ಶುಕ್ರವಾರ, ಜೂಲೈ 3, 2020
25 °C
ಇಂಡಿಗೊ, ವಿಸ್ತಾರಾ, ಸ್ಪೈಸ್ ಜೆಟ್, ಮೇಕ್ ಮೈ ಟ್ರಿಪ್ ಸಂಸ್ಥೆಗಳಿಂದ ಆಸಕ್ತಿ

ಖಾಸಗಿಯವರಿಗೆ 150 ರೈಲು: ಇಲಾಖೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 150 ರೈಲುಗಳನ್ನು ಖಾಸಗಿಯವರಿಗೆ ವಹಿಸಲು ಭಾರತೀಯ ರೈಲ್ವೆ ಮುಂದಾಗಿದೆ.

ಖಾಸಗಿಯರವರು ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆಯು ಈ ತಿಂಗಳಲ್ಲಿ ಬಿಡ್‌ ಆಹ್ವಾನಿಸಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ತಿಳಿಸಿದ್ದಾರೆ. ಕಳೆದ ಏಪ್ರಿಲ್‌ನಲ್ಲೇ ಬಿಡ್‌ ಕರೆಯಲು ನಿರ್ಧರಿಸಿದ್ದರೂ, ಲಾಕ್‌ಡೌನ್‌ನಿಂದ ಅದು ಸಾಧ್ಯವಾಗಿರಲಿಲ್ಲ. 

ಎರಡು ಹಂತಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೊದಲನೆಯದ್ದು ಅಹರ್ತೆಗಾಗಿ ವಿನಂತಿ. ಎರಡನೆಯದ್ದು ಪ್ರಸ್ತಾವನೆಗಾಗಿ ವಿನಂತಿ (ಆರ್‌ಎಫ್‌ಪಿ). ಎರಡನೇ ಹಂತದಲ್ಲಿ ಆದಾಯ ಸೃಷ್ಟಿ ಹೇಗೆ ಹಾಗೂ ಮಾರ್ಗಗಳು ಯಾವುವು ಎಂಬುದು ನಿರ್ಧಾರವಾಗಲಿದೆ. 

ಇಂಡಿಗೊ, ವಿಸ್ತಾರಾ, ಸ್ಪೈಸ್ ಜೆಟ್, ಆರ್‌.ಕೆ ಕೇಟರಿಂಗ್ ಮತ್ತು ಮೇಕ್ ಮೈ ಟ್ರಿಪ್ ಸಂಸ್ಥೆಗಳು ರೈಲು ನಿರ್ವಹಣೆಗೆ ಆಸಕ್ತಿ ತೋರಿವೆ. ಹೀಗಾಗಿ ಸದ್ಯದಲ್ಲೇ ಸಚಿವಾಲಯ ಪ್ರಕ್ರಿಯೆ ಶುರು ಮಾಡಲಿದೆ. 

ಲಾಕ್‌ಡೌನ್‌ಗೂ ಮೊದಲು ಐಆರ್‌ಸಿಟಿಸಿ ಮೂರು ಮಾರ್ಗಗಳಲ್ಲಿ ರೈಲುಗಳನ್ನು (ದೆಹಲಿ–ಲಖನೌ, ಮುಂಬೈ–ಅಹಮದಾಬಾದ್, ಉಜ್ಜೈನಿ–ವಾರಾಣಸಿ) ಯಶಸ್ವಿಯಾಗಿ ಓಡಿಸಿತ್ತು. ಈ ವೇಳೆ ರೈಲುಗಳು ಶೇ 70ಕ್ಕಿಂತ ಹೆಚ್ಚು ಪ್ರಯಾಣಿಕರಿಂದ ಭರ್ತಿಯಾಗಿದ್ದವು. ಹೀಗಾಗಿ ಇನ್ನಷ್ಟು ರೈಲುಗಳನ್ನು ಖಾಸಗಿಯವರ ನಿರ್ವಹಣೆಗೆ ವಹಿಸಲು ಇಲಾಖೆ ಮುಂದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

150 ರೈಲುಗಳನ್ನು ₹23,000 ಕೋಟಿ ಅಂದಾಜು ವೆಚ್ಚದಲ್ಲಿ ಖಾಸಗಿಯವರಿಗೆ ನೀಡುವ ಪ್ರಸ್ತಾವ ಇದೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು ಹೇಳಿದ್ದರು. ಈ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಖಾಸಗಿಯವರನ್ನು ಅವರು ಆಹ್ವಾನಿಸಿದ್ದರು.

ಶುಲ್ಕ ಮತ್ತು ಸೌಲಭ್ಯ

ಖಾಸಗಿಯವರು ರೈಲುಗಳನ್ನು ವಹಿಸಿಕೊಂಡ ಮೇಲೆ ಮೂಲಸೌಕರ್ಯ ಬಳಸುವುದಕ್ಕಾಗಿ ಗುತ್ತಿಗೆ ಹಾಗೂ ಸಾಗಣೆ ಶುಲ್ಕವನ್ನು ರೈಲ್ವೆ ಸಚಿವಾಲಯಕ್ಕೆ ನೀಡಬೇಕು. ದರ ನಿಗದಿ ಮಾಡುವ ಜೊತೆಗೆ ರೈಲಿನ ಒಳಗಡೆ ಆಹಾರ ಪೂರೈಕೆ, ಸ್ವಚ್ಛತೆ ಹಾಗೂ ಹಾಸಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ. 

ಈ ಯೋಜನೆ ಯಶಸ್ವಿಯಾದಲ್ಲಿ, ಮುಂದಿನ ದಿನಗಳಲ್ಲಿ ರಾಜಧಾನಿ ಮತ್ತು ಶತಾಬ್ದಿ ರೈಲುಗಳನ್ನೂ ಈ ಯೋಜನೆ ವ್ಯಾಪ್ತಿಗೆ ತರಲುವ ಆಲೋಚನೆ ಇದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು