ಮಂಗಳವಾರ, ಅಕ್ಟೋಬರ್ 15, 2019
29 °C

ಹೈದರಾಬಾದ್‌ನಲ್ಲಿ ಇಸ್ರೊ ವಿಜ್ಞಾನಿ ನಿಗೂಢ ಸಾವು; ಹತ್ಯೆ ಶಂಕೆ

Published:
Updated:

ಹೈದರಾಬಾದ್‌: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ರಾಷ್ಟ್ರೀಯ ದೂರಸಂವೇದಿ ಕೇಂದ್ರದ (ಎನ್‌ಆರ್‌ಎಸ್‌ಸಿ) ವಿಜ್ಞಾನಿ ಮಂಗಳವಾರ ಅವರ ನಿವಾಸದಲ್ಲಿ ನಿಗೂಢವಾಗಿ ಕೊಲೆಯಾಗಿದ್ದಾರೆ.

ಇಲ್ಲಿನ ಅಮೀರ್‌ ಪೇಟೆಯ ಅನ್ನಪೂರ್ಣ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ವಿಜ್ಞಾನಿ ಎಸ್.ಸುರೇಶ್(56ವರ್ಷ) ಅವರನ್ನು ಆರೋಪಿಗಳು ತಲೆಗೆ ಬಲವಾಗಿ ಹೊಡೆದು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಕೇರಳ ಮೂಲದವರಾದ ಸುರೇಶ್‌ ಅವರು ಹೈದರಬಾದ್‌ನಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಮಂಗಳವಾರ ಕಚೇರಿಗೆ ಬಾರದಿದ್ದನ್ನು ನೋಡಿ ಅವರ ಸಹೋದ್ಯೋಗಿಗಳು ಸುರೇಶ್‌ ಅವರಿಗೆ ಕರೆ ಮಾಡಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಚೆನ್ನೈನಲ್ಲಿರುವ ಅವರ ಪತ್ನಿಗೆ ವಿಷಯ ತಿಳಿಸಿದ್ದಾರೆ.

ತಕ್ಷಣ ಕುಟುಂಬ ಸಮೇತರಾಗಿ ಹೈದರಾಬಾದ್‌ಗೆ ಬಂದ ಅವರ ಪತ್ನಿ, ಪೊಲೀಸರ ನೆರವಿನೊಂದಿಗೆ ಮನೆಯ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಸುರೇಶ್‌ ಅವರು ಹತ್ಯೆಯಾಗಿರುವುದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದರು.

ಭಾರವಾದ ವಸ್ತುವಿನಿಂದ ತೆಲೆಗೆ ಜೋರಾಗಿ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸುರೇಶ್‌ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅಪಾರ್ಟ್‌ಮೆಂಟ್‌ನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

20 ವರ್ಷಗಳಿಂದ ಸುರೇಶ್‌ ಹೈದರಾಬಾದ್‌ನಲ್ಲಿ ನೆಲೆಸಿದ್ದರು. ಅವರ ಪತ್ನಿ ಬ್ಯಾಂಕ್‌ ಉದ್ಯೋಗಿಯಾಗಿದ್ದು 2005ರಲ್ಲಿ ಚೆನ್ನೈಗೆ ವರ್ಗಗೊಂಡಿದ್ದರು. ಅವರ ಮಗ ಅಮೆರಿಕದಲ್ಲಿ , ಮಗಳು ದೆಹಲಿಯಲ್ಲಿ ನೆಲೆಸಿದ್ದಾರೆ.

 

Post Comments (+)