ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಸುಳಿದರೆ ನುಗ್ಗಿ ಹೊಡೀತೀವಿ: ಪಾಕ್‌ಗೆ ಎಚ್ಚರಿಕೆಯ ಸಂದೇಶ ಕೊಟ್ಟ ಫಿರಂಗಿ ದಾಳಿ

Last Updated 23 ಅಕ್ಟೋಬರ್ 2019, 4:55 IST
ಅಕ್ಷರ ಗಾತ್ರ

ಪಾಕ್ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿರುವ ಉಗ್ರಗಾಮಿ ಶಿಬಿರಗಳನ್ನು ಗುರಿಯಾಗಿಸಿಭಾರತೀಯ ಸೇನೆ ಅ.19 ಮತ್ತು 20ರಂದುನಡೆಸಿದ ಫಿರಂಗಿ ದಾಳಿಯಲ್ಲಿ ಕನಿಷ್ಠ 18 ಉಗ್ರರು ಮತ್ತು ಪಾಕ್ ಸೇನೆಯ 16 ಸೈನಿಕರು ಸಾವನ್ನಪ್ಪಿದ್ದಾರೆಎಂದು ರಕ್ಷಣಾ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ‘ಹಿಂದೂಸ್ತಾನ್ ಟೈಮ್ಸ್‌’ ಬುಧವಾರ ವರದಿ ಮಾಡಿದೆ. ಆದರೆ ಭಾರತೀಯ ಸೇನೆ ಅಧಿಕೃತವಾಗಿ ಮೃತರ ಸಂಖ್ಯೆಗಳನ್ನು ದೃಢಪಡಿಸಿಲ್ಲ.

ಭಾರತದ ಗಡಿಯೊಳಗೆ ಉಗ್ರರನ್ನು ನುಗ್ಗಿಸಲು ಯತ್ನಿಸಿದ ಪಾಕ್ ಸೇನೆಯು ಶನಿವಾರ ಭಾರತೀಯ ಪಡೆಗಳ ಮುಂಚೂಣಿ ನೆಲೆಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಪಡೆಗಳು ಭಾನುವಾರ ನಸುಕಿನಲ್ಲಿಜೈಶ್–ಎ–ಮೊಹಮದ್ ಮತ್ತು ಇತರ ಜಿಹಾದಿಗಳಿದ್ದ ಉಗ್ರಗಾಮಿ ಶಿಬಿರಗಳನ್ನು ಗುರಿಯಾಗಿಸಿ ನಿಖರ ಫಿರಂಗಿದಾಳಿ ನಡೆಸಿದ್ದವು.

ಭೂಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್‌ ಭಾನುವಾರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರನ್ನು ಎರಡು ಬಾರಿ ಭೇಟಿಯಾಗಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿ ಶಿಬಿರಗಳ ಮೇಲೆ ನಡೆಸಿದ ದಾಳಿಯ ಮಾಹಿತಿ ನೀಡಿದ್ದರು. ಈ ವೇಳೆ, ‘ಒಂದೇ ಒಂದು ಉಗ್ರಗಾಮಿ ಶಿಬಿರವನ್ನು ಉಳಿಸಬೇಡಿ. ಆದರೆ ಯಾವುದೇ ಕಾರಣಕ್ಕೂ ಸಾಮಾನ್ಯ ಜನರ ಮೇಲೆ ಶೆಲ್‌ಗಳು ಬೀಳಬಾರದು. ಆ ಎಚ್ಚರದಿಂದ ಕೆಲಸ ಮಾಡಿ’ ಎಂದು ರಾಜನಾಥ್ ಸಿಂಗ್ ಸೂಚಿಸಿದ್ದರು.

ಪಾಕ್ ಸೇನೆಯ ಆಹಾರ, ಮದ್ದುಗುಂಡು ದಾಸ್ತಾನು ಕೇಂದ್ರಗಳೂ ಫಿರಂಗಿ ದಾಳಿಯಲ್ಲಿ ನಾಶವಾಗಿವೆ. ನೀಲಂ ಕಣಿವೆಯ ಜುರಾ, ಅಥ್ಮಖುಂ ಮತ್ತು ಕುಂದಲ್‌ಶಹಿ ಪ್ರದೇಶದಲ್ಲಿದ್ದ ಉಗ್ರಗಾಮಿ ಶಿಬಿರಗಳನ್ನು ನಿಖರ ಗುರಿಯಾಗಿಸಿ ಭಾರತೀಯ ಪಡೆಗಳು ದಾಳಿ ನಡೆಸಿದವು. ದಾಳಿಗೆ 155 ಎಂಎಂ ವ್ಯಾಸದ ದೂರಗಾಮಿ ಫಿರಂಗಿಗಳನ್ನು ಬಳಸಲಾಗಿತ್ತು.

ಪಾಕ್‌ನಲ್ಲಿ ತರಬೇತಿ ಪಡೆದಿರುವಸುಮಾರು 60 ಉಗ್ರರು ಈಗಾಗಲೇಕಾಶ್ಮೀರದೊಳಗೆ ನುಸುಳಿದ್ದಾರೆ. ಸುಮಾರು 500 ಮಂದಿ ಕಾಶ್ಮೀರಕ್ಕೆ ಬರಲು ಸಿದ್ಧರಾಗಿದ್ದಾರೆ. ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಯೋಜನೆ ರೂಪುಗೊಡಿದೆ ಎಂದುಭಾರತೀಯ ಗುಪ್ತಚರ ಸಂಸ್ಥೆಗಳು ಸೇನೆಗೆ ಮಾಹಿತಿ ನೀಡಿದ್ದವು.

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಗುಪ್ತಚರ ಮೂಲಗಳು ಮತ್ತು ಪಾಕ್‌ ಪಡೆಗಳ ಆಂತರಿಕ ಸಂವಹನದ ಮೇಲೆನಿಗಾ ಇರಿಸುವ ಮೂಲಕಭಾರತೀಯ ಸೇನೆ ಸಾಕಷ್ಟು ಮಾಹಿತಿ ಸಂಗ್ರಹಿಸಿದೆ. ಅದರಂತೆ ‘ನಿಖರ ದಾಳಿಯಿಂದಪಾಕ್ ಸೇನೆ ಮತ್ತು ಜಿಹಾದಿ ಉಗ್ರರು ಕಂಗಾಲಾಗಿದ್ದಾರೆ. ತಮ್ಮ ನೆಲೆಗಳ ಮಾಹಿತಿ ಭಾರತಕ್ಕೆ ಹೇಗೆ ತಿಳಿಯಿತು ಎನ್ನುವ ಆಂತರಿಕ ವಿಚಾರಣೆ ಅಲ್ಲಿ ಈಗ ಆರಂಭವಾಗಿದೆ. 18 ಉಗ್ರರು, 16 ಸೈನಿಕರು ಭಾರತದ ದಾಳಿಯಿಂದ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ’ಎಂಬ ಮಾಹಿತಿಯನ್ನು ‘ಹಿಂದೂಸ್ತಾನ್ ಟೈಮ್ಸ್‌’ ವರದಿ ಮಾಡಿದೆ.

‘ಭಾರತಕ್ಕೆ ನುಸುಳುವ ಪ್ರಯತ್ನ ಮಾಡಿದರೆ ಎಲ್‌ಒಸಿ ದಾಟಿ ದಾಳಿ ಮಾಡಲು ಭಾರತೀಯ ಸೇನೆ ಹಿಂಜರಿಯುವುದಿಲ್ಲ ಎಂಬ ಮಾಹಿತಿಯನ್ನು ಈ ಫಿರಂಗಿ ದಾಳಿಯ ಮೂಲಕ ಪಾಕ್ ಸೇನೆಗೆ ರವಾನಿಸಿದಂತೆ ಆಗಿದೆ’ ಎನ್ನುವ ಮತ್ತೋರ್ವ ಅಧಿಕಾರಿಯ ಹೇಳಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್‌’ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT