ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವಾನ ಪರಾಕ್ರಮ: ವೈರಿ ಪಡೆ ಹಿಮ್ಮಟ್ಟಿಸಿ, ಉಗ್ರರ ಹುಟ್ಟಡಗಿಸುವ ಸೇನೆಯ ಸ್ನೇಹಿತರು

Last Updated 19 ಜನವರಿ 2019, 5:47 IST
ಅಕ್ಷರ ಗಾತ್ರ

2017 ಜೂನ್‌ ತಿಂಗಳಿನ ಆ ಒಂದು ದಿನ ಲಷ್ಕರ್‌ ಇ–ತಯಬಾ ಸಂಘಟನೆಯ ಉಗ್ರರು ಉತ್ತರ ಕಾಶ್ಮೀರದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ(ಸಿಆರ್‌ಪಿಎಫ್‌) ಶಿಬಿರವನ್ನು ಗುರಿಯಾಗಿರಿಸಿ ದಾಳಿ ಸಂಘಟಿಸಿದ್ದರು. ಸಂಭವನೀಯ ಅಪಾಯವನ್ನರಿತ ಸೇನೆಯಲ್ಲಿರುವ ಸ್ಥಳೀಯ ತಳಿಯ ಶ್ವಾನವೊಂದು ಮುಳ್ಳಿನ ಬೇಲಿಯನ್ನು ಕತ್ತರಿಸಿ ಉಗ್ರರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿತು. ಜೊತೆಗೆ ಗದ್ದಲ ಮಾಡುತ್ತಾ ಸೇನಾಪಡೆಗಳಗೆ ಎಚ್ಚರಿಕೆ ಸಂದೇಶ ರವಾನಿಸಿತ್ತು.

ಇದರಿಂದ ಭೀತಿಗೊಂಡ ಉಗ್ರರು ಶಿಬಿರ ಪ್ರವೇಶಿಸದೆ ಶ್ವಾನದತ್ತ ಹಾಗೂ ಸೇನಾ ನೆಲೆಯತ್ತ ಗುಂಡಿನ ದಾಳಿ ಮಾಡಿದ್ದರು. ಶಬ್ಧ ಆಲಿಸಿ ಸೇನಾ ಸಿಬ್ಬಂದಿ ಧಾವಿಸುವಷ್ಟರಲ್ಲಿ ಬೊಗಳುತ್ತಾ ಘಟನಾ ಸ್ಥಳಕ್ಕೆ ಜಮಾಯಿಸಿದ್ದ ಮತ್ತಷ್ಟು ಶ್ವಾನಗಳು, ಉಗ್ರರು ನುಸುಳಿದ್ದ ಪೊದೆಯವರೆಗೂ ಅಟ್ಟಾಡಿಸಿಕೊಂಡು ಹೋಗಿ ಹಿಮ್ಮೆಟ್ಟಿಸಿದ್ದವು.ಆ ಎಲ್ಲ ಶ್ವಾನಗಳ ಪಾಲನೆಯನ್ನು ಸಿಆರ್‌ಪಿಎಫ್‌ ನಿರ್ವಹಿಸುತ್ತಿದೆ.

***

ಹೀಗೆ ಜಮ್ಮು-ಕಾಶ್ಮೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ಉಗ್ರ ಕೃತ್ಯಗಳನ್ನು ನಿಯಂತ್ರಿಸಲು ಸೇನೆ ನಡೆಸುವ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವ ಶ್ವಾನಗಳು ಯೋಧರ ಜೀವ ಉಳಿಸುವ, ರಕ್ಷಣಾ ಕ್ರಮಗಳನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಗಡಿ ರಕ್ಷಣೆಗೆ ನೆರವಾಗುತ್ತಿರುವ ಸೇನೆಯ ಕೋರೆ ಹಲ್ಲಿನ ಸ್ನೇಹಿತರ ಬಗ್ಗೆ ದಿ ಪ್ರಿಂಟ್‌ ಮಾಡಿರುವ ವರದಿ ಇಲ್ಲಿದೆ.

**

ಪ್ರಕರಣ ಭೇದಿಸಿದ್ದ ಡಿನೋ

2016ರ ನವೆಂಬರ್‌ 28ರಂದು ನಗ್ರೋಟಾದ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದ ಜೈಷ್‌–ಎ–ಮೊಹಮ್ಮದ್‌ ಸಂಘಟನೆಯ ಮೂವರು ಉಗ್ರರು ಗಡಿ ಪ್ರವೇಶಿಸಿದ್ದ ಮಾರ್ಗ ಪತ್ತೆ ಮಾಡಲು ಡಿನೋ(ಸೇನೆಯ ಶ್ವಾನ) ನೆರವಾಗಿತ್ತು.

ಪೊದೆಯೊಂದರಲ್ಲಿ ಇದ್ದ ಉಗ್ರನೊಬ್ಬನ ಸಾಕ್ಸ್‌ಅನ್ನು ಸೇನೆಗೊಪ್ಪಿಸಿದ್ದ ಅದು, ಉಗ್ರರು ಸಾಗಿ ಬಂದಿದ್ದ ಸುಮಾರು ಒಂದು ಕಿ.ಮೀ ಗೂ ಹೆಚ್ಚು ದೂರದ ಮಾರ್ಗವನ್ನು ಗುರುತಿಸಿತ್ತು.ಇದರಿಂದಾಗಿ ಏಳು ಯೋಧರನ್ನು ಬಲಿ ಪಡೆದಿದ್ದ ಪ್ರಕರಣದ ಭೇದಿಸಲು ಸಾಧ್ಯವಾಗಿತ್ತು.

ಲ್ಯಾಬ್ರಡೋರ್‌ ತಳಿಯ ಡಿನೋ ಭಾರತೀಯ ಸೇನೆಯಲ್ಲಿರುವ ನುರಿತ ಕೌಶಲ್ಯದ ಶ್ವಾನ. ಜಮ್ಮು ಕಾಶ್ಮೀರದಲ್ಲಿನ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಉಗ್ರರನ್ನು ಹಿಂಬಾಲಿಸುವುದು, ನುಸುಳುಕೋರರನ್ನು ಹಿಮ್ಮೆಟ್ಟಿಸುವುದು ಹಾಗೂ ಸೇನೆಗೆ ಸೂಚನೆಗಳನ್ನು ನೀಡುವ ಇದು ಹಲವು ರಕ್ಷಣಾ ಕಾರ್ಯಾಚರಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

ಯೋಧರ ರಕ್ಷಣೆ ಮಾತ್ರವಲ್ಲ ಸೇನಾಪಡೆಗಳನ್ನು ಅಲರ್ಟ್‌ ಮಾಡುತ್ತವೆ

ಶ್ವಾನಗಳು ಸೈನಿಕರ ಪ್ರಾಣ ರಕ್ಷಣೆಗೆ ಮಾತ್ರವಲ್ಲದೆ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರ ನುಸುಳುವಿಕೆ, ಅಪಾಯದ ಸಂದರ್ಭಗಳಲ್ಲಿ ಸೇನಾಪಡೆಗಳನ್ನು ಅಲರ್ಟ್‌ ಮಾಡುತ್ತವೆ. ಶತ್ರು ಸೈನ್ಯದಲ್ಲಿನ ಶ್ವಾನಗಳೂ ಇದೇ ರೀತಿಯ ಕಾರ್ಯ ಮಾಡುತ್ತವೆ. ಹಾಗಾಗಿ ಪಾಕ್‌ ಆಕ್ರಮಿತ ಪ್ರದೇಶದಲ್ಲಿ ಭಾರತೀಯ ಸೇನೆ ನಿರ್ದಿಷ್ಟ ದಾಳಿ ನಡೆಸಿದ್ದ(2016ರಲ್ಲಿ) ಸಂದರ್ಭದಲ್ಲಿ ವೈರಿಪಡೆಯ ಶ್ವಾನಗಳಲ್ಲಿ ಭಯ ಮೂಡಿಸಿ ದಿಕ್ಕು ತಪ್ಪಿಸುವ ಸಲುವಾಗಿ ಚಿರತೆಯ ಮೂತ್ರವನ್ನು ಬಳಸಲಾಗಿತ್ತು.

ಗಡಿ ನಿಯಂತ್ರಣ ರೇಖೆ ಹಾಗೂಭದ್ರತಾ ಶಿಬಿರಗಳಲ್ಲಿರುವ ಶ್ವಾನಗಳ ಆರೈಕೆಗಾಗಿ ವಿಶೇಷ ಗಮನಹರಿಸಲಾಗುತ್ತದೆ. ಅದರ ಪರಿಣಾಮವಾಗಿಯೇ ಜಮ್ಮು ಕಾಶ್ಮೀರದಲ್ಲಿನ ಎಲ್ಲ ಸೇನಾ ನೆಲೆಗಳೂ ಶ್ವಾನಗಳ ಆಶ್ರಯ ತಾಣವಾಗಿವೆ.

‘ನಾವು ಎದುರಾಳಿಗಳ ವ್ಯೂಹ ಬೇಧಿಸುವ, ದಾಳಿಮಾಡುವ ಸಾಮರ್ಥ್ಯವುಳ್ಳ ನಮ್ಮದೇ ಆದ ಶ್ವಾನ ಪಡೆ ನಮ್ಮಲ್ಲಿದೆ. ಆದರೆ ಸಂಭವನೀಯ ಅಪಾಯಗಳನ್ನು ಹಿಮ್ಮೆಟ್ಟಿಸುವಲ್ಲಿ ಸ್ಥಳೀಯ ತಳಿಯ ಶ್ವಾನಗಳೇ ನಮ್ಮ ಪ್ರಮುಖ ಅಸ್ತ್ರ’ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಮೀರ್‌ ಟೈಗರ್‌ನಂತಹ ಪ್ರಮುಖ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದ ರಾಷ್ಟ್ರೀಯ ರೈಫಲ್ಸ್‌–44 ಶಿಬಿರದಲ್ಲಿ 30 ದೇಶೀ ತಳಿಯ ಶ್ವಾನಗಳನ್ನು ನಿರ್ವಹಿಸಲಾಗುತ್ತಿದೆ.

ಮರಣೋತ್ತರ ಗೌರವ ಪಡೆದ ಮೊದಲ ಶ್ವಾನ ಮಾನ್ಸಿ

ಉತ್ತರ ಕಾಶ್ಮೀರದಲ್ಲಿ 2015ರಲ್ಲಿ ಉಗ್ರರ ಒಳನುಸುಳುವಿಕೆಯನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ನಾಲ್ಕು ವರ್ಷದ ಮಾನ್ಸಿ ಹಾಗೂ ಅದರ ಪಾಲಕ ಬಶೀರ್‌ ಅಹ್ಮದ್‌ ಹುತಾತ್ಮರಾಗಿದ್ದರು. ಬಳಿಕ ಮಾನ್ಸಿ ಹಾಗೂ ಬಶೀರ್‌ ಅವರಿಗೆ ಮರೋಣೋತ್ತರ ಯುದ್ಧ ಗೌರವ ಸಲ್ಲಿಸಲಾಗಿತ್ತು. ಆ ಮೂಲಕ ಈ ಗೌರವ ಪಡೆದ ಮೊದಲ ಶ್ವಾನ ಎಂಬ ಹೆಗ್ಗಳಿಕೆ ಮಾನ್ಸಿ ಹೆಸರಿಗೆ ಸೇರಿಕೊಂಡಿತು.

ಗಣನೀಯ ಸೇವೆಯನ್ನು ಪರಿಗಣಿಸಿದ ಸೇನೆ ಮಾನ್ಸಿ ಹೆಸರನ್ನು ‘ಮೆನ್ಷನ್‌ ಆಫ್‌ ಡಿಸ್ಪಾಚಸ್‌’ನಲ್ಲಿ ಉಲ್ಲೇಖಸಿದ್ದು, ಪ್ರಮಾಣ ಪತ್ರವನ್ನೂ ನೀಡಿದೆ. (ಯುದ್ಧದ ಸಂದರ್ಭದಲ್ಲಿ ಪರಾಕ್ರಮ ತೋರಿದ ಯೋಧರು, ಸೇನೆಗೆ ನೆರವಾದ ವೈದ್ಯರು, ಗಣನೀಯ ಸೇವೆ ಸಲ್ಲಿಸಿದ ನಾಗರಿಕರ ಹೆಸರುಗಳನ್ನು ಉಲ್ಲೇಖಸಿದ ಅಧಿಕೃತ ಪ್ರಮಾಣ ಪತ್ರವನ್ನು ರಕ್ಷಣಾ ಸಚಿವಾಲಯದಿಂದ ನೀಡಲಾಗುತ್ತದೆ)

ಸೇನೆಯಲ್ಲಿನ ಶ್ವಾನಗಳು

ಭಾರತೀಯ ಸೇನೆಯಲ್ಲಿ ತರಬೇತಿ ಪಡೆದ ಜರ್ಮನ್‌ ಶೆಫರ್ಡ್‌,ಲ್ಯಾಬ್ರಡೋರ್ಸ್, ಬೆಲ್ಜಿಯನ್‌ ಶೆವರ್ಡ್‌, ಗ್ರೇಟ್‌ ಸ್ವಿಸ್‌ ಮೌಂಟೇನ್‌ ಹಾಗೂ ಇನ್ನಿತರ ಪ್ರಮುಖ ತಳಿಯ ಸುಮಾರು 1,200 ಶ್ವಾನಗಳಿವೆ.

ಚುರುಕುತನ, ವೇಗ ಹಾಗೂ ಎದುರಾಳಿಯ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಕಾರಣದಿಂದಾಗಿ ಮುಧೋಳ್‌ ಹೌಂಡ್‌ನಂತಹ ಸ್ಥಳೀಯ ಶ್ವಾನಗಳನ್ನೂ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT