ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್‌ಡಿಎ ಬಲದಿಂದ ನಮ್ಮ ಶಕ್ತಿ ಕುಂದಿದೆ’

ಮೋದಿ, ಶಾ ಭೇಟಿ ಮಾಡಿದ ಜಗನ್‌: ಆಂಧ್ರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ
Last Updated 26 ಮೇ 2019, 18:55 IST
ಅಕ್ಷರ ಗಾತ್ರ

ನವದೆಹಲಿ: ‘ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ 250ಕ್ಕೂ ಹೆಚ್ಚು ಸ್ಥಾನಗಳು ಲಭಿಸದಂತೆ ನೋಡಿಕೊಳ್ಳಪ್ಪಾ ಎಂದು ನಾನು ಚುನಾವಣೆಗೂ ಮುನ್ನ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದೆ’ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಅಧ್ಯಕ್ಷ ಜಗನ್‌ಮೋಹನ್‌ ರೆಡ್ಡಿ ತಿಳಿಸಿದ್ದಾರೆ.

ಮೇ 30ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಜಗನ್‌ಮೋಹನ್‌, ಭಾನುವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿಮಾಡಿದರು.

ಆನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎನ್‌ಡಿಎಗೆ 250ಕ್ಕಿಂತ ಕಡಿಮೆ ಸ್ಥಾನಗಳು ಲಭಿಸಿದ್ದರೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರಲು ನಮಗೆ ಹೆಚ್ಚಿನ ಶಕ್ತಿ ಲಭಿಸುತ್ತಿತ್ತು. ಎನ್‌ಡಿಎಗೆ 350ಕ್ಕೂ ಹೆಚ್ಚಿನ ಸ್ಥಾನಗಳು ಲಭಿಸಿವೆ. ಆದ್ದರಿಂದ ಅಧಿಕಾರಯುತವಾಗಿ ಒತ್ತಾಯ ಮಾಡಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಆದರೂ, ಮೋದಿ ಜೊತೆ ಸುಮಾರು ಒಂದು ಗಂಟೆ ಕಾಲ ನಡೆದ ಮಾತುಕತೆಯಲ್ಲಿ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರವನ್ನು ಪ್ರಸ್ತಾಪಿಸಿದ್ದೇನೆ’ ಎಂದರು.

‘ಎನ್‌ಡಿಎ ಸೇರ್ಪಡೆಯಾಗುವ ವಿಚಾರವಾಗಿ ಮಾತುಕತೆ ನಡೆದಿದೆಯೇ’ ಎಂಬ ಪ್ರಶ್ನೆಗೆ, ‘ಬೇರೆ ಪಕ್ಷದವರು ಎನ್‌ಡಿಎಯನ್ನು ಸೇರಬೇಕೆಂದು ಅವರು ಯಾಕಾದರೂ ಬಯಸುತ್ತಾರೆ? ಅವರಿಗೆ ಈಗ ಯಾರ ಅಗತ್ಯವೂ ಇಲ್ಲ. ಅವರಿಗೆ ನಿರೀಕ್ಷೆಗೂ ಮೀರಿದ ಬಹುಮತವನ್ನು ದೇವರು ಕರುಣಿಸಿದ್ದಾರೆ. ‘ಇತರರಿಗೆ ನೆರವು ನೀಡಲು ಸಾಧ್ಯವಾಗುವಷ್ಟು ಶಕ್ತಿಯನ್ನು ನಿಮಗೆ ಜನರು ಕೊಟ್ಟಿದ್ದಾರೆ. ಔದಾರ್ಯ ಪ್ರದರ್ಶಿಸಿ’ ಎಂದು ನಾನು ಮೋದಿ ಅವರನ್ನು ಕೋರಿದ್ದೇನೆ’ ಎಂದರು. ರಾಜ್ಯದಲ್ಲಿ ನಮ್ಮ ಪಕ್ಷಕ್ಕೂ ದೇವರು ಅಂಥದ್ದೇ ಆಶೀರ್ವಾದ ಮಾಡಿದ್ದಾರೆ’ ಎಂದೂ ಜಗನ್‌ ಹೇಳಿದರು.

ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ವಿಚಾರ ಪ್ರಸ್ತಾಪಿಸುತ್ತಾ, ‘ಶಾ ಅವರು ಮೋದಿಯ ನಂತರದ ಅತ್ಯಂತ ಪ್ರಭಾವಿ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ರಾಜ್ಯದ ಸಮಸ್ಯೆಗಳನ್ನು ಅವರ ಮುಂದೆ ಇಡಲು ನಾನು ಹೋಗಿದ್ದೆ’ ಎಂದರು.

‘ಕ್ರಾಂತಿಕಾರಿ ಸರ್ಕಾರ’
ಮುಖ್ಯಮಂತ್ರಿಯಾಗಿ ತನ್ನ ಆದ್ಯತೆಗಳ ಬಗ್ಗೆ ಮಾತನಾಡಿದ ಜಗನ್‌, ‘ನಮ್ಮ ಸರ್ಕಾರ ಕ್ರಾಂತಿಕಾರಿ ಕೆಲಸ ಮಾಡಲಿದೆ. ಸರ್ಕಾರದ ಕಾರ್ಯವೈಖರಿ ಅತ್ಯಂತ ಪಾರದರ್ಶಕವಾಗಿರುತ್ತದೆ. ಮುಂದಿನ ಆರು ತಿಂಗಳು ಅಥವಾ ಒಂದು ವರ್ಷದ ಅವಧಿಯಲ್ಲಿ ಆಂಧ್ರಪ್ರದೇಶವು ದೇಶದ ಇತರ ರಾಜ್ಯಗಳಿಗೆ ಮಾದರಿಯಾಗುವಂತೆ ಮಾಡುತ್ತೇವೆ.ಇಡೀ ಆಡಳಿತ ವ್ಯವಸ್ಥೆಯನ್ನು ಶುಚಿಗೊಳಿಸುವುದಷ್ಟೇ ಅಲ್ಲ, ಹೇಗೆ ಶುಚಿಗೊಳಿಸಬೇಕು ಎಂಬುದನ್ನು ಇತರರಿಗೆ ತಿಳಿಸಿಕೊಡುತ್ತೇವೆ’ ಎಂದರು.

‘ಹೊಸ ರಾಜಧಾನಿಯಾಗಿ ಅಮರಾವತಿಯನ್ನು ಅಭಿವೃದ್ಧಿಗೊಳಿಸುವ ವಿಚಾರದಲ್ಲಿ ನಾನು ಸಂದಿಗ್ಧ ಸ್ಥಿತಿಯಲ್ಲಿದ್ದೇನೆ. ಚಂದ್ರಬಾಬು
ನಾಯ್ಡು ಅವರು ಈ ವಿಚಾರದಲ್ಲಿ ಜನರ ಹಾದಿತಪ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ನಾಯ್ಡು ಅವರು ಬೇನಾಮಿ ಹೆಸರುಗಳಲ್ಲಿ ಅಲ್ಲಿ ಜಮೀನು ಖರೀದಿಸಿದ್ದಾರೆ’ ಎಂದು ಜಗನ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT