ಮಂಗಳವಾರ, ಮಾರ್ಚ್ 2, 2021
23 °C
ಮಾತುಕತೆ ಬಳಿಕ ಇತ್ಯರ್ಥ

ಭಾರತ–ಚೀನಾ ಸೇನೆಗಳ ಮಧ್ಯೆ ಘರ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಮತ್ತು ಚೀನಾ ಸೇನಾ ಪಡೆಗಳ ನಡುವೆ ಸಿಕ್ಕಿಂನ ಉತ್ತರ ವಲಯದ ಗಡಿಯಲ್ಲಿ ತೀವ್ರತರವಾದ ಘರ್ಷಣೆ ನಡೆದಿದೆ.

ನಾಕು ಲಾ ವಲಯದಲ್ಲಿ ಶನಿವಾರ ಈ ಘರ್ಷಣೆ ನಡೆದಿದ್ದು, ಉಭಯ ದೇಶಗಳಿಗೆ ಸೇರಿದ ಹಲವು ಯೋಧರು ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.

ಈ ಘರ್ಷಣೆಯಲ್ಲಿ ಸುಮಾರು 150 ಯೋಧರು ಭಾಗಿಯಾಗಿದ್ದರು. ಸ್ಥಳೀಯ ಹಂತದಲ್ಲಿ ಮಾತುಕತೆ ನಡೆಸಿದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಇದೊಂದು ತಾತ್ಕಾಲಿಕ ಮತ್ತು ಅತಿ ಕಡಿಮೆ ಅವಧಿಯ ಘರ್ಷಣೆಯಾಗಿತ್ತು. ಗಡಿ ವಿವಾದ ಇತ್ಯರ್ಥವಾಗದ ಕಾರಣ ಇಂತಹ ಘಟನೆಗಳು ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಉಭಯ ದೇಶಗಳ ಸೇನಾ ಪಡೆಗಳು  ಪರಸ್ಪರ ಮಾತುಕತೆ ಮೂಲಕ ಘರ್ಷಣೆ
ಮುಂದುವರಿಯುವುದನ್ನು ನಿಲ್ಲಿಸಲಾಗುತ್ತದೆ ಎಂದು ತಿಳಿಸಿವೆ.

 ಮೇ 5 ಮತ್ತು 6ರಂದು ಸತತ ಎರಡು ದಿನಗಳ ಕಾಲ ಇದೇ ರೀತಿಯ ಘರ್ಷಣೆ ಲಡಾಕ್‌ನಲ್ಲಿ ನಡೆದಿತ್ತು. ಆ ಸಂದರ್ಭದಲ್ಲೂ ಸ್ಥಳೀಯ ಮಟ್ಟದಲ್ಲಿ ಮಾತುಕತೆ ನಡೆಸಿದ ಬಳಿಕ ಇತ್ಯರ್ಥಗೊಳಿಸಲಾಯಿತು ಎಂದು ಸೇನೆಯ ಮೂಲಗಳು ತಿಳಿಸಿವೆ.

3488 ಕಿಲೋ ಮೀಟರ್‌ ಉದ್ದದ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ಈ ರೀತಿಯ ಘರ್ಷಣೆಗಳು ಭದ್ರತಾ ಪಡೆಗಳ ನಡುವೆ ನಡೆಯುತ್ತಿವೆ. ಆದರೆ, ಉಭಯ ದೇಶಗಳು ನಡುವೆ ಇತ್ತೀಚಿನ ವರ್ಷಗಳಲ್ಲಿ ಮುಖಾಮುಖಿ ಘರ್ಷಣೆಗಳು ಸಂಭವಿಸಿರಲಿಲ್ಲ. ಈ ಹಿಂದೆ 2017ರ ಆಗಸ್ಟ್‌ನಲ್ಲಿ ಲಡಾಖ್‌ನಲ್ಲಿ ಇಂಥ ಘರ್ಷಣೆ ನಡೆದಿತ್ತು. ಲಡಾಕ್‌ನ ಪಾಂಗೊಂಗ್‌ ಸರೋವರ ಬಳಿ ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ಸಹ ನಡೆದಿತ್ತು.

2017ರಲ್ಲಿ 73 ದಿನಗಳ ದೋಕ್ಲಾ ಬಿಕ್ಕಟ್ಟಿನ ಸಂದರ್ಭದಲ್ಲಿ ಉಭಯ ದೇಶಗಳ ಸೇನೆಯ ನಡುವಣ ಸಂಬಂಧವೂ ಹದಗೆಟ್ಟಿತ್ತು.  ಬಳಿಕ ವುಹಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ನಡುವೆ ನಡೆದ ಶೃಂಗಸಭೆ ಬಳಿಕ ಸಂಬಂಧಗಳು ಸುಧಾರಿಸಿದ್ದವು. ಈ ಶೃಂಗಸಭೆಯ ಬಳಿಕವೂ ಉಭಯ ನಾಯಕರು ಹಲವು ಬಾರಿ ಭೇಟಿಯಾಗಿ ಗಡಿಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ನೀತಿ ಪಾಲಿಸಲು ಒಪ್ಪಿಕೊಂಡಿದ್ದರು.

–150 ಯೋಧರು ಘರ್ಷಣೆಯಲ್ಲಿ ಭಾಗಿ

–ಅತಿ ಕಡಿಮೆ ಅವಧಿಯ ಘರ್ಷಣೆ

–ಮೇ 5 ಮತ್ತು 6ರಂದು ಸಹ ನಡೆದಿದ್ದ ಘರ್ಷಣೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು