ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತೀಶ್ ಕುಮಾರ್‌ಗೆ ಮಹಾಘಟಬಂಧನ ಬೆಂಬಲ: ಇನ್ನೊಂದು ರಾಜಕೀಯ ಪರಿವರ್ತನೆಯತ್ತ ಬಿಹಾರ?

Last Updated 6 ಜೂನ್ 2019, 3:23 IST
ಅಕ್ಷರ ಗಾತ್ರ

ಪಟ್ನಾ: ಬಿಹಾರವು ಇನ್ನೊಂದು ರಾಜಕೀಯ ಪರಿವರ್ತನೆಯತ್ತ ಸಾಗುತ್ತಿದೆಯೆ?

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಈಚಿನ ಒಂದೆರಡು ದಿನಗಳ ನಡೆ ಯನ್ನು ಗಮನಿಸಿದರೆ ಈ ಪ್ರಶ್ನೆಗೆ ‘ಹೌದು’ ಎಂಬ ಉತ್ತರವೇ ಬರುತ್ತದೆ. ಮಂಗಳವಾರ ಒಂದೇ ದಿನ ನಿತೀಶ್‌ ಅವರು ಎರಡು ಬಾರಿ ರಾಜ್ಯದ ಮಾಜಿ ಮುಖ್ಯಮಂತ್ರಿ ಜೀತನ್‌ರಾಂ ಮಾಂಝಿ ಅವರನ್ನು ಭೇಟಿ ಮಾಡಿದ್ದಾರೆ.

ಮುಖ್ಯಮಂತ್ರಿಯೊಬ್ಬ ತಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಯನ್ನು ಭೇಟಿ ಮಾಡುವುದರಲ್ಲಿ ವಿಶೇಷವಿಲ್ಲ. ಆದರೆ ನಿತೀಶ್‌ ಅವರು ಮಾಂಝಿ ಮನೆಗೆ ಹೋಗಿ ಅವರನ್ನು ತಬ್ಬಿಕೊಂಡಿರುವುದು ಹಲವರ ಹುಬ್ಬೇರಿಸಿದೆ. ಕಳೆದ ತಿಂಗಳ ಅಂತ್ಯದವರೆಗೂ ಪರಸ್ಪರರ ವಿರುದ್ಧ ಕೆಂಡ ಕಾರುತ್ತಿದ್ದವರು ಈಗ ಇಷ್ಟೊಂದು ಸಮೀಪವಾದದ್ದಾದರೂ ಹೇಗೆ ಎಂಬುದು ಅಚ್ಚರಿಗೆ ಕಾರಣ. ಯಾಕೆಂದರೆ, ತಮ್ಮ ರಾಜಕೀಯ ವಿರೋಧಿಗಳನ್ನು ಅಷ್ಟು ಸುಲಭವಾಗಿ ಕ್ಷಮಿಸುವ ಗುಣ ನಿತೀಶ್‌ ಅವರದ್ದಲ್ಲ.

ಕೇಂದ್ರ ಸಂಪುಟದಲ್ಲಿ ಜೆಡಿಯುಗೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರಾತಿನಿಧ್ಯ ಲಭಿಸುವುದಿಲ್ಲ ಎಂಬುದು ನಿಚ್ಚಳಗೊಂಡ ಕ್ಷಣದಿಂದಲೇ ‘ಬಿಹಾರದಲ್ಲಿ ಲೆಕ್ಕಾಚಾರಗಳು ಬದಲಾಗಲಿವೆ’ ಎಂಬ ಸಂಕೇತಗಳನ್ನು ನಿತೀಶ್‌ ಅವರು ಕೊಡುತ್ತ ಬಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಯು ಪ್ರತ್ಯೇಕವಾಗಿ ಇಫ್ತಾರ್‌ ಕೂಟಗಳನ್ನು ಆಯೋಜಿಸಿದವು. ಒಂದು ಪಕ್ಷದವರು ಆಯೋಜಿಸಿದ್ದ ಕೂಟಕ್ಕೆ ಇನ್ನೊಂದು ಪಕ್ಷದವರು ಹೋಗಲಿಲ್ಲ. ರಾಂವಿಲಾಸ್‌ ಪಾಸ್ವಾನ್‌ ಅವರು ಎಲ್‌ಜೆಪಿ ಕಚೇರಿಯಲ್ಲೇ ಇಫ್ತಾರ್‌ ಕೂಟ ಆಯೋಜಿಸುವ ಮೂಲಕ ‘ಎನ್‌ಡಿಎಯಲ್ಲಿ ಎಲ್ಲವೂ ಸರಿಯಾಗಿದೆ’ ಎಂದು ಹೇಳುವ ಪ್ರಯತ್ನ ಮಾಡಿದರು. ಆದರೆ ನಿತೀಶ್‌ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ಮಾಂಝಿ ಅವರ ಮನೆಗೆ ಹೋಗಿ ಅವರನ್ನು ತಬ್ಬಿಕೊಂಡರು.

ಇನ್ನೊಂದೆಡೆ, ‘ಮಹಾಘಟಬಂಧನ’ಕ್ಕೆ ಮರಳುವಂತೆ ಆರ್‌ಜೆಡಿಯ ಹಿರಿಯ ಮುಖಂಡ ರಘುವಂಶಪ್ರಸಾದ್‌ ಸಿಂಗ್‌ ಅವರು ನಿತೀಶ್‌ಗೆ ಮನವಿ ಮಾಡಿದ್ದಾರೆ. ‘ಮಹಾಘಟಬಂಧನಕ್ಕೆ ನಿತೀಶ್‌ ಮರಳುವುದಿಲ್ಲ ಎಂದು ಯಾರಾದರೂ ಬರೆದು ಕೊಟ್ಟಿದ್ದಾರೆಯೇ’ ಎಂದು ಸಿಂಗ್‌ ಪ್ರಶ್ನಿಸಿದ್ದಾರೆ. ಇಂಥದ್ದೇ ಹೇಳಿಕೆ ನೀಡಿರುವ ಆರ್‌ಜೆಡಿಯ ರಾಷ್ಟ್ರೀಯ ವಕ್ತಾರ, ರಾಜ್ಯಸಭೆ ಸದಸ್ಯ ಮನೋಜ್‌ ಝಾ, ‘ರಾಜಕೀಯ ಎಂಬುದು ಸಾಧ್ಯತೆಗಳ ಆಟ. ಇಲ್ಲಿ ಯಾರೂ ಶಾಶ್ವತ ವೈರಿಗಳೂ ಅಲ್ಲ, ಶಾಶ್ವತ ಸ್ನೇಹಿತರೂ ಅಲ್ಲ’ ಎಂದಿದ್ದಾರೆ.

‘ನಿತೀಶ್‌ ಒಬ್ಬ ಅನುಭವಿ ರಾಜಕಾರಣಿ. ತಾಳ್ಮೆಯ ಕಲೆ ಅವರಿಗೆ ಗೊತ್ತಿದೆ. ಯಾವಾಗ ತಿರುಗೇಟು ನೀಡಬೇಕು ಎಂಬುದೂ ಗೊತ್ತಿದೆ. ಎನ್‌ಡಿಎಗೆ ತಿರುಗೇಟು ನೀಡಲು ಸರಿಯಾದ ಸಮಯವನ್ನೇ ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯಕ್ಕೆ ಯಾವುದೇ ಬದಲಾವಣೆ ಆಗಲಾರದು’ ಎಂದು ಹಿರಿಯ ರಾಜಕೀಯ ವಿಶ್ಲೇಷಕ ಅಜಯ್‌ ಕುಮಾರ್‌ ಹೇಳುತ್ತಾರೆ.

‘ಬಿಹಾರದ ರಾಜಕೀಯ ತ್ರಿಕೋನದಲ್ಲಿ ಬಿಜೆಪಿ, ಆರ್‌ಜೆಡಿ ಮತ್ತು ಜೆಡಿಯು ಪ್ರಮುಖ ಕೊಂಡಿಗಳು. ಯಾವುದೇ ಎರಡು ಪಕ್ಷಗಳು ಕೈಜೋಡಿಸಿದರೆ ಮೂರನೆಯ ಪಕ್ಷಕ್ಕೆ ಸೋಲು ಖಚಿತ ಎಂಬ ಸ್ಥಿತಿ ಇದೆ. 2005, 2010 ಮತ್ತು 2015ರ ವಿಧಾನಸಭಾ ಚುನಾವಣೆಗಳಲ್ಲಿ ಇದು ಸಾಬೀತಾಗಿದೆ. ಆದರೆ ಯಾವುದೇ ಮೈತ್ರಿಗೆ ಇಲ್ಲಿ ನಿತೀಶ್‌ ಅವರೇ ಪ್ರಮುಖ ಕೊಂಡಿಯಾಗಿದ್ದಾರೆ’ ಎಂದು ಅಜಯ್‌ ವಿಶ್ಲೇಷಿಸಿದ್ದಾರೆ.

‘ಬಾಹ್ಯ ಬೆಂಬಲ ನೀಡಲು ಸಿದ್ಧ’

‘ಅಗತ್ಯ ಬಿದ್ದರೆ ನಿತೀಶ್‌ ಕುಮಾರ್‌ ನೇತೃತ್ವದ ಬಿಹಾರ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ಸಿದ್ಧ’ ಎಂದು ಆರ್‌ಜೆಡಿಯ ಉಪಾಧ್ಯಕ್ಷ ಶಿವಾನಂದ ತಿವಾರಿ ಬುಧವಾರ ಹೇಳಿದ್ದಾರೆ.

48 ಗಂಟೆಗಳ ಅವಧಿಯಲ್ಲಿ ನಿತೀಶ್‌ ಸರ್ಕಾರಕ್ಕೆ ಬೆಂಬಲದ ಭರವಸೆ ನೀಡಿರುವ ಮಹಾಘಟಬಂಧನದ ನಾಲ್ಕನೇ ನಾಯಕ ಇವರಾಗಿದ್ದಾರೆ.

‘ಎನ್‌ಡಿಎ ಭಾಗವಾಗಿದ್ದರೂ ಸಂವಿಧಾನದ 370ನೇ ವಿಧಿ ರದ್ದುಪಡಿಸುವುದು, ಏಕರೂಪ ನಾಗರಿಕ ಸಂಹಿತೆ ಜಾರಿ, ರಾಮಮಂದಿರ ನಿರ್ಮಾಣ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ಬಿಜೆಪಿಯ ನಿಲುವಿಗೆ ನಿತೀಶ್‌ ಅವರ ಸಮ್ಮತಿ ಇಲ್ಲ. ಆದ್ದರಿಂದ ಎನ್‌ಡಿಎ ಮೈತ್ರಿಕೂಟದಿಂದ ಅವರು ಹೊರಬರುವುದಾದರೆ ಸರ್ಕಾರಕ್ಕೆ ಬೆಂಬಲ ನೀಡಲು ಆರ್‌ಜೆಡಿ ಸಿದ್ಧವಿದೆ’ ಎಂದು ತಿವಾರಿ ಹೇಳಿದ್ದಾರೆ.

243 ಸದಸ್ಯಬಲದ ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ 80 ಹಾಗೂ ಜೆಡಿಯು 72 ಸ್ಥಾನಗಳನ್ನು ಗೆದ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT