ್ಞಾನವನ್ನು ಉಚಿತವಾಗಿ ವರ್ಗಾವಣೆ ಮಾಡಲಾಗಿದೆ. ಅಗತ್ಯಬಿದ್ದರೆ ಮತ್ತಷ್ಟು ಕಂಪನಿಗಳಿಗೆ ತಂತ್ರಜ್ಞಾನ ವರ್ಗಾವಣೆ ಮಾಡಲಾಗುತ್ತದೆ. ರಾಜ್ಯಗಳು ಬೇಡಿಕೆ ಇಟ್ಟರೆ, ಈ ಕಂಪನಿಗಳು ತಪಾಸಣಾ ಕಿಟ್‌ಗಳನ್ನು ತಯಾರಿಸಿ ಕೊಡಲಿವೆ. ಸಮೀಕ್ಷೆ ನಡೆಸಲು ಅಗತ್ಯವಿರುವ ನೆರವನ್ನೂ ಐಸಿಎಂಆರ್‌ ನೀಡಲಿದೆ ಎಂದು ರಾಜ್ಯಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಅಧಿಕ ಅಪಾಯದ 17 ವರ್ಗಗಳು

17 ವರ್ಗದ ಜನರನ್ನು ಐಸಿಎಂಆರ್ ಗುರುತಿಸಿದ್ದು, ಅವರನ್ನು ಸಮೀಕ್ಷೆಗೆ ಒಳಪಡಿಸಿ ಎಂದು ಸೂಚಿಸಿದೆ.

1. ರೋಗಿಗಳು: ಎಚ್‌ಐವಿ, ಕ್ಷಯ, ತೀವ್ರ ಉಸಿರಾಟದ ತೊಂದರೆ ಇರುವವರು, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರು

2. ಕಂಟೈನ್‌ಮೆಂಟ್ ವಲಯದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಸಮೀಕ್ಷೆಗೆ ಒಳಪಡಿಸಬೇಕು

3. ವೈದ್ಯಕೀಯ ಸಿಬ್ಬಂದಿ: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಸಹಾಯಕರು, ದಾದಿಯರು ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂದಿ

4. ಭದ್ರತಾ ಸಿಬ್ಬಂದಿ: ಜನರ ಸಂಪರ್ಕಕ್ಕೆ ಬರುವ ಭದ್ರತಾ ಸಿಬ್ಬಂದಿ, ಎಲ್ಲಾ ಕಚೇರಿಗಳಲ್ಲಿ ಜನರನ್ನು ತಪಾಸಣೆಗೆ ಒಳಪಡಿಸುವವರು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಎಲ್ಲಾ ಸಿಬ್ಬಂದಿ‌

5. ಪೊಲೀಸರು: ಪೊಲೀಸರು, ಗೃಹದಳದ ಸಿಬ್ಬಂದಿ, ಕೋವಿಡ್ ಸ್ವಯಂಸೇವಕರು

6. ಮಾಧ್ಯಮ ಸಿಬ್ಬಂದಿ: ವರದಿಗಾರಿಕೆ ಮತ್ತು ಛಾಯಾಗ್ರಹಣಕ್ಕೆ ಹೋಗುವ ಸಿಬ್ಬಂದಿ, ಛಾಯಾಗ್ರಾಹಕರು, ಚಾಲಕರು ಮತ್ತು ಸಹಾಯಕ ಸಿಬ್ಬಂದಿ

7. ಗ್ರಾಮೀಣ ಭಾಗದ ಜನರು: ನಗರಗಳಿಂದ ಹಳ್ಳಿಗಳಿಗೆ ವಾಪಸ್ ಆಗಿರುವ ವಲಸೆ ಕಾರ್ಮಿಕರನ್ನು ಆದ್ಯತೆ ಮೇರೆಗೆ ಸಮೀಕ್ಷೆಗೆ ಒಳಪಡಿಸಬೇಕು. ಈ ಜನರ ಸಂಪರ್ಕಕ್ಕೆ ಬಂದಿರುವವರನ್ನೂ ಸಮೀಕ್ಷೆಗೆ ಒಳಪಡಿಸಬೇಕು

8. ಕಾರ್ಮಿಕರು: ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ದಿನಗೂಲಿ ನೌಕರರು, ವಲಸೆ ಕಾರ್ಮಿಕರನ್ನು ಸಮೀಕ್ಷೆಗೆ ಒಳಪಡಿಸಬೇಕು. ಸೇವಾ ವಲಯದಲ್ಲಿ ದುಡಿಯುತ್ತಿರುವ ಎಲ್ಲಾ ಸಿಬ್ಬಂದಿಯನ್ನು ಸಮೀಕ್ಷೆಗೆ ಒಳಪಡಿಸಬೇಕು

9. ರೈತರು ಮತ್ತು ವ್ಯಾಪಾರಿಗಳು: ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ದೊಡ್ಡ ಮಾರುಕಟ್ಟೆಗಳಿಗೆ ಭೇಟಿ ನೀಡಿರುವ ಮತ್ತು ನೀಡುವ ರೈತರು, ಕೂಲಿ ಕಾರ್ಮಿಕರು, ಹಮಾಲಿಗಳು, ವ್ಯಾಪಾರಿಗಳು, ದಲ್ಲಾಳಿಗಳು ಮತ್ತು ವಾಹನ ಚಾಲಕರು

10. ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ: ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ನಗರಪಾಲಿಕೆ, ನಗರ ಸಭೆ, ಪುರ ಸಭೆ ಮತ್ತು ಗ್ರಾಮ ಪಂಚಾಯಿತಿಗಳ ಎಲ್ಲಾ ಸಿಬ್ಬಂದಿ. ನೀರು ಸರಬರಾಜು ಮತ್ತು ವಿದ್ಯುತ್ ಸರಬರಾಜು ಕಂಪನಿಗಳ ಎಲ್ಲಾ ಸಿಬ್ಬಂದಿ

11. ಚಾಲಕರು: ಆಸ್ಪತ್ರೆ, ಆಂಬುಲೆನ್ಸ್, ಬಸ್‌, ಟ್ರಕ್, ಟ್ಯಾಕ್ಸಿ ಮತ್ತು ಆಟೊ ಚಾಲಕರು. ಬಸ್ ಕಂಡಕ್ಟರ್‌ಗಳು, ಬಸ್ ಮತ್ತು ಟ್ರಕ್‌ನ ಕ್ಲೀನರ್‌ಗಳು ಮತ್ತು ಸಹಾಯಕ ಸಿಬ್ಬಂದಿ

12. ಬ್ಯಾಂಕ್, ಅಂಚೆ ಮತ್ತು ದೂರವಾಣಿ ಸಿಬ್ಬಂದಿ: ಬ್ಯಾಂಕಿಂಗ್ ಸಿಬ್ಬಂದಿ, ಅಂಚೆ ಇಲಾಖೆ ನೌಕರರು, ಕೊರಿಯರ್‌ ಮತ್ತು ಪಾರ್ಸಲ್‌ ಸೇವೆ ನೌಕರರು ಮತ್ತು ದೂರಸಂಪರ್ಕ ವಲಯದಲ್ಲಿರುವ ಕ್ಷೇತ್ರ ಸಿಬ್ಬಂದಿ

13: ಅಂಗಡಿ: ದಿನಸಿ, ತರಕಾರಿ, ಅಗತ್ಯ ವಸ್ತುಗಳ ಅಂಗಡಿ, ಹೋಟೆಲ್‌ಗಳು, ಪಾರ್ಸೆಲ್ ಸೇವೆ ನೀಡುತ್ತಿರುವ ಹೋಟೆಲ್‌ಗಳು, ಹಾಲಿನ ಅಂಗಡಿ, ಔಷಧ ಅಂಗಡಿಗಳ ಮಾಲೀಕರು, ಕೆಲಸಗಾರರು

14: ವಿಮಾನಯಾನ ಸಿಬ್ಬಂದಿ: ವಿಮಾನ ನಿಲ್ದಾಣದ ಎಲ್ಲಾ ಸಿಬ್ಬಂದಿ, ವಿಮಾನಯಾನ ಸಂಸ್ಥೆಯ ಎಲ್ಲಾ ಸಿಬ್ಬಂದಿ

15: ವಿದೇಶಗಳಿಂದ ಭಾರತೀಯರನ್ನು ಕರೆತರಲು ದುಡಿದ ಎಲ್ಲಾ ಸಿಬ್ಬಂದಿಯನ್ನು ಸಮೀಕ್ಷೆಗೆ ಒಳಪಡಿಸಬೇಕು

16: ವೃದ್ಧಾಶ್ರಮ, ಅನಾಥಾಶ್ರಮ, ನಿರಾಶ್ರಿತ ಶಿಬಿರಗಳಲ್ಲಿ ಇರುವವರನ್ನು ಸಮೀಕ್ಷೆಗೆ ಒಳಪಡಿಸಬೇಕು. ಗಾಳಿಯಾಡದಂತಹ ಇಕ್ಕಟ್ಟಿನ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಮತ್ತು ದುಡಿಯುತ್ತಿರುವವರನ್ನೂ ಸಮೀಕ್ಷೆಗೆ ಒಳಪಡಿಸಬೇಕು

17: ಕೈದಿಗಳು: ಎಲ್ಲಾ ಜೈಲುಗಳಲ್ಲಿ ಇರುವ ಕೈದಿಗಳು ಮತ್ತು ಹೊಸದಾಗಿ ಜೈಲಿಗೆ ಬರುವ ಕೈದಿಗಳನ್ನೂ ಸಮೀಕ್ಷೆಗೆ ಒಳಪಡಿಸಬೇಕು

ಆಧಾರ: ಐಸಿಎಂಆರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು