ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: 2 ಲಕ್ಷ ದಾಟಿದ ಕೋವಿಡ್‌

Last Updated 2 ಜೂನ್ 2020, 20:53 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಸಂಖ್ಯೆ ಮಂಗಳವಾರ ಎರಡು ಲಕ್ಷವನ್ನು ದಾಟಿದ್ದು, ಸತತ ಮೂರನೇ ದಿನವೂ ಎಂಟು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗೆವರೆಗೆ 8,171 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1,98,706 ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಆದರೆ, ವಿವಿಧ ರಾಜ್ಯಗಳು ನೀಡಿದ ಮಾಹಿತಿ‍ಪ್ರಕಾರ, ಸೋಂಕಿತರ ಒಟ್ಟು ಸಂಖ್ಯೆಯು 2,00,403ಕ್ಕೆ ಏರಿದೆ.

ಮೇ 19ರಂದು ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಒಂದು ಲಕ್ಷ ದಾಟಿತ್ತು. ನಂತರದ 15 ದಿನಗಳಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಂಡಿದೆ.

ಸಾವಿನ ಸಂಖ್ಯೆಯಲ್ಲಿಯೂ ಮಂಗಳವಾರ ಹೆಚ್ಚಳವಾಗಿದೆ. 204 ಮಂದಿ ಮೃತಪಟ್ಟಿದ್ದು ಒಟ್ಟು ಸಂಖ್ಯೆ 5,598ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮೃತರಲ್ಲಿ ಶೇ 50ರಷ್ಟು ಮಂದಿ 60 ವರ್ಷಕ್ಕಿಂತ ಹೆಚ್ಚಿನವರು. 60 ಮತ್ತು ಅದಕ್ಕಿಂತ ಹೆಚ್ಚಿನವರ ಪ್ರಮಾಣವುಜನಸಂಖ್ಯೆಯ ಶೇ 10ರಷ್ಟಿದೆ.

ಕೋವಿಡ್‌ನಿಂದ ಮೃತಪಟ್ಟವರಲ್ಲಿ ಶೇ 38ರಷ್ಟು ಮಂದಿ 60–74ರ ವಯೋಮಾನದವರು. 75 ವರ್ಷಕ್ಕಿಂತ ಹೆಚ್ಚಿನವರು ಮೃತಪಟ್ಟ ಪ್ರಮಾಣವು ಶೇ 12ರಷ್ಟಿದೆ ಎಂದು ಸರ್ಕಾರದ ವಿಶ್ಲೇಷಣೆ ಹೇಳಿದೆ.

‘60 ವರ್ಷ ದಾಟಿದವರಿಗೆ ಕೋವಿಡ್‌ನಿಂದ ಅಪಾಯ ಹೆಚ್ಚು. ಹಾಗಾಗಿ, ಅವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅದಲ್ಲದೆ, ಮೃತಪಟ್ಟವರಲ್ಲಿ ಶೇ 73ರಷ್ಟು ಮಂದಿ ಬೇರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದವರು. ಹಾಗಾಗಿ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಉಸಿರಾಟದ ತೊಂದರೆಗಳನ್ನು ಹೊಂದಿರುವವರು ಎಚ್ಚರಿಕೆ ವಹಿಸಬೇಕು’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್‌ ಹೇಳಿದ್ದಾರೆ.

ಸೋಂಕಿತರ ಸಂಖ್ಯೆಯಲ್ಲಿ ದೇಶವು ಜಗತ್ತಿನಲ್ಲಿ ಏಳನೇ ಸ್ಥಾನದಲ್ಲಿದೆ. ಆದರೆ, ಸೋಂಕಿತರ ಸಂಖ್ಯೆಯನ್ನು ಒಟ್ಟು ಜನಸಂಖ್ಯೆಗೆ ಹೋಲಿಸಿ ನೋಡಬೇಕು ಎಂದು ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT