ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ: ಪೊಲೀಸರ ಥಳಿತದ ವಿಡಿಯೊ ಬಹಿರಂಗ

Last Updated 16 ಫೆಬ್ರುವರಿ 2020, 5:22 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಪ್ರತಿಭಟನಾ ಮೆರವಣಿಗೆ ನಂತರ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಹಿಂಸಾಚಾರ ನಡೆದ ದಿನದಂದು ರೀಡಿಂಗ್ ಹಾಲ್‌ನಲ್ಲಿ ಹಲವಾರು ಪೊಲೀಸರು ವಿದ್ಯಾರ್ಥಿಗಳನ್ನು ಥಳಿಸುತ್ತಿರುವ ಎರಡು ತಿಂಗಳ ಹಳೆಯ ವಿಡಿಯೊ ಇದೀಗ ಹೊರಬಿದ್ದಿದೆ.

ಜಾಮಿಯಾ ಸಮನ್ವಯ ಸಮಿತಿಯು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ 49 ಸೆಕೆಂಡ್‌ಗಳಿರುವ ವಿಡಿಯೊವನ್ನು ಬಿಡುಗಡೆ ಮಾಡಿದೆ.

ವಿಡಿಯೊದಲ್ಲಿ, ವಿಶ್ವವಿದ್ಯಾಲಯದ ಹಳೆಯ ರೀಡಿಂಗ್ ರೂಂನಲ್ಲಿ ವಿದ್ಯಾರ್ಥಿಗಳು ಕುಳಿತಿರುತ್ತಾರೆ. ಆಗ ಪೊಲೀಸರು ಒಳ ಪ್ರವೇಶಿಸುತ್ತಿದ್ದಂತೆ ಮೇಜಿನ ಬಳಿ ಕುಳಿತ ವ್ಯಕ್ತಿಯೊಬ್ಬರು ಮೇಜಿನ ಕೆಳಗೆ ಅಡಗಿಕೊಳ್ಳುತ್ತಾರೆ. ಮುಖಕ್ಕೆ ಬಟ್ಟೆ ಸುತ್ತಿಕೊಂಡು ಕೊಠಡಿಗೆ ಪ್ರವೇಶಿಸುವ ಹಲವಾರು ಪೊಲೀಸರು ಇದ್ದಕ್ಕಿದ್ದಂತೆ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡುತ್ತಾರೆ. ಈ ವೇಳೆ ಹಲವು ವಿದ್ಯಾರ್ಥಿಗಳು ಗಾಬರಿಯಿಂದ ಓಡಿಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ.

'ಎಂಎ/ಎಂ.ಫಿಲ್‌ ಸೆಕ್ಷನ್‌ನ ಮೊದಲನೇ ಮಹಡಿಯ ರೀಡಿಂಗ್‌ ರೂಂನಲ್ಲಿ ಪೊಲೀಸರ ದೌರ್ಜನ್ಯದ ಎಕ್ಸ್ಲೂಸಿವ್ ಸಿಸಿಟಿವಿ ದೃಶ್ಯಾವಳಿಗಳು. ದೆಹಲಿ ಪೊಲೀಸರಿಗೆ ನಾಚಿಕೆಯಾಗಬೇಕು' ಎಂದು ಜಾಮಿಯಾ ಸಮನ್ವಯ ಸಮಿತಿಯು ವಿಡಿಯೊವನ್ನು ಟ್ವೀಟ್ ಮಾಡಿದೆ.

ಜಾಮಿಯಾ ಸಮನ್ವಯ ಸಮಿತಿಯು ವಿಡಿಯೊ ಶೇರ್ ಮಾಡಿಕೊಳ್ಳುತ್ತಲೇ ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ. ಇದುವರೆಗೂ 5300ಕ್ಕೂ ಅಧಿಕ ಜನರು ರೀಟ್ವೀಟ್ ಮಾಡಿದ್ದು, ಆರು ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. #ShameonDelhiPolice ಎಂಬ ಬ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ.

ಡಿಸೆಂಬರ್ 15ರಂದು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಜಾಮಿಯಾ ವಿ.ವಿ ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ ಪೊಲೀಸರೊಂದಿಗೆ ಘರ್ಷಣೆಯಲ್ಲಿ ಪರ್ಯಾವಸನಗೊಂಡಿತು. ಈ ವೇಳೆ ಹಿಂಸಾಚಾರ ಭುಗಿಲೆದ್ದು, ಘಟನೆಯಲ್ಲಿ ಹತ್ತಾರು ಮಂದಿ ಗಾಯಗೊಂಡಿದ್ದರು. ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಘಟನೆಯನ್ನು ನಿಯಂತ್ರಿಸಲು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದ ಪೊಲೀಸರು, ವಿಶ್ವವಿದ್ಯಾನಿಲಯಕ್ಕೆ ನುಗ್ಗಿ ಸುಮಾರು 100 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದರು. ಬಳಿಕ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ವಿರುದ್ಧ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದವು.

ಪೊಲೀಸರು ಬಲವಂತವಾಗಿ ಕ್ಯಾಂಪಸ್‌ಗೆ ನುಗ್ಗಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ದೆಹಲಿ ಪೊಲೀಸರು, ಪರಿಸ್ಥಿತಿಯನ್ನು ನಿಭಾಯಿಸಲು ಮಾತ್ರ ಕ್ಯಾಂಪಸ್ ಪ್ರವೇಶಿಸಿದ್ದರು ಎಂದು ಸ್ಪಷ್ಟನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT