ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರಿಗೆ ಭಾರತ ಸ್ವರ್ಗ, ಅವರ ಹಕ್ಕುಗಳು ಸುರಕ್ಷಿತ: ಕೇಂದ್ರ ಸಚಿವ ನಖ್ವಿ

Last Updated 21 ಏಪ್ರಿಲ್ 2020, 8:18 IST
ಅಕ್ಷರ ಗಾತ್ರ

ನವದೆಹಲಿ: ‘ಮುಸ್ಲಿಮರು ಭಾರತದಲ್ಲಿ ಸಮೃದ್ಧವಾಗಿದ್ದಾರೆ. ಈ ವಾತಾವಾರಣವನ್ನು ಹಾಳು ಮಾಡುವವರು ಸ್ನೇಹಿತರಾಗಿರಲು ಸಾಧ್ಯವಿಲ್ಲ,’ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.

‘ಭಾರತದಲ್ಲಿ ಇಸ್ಲಾಮೋಫೋಬಿಯಾದಂಥ (ಮುಸ್ಲಿಮರ ವಿರುದ್ಧ ದ್ವೇಷ, ಭೀತಿ, ಪೂರ್ವಾಗ್ರಹಗಳು) ಘಟನೆಗಳು ನಡೆಯುತ್ತಿವೆ,’ಎಂದು ದುಬೈನ ಅಂತಾರಾಷ್ಟ್ರೀಯ ಇಸ್ಲಾಮ್‌ ಒಕ್ಕೂಟ ‘ಇಸ್ಲಾಮಿಕ್‌ ಸಹಕಾರ ಸಂಸ್ಥೆ’ (ಒಐಸಿ) ಭಾನುವಾರ ಆತಂಕ ವ್ಯಕ್ತಪಡಿಸಿತ್ತು. ಅಲ್ಲದೇ, ‘ಭಾರತವು ಅಲ್ಪಸಂಖ್ಯಾತ, ಮುಸ್ಲಿಂ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು, ದೇಶದಲ್ಲಿ ಇಸ್ಲಾಮೋಫೋಬಿಯಾದಂಥ ಘಟನೆಗಳನ್ನು ತಡೆಯಬೇಕು,’ ಎಂದು ಭಾನುವಾರ ಒತ್ತಾಯಿಸಿತ್ತು.

ಒಐಸಿಯ ಈ ಅಭಿಪ್ರಾಯದ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ ಪ್ರತಿಕ್ರಿಯೆ ನೀಡಿರುವ ನಖ್ವಿ, ‘ನಮ್ಮ ಕೆಲಸವನ್ನು ನಾವು ಒಮ್ಮತದಿಂದ ಮಾಡುತ್ತಿದ್ದೇವೆ. ಈ ದೇಶದ 130 ಕೋಟಿ ಜನರ ಹಕ್ಕುಗಳು ಮತ್ತು ಹಿತದ ಬಗ್ಗೆ ದೇಶದ ಪ್ರಧಾನಮಂತ್ರಿಗಳು ಯಾವಾಗಲೂ ಮಾತನಾಡುತ್ತಾರೆ,’ ಎಂದು ಅವರು ಹೇಳಿದರು.

‘ಒಂದು ವೇಳೆ ಯಾರಿಗಾದರೂ ಇದು ಕಾಣದೇ ಹೋದರೆ ಅದು ಅವರ ಸಮಸ್ಯೆ. ಭಾರತದ ಮುಸ್ಲಿಮರು ಮತ್ತು ಅಲ್ಪಸಂಖ್ಯಾತರು, ಎಲ್ಲ ವರ್ಗದವರು ಇಲ್ಲಿ ಸಮೃದ್ಧವಾಗಿ ಬದುಕುತ್ತಿದ್ದಾರೆ. ಭಾರತ ಅವರಿಗೆ ಸ್ವರ್ಗ. ಅವರ ಅರ್ಥಿಕತೆ, ಧಾರ್ಮಿಕ ಹಕ್ಕುಗಳು ಇಲ್ಲಿ ಸುರಕ್ಷಿತವಾಗಿದೆ. ಈ ಸಾಮರಸ್ಯವನ್ನು ಕದಡಲು ಪ್ರಯತ್ನಿಸುವವರು ಭಾರತದ ಮುಸ್ಲಿಮರ ಸ್ನೇಹಿತರಾಗಿರಲು ಸಾಧ್ಯವಿಲ್ಲ,’ ಎಂದು ನಖ್ವಿ ಹೇಳಿದ್ದಾರೆ.

ಭಾರತದಲ್ಲಿ ಜಾತ್ಯತೀತತೆ ಮತ್ತು ಸಾಮರಸ್ಯ ಎಂಬುದು ಕೇವಲ ರಾಜಕೀಯ ಕಲ್ಪನೆ ಮಾತ್ರವಲ್ಲ. ಭಾರತ ಮತ್ತು ಭಾರತೀಯರಿಗೆ ಅದು ಪರಿಪೂರ್ಣ ಭಾವನೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT