ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ -19 ಎದುರಿಸಲು ಕೇಂದ್ರ ಸರ್ಕಾರಕ್ಕೆ 9 ಸಲಹೆ ನೀಡಿದ ಸೀತಾರಾಂ ಯೆಚೂರಿ

Last Updated 16 ಏಪ್ರಿಲ್ 2020, 10:11 IST
ಅಕ್ಷರ ಗಾತ್ರ

ನವದೆಹಲಿ:ಕೋವಿಡ್-19 ಪಿಡುಗು ಎದುರಿಸಲು ಜನರು 'ಸಪ್ತಪದಿ' ಪಾಲನೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.ಇದೀಗ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಕೋವಿಡ್ ರೋಗ ಎದುರಿಸಲು ಕೇಂದ್ರ ಸರ್ಕಾರ 9 ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸೋಂಕು ಪತ್ತೆಪರೀಕ್ಷೆ ವೇಗವಾಗಿ ನಡೆಸಬೇಕು.ಪಿಪಿಐಗಳನ್ನು ಲಭ್ಯವಾಗುವಂತೆ ಮಾಡಬೇಕು ಮತ್ತು ತೆರಿಗೆ ಪಾವತಿ ಮಾಡದಿರುವ ಎಲ್ಲ ನಾಗರಿಕರಿಗೂ ₹7,500 ನಗದು ವರ್ಗಾವಣೆ ಮಾಡಬೇಕು. ಅಗತ್ಯವಿದ್ದವರಿಗೆ ಆಹಾರ ಧಾನ್ಯಗಳನ್ನು ಒದಗಿಸಬೇಕು.ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಕೆಲಸ ಇರಲಿ ಇಲ್ಲದೇ ಇರಲಿ ಮನರೇಗಾದಡಿಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ನೋಂದಣಿ ಮಾಡಿದವರಿಗೆ ವೇತನ ನೀಡಬೇಕು ಎಂದು ಯೆಚೂರಿ ಹೇಳಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಸೋಂಕು ಪರೀಕ್ಷೆ ನಡೆಸಿ ಹರಡುವಿಕೆಯನ್ನು ತಡೆಯಬೇಕು.ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪರೀಕ್ಷೆಗಳು ನಿಧಾನಗತಿಯಲ್ಲಿದೆ. ಸೋಂಕು ಪರೀಕ್ಷೆಗಳನ್ನು ವೇಗವಾಗಿ ಮಾಡುವ ಮೂಲಕ ದಕ್ಷಿಣ ಕೊರಿಯಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸಿದೆ.

ಲಾಕ್‍ಡೌನ್ ಆಗಿ ಮೂರು ವಾರಗಳು ಕಳೆದವು. ದೇಶದಲ್ಲಿರುವ ದೊಡ್ಡ ರಾಜ್ಯಗಳು ಈಗಲೂ ಸಾಕಷ್ಟು ಪರೀಕ್ಷೆಗಳನ್ನುನಡೆಸುತ್ತಿಲ್ಲ. ವೈರಸ್ ಹರಡುವಿಕೆಯ ಸ್ಪಷ್ಟ ಚಿತ್ರಣವೂ ನಮ್ಮಲ್ಲಿ ಇಲ್ಲ. ಇದು ಇಲ್ಲದೇ ಇರುವಾಗ ಸರಿಯಾದ ಯೋಜನೆಗಳನ್ನು ರೂಪಿಸಲು ಆಗುವುದಿಲ್ಲ.ಯಾವ ಅಂಕಿಅಂಶಗಳ ಆಧಾರದಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುತ್ತಿದೆ? ಜನರಲ್ಲಿ ಅದು ಮಾಡಿ, ಇದು ಮಾಡಿ ಎಂದು ಹೇಳುವುದಕ್ಕಿಂತ ಕೇಂದ್ರ ಸರ್ಕಾರ ಈ 9 ಕ್ರಮಗಳನ್ನು ಶೀಘ್ರವೇ ಕೈಗೊಳ್ಳಬೇಕು ಎಂದಿದ್ದಾರೆ ಯೆಚೂರಿ.

ಆರೋಗ್ಯ ಕಾರ್ಯಕರ್ತರಿಗೆ ಸಾಕಷ್ಟು ಪಿಪಿಇಗಳು ಲಭ್ಯವಾಗುತ್ತಿಲ್ಲ. ಇದು ಸುರಕ್ಷತೆಗೆ ಬಹು ಮುಖ್ಯವಾಗಿದ್ದು, ಸರ್ಕಾರ ಇನ್ನೂ ಕಿಟ್‌ಗಳನ್ನು ಒದಗಿಸಲು ಸಿದ್ಧವಾಗಿಲ್ಲ. ಪ್ರಸ್ತುತವಿರುವ ಶೇ.0.8 ಜಿಡಿಪಿಯನ್ನು ಕನಿಷ್ಟ ಪಕ್ಷ ಶೇ.5 ಕ್ಕೇರಿಸಲು ಪ್ರಯತ್ನಿಸಬೇಕು.ಕಳೆದ ಮಾರ್ಚ್ ತಿಂಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ₹1.7 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು.ಇತರ ರಾಷ್ಟ್ರಗಳು ಆರ್ಥಿಕ ಪುನಶ್ಚೇತನಕ್ಕಾಗಿ ಜಿಡಿಪಿಯ ಭಾಗವೊಂದನ್ನು ಬಳಸುತ್ತಿದ್ದಾರೆ.

ಲಾಕ್‌ಡೌನ್‌ನಿಂದಾಗಿ ರಾಜ್ಯಗಳು ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿದ್ದು ಅವುಗಳಿಗೆ ಆರ್ಥಿಕ ಸಹಾಯ ನೀಡಬೇಕು. ನೌಕರರಿಗೆ ಆರ್ಥಿಕ ಸಹಾಯ, ಕೆಲಸ ನಷ್ಟವಾಗದಂತೆ ಮತ್ತು ಸಂಬಳ ಕಡಿತವಾಗದಂತೆ ನೋಡಿಕೊಳ್ಳಬೇಕು.ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು.

ಇವತ್ತು ಕೇಂದ್ರ ಸರ್ಕಾರದ ಗೋದಾಮಿನಲ್ಲಿ 7.5 ಕೋಟಿ ಟನ್ ಆಹಾರಧಾನ್ಯವಿದೆ. ಕೊಯ್ಲು ಈಗ ಆರಂಭವಾಗಿದೆ.ಈಗ ಅಲ್ಲಿ ಸಂಗ್ರಹಿಸಿರುವ ಆಹಾರವಸ್ತುಗಳನ್ನು ರಾಜ್ಯ ಸರ್ಕಾರಗಳಿಗೆ ನೀಡಬೇಕು. ಹೀಗೆ ನೀಡಿದ ಆಹಾರ ವಸ್ತುಗಳನ್ನು ಬಡವರಿಗೆ ವಿತರಿಸಬೇಕು. ಹೀಗೆ ಮಾಡಿದರೆ ಮಾತ್ರ ಹಸಿವಿನಿಂದ ಸಾಯುವುದನ್ನು ತಪ್ಪಿಸಬಹುದು ಎಂದು ಯೆಚೂರಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT