ಮಂಗಳವಾರ, ಫೆಬ್ರವರಿ 18, 2020
28 °C

ಆಕೆಯನ್ನು ನಿರ್ಭಯಾ ಅತ್ಯಾಚಾರಿಗಳ ಕೊಠಡಿಯಲ್ಲಿ ನಾಲ್ಕು ದಿನ ಇಡಬೇಕು: ಕಂಗನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ದೆಹಲಿ ಗ್ಯಾಂಗ್‌ರೇಪ್‌ ಅಪರಾಧಿಗಳನ್ನು ನಿರ್ಭಯಾಳ ತಾಯಿ ಕ್ಷಮಿಸಬೇಕು ಎಂಬ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರ ಹೇಳಿಕೆಗೆ ಬಾಲಿವುಡ್‌ ನಟಿ ಕಂಗನಾ ರನೋಟ್‌ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. 

‘ರಾಜೀವ್‌ಗಾಂಧಿ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ನಳಿನಿಯನ್ನು ಸೋನಿಯಾ ಗಾಂಧಿ ಕ್ಷಮಿಸಿದ್ದಾರೆ. ಇದರಿಂದ ನಳಿನಿ ಗಲ್ಲುಶಿಕ್ಷೆ ಬದಲು ಜೀವಾವಧಿ ಶಿಕ್ಷೆ ಅನುಭವಿಸುವಂತೆ ಆಯಿತು. ಇದೇ ಮಾದರಿಯನ್ನು ಅನುಸರಿಸಿ ಅಪರಾಧಿಗಳನ್ನು ನಿರ್ಭಯಾಳ ತಾಯಿ ಕ್ಷಮಿಸಬೇಕು’ ಎಂದು ಇಂದಿರಾ ಜೈಸಿಂಗ್‌ ಎಂಬ ಹಿರಿಯ ವಕೀಲೆ ಕಳೆದ ಶುಕ್ರವಾರ ಟ್ವೀಟ್‌ ಮಾಡಿದ್ದರು. 

ಈ ಕುರಿತ ಪ್ರಶ್ನೆಗೆ ಕಾರ್ಯಕ್ರಮದಲ್ಲಿ ಉತ್ತರಿಸಿರುವ ಕಂಗನಾ, ‘ಆ ಮಹಿಳೆಯನ್ನು ನಿರ್ಭಯಾ ಅತ್ಯಾಚಾರಿಗಳಿರುವ ಜೈಲಿನ ಕೊಠಡಿಯಲ್ಲಿ ನಾಲ್ಕು ದಿನ ಇರಿಸಬೇಕು. ಇಂಥ ಮಹಿಳೆಯರೇ ದೆಹಲಿ ಗ್ಯಾಂಗ್‌ ರೇಪ್‌ನಂಥ ಅತ್ಯಾಚಾರಿಗಳನ್ನು, ಹಂತಕರನ್ನು ಹಡೆಯಲು ಸಾಧ್ಯ ಎಂದು’ ಎಂದು ಅವರು ಕೋಪದಿಂದ ಪ್ರತಿಕ್ರಿಯಿಸಿದ್ದಾರೆ. 

ಇಂದಿರಾ ಜೈಸಿಂಗ್‌ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ನಿರ್ಭಯಾ ತಾಯಿ, ‘ನನಗೆ ಈ ರೀತಿ ಸಲಹೆ ನೀಡಲು ಇಂದಿರಾ ಜೈಸಿಂಗ್‌ ಅವರಿಗೆ ಎಷ್ಟು ಧೈರ್ಯ’ ಎಂದು ಪ್ರಶ್ನಿಸಿದ್ದರು.

‘ಸುಪ್ರೀಂಕೋರ್ಟ್‌ನಲ್ಲಿ ಇಂದಿರಾ ಅವರನ್ನು ಸಾಕಷ್ಟು ಸಲ ನಾನು ಭೇಟಿಯಾಗಿದ್ದೇನೆ. ಅವರು ಒಮ್ಮೆಯೂ ನನ್ನ ಯೋಗಕ್ಷೇಮವನ್ನು ವಿಚಾರಿಸಿಲ್ಲ. ಆದರೆ, ಈಗ ಏಕಾಏಕಿ ಅಪರಾಧಿಗಳ ಪರ ವಕಾಲತ್ತು ವಹಿಸಿ, ಮಾತನಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

‘ಅತ್ಯಾಚಾರ ಮಾಡಿದವರನ್ನು ಬೆಂಬಲಿಸುವ ಮೂಲಕವೇ ಇಂಥವರು ಬದುಕು ಕಟ್ಟಿಕೊಳ್ಳುತ್ತಾರೆ. ಹೀಗಾಗಿ, ಅತ್ಯಾಚಾರದಂತಹ ಘಟನೆಗಳು ಕಡಿಮೆಯಾಗುತ್ತಿಲ್ಲ’ ಎಂದೂ ಹೇಳಿದ್ದರು.

‘ನನಗೆ ಸಲಹೆ ನೀಡಲು ಇಂದಿರಾ ಜೈಸಿಂಗ್‌ ಯಾರು? ಈ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಇಡೀ ದೇಶವೇ ಬಯಸುತ್ತಿದೆ. ಇಂತಹ ವ್ಯಕ್ತಿಗಳಿಂದಾಗಿ ಅತ್ಯಾಚಾರ ಸಂತ್ರಸ್ತರಿಗೆ, ಅವರ ಕುಟುಂಬದವರಿಗೆ ನ್ಯಾಯ ಮರೀಚಿಕೆಯಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೇ ವಿಚಾರವಾಗಿ ಇಂದಿರಾ ಜೈಸಿಂಗ್‌ ಅವರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು