ಶನಿವಾರ, ಜೂನ್ 6, 2020
27 °C

ಕೋವಿಡ್–19 | ಎಚ್‌ಸಿಕ್ಯೂ ಮಾತ್ರೆ: ಐಸಿಎಂಆರ್‌ನಿಂದ ಪರಿಷ್ಕೃತ ಮಾರ್ಗಸೂಚಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹೈಡ್ರಾಕ್ಸಿಕ್ಲೊರೋಕ್ವಿನ್ (ಎಚ್‌ಸಿಕ್ಯೂ) ಮಾತ್ರೆಗಳನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಎಸಿಎಂಆರ್) ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೋವಿಡ್ ಹಾಗೂ ಕೋವಿಡ್‌ಯೇತರ ಆಸ್ಪತ್ರೆಗಳಲ್ಲಿ ರೋಗಲಕ್ಷಣಗಳು ಕಂಡಬಾರದ ಆರೋಗ್ಯ ಸಿಬ್ಬಂದಿ, ಕಂಟೇನ್ಮೆಂಟ್ ವಲಯಗಳಲ್ಲಿ ಮೇಲ್ವಿಚಾರಣೆ ನಡೆಸುತ್ತಿರುವ ಮುಖ್ಯ ಸಿಬ್ಬಂದಿ ಹಾಗೂ ಕರೊನಾ ವೈರಸ್ ಸೋಂಕು ಸಂಬಂಧಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಪೊಲೀಸರು ಅಥವಾ ಅರೆಸೇನಾಪಡೆ ಸಿಬ್ಬಂದಿಗೆ ಪ್ರತಿಬಂಧಕ ಔಷಧಿಯಾಗಿ ಹೆಚ್‌ಸಿಕ್ಯೂ ಮಾತ್ರೆಗಳನ್ನು ಬಳಸಬಹುದು ಎಂದು ಪರಿಷತ್ ತಿಳಿಸಿದೆ. 

ಕೋವಿಡ್  ಮಾತ್ರೆಗಳ ಸುರಕ್ಷತೆ ಹಾಗೂ ಪರಿಣಾಮಕಾರಿತ್ವದ ಬಗ್ಗೆ ಇತ್ತೀಚಿನ ಪುರಾವೆಗಳನ್ನು ಪರಿಗಣಿಸಿ, ಐಸಿಎಂಆರ್ ರಚಿಸಿರುವ ಕೋವಿಡ್–19 ಕಾರ್ಯಪಡೆಯು ಎಚ್‌ಸಿಕ್ಯೂ ಮಾತ್ರೆಗಳ ಬಳಕೆಯನ್ನು ಪರಿಶೀಲಿಸಿದೆ. ಮಾತ್ರೆ ಸೇವೆನಯಿಂದ ಸುಳ್ಳು ಭದ್ರತೆಯ ಭಾವನೆ ಬರಬಾರದು ಎಂದು ಪರಿಷತ್ ಎಚ್ಚರಿಸಿದೆ. ಪುಣೆಯ ರಾಷ್ಟ್ರ್ರೀಯ ವೈರಾಲಜಿ ಸಂಸ್ಥೆ ನಡೆಸಿದ ಎಚ್‌ಸಿಕ್ಯೂ ಮಾತ್ರೆಗಳ ಇನ್ ವಿಟ್ರೊ ತಪಾಸಣಾ ವರದಿ ಪ್ರಕಾರ, ಈ ಮಾತ್ರೆಗಳ ಆ್ಯಂಟಿವೈರಲ್ ಪರಿಣಾಮಕಾರಿತ್ವವು ಸಾಂಕ್ರಾಮಿಕತೆ ಕಡಿಮೆ ಮಾಡುತ್ತದೆ. 

ಮಾರ್ಗಸೂಚಿ

*ಎಚ್‌ಸಿಕ್ಯೂ ಮಾತ್ರೆಗಳನ್ನು 15 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಹಾಗೂ ಹಾಲೂಡಿಸುವರು ಬಳಸುವಂತಿಲ್ಲ

*ಈ ಮಾತ್ರೆಗಳು ಅಪರೂಪಕ್ಕೆ ಎಂಬಂತೆ ಹೃದಯ ರಕ್ತನಾಳದ ಸಮಸ್ಯೆಯಾದ ಕಾರ್ಡಿಯೊಮಿಯೊಪತಿ ಹಾಗೂ ರಕ್ತಬಡಿತ ಸಮಸ್ಯೆಗೆ ಕಾರಣವಾಗುತ್ತವೆ

*ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾತ್ರ ಈ ಮಾತ್ರೆಗಳನ್ನು ಗೊತ್ತುಪಡಿಸಿದವರಿಗೆ ವಿತರಿಸಬೇಕು

*ನೋಂದಾಯಿತ ವೈದ್ಯರು ಪ್ರಿಸ್‌ಕ್ರಿಪ್ಷನ್‌ನಲ್ಲಿ ನಮೂದಿಸಿದರೆ ಮಾತ್ರ ಈ ಗುಳಿಗೆ ನೀಡಬೇಕು. ತೊಂದರೆ ಸಂಭವಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು

*ರೋಗನಿರೋಧ ಔಷಧವಾಗಿ ಎಚ್‌ಸಿಕ್ಯೂ ಬಳಸುತ್ತಿರುವವರು ರೋಗ ಲಕ್ಷಣಗಳು ಕಂಡುಬಂದರೆ, ತಕ್ಷಣ ಆರೋಗ್ಯ ಸಿಬ್ಬಂದಿ ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು

 ಪ್ರಾಥಮಿಕ ಹಂತದಲ್ಲಿ ಲಸಿಕೆ ಅಭಿವೃದ್ಧಿ

‌ಭಾರತದಲ್ಲಿ ಕೊರೊನಾ ವೈರಸ್‌ಗೆ ಲಸಿಕೆ ಅಭಿವೃದ್ಧಿಪಡಿಸುವ ಯತ್ನಗಳು ಇನ್ನೂ ಆರಂಭಿಕ ಹಂತದಲ್ಲಿದ್ದು, ಒಂದು ವರ್ಷದೊಳಗೆ ಮಹತ್ವದ ಪ್ರಗತಿ ಸಿಗುತ್ತದೆ ಎಂದು ಹೇಳಲಾಗದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  

ಲಸಿಕೆ ಅಭಿವೃದ್ಧಿ ಮಾರ್ಗಗಳ ಹುಡುಕಾಟದಲ್ಲಿ ಬಯೊಟೆಕ್ನಾಲಜಿ ಇಲಾಖೆಯು ವಿವಿಧ ಸಂಸ್ಥೆಗಳ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ. ಝೈಡಸ್ ಕ್ಯಾಡಿಲ್ಲಾ, ಸೆರಂ ಸಂಸ್ಥೆ, ಇಂಡಿಯನ್ ಇಮ್ಯುನೊಲಾಜಿಕಲ್, ಭಾರತ್ ಬಯೋಟೆಕ್ ಮೊದಲಾದ ಸಂಸ್ಥೆಗಳು ಈ ಯತ್ನದಲ್ಲಿವೆ. 

‘ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು ಈ ವರ್ಷಾಂತ್ಯದ ವೇಳೆಗೆ ಪ್ರಾಣಿಗಳ ಮೇಲೆ ಪರೀಕ್ಷೆ ನಡೆಸುವ ಹಂತವನ್ನು ತಲುಪಲಿವೆ ಎಂದು ವೈರಾಣು ಶಾಸ್ತ್ರಜ್ಞ ಶಹೀದ್ ಜಮೀಲ್ ಹೇಳಿದ್ದಾರೆ. ಭಾರತೀಯ ಸಂಸ್ಥೆಗಳ ಸಾಮರ್ಥ ಹಾಗೂ ಕಾರ್ಯಕ್ಷಮತೆ ಹೆಚ್ಚಾಗಿದ್ದು, ಲಸಿಕೆ ಹೊರತರುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು