ಮಂಗಳವಾರ, ಫೆಬ್ರವರಿ 25, 2020
19 °C
ಕೆರೆಕುಂಟೆಗಳಿಗೆ ಹಾನಿಯಾದರೆ ಸ್ಥಳೀಯ ಸಂಸ್ಥೆ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ: ‘ಸುಪ್ರೀಂ’

ಮಾಲಿನ್ಯಕ್ಕೆ ಆಯುಕ್ತ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Air  Pollution

ನವದೆಹಲಿ: ಜಲಮೂಲಗಳ ಮಾಲಿನ್ಯಕ್ಕೆ ಸ್ಥಳೀಯಾಡಳಿತ ಸಂಸ್ಥೆಗಳನ್ನು ಹೊಣೆಯಾಗಿಸಬಹುದು. ಜಲಮೂಲಗಳಿಗೆ ಧಕ್ಕೆಯಾದರೆ ಈ ಸಂಸ್ಥೆಗಳ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ.

ಈ ವಿಚಾರದಲ್ಲಿ, ಸ್ಥಳೀಯಾಡಳಿತ ಸಂಸ್ಥೆಗಳನ್ನು ‘ಕಾರ್ಪೊರೇಟ್‌ ಸಂಸ್ಥೆ’ ಎಂದು ಪರಿಗಣಿಸಬೇಕು ಎಂದು ಕೋರ್ಟ್‌ ಹೇಳಿದೆ. 

 ಕೆರೆ– ಕಟ್ಟೆಗಳಂತಹ ನೈಸರ್ಗಿಕ ಜಲ ಮೂಲಗಳಿಗೆ, ಸಂಸ್ಕರಿಸದ ಕೊಳಚೆ ನೀರು ಸೇರಿಕೊಳ್ಳದಂತೆ ತಡೆಯು
ವುದು ಸ್ಥಳೀಯ ಸಂಸ್ಥೆಗಳ ಕರ್ತವ್ಯ. ಈ ನಿಟ್ಟಿನಲ್ಲಿ ವಿಫಲವಾಗುವ ಆ ಸಂಸ್ಥೆಗಳ ಮುಖ್ಯಸ್ಥರ ವಿರುದ್ಧ ದೂರು ನೀಡಿದಲ್ಲಿ ಶಾಸನಬದ್ಧ ನಿಬಂಧನೆಗಳ ಉಲ್ಲಂಘನೆಯ ಆರೋಪದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಬಹುದು ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

ಜಲ ಮೂಲಗಳನ್ನು ನಿರ್ಲಕ್ಷಿಸಿದ ಆರೋಪದಲ್ಲಿ ಬೆಂಗಳೂರಿನ ಕೃಷ್ಣರಾಜಪುರ ನಗರಸಭೆಯ ಆಗಿನ ಆಯುಕ್ತ ಬಿ.ಹೀರಾನಾಯ್ಕ್‌ ಹಾಗೂ ಅವರಿಗಿಂತ ಮುಂಚೆ ಇದೇ ಹುದ್ದೆಯಲ್ಲಿದ್ದ ಎಂ.ಎ. ಬೇಗ್‌, ಡಿ.ಎಲ್‌. ನಾರಾಯಣ ಮತ್ತಿತರರ ವಿರುದ್ಧ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು 2006ರಲ್ಲಿ ದೂರು ನೀಡಿತ್ತು. ಈ ದೂರಿನ ಮೇರೆಗೆ ನಡೆದ ತನಿಖೆಯನ್ನು ರದ್ದುಪಡಿಸಿ 2015ರ ಫೆಬ್ರುವರಿ 16ರಂದು ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪೀಠ ರದ್ದುಪಡಿಸಿತು. ಜಲ ಮೂಲಗಳನ್ನು ರಕ್ಷಿಸುವಲ್ಲಿ ನಿರ್ಲಕ್ಷ್ಯ ತಾಳುವ ಸ್ಥಳೀಯ ಸಂಸ್ಥೆಗಳ ಅಪರಾಧವು 1974ರ ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ ಅಡಿ ಶಿಕ್ಷಾರ್ಹವಾಗಿದೆ. ಆ ಪ್ರಮಾದವನ್ನು ಖಾಸಗಿ ಕಂಪನಿಗಳು ಎಸಗುವ ಪ್ರಮಾದಗಳೆಂದೇ ಪರಿಗಣಿಸಬಹುದಾಗಿದೆ ಎಂದು ನ್ಯಾಯಮೂರ್ತಿ ಎಂ.ಆರ್‌. ಶಾ ಅವರೂ ಇದ್ದ ಪೀಠ ಸ್ಪಷ್ಟಪಡಿಸಿದೆ.

‘ಜಲ ಮೂಲಗಳ ಸಂರಕ್ಷಣೆಯನ್ನು ನಿರ್ಲಕ್ಷಿಸಿರುವ ಅಧಿಕಾರಿಗಳ ವಿರುದ್ಧದ ತನಿಖೆಯನ್ನು ರದ್ದುಪಡಿಸಿ ಹೈಕೋರ್ಟ್‌ ಪ್ರಮಾದ ಎಸಗಿದೆ. ಕೆರೆಗಳ ಸ್ವರೂಪಕ್ಕೆ ಧಕ್ಕೆಯಾದಲ್ಲಿ ಅದಕ್ಕೆ ಕಾರಣವಾಗುವ ಖಾಸಗಿ ಸಂಸ್ಥೆಗಳ ಮುಖ್ಯಸ್ಥರನ್ನೇ ಜಲ ಕಾಯ್ದೆಯ ಸೆಕ್ಷನ್‌ 47ರ ಅಡಿ ಹೊಣೆಯಾಗಿಸಬಹುದು’ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಆಯುಕ್ತರ ನಿರ್ಲಕ್ಷ್ಯದ ವಿರುದ್ಧದ ಪ್ರಕರಣ

ಬೆಂಗಳೂರಿನ ಕೃಷ್ಣರಾಜಪುರ ನಗರಸಭೆ ವ್ಯಾಪ್ತಿಯ ಕೆರೆಗೆ ಕಲುಷಿತ ನೀರು ಸೇರದಂತೆ ತಡೆಯಲು ಸಂಸ್ಕರಣೆಗೆ ಕ್ರಮ ಕೈಗೊಳ್ಳಬೇಕು ಎಂದು 2006ರ ಜೂನ್‌ 30ರಂದು ಆಯುಕ್ತರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿತ್ತು. 6 ತಿಂಗಳೊಳಗೆ ಎಸ್‌ಟಿಪಿ (ಕೊಳಚೆ ನೀರಿನ ಸಂಸ್ಕರಣಾ ಘಟಕ) ಸ್ಥಾಪಿಸುವುದಾಗಿ ತಿಳಿಸಿದ್ದ ಆಯುಕ್ತರು ನಿರ್ಲಕ್ಷ್ಯ ತೋರಿದ್ದು, ಕಾಯ್ದೆಯ ನಿಬಂಧನೆಗಳಿಗೆ ವಿರುದ್ಧವಾಗಿ ಸಂಸ್ಕರಿಸದ ಕೊಳಚೆ ನೀರು ಕೆರೆಗೆ ಸೇರಿಕೊಳ್ಳುವುದು ಮುಂದುವರಿದಿದೆ ಎಂದು ಮಂಡಳಿಯು ಸ್ಥಳೀಯ ನ್ಯಾಯಾಲಯಕ್ಕೆ ದೂರು ನೀಡಿದ್ದರಿಂದ ತನಿಖೆ ಆರಂಭವಾಗಿತ್ತು.

ಆದರೆ, ಆಯುಕ್ತರು, ಮುಖ್ಯಾಧಿಕಾರಿಯನ್ನು ಸ್ಥಳೀಯ ಸಂಸ್ಥೆಯ ಮುಖ್ಯಸ್ಥರೆಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಜಲ ಕಾಯ್ದೆಯ ಸೆಕ್ಷನ್ 48ರ ಪ್ರಕಾರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗದು ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್‌, ತನಿಖೆಯನ್ನು ರದ್ದುಪಡಿಸಿತ್ತು. ಈ ಆದೇಶ ಪ್ರಶ್ನಿಸಿ ಮಾಲಿನ್ಯ ನಿಯಂತ್ರಣ ಮಂಡಳಿಯು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರಿಗಳೇ ಮುಖ್ಯಸ್ಥರಾಗಿದ್ದು, ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂದು ಮಂಡಳಿ ಪರ ವಕೀಲರು ವಾದ ಮಂಡಿಸಿದ್ದರು. ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ಪರ ಯಾವುದೇ ವಕೀಲರು ಹಾಜರಿರಲಿಲ್ಲ.

 

* ಸ್ಥಳೀಯಾಡಳಿತ ಸಂಸ್ಥೆಗಳ ಆಯುಕ್ತರು ಅಥವಾ ಮುಖ್ಯಾಧಿಕಾರಿಗಳನ್ನು ಆ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂದು ಪರಿಗಣಿಸಬೇಕು

* ಅವರು ಇಲಾಖೆಯ ಮುಖ್ಯಸ್ಥರಾಗಿರುವುದರಿಂದ ಕ್ರಮಕ್ಕೆ ಅವಕಾಶ ಇದೆ

*ಕರ್ನಾಟಕ ಮುನಿಸಿಪಾಲಿಟಿ ಕಾಯ್ದೆ 1964 ಮತ್ತು ಜಲ ಕಾಯ್ದೆ 1974ರ ಪ್ರಕಾರ, ಸ್ಥಳೀಯಾಡಳಿತ ಸಂಸ್ಥೆಗಳು ಸರ್ಕಾರದ ಅಧೀನ ಇಲಾಖೆ ಅಲ್ಲ

*ಸಂವಿಧಾನದ ಪ್ರಕಾರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸ್ವತಂತ್ರ ಅಸ್ತಿತ್ವ ಇದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು