ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಕರ್ತಾರಪುರ ಒಪ್ಪಂದಕ್ಕೆ ಸಹಿ

ನವೆಂಬರ್ 9ರಂದು ಪಾಕಿಸ್ತಾನ ಪ್ರಧಾನಿಯಿಂದ ಕಾರಿಡಾರ್‌ಗೆ ಅಧಿಕೃತ ಚಾಲನೆ
Last Updated 24 ಅಕ್ಟೋಬರ್ 2019, 19:06 IST
ಅಕ್ಷರ ಗಾತ್ರ

ಲಾಹೋರ್/ಡೇರಾ ಬಾಬಾ ನಾನಕ್/ನವದೆಹಲಿ: ಐತಿಹಾಸಿಕ ಕರ್ತಾರಪುರ ಕಾರಿಡಾರ್‌ ಸಂಚಾರಕ್ಕೆ ಚಾಲನೆ ನೀಡುವ ಒಪ್ಪಂದಕ್ಕೆ ಭಾರತ ಹಾಗೂ ಪಾಕಿಸ್ತಾನ ಕೊನೆಗೂ ಗುರುವಾರ ಸಹಿ ಹಾಕಿವೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿದ ಬಳಿಕ ಉಭಯ ದೇಶಗಳ ನಡುವಿನ ಬಾಂಧವ್ಯ ಹದಗೆಟ್ಟಿದೆ. ಇದರ ನಡುವೆಯೂ, ಅಂತರರಾಷ್ಟ್ರೀಯ ಗಡಿ ಬಳಿಯ ಕರ್ತಾರಪುರ ಶೂನ್ಯವಲಯದಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ ನಡೆಯಿತು.

ಭಾರತದ ಪರವಾಗಿ ಕೇಂದ್ರ ಗೃಹಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್‌.ಸಿ.ಎಲ್. ದಾಸ್ ಹಾಗೂ ಪಾಕಿಸ್ತಾನದ ಪರವಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಒಪ್ಪಂದಕ್ಕೆ ಸಹಿ ಹಾಕಿದರು.

ಭಾರತದ ಪಂಜಾಬ್‌ನಲ್ಲಿರುವ ಡೇರಾ ಬಾಬಾ ನಾನಕ್‌ ಹಾಗೂ ಪಾಕಿಸ್ತಾನದ ಪಂಜಾಬ್‌ನಲ್ಲಿನ
ಕರ್ತಾರಪುರದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಈ ಕಾರಿಡಾರ್ ಸಂಪರ್ಕ ಕಲ್ಪಿಸಲಿದೆ.

ಅಂತರರಾಷ್ಟ್ರೀಯ ಗಡಿಯಿಂದ ದರ್ಬಾರ್ ಸಾಹಿಬ್ ಕೇವಲ 4 ಕಿ.ಮೀ. ದೂರದಲ್ಲಿದೆ.‌

ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ದೇವ್ ಅವರು ತಮ್ಮ ಜೀವಿತದ ಕೊನೆಯ 18 ವರ್ಷಗಳನ್ನು ದರ್ಬಾರ್ ಸಾಹಿಬ್‌ನಲ್ಲಿ ಕಳೆದಿದ್ದರು. ಹಾಗಾಗಿ ಭಾರತದ ಸಿಖ್ಖರಿಗೆ ಇದು ಪವಿತ್ರ ಕ್ಷೇತ್ರವಾಗಿದ್ದು, ಇಲ್ಲಿಗೆ
ವೀಸಾಮುಕ್ತ ಭೇಟಿ ನೀಡಲು ಅವಕಾಶ ಕಲ್ಪಿಸಬೇಕೆಂಬುದು ಭಾರತದ ದೀರ್ಘಾವಧಿಯ ಬೇಡಿಕೆಯಾಗಿತ್ತು.

ನ.12 ಗುರು ನಾನಕ್ ದೇವ್ ಅವರ 550ನೇ ಜಯಂತಿಯಾಗಿದೆ.

ನೋಂದಣಿ ಪ್ರಕ್ರಿಯೆ ಆರಂಭ

ಒಪ್ಪಂದಕ್ಕೆ ಸಹಿ ಹಾಕಲಾದ ತಕ್ಷಣವೇ prakashpurb550.mha.gov.in ವೆಬ್‌ಸೈಟ್‌ನಲ್ಲಿ ಯಾತ್ರಿಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ಪ್ರಯಾಣದ ದಿನಕ್ಕಿಂತ 10 ದಿನ ಮುಂಚಿತವಾಗಿ ಭಾರತ ಯಾತ್ರಿಗಳ ಪಟ್ಟಿಯನ್ನು ಪಾಕಿಸ್ತಾನಕ್ಕೆ ನೀಡುತ್ತದೆ. ಪ್ರಯಾಣಕ್ಕೆ 4 ದಿನ ಬಾಕಿ ಇರುವಾಗ ಮೊಬೈಲ್ ಸಂದೇಶ ಹಾಗೂ ಇ–ಮೇಲ್ ಮುಖಾಂತರ ತಿಳಿಸಲಾಗುತ್ತದೆ.

ದರ್ಬಾರ್ ಸಾಹಿಬ್‌ಗೆ ಭೇಟಿ ನೀಡುವವರು ಗರಿಷ್ಠ ₹11,000 ಹಣ ಹಾಗೂ 7 ಕೆ.ಜಿ. ಲಗೇಜ್ ಒಯ್ಯಲು ಮಾತ್ರ ಅನುಮತಿ ನೀಡಲಾಗಿದೆ.

ಒಪ್ಪಂದದ ಅನುಸಾರ ಭಕ್ತಾದಿಗಳು ಮುಂಜಾನೆ ಗುರುದ್ವಾರಕ್ಕೆ ಭೇಟಿ ನೀಡಿ ಸಂಜೆ ವಾಪಸಾಗಬಹುದು. ಭಾರತೀಯ ಯಾತ್ರಿಗಳಿಗೆ ಶುಲ್ಕ ವಿಧಿಸಬಾರದು ಎನ್ನುವುದು ಭಾರತದ ಬೇಡಿಕೆ. ಆದರೆ ಪಾಕಿಸ್ತಾನ ಪ್ರತಿ ಭಾರತೀಯ ಯಾತ್ರಿಗೆ 20 ಡಾಲರ್ (ಅಂದಾಜು ₹1,400) ಶುಲ್ಕ ವಿಧಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT